ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿತ್ವ ಹೇಳುತ್ತದೆ ಕೈಬರಹ!

ಕೈಬರಹ-ಕೈಪಿಡಿ ಭಾಗ 20
Last Updated 21 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಒಬ್ಬರ ಕೈಬರಹ ನೋಡಿ ಅವರ ವ್ಯಕ್ತಿತ್ವವನ್ನು ನಿರ್ಧರಿಸಬಹುದೇ? ಹೌದು ಎನ್ನುತ್ತದೆ ಗ್ರಾಫಾಲಜಿ ಅಥವಾ ಕೈಬರಹ ವಿಶ್ಲೇಷಣಾ ಶಾಸ್ತ್ರ. ನಮ್ಮ ಮೆದುಳಿನಲ್ಲಿ ಉತ್ಪತ್ತಿಯಾಗುವ ಸಂದೇಶಗಳು ಕ್ರಿಯಾವಾಹಿ ನರಗಳ (ಮೋಟಾರ್ ನರ್ವ್) ಮೂಲಕ ಕೈಗೆ ಬಂದು, ಕೈಯು ಆದೇಶ ಪಾಲನೆ ಮಾಡುತ್ತದೆ. ಆದ್ದರಿಂದ ಮನಸ್ಸಿನ ಏರಿಳಿತಗಳನ್ನು ಸ್ವಲ್ಪಮಟ್ಟಿಗಾದರೂ ಕೈಬರಹ ಪ್ರತಿಬಿಂಬಿಸುತ್ತದೆ ಎಂಬುದರಲ್ಲಿ ಅರ್ಥವಿದೆ.

ಒಂದು ಕಾಲದಲ್ಲಿ ಗ್ರಾಫಾಲಜಿ ಎಷ್ಟು ಪ್ರತಿಷ್ಠೆಯ ಸ್ಥಾನ ಹೊಂದಿತ್ತೆಂದರೆ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿಗೆ ಇದು ವಿಷಯವಾಗಿತ್ತು. ಆದರೆ ಬರಬರುತ್ತಾ ಗ್ರಾಫಾಲಜಿಯನ್ನು ಸಮರ್ಥಿಸುವ ವೈಜ್ಞಾನಿಕ ಪುರಾವೆಗಳು ಸಾಕಷ್ಟು ಸಿಗದಿದ್ದರಿಂದ ಅದು ವೈಭವದ ಸ್ಥಾನದಿಂದ ಕೆಳಗೆ ಜಾರಿತು.

ಈಗಲೂ ಕೈಬರಹ ವಿಶ್ಲೇಷಣೆ (ಹ್ಯಾಂಡ್‌ರೈಟಿಂಗ್ ಅನಾಲಿಸಿಸ್) ಅಥವಾ ಗ್ರಾಫಾಲಜಿ ಬಗ್ಗೆ ಇಂಗ್ಲಿಷಿನಲ್ಲಿ ಬೇಕಾದಷ್ಟು ಪುಸ್ತಕಗಳಿವೆ. ಅಂತರ್ಜಾಲದಲ್ಲಿಯೂ ಇದರ ಬಗ್ಗೆ ವಿಪುಲ ಮಾಹಿತಿ ಇದೆ. ದೊಡ್ಡ ದೊಡ್ಡ ನಗರಗಳಲ್ಲಿ ಗ್ರಾಫಾಲಜಿಸ್ಟರು ಇರುತ್ತಾರೆ. ಅವರ ಸೇವೆಯನ್ನು ಪಡೆಯುವವರೂ ಬೇಕಾದಷ್ಟು ಜನ ಇದ್ದಾರೆ. ಈಚೆಗೆ ಟಿ.ವಿ. ವಾಹಿನಿ ಒಂದರಲ್ಲಿ ಒಬ್ಬ ಗ್ರಾಫಾಲಜಿಸ್ಟರು ಸೆಲೆಬ್ರಿಟಿಗಳ (ಪ್ರಖ್ಯಾತ ವ್ಯಕ್ತಿಗಳ) ಹಸ್ತಾಕ್ಷರವನ್ನು ತೋರಿಸಿ, ಅವರ ವ್ಯಕ್ತಿತ್ವ ವಿಶ್ಲೇಷಣೆ ಮಾಡುವ ಕಾರ್ಯಕ್ರಮ ಪ್ರಸಾರವಾಯಿತು. ಆ ಸೆಲೆಬ್ರಿಟಿಗಳು ತಮ್ಮ ಹಸ್ತಾಕ್ಷರವನ್ನು ಹೇಗೆ ಬದಲಾಯಿಸಿಕೊಂಡು ತಾವು ಎದುರಿಸುತ್ತಿರುವ ಸಮಸ್ಯೆಯಿಂದ ಹೊರಬರಬಹುದು ಎಂದೂ ತಿಳಿಸಲಾಯಿತು!

ಎರಡು ವರ್ಷಗಳ ಹಿಂದೆ ಕನ್ನಡ ವಾರಪತ್ರಿಕೆಯೊಂದರ ಅಂಕಣ ಹೀಗಿತ್ತು. ಪೋಸ್ಟ್ ಕಾರ್ಡಿನಲ್ಲಿ ತಮ್ಮ ಸಹಿ ಮಾಡಿ ಕಳುಹಿಸಿದ ಓದುಗರ ವ್ಯಕ್ತಿತ್ವವನ್ನು ಗ್ರಾಫಾಲಜಿಸ್ಟರೊಬ್ಬರು ವಿಶ್ಲೇಷಣೆ ಮಾಡುತ್ತಿದ್ದರು. ಕೆಲವು ಕಂಪೆನಿಗಳು ವಿವಿಧ ಹುದ್ದೆಗಳಿಗೆ ಅಂತಿಮ ಆಯ್ಕೆ ಮಾಡಿಕೊಳ್ಳುವ ಮೊದಲು ಗ್ರಾಫಾಲಜಿಸ್ಟರ ಮೊರೆ ಹೋಗುತ್ತಾರೆ. ಕೆಲವು ಸೌಂದರ್ಯ ಸ್ಪರ್ಧೆಗಳಲ್ಲಿ ಸ್ಪರ್ಧಿಗಳ ಕೈಬರಹದ ವಿಶ್ಲೇಷಣೆಯನ್ನೂ ಮಾಡಲಾಗುತ್ತದೆ.

ಮನೋರೋಗ ತಜ್ಞರು ತಮ್ಮ ರೋಗಿಗಳಿಗೆ ಏನಾದರೂ ಬರೆಯಲು ಹೇಳಿ, ಅವರ ಮನಸ್ಸಿನ ಒಳಹೊಕ್ಕು ನೋಡಲು ಪ್ರಯತ್ನಿಸುತ್ತಾರೆ. ಅಪರಾಧ ವಿಜ್ಞಾನದಲ್ಲಿ (ಫೊರೆನ್ಸಿಕ್ ಸೈನ್ಸ್) ಕೈಬರಹದಿಂದ ಅಪರಾಧಿಗಳನ್ನು ಪತ್ತೆ ಮಾಡುವ ವಿಧಾನವನ್ನೂ ಅನುಸರಿಸುತ್ತಾರೆ. ನನ್ನ ಪರಿಚಿತ ಚಾರ್ಟರ್ಡ್ ಅಕೌಂಟೆಂಟ್ ಒಬ್ಬರು, ಗ್ರಾಫಾಲಜಿಸ್ಟರ ಸಲಹೆಯ ಮೇರೆಗೆ ತಾವು ಸಹಿ ಮಾಡುವ ರೀತಿಯನ್ನು ಬದಲಾಯಿಸಿಕೊಂಡಿದ್ದಾರೆ. ಇದರಿಂದ ತಮಗೆ ಉತ್ತಮ ಪರಿಣಾಮ ಆಗಿದೆ ಎಂಬುದು ಅವರ ಅಂಬೋಣ. ಮುಂಬಯಿಯ ಒಂದು ಕಂಪೆನಿ ಮುಚ್ಚುವ ಸ್ಥಿತಿಗೆ ಬಂದಿತ್ತು. ಅದರ ಮ್ಯಾನೇಜಿಂಗ್ ಡೈರೆಕ್ಟರ್ (ಮಹಿಳೆ) ಗ್ರಾಫಾಲಜಿಸ್ಟರೊಬ್ಬರ ನೆರವು ಪಡೆದರು. ಒಂದು ತಾಸಿನ ಕನ್‌ಸಲ್ಟೇಷನ್ನಿಗೆ ಅವರು 5 ಸಾವಿರ ರೂಪಾಯಿ ನೀಡಬೇಕಾಯಿತು. ತಮ್ಮ ಸಹಿ, ಕೈಬರಹ ಮತ್ತು ಕಂಪೆನಿಯ ಲಾಂಛನವನ್ನು ಅವರು ಬದಲಾಯಿಸಿಕೊಂಡರು. ಮುಚ್ಚುವ ಸ್ಥಿತಿಯಲ್ಲಿದ್ದ ಆ ಕಂಪೆನಿಯು ಪ್ರಗತಿಯ ಕಡೆಗೆ ಹೆಜ್ಜೆ ಹಾಕತೊಡಗಿದೆ. ಶಿಕ್ಷಕರಿಗಂತೂ ಕೈಬರಹ ನೋಡಿ, ವಿದ್ಯಾರ್ಥಿಯು ಅದನ್ನು ಶ್ರದ್ಧೆಯಿಂದ ಬರೆದಿದ್ದಾನೋ ಅಥವಾ ಕಾಟಾಚಾರಕ್ಕಾಗಿ ಗೀಚಿದ್ದಾನೋ ಎಂದು ಹೇಳಲು ಏನೂ ಕಷ್ಟವಾಗದು.

ಕೈಬರಹವನ್ನು ಬದಲಾಯಿಸಿ, ಒಬ್ಬರ ವ್ಯಕ್ತಿತ್ವದಲ್ಲಿ ಸಕಾರಾತ್ಮಕ ಬದಲಾವಣೆ ತರುವುದನ್ನು `ಗ್ರಾಫೋ ಥೆರಪಿ' ಎನ್ನುತ್ತಾರೆ. ಸೌಂದರ್ಯ ವರ್ಧಕ ಚಿಕಿತ್ಸೆ ಮಾಡಿಸಿಕೊಂಡಿರುವ ಒಬ್ಬ ಯುವತಿಗೆ ಆತ್ಮವಿಶ್ವಾಸ ಹೆಚ್ಚಿ, ಆಕೆಯು ದಿಟ್ಟತನದಿಂದ ಸಮಾಜವನ್ನು ಎದುರಿಸುವುದಿಲ್ಲವೇ? ಅವಳ ನಡೆನುಡಿಗಳಲ್ಲಿ ಆತ್ಮವಿಶ್ವಾಸ ತುಂಬಿ ತುಳುಕುವುದಿಲ್ಲವೇ? ಅದೇ ರೀತಿ ಕೈಬರಹ ಸುಧಾರಣೆಯಿಂದಲೂ ಧನಾತ್ಮಕ ಪರಿಣಾಮ ಸಾಧ್ಯ.

37 ವರ್ಷಗಳಿಂದ ಶಿಕ್ಷಕನಾಗಿರುವ ನಾನು ಸಾವಿರಾರು ವಿದ್ಯಾರ್ಥಿಗಳ ಕೈಬರಹವನ್ನು ಸುಧಾರಿಸಿದ್ದೇನೆ. ಅವರ ವ್ಯಕ್ತಿತ್ವದಲ್ಲೂ ಬದಲಾವಣೆ ಆಗಿರುವುದು ನನ್ನ ಅನುಭವಕ್ಕೆ ಬಂದಿದೆ. ಅವುಗಳಲ್ಲಿ ಒಂದು ಉಲ್ಲೇಖಾರ್ಹ. ಆ ಹುಡುಗ 10ನೇ ತರಗತಿಯಲ್ಲಿದ್ದ. ತುಂಬಾ ನಾಚಿಕೆ ಸ್ವಭಾವದವನು. ಕುಳಿತುಕೊಳ್ಳಲು ಅವನು ಆಯ್ಕೆ ಮಾಡಿಕೊಳ್ಳುತ್ತಿದ್ದುದು ಒಂದು ಮೂಲೆಯನ್ನು. ತರಗತಿಯಲ್ಲಿ ಎಂದೂ ಯಾವ ಪ್ರಶ್ನೆಯನ್ನೂ ಕೇಳುವವನಲ್ಲ. ನಾನು ಪ್ರಶ್ನೆ ಕೇಳುವಾಗ ಅವನು ತಲೆ ಎತ್ತುತ್ತಲೇ ಇರಲಿಲ್ಲ.

ಎಲ್ಲಿ ತನಗೇ ಪ್ರಶ್ನೆ ಕೇಳಿಬಿಡುವರೋ ಎಂಬ ಭಯ! ಆ ಹುಡುಗ ಅಕ್ಷರಗಳನ್ನು ಎಡಕ್ಕೆ ವಾಲಿಸಿ ಬರೆಯುತ್ತಿದ್ದ. ನಾನು ಹೇಳೀ ಹೇಳೀ ಅವನು ಅದನ್ನು ಸರಿಪಡಿಸಿಕೊಳ್ಳುವಂತೆ ಮಾಡಿದೆ. ಎಸ್ಸೆಸ್ಸೆಲ್ಸಿ ಮುಗಿಯುವ ಹೊತ್ತಿಗೆ ಅವನ ಅಕ್ಷರಗಳು ಸಾಕಷ್ಟು ಬದಲಾಗಿದ್ದವು. ಅವನು ಸೆಕೆಂಡ್ ಕ್ಲಾಸಿನಲ್ಲಿ ತೇರ್ಗಡೆಯಾದ. ಆದರೆ ಪಿ.ಯು.ಸಿ.ಯಲ್ಲಿ ಅವನು ಡಿಸ್ಟಿಂಕ್ಷನ್ ವಿದ್ಯಾರ್ಥಿ. ಪದವಿ ಶಿಕ್ಷಣದಲ್ಲಿ ಅವನು ಎಷ್ಟು ಮುಂದುವರಿದನೆಂದರೆ ಅವನ ಪ್ರಶ್ನೆಗಳನ್ನು ಎದುರಿಸಲು ಲೆಕ್ಚರರ್ಸ್‌ ತಡಬಡಾಯಿಸುತ್ತಿದ್ದರು. ಪದವಿಯಲ್ಲಿ ಕಾಲೇಜಿಗೇ ಪ್ರಥಮ. ಮುಂದೆ ಬಿ.ಎಡ್.ಗೆ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿಗೆ ಸೇರಿದ. ಅನ್ಯ ರಾಜ್ಯಗಳ ವಿದ್ಯಾರ್ಥಿಗಳೂ ಇದ್ದ ಆ ಕಾಲೇಜಿನಲ್ಲಿ ಅವನೇ ಹೀರೊ. ಈಗವನು ಒಂದು ಪ್ರಖ್ಯಾತ ಕಂಪೆನಿಯ ಹಿರಿಯ ಮ್ಯಾನೇಜರ್ ಆಗಿದ್ದಾನೆ. ಜಗತ್ತನ್ನೇ ಗೆಲ್ಲುವ ಆತ್ಮವಿಶ್ವಾಸ ಈಗ ಅವನ ಮಾತಿನಲ್ಲಿ ಕಂಡುಬರುತ್ತದೆ.

ಮುಂದಿನ ವಾರ: ವೈದ್ಯರ ಕೈಬರಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT