ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯರ್ಥವಾದ ಕುಡುಕ ಚಾಲಕನ ಮೊರೆತ

Last Updated 12 ಜುಲೈ 2012, 19:15 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕ ಸೇವೆಗೆ ಮೀಸಲಾದ ವಾಹನಗಳನ್ನು ಕುಡಿದು ಚಾಲನೆ ಮಾಡಿ ಕೆಲಸ ಕಳೆದುಕೊಂಡರೆ, ಯಾವ ನ್ಯಾಯಾಲಯಗಳೂ ಅವರ ನೆರವಿಗೆ ಬಾರದು ಎಂಬ ಸಂದೇಶವೊಂದನ್ನು ಹೈಕೋರ್ಟ್ `ಕುಡುಕ ಚಾಲಕ~ರಿಗೆ ನೀಡಿದೆ.

ತಮ್ಮನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಕೋರಿ 12 ವರ್ಷ ಕಾನೂನು ಸಮರ ಸಾರಿದ್ದ ಬಿಎಂಟಿಸಿ ಚಾಲಕನೊಬ್ಬನ ಅರ್ಜಿಯನ್ನು ವಜಾ ಮಾಡಿ ಕೋರ್ಟ್ ಆದೇಶಿಸಿದೆ.

ದಾಸನಪುರದ ನಿವಾಸಿ ಎ.ಚಂದ್ರಪ್ಪ ಅವರನ್ನು 2000ನೇ ಸಾಲಿನಲ್ಲಿ ವಜಾ ಮಾಡಿರುವ ಪ್ರಕರಣ ಇದಾಗಿದೆ. 1998ರ ಆ.28ರಂದು ಕುಡಿದು ಇವರು ಬಿಎಂಟಿಸಿ ಬಸ್ ಚಾಲನೆ ಮಾಡಿದ್ದರು. ಮದ್ಯದ ಅಮಲಿನಲ್ಲಿ ಪ್ರಯಾಣಿಕರನ್ನು ಅವಾಚ್ಯ ಪದಗಳಿಂದ ನಿಂದಿಸಿದರು. ಆದುದರಿಂದ ಇವರ ವಿರುದ್ಧ ಪ್ರಯಾಣಿಕರು ಬಿಎಂಟಿಸಿ ಅಧಿಕಾರಿಗಳಲ್ಲಿ ದೂರು ದಾಖಲು ಮಾಡಿದರು.

ಚಂದ್ರಪ್ಪ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಅವರು ಮದ್ಯಪಾನ ಮಾಡಿದ್ದು ಖಚಿತವಾಯಿತು. ಆದ್ದರಿಂದ ಇವರನ್ನು ವಜಾ ಮಾಡಲಾಯಿತು.

ಈ ಆದೇಶವನ್ನು ಅವರು ಕಾರ್ಮಿಕ ನ್ಯಾಯಾಲಯದಲ್ಲಿ ಪ್ರಶ್ನಿಸಿದರು. ಮದ್ಯಪಾನ ಮಾಡಿ ಬಸ್ ಚಾಲನೆ ಮಾಡುವುದನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್, ಅವರ ಅರ್ಜಿಯನ್ನು ವಜಾ ಮಾಡಿತು. ಈ ಆದೇಶವನ್ನು ಹೈಕೋರ್ಟ್‌ನ ಏಕಸದಸ್ಯ ಪೀಠ ಕೂಡ ಎತ್ತಿಹಿಡಿಯಿತು. ಅಲ್ಲಿಗೆ ಸುಮ್ಮನಿರದ ಚಂದ್ರಪ್ಪ, ತಮ್ಮನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳಲು ಬಿಎಂಟಿಸಿಗೆ ಆದೇಶಿಸುವಂತೆ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದರು. ಈ ಮನವಿಯನ್ನು ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ ನೇತೃತ್ವದ ವಿಭಾಗೀಯ ಪೀಠ ಈಗ ವಜಾ ಮಾಡಿದೆ.
ಸರ್ಕಾರಿ ಜಮೀನು ಒತ್ತುವರಿ: ನಗರದ ಕೆ.ಆರ್.ಪುರ ಹೋಬಳಿಯ ಬಸವನಪುರ ಗ್ರಾಮದಲ್ಲಿರುವ ಸುಮಾರು 38.26 ಎಕರೆ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವುದಾಗಿ ದೂರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಈ ಜಾಗವನ್ನು ಉದ್ಯಾನ, ಆಟದ ಮೈದಾನ ಇತ್ಯಾದಿಗಳಿಗೆ ಬಳಕೆ ಮಾಡಬೇಕಾದುದು ಸರ್ಕಾರದ ಕರ್ತವ್ಯ. ಒತ್ತುವರಿಯಾದರೂ ಈ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಕೆ.ಸುಸೈರಾಜ್ ಎನ್ನುವವರು ಅರ್ಜಿ ಸಲ್ಲಿಸಿದ್ದಾರೆ. ಈ ಆರೋಪಕ್ಕೆ ಆಕ್ಷೇಪಣಾ ಹೇಳಿಕೆ ಸಲ್ಲಿಸುವಂತೆ ಸರ್ಕಾರ, ಪಾಲಿಕೆಗೆ ನಿರ್ದೇಶಿಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ಮುಂದೂಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT