ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಯ ಸಾಕು ಜಾಗ್ರತೆ ಬೇಕು

Last Updated 17 ಮೇ 2012, 19:30 IST
ಅಕ್ಷರ ಗಾತ್ರ

ಇನ್ನು ಕೆಲವೇ ವರ್ಷಗಳ ಬಳಿಕ ಬೆಂಗಳೂರು ನೀರಿನ ಕೊರತೆಯಿಂದ ತತ್ತರಿಸುತ್ತದೆ ಎನ್ನುವುದನ್ನು ಹಲವು ಪರಿಣಿತರು ಹೇಳುತ್ತಲೇ ಬಂದಿದ್ದಾರೆ. ಆದರೆ ಭವಿಷ್ಯದಲ್ಲಿ ನೀರಿನ ಕೊರತೆಯನ್ನು ನೀಗಿಸಲು ಕೆಲವು ಸರಳ ವಿಧಾನಗಳನ್ನು ಅನುಸರಿಸಿದರೆ ಸಾಕು ಎನ್ನುತ್ತಾರೆ `ಸಿಟಿಜನ್ಸ್ ಆಕ್ಷನ್ ಫೋರಂ~ನ ಎನ್.ಎಸ್. ಮುಕುಂದ.

 ಅವರ ಪ್ರಕಾರ ಬೆಂಗಳೂರಿಗರಿಗೆ ನಿರಂತರವಾಗಿ 24 ಗಂಟೆ ನೀರು ಪೂರೈಸುವುದಷ್ಟೇ ಅಲ್ಲದೇ 2051ರ ಹೊತ್ತಿಗೆ 2.2 ಕೋಟಿಯಷ್ಟಾಗುವ ಬೆಂಗಳೂರಿನ ಜನಸಂಖ್ಯೆಗೆ ಬೇಕಿರುವ ನೀರನ್ನೂ ಉಳಿಸಿಕೊಳ್ಳಬಹುದು. ಕೆರೆಗಳ ನಡುವಣ ಸಂಪರ್ಕವನ್ನು ಮತ್ತೆ ಸಾಧ್ಯ ಮಾಡಿದರೆ ಆ ಮೂಲಕ ಇನ್ನೂ 500 ಎಂಎಲ್‌ಡಿ ನೀರನ್ನು ಸಂಗ್ರಹಿಸಬಹುದು.

ಕೇವಲ ಮನೆಯ ಸೂರಿಗಷ್ಟೇ ಮಳೆ ನೀರು ಸಂಗ್ರಹವನ್ನು ಸೀಮಿತಗೊಳಿಸದೆ  ನಗರದ ಎಲ್ಲೆಡೆಗೂ ಇದನ್ನು ವಿಸ್ತರಿಸಿದರೆ ಅದರಿಂದ 1259 ಎಂಎಲ್‌ಡಿ ನೀರು ದೊರೆಯುತ್ತದೆ.

ತ್ಯಾಜ್ಯ ನೀರನ್ನು ಶುದ್ಧೀಕರಿಸಿದರೆ ಪುನರ್‌ಬಳಕೆಗೆ ದೊರೆಯುವ ನೀರಿನ ಪ್ರಮಾಣ 1250 ಎಂಎಲ್‌ಡಿ. ಅಂದರೆ ಸುಮಾರು 3000 ಎಂಎಲ್‌ಡಿಯಷ್ಟು ನೀರನ್ನು ಅಸಾಂಪ್ರದಾಯಿಕ ವಿಧಾನಗಳ ಮೂಲಕವೇ ಸಂಗ್ರಹಿಸಬಹುದು.

ಸಿಟಿಜನ್ಸ್ ಫೋರಂ ನಡೆಸಿದ ಅಧ್ಯಯನದ ಪ್ರಕಾರ ಕಳೆದ 110ವರ್ಷಗಳಲ್ಲಿ ಕೇವಲ 18 ವರ್ಷಗಳಲ್ಲಿ ಮಾತ್ರ 751 ಮಿಲಿ ಮೀಟರ್‌ಗಿಂತ ಕಡಿಮೆ ಮಳೆ ಸುರಿದಿದೆ. ಮಳೆ ನೀರನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಲು ಬೇಕಾಗಿರುವುದು ಕೇವಲ 6,000 ರಿಂದ 8000 ಕೋಟಿ ರೂಪಾಯಿ ಮಾತ್ರ.

ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ನೀರಿನ ಅನಗತ್ಯ ವ್ಯಯ. ಮುಕುಂದ ಅವರ ಪ್ರಕಾರ ಶೇ. 65ರಷ್ಟು ನೀರು ಶೌಚಾಲಯದ ಫ್ಲಶ್‌ನಲ್ಲಿ ಖರ್ಚಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಎರಡು ಪೈಪ್‌ಗಳ ಪರಿಕಲ್ಪನೆಯನ್ನು ಜಾರಿಗೆ ತಂದರೆ ಶೌಚಾಲಯದ ಫ್ಲಶ್ ಕೂಡಾ ಸೇರಿದಂತೆ ಇತರ ಬಳಕೆಗಳಿಗೆ ಬೇಕಾಗುವ ನೀರನ್ನು ಒಂದು ಪೈಪ್‌ನ ಮೂಲಕ ಪೂರೈಸಬಹುದು.

ಮತ್ತೊಂದು ಪೈಪ್‌ನಲ್ಲಿ ಶುದ್ಧ ನೀರನ್ನಷ್ಟೇ ಪೂರೈಸಬಹುದು. ಇದರಿಂದ ಕುಡಿಯಲು, ಅಡುಗೆಗೆ ಅಗತ್ಯವಾದ ಶುದ್ಧನೀರಿನ ಪ್ರಮಾಣದ ಪೂರೈಕೆಯ ಪ್ರಮಾಣ ಶೇಕಡಾ 50ರಷ್ಟು ಕಡಿಮೆಯಾಗುತ್ತದೆ.

ತಕ್ಷಣವೇ ಅಂತರ್ಜಲ ಬಳಕೆಗೆ ತಡೆಯೊಡ್ಡುವ ಅಗತ್ಯವಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವರದಿಯ ಲೇಖಕರಲ್ಲಿ ಒಬ್ಬರಾದ  ಸುಭಾಷ್ ಚಂದ್ರ ಅವರ ಪ್ರಕಾರ ಅಂತರ್ಜಲವನ್ನು ಕೇವಲ ತುರ್ತು ಅಗತ್ಯದ ಸಂದರ್ಭಗಳು ಅಥವಾ ಬರದಂಥ ಸಂದರ್ಭಗಳಲ್ಲಿ ಮಾತ್ರ ಬಳಸಬೇಕು. ಹೀಗೆ ಬಳಕೆ ಮಾಡುವಾಗಲೂ ಅಂತರ್ಜಲ ಬಳಕೆಯ ಪ್ರಮಾಣ ಆಯಾ ವರ್ಷ ಸುರಿದ ಮಳೆಯ ಪ್ರಮಾಣದ ಶೇಕಡಾ 60ರಷ್ಟನ್ನು ಮೀರಬಾರದು.

ಸಾಮಾನ್ಯವಾಗಿ ಭೂಮಿಯ ಮೇಲೆ ಬೀಳುವ ನೀರು ಇಂಗುವ ಪ್ರಕ್ರಿಯೆಯಲ್ಲಿ ಸುಮಾರು 280ರಿಂದ 300ಗಳಷ್ಟು ಆಳಕ್ಕೆ ಇಳಿಯುತ್ತದೆ. ಬೆಂಗಳೂರಿನ ಭೂಲಕ್ಷಣದಂತೆ ಇದಕ್ಕಿಂತ ಆಳದಲ್ಲಿರುವ ಬಂಡೆಗಳಲ್ಲಿ ಬಿರುಕಿನ ಪ್ರಮಾಣ ಕಡಿಮೆ ಇರುವುದರಿಂದ ನೀರು ಇನ್ನಷ್ಟು ಕೆಳಗಿಳಿಯುವ ಸಾಧ್ಯತೆಗಳು ಕಡಿಮೆ.
 
300 ಮೀಟರ್‌ಗಿಂತ ಹೆಚ್ಚು ಆಳವಾದ ಬಾವಿಗಳಿಂದ ನೀರನ್ನು ಎತ್ತುತ್ತಿದ್ದೇವೆ ಎಂದರೆ ಮರುಪೂರಣದ ಸಾಧ್ಯತೆಯೇ ಇಲ್ಲದ ಸಂಗ್ರಹದಿಂದ ನೀರನ್ನು ಎತ್ತುತ್ತಿದ್ದೇವೆ ಎಂದರ್ಥ.

ಕೆರೆಗಳ ಪುನಶ್ಚೇತನ ಕಾರ್ಯದಿಂದ ದೊರೆಯುವ ಲಾಭ ಬಹಳ ದೊಡ್ಡದು. ಮಳೆ ನೀರು ಹರಿದು ಹೋಗುವ ಚರಂಡಿಗಳನ್ನು ಕೊಳಚೆ ನೀರು ಹರಿಯುವ ಚರಂಡಿಗಳಿಂದ ಪ್ರತ್ಯೇಕಿಸಬೇಕು. ಈ ಮೂಲಕ ಮಲಿನಗೊಳ್ಳದ ಮಳೆ ನೀರನ್ನಷ್ಟೇ ಕೆರೆಗಳಿಗೆ ಹರಿಸಬಹುದು.
 
ಹೀಗೆ ಸಂಗ್ರಹವಾದ ನೀರನ್ನು ಕಡ್ಡಾಯಗೊಳಿಸಲಾಗಿರುವ ವಿಧಾನದಂತೆ ಶೋಧಿಸಿ ಪೂರೈಸಿದರೆ 24 ಲಕ್ಷ ಜನರ ಅಗತ್ಯವನ್ನು ಪೂರೈಸಬಹುದು. ಇದರ ಜೊತೆಗೆ ತಾಜ್ಯ ನೀರಿನ ಶುದ್ಧೀಕರಣದ ಮೂಲಕ ಇನ್ನೂ 24 ಲಕ್ಷ ಮಂದಿಯ ಅಗತ್ಯವನ್ನು ಪೂರೈಸಬಹುದಾದ ನೀರು ದೊರೆಯುತ್ತದೆ.

 (ಮುಂದಿನ ಭಾಗ: ನಾಳಿನ `ಮೆಟ್ರೊ~ದಲ್ಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT