ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿಯಲ್ಲಿ ಸತ್ಯದ ಶಕ್ತಿ ಅರಳಬೇಕು: ಸ್ವಾಮೀಜಿ

Last Updated 11 ಅಕ್ಟೋಬರ್ 2011, 6:10 IST
ಅಕ್ಷರ ಗಾತ್ರ

ನಾಗಮಂಗಲ: ಒಬ್ಬ ವ್ಯಕ್ತಿಯ ಸುತ್ತಲಿನ ಪರಿಸರ ಉತ್ತಮವಾಗಿರಬೇಕಾದರೆ ಆ ವ್ಯಕ್ತಿಯಲ್ಲಿ ಸತ್ಯದ ಶಕ್ತಿ ಅರಳಬೇಕು. ಅಂತಹ ವ್ಯಕ್ತಿಗಳಲ್ಲಿ ಮಹಾತ್ಮ ಗಾಂಧೀಜಿ ಮೊದಲಿಗರು ಎಂದು ಆದಿಚುಂಚನಗಿರಿ ಮಠದ ಕಾರ್ಯದರ್ಶಿ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸೋಮವಾರ ಪಟ್ಟಣದ ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ ಸಾಂಸ್ಕೃತಿಕ ಸಮಿತಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಕರ್ನಾಟಕ ಗಾಂಧೀ ಸ್ಮಾರಕ ನಿಧಿ, ಗಾಂಧಿ ಭವನ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕರ್ನಾಟಕ ಗಾಂಧೀ ಸ್ಮಾರಕ ನಿಧಿಯ ಸುವರ್ಣ ಮಹೋತ್ಸವ ವರ್ಷಾಚರಣೆ 2010-11 ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಗಾಂಧೀಜಿಯವರಲ್ಲಿದ್ದ ಸತ್ಯ ಎಂಬ ಅಂತಃಶಕ್ತಿ ಅವರನ್ನು ಮಹಾತ್ಮರನ್ನಾಗಿಸಿದೆ. ಸತ್ಯದ ದಾರಿಯಲ್ಲಿ ಇಂದು ನಡೆದರೆ ಸಾಲದು, ನಾವೇ ಸತ್ಯವಾಗಬೇಕಾದ ಕಾಲ ಸನ್ನಿಹಿತವಾಗಿದೆ. ಗಾಂಧೀಜಿ ಹಾಗೂ ಅವರ ಮೌಲ್ಯ ಆದರ್ಶಗಳು ಇಂದಿಗೂ ಪ್ರಸ್ತುತ ಎಂದರು.

ವಿಧಾನಸಭೆ ಮಾಜಿ ಸಭಾಪತಿ ಕೃಷ್ಣ ಮಾತನಾಡಿ, ವಿಶ್ವದಾದ್ಯಂತ ಮಹಾತ್ಮನಿಗೆ ಸಿಗುತ್ತಿರುವ ಗೌರವ, ಅವರ ವಿಚಾರಗಳಿಗೆ ದೊರೆಯುತ್ತಿರುವ ಮನ್ನಣೆ ಗಾಂಧಿ ಜನಿಸಿದ ನಮ್ಮ ದೇಶದಲ್ಲಿ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತ ಪಡಿಸಿದರು.

ಶೇಷಾದ್ರಿಪುರಂ ಶಿಕ್ಷಣ ದತ್ತಿ ಗೌರವ ಕಾರ್ಯದರ್ಶಿ ಡಾ.ವೂಡೆ.ಪಿ.ಕೃಷ್ಣ ಮಾತನಾಡಿ, ವಿದ್ಯಾರ್ಥಿಗಳ ಜೀವನ ಸಾಕಾರವಾಗಬೇಕಾದರೆ ಗಾಂಧೀಜಿಯವರ ಜೀವನ ಅಧ್ಯಯನ ಅಗತ್ಯ. ಗಾಂಧೀಜಿಯವರ ಪ್ರಾರ್ಥನಾ ಸಂಪ್ರದಾಯ ಮುಗಿದಿದೆ. ಅವರ ಸಂಪ್ರದಾಯ ಮುಂದುವರಿದದ್ದೇ ಆದರೆ ಸಬಕೋ ಸನ್ಮತಿ ದೇ ಭಗವಾನ್ ಎಂಬ ನುಡಿಗೆ ನಿಜವಾದ ಅರ್ಥ ಸಿಗುತ್ತಿತ್ತು ಎಂದರು.

ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಅಧ್ಯಕ್ಷ ಡಾ.ಹೊ. ಶ್ರೀನಿವಾಸಯ್ಯ ಮಾತನಾಡಿ, ವಿದ್ಯಾಭ್ಯಾಸ ಇಂದು ಕೇವಲ ಅಕ್ಷರಭ್ಯಾಸಕ್ಕೆ ಸೀಮಿತವಾಗಿದೆ. ಜ್ಞಾನ ಎನ್ನುವುದು ಬದುಕಲು ಕಲಿಸುವುದು. ಅಂತಹ ಬದುಕು ಕಲಿಯಬೇಕಾದರೆ ಗಾಂಧೀಜಿಯವರ ಆದರ್ಶ ಮೌಲ್ಯಗಳ ಪರಿಚಯವಿರಬೇಕು ಎಂದು ನುಡಿದರು.

ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಕೆ.ಎಂ.ಸ್ವಾಮಿಗೌಡ ಮಾತನಾಡಿ, ನವೆಂಬರ್ 1ರ ನಂತರ ಪ್ರತಿ ಸೋಮವಾರ ಅಧ್ಯಾಪಕರಾದಿಯಾಗಿ ವಿದ್ಯಾರ್ಥಿಗಳು ಖಾದಿ ಬಟ್ಟೆ ಧರಿಸಿ ಕಾಲೇಜಿಗೆ ಬರಬೇಕೆಂದು ಘೋಷಿಸಿದರು. ಗಾಂಧೀಜಿಯವರ ಎಲ್ಲ ವಿಚಾರ ಹಾಗೂ ಆದರ್ಶಗಳನ್ನು ಏಕ ಕಾಲಕ್ಕೆ ಅನುಷ್ಠಾನಕ್ಕೆ ತರುವುದು ಕಷ್ಟ ಸಾಧ್ಯ. ಆದುದ್ದರಿಂದ ಖಾದಿ ಬಟ್ಟೆ ತೊಡುವ ಮೂಲಕ ಅವರ ಆದರ್ಶಗಳ ಪಾಲನೆಗೆ ಮುಂದಾಗುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಾಗಮಂಗಲ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಹೊನ್ನಾವರ ಶಂಕರ್ ಕಾಲೇಜಿನ 800 ವಿದ್ಯಾರ್ಥಿಗಳಿಗೆ ಗಾಂಧೀಜಿಯವರ ಆತ್ಮಕಥೆ ಅಥವಾ ನನ್ನ ಸತ್ಯಾನ್ವೇಷಣೆ ಎಂಬ ಪುಸ್ತಕವನ್ನು ನೀಡಿದರು.  

ಅಂತಿಮ ಬಿ.ಕಾಂ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಚಾಲನೆಗೊಂಡಿತು. ಕಾಲೇಜಿನ ಸಾಂಸ್ಕೃತಿಕ ಘಟಕದ ಕಾರ್ಯದರ್ಶಿ ಎನ್.ರಾಮು ಸ್ವಾಗತಿಸಿ ವಂದಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಿ.ಬಿ.ಮಂಜೇಗೌಡ ನಿರೂಪಿಸಿದರು. ನಿವೃತ್ತ ಪ್ರಾಧ್ಯಾಪಕ ಜಿ.ಬಿ.ಶಿವರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT