ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ವ್ಯಕ್ತಿತ್ವಕ್ಕೆ ಮುಗ್ಧತೆಯ ಲೇಪನ ಅಗತ್ಯ'

ಸಂಭ್ರಮ 2013 ಸಾಂಸ್ಕೃತಿ ಹಬ್ಬ ಉದ್ಘಾಟಿಸಿದ ಅರ್ಜುನ್ ದೇವಯ್ಯ
Last Updated 5 ಏಪ್ರಿಲ್ 2013, 9:14 IST
ಅಕ್ಷರ ಗಾತ್ರ

ಮಂಗಳೂರು: ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಎಷ್ಟೇ ಸಾಧನೆ ಮಾಡಿದರೂ, ವ್ಯಕ್ತಿತ್ವಕ್ಕೆ ಮುಗ್ಧತೆಯ ಲೇಪನವನ್ನು ಸದಾ ಕಾಪಾಡಿಕೊಳ್ಳಬೇಕು ಎಂದು ಅಥ್ಲೀಟ್ ಅರ್ಜುನ್ ದೇವಯ್ಯ ಅಭಿಪ್ರಾಯಪಟ್ಟರು.

ಮಂಗಳೂರು ವಿಶ್ವವಿದ್ಯಾಲಯ ಗುರುವಾರ ಕೊಣಾಜೆಯ ಮಂಗಳ ಸಭಾಂಗಣದಲ್ಲಿ ಏರ್ಪಡಿಸಿದ್ದ `ಸಂಭ್ರಮ- 2013' ವಿಶ್ವವಿದ್ಯಾಲಯ ಸಾಂಸ್ಕೃತಿಕ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಪ್ರತಿಯೊಬ್ಬರೂ ಜೀವನದಲ್ಲಿ ಒಂದಲ್ಲಾ ಒಂದು ದಿನ ಸಾಧನೆ ಮಾಡೇ ಮಾಡುತ್ತಾರೆ. ಸಾಧನೆ ಒಬ್ಬೊಬ್ಬರಿಗೆ ಬೇಗ, ಕೆಲವರಿಗೆ ನಿಧಾನವಾಗಬಹುದು. ಆದರೆ ಸಾಧನೆಗೆ ಮುನ್ನ ಪ್ರೇರಣೆ ಮುಖ್ಯ. ಹೀಗಾಗಿ ಗುರುವಿನ ಮಾರ್ಗದರ್ಶನ ಬೇಕೇಬೇಕು. ಗುರುವಿನಿಂದ ಬೆಳೆದು, ಗುರುವನ್ನು ಸ್ಮರಿಸುವ ಉನ್ನತ ಚಿಂತನೆ ಇದ್ದರೆ ಮಾತ್ರ ಸಾಧನೆಯ ದಾರಿ ಸುಗಮ' ಎಂದು ಅವರು ಹೇಳಿದರು.

`ಪ್ರತಿಯೊಬ್ಬರಲ್ಲೂ ಸಾಧನೆ ಮಾಡಲು ಬೇಕಾದ ಪ್ರತಿಭೆ ಇದ್ದೇ ಇರುತ್ತದೆ. ಆದರೆ ಯಾರಾದರೂ ಬೆನ್ನುತಟ್ಟಿ ಎಬ್ಬಿಸುವ ಹಿರಿಯರ ಅಗತ್ಯ ಇರುತ್ತದೆ. ಪ್ರೇರಣೆಯಿಂದ ಜೀವನದ ದಿಕ್ಕೇ ಬದಲಾಗಬಹುದು. ಅದರಿಂದ ದೇಶದ ಭವಿಷ್ಯವೇ ಬದಲಾಗಿ, ದೇಶವನ್ನು ಪ್ರಗತಿಯತ್ತ ಒಯ್ಯಬಲ್ಲ ಶ್ರೇಷ್ಠ ವ್ಯಕ್ತಿಗಳು ಹುಟ್ಟಿಕೊಳ್ಳುತ್ತಾರೆ. ಆದರೆ ಎಷ್ಟೇ ಸಾಧನೆಯನ್ನು ಮಾಡಿದರೂ, ಮಾನವೀಯತೆ ಮರೆಯಬಾರದು. ಮುಗ್ಧತೆಯನ್ನು ಉಳಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು' ಎಂದು ಹೇಳಿದರು.

ದತ್ತು ಸ್ವೀಕರಿಸಿ: ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಅರ್ಜುನ್ ದೇವಯ್ಯ, ಪ್ರತಿಯೊಬ್ಬರೂ ಯಾವುದಾದರೂ ಶಾಲೆಯ ಮಗುವೊಂದನ್ನು ದತ್ತು ಸ್ವೀಕರಿಸಿ ಅದಕ್ಕೆ ಶೈಕ್ಷಣಿಕ ಸೌಲಭ್ಯ ನೀಡಬೇಕು. ದತ್ತು ಸ್ವೀಕಾರ ಎಂದರೆ ಮನೆಗೆ ಮಗುವನ್ನು ಕರೆತರಬೇಕು ಎಂದಲ್ಲ. ಮಗುವನ್ನು ಬೆಳೆಸಲು ಸಹಕಾರಿ ಆಗುವುದು ಎಂದಷ್ಟೇ. ಇದರ ಜತೆಗೆ ವಿದ್ಯಾರ್ಥಿಗಳೇ ತಂಡಗಳನ್ನು ರೂಪಿಸಿಕೊಂಡು ಶಾಲೆಗಳನ್ನೇ ದತ್ತು ಸ್ವೀಕರಿಸಬೇಕು. ಅಲ್ಲಿ ಮಕ್ಕಳಿಗೆ ಭಾಷಾ ಬೋಧನೆ ಮುಂತಾದ ಶೈಕ್ಷಣಿಕ ಸ್ವಯಂ ಕಾರ್ಯಗಳನ್ನು ಮಾಡಬಹುದು ಎಂದು ಹೇಳಿದರು.

ಕುಲಪತಿ ಪ್ರೊ.ಟಿ.ಸಿ.ಶಿವಶಂಕರಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಲಸಚಿವ ಪ್ರೊ.ಪಿ.ಎಸ್. ಯಡಪಡಿತ್ತಾಯ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ.ಎ.ಎಂ.ಎ.ಖಾದರ್, ವಿ.ಸುಮಿತ್ರಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT