ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾನ್ ಚಾಲಕನ ಥಳಿಸಿದ ಸಾರ್ವಜನಿಕರು

Last Updated 7 ಫೆಬ್ರುವರಿ 2011, 18:40 IST
ಅಕ್ಷರ ಗಾತ್ರ

ಬೆಂಗಳೂರು: ಜಯನಗರದ ಈಸ್ಟ್ ಎಂಡ್ ರಸ್ತೆಯಲ್ಲಿರುವ ಖಾಸಗಿ ಶಾಲೆಯೊಂದರ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಲೆತ್ನಿಸಿದ ಅದೇ ಶಾಲೆಯ ವಾಹನದ ಚಾಲಕನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಸೋಮವಾರ ನಡೆದಿದೆ.

ಸಾರ್ವಜನಿಕರಿಂದ ಥಳಿತಕ್ಕೊಳಗಾಗಿರುವ ಶಾಲಾ ವಾಹನದ ಚಾಲಕ ರಾಜು (20) ಎಂಬಾತನನ್ನು ತಿಲಕ್‌ನಗರ ಪೊಲೀಸರು ಬಂಧಿಸಿದ್ದಾರೆ. ಜಯನಗರದ ಕಾಸ್ಮೊ ಪಾಲಿಟನ್ ಕ್ಲಬ್‌ನಲ್ಲಿ ನೌಕರನಾಗಿದ್ದ ಆತ, ಬೆಳಿಗ್ಗೆ ಮತ್ತು ಮಧ್ಯಾಹ್ನದ ವೇಳೆಯಲ್ಲಿ ಶಾಲೆಯ ಮಕ್ಕಳನ್ನು ಡ್ರಾಪ್ ಮಾಡುವ ಕೆಲಸ ಮಾಡುತ್ತಿದ್ದ.

ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಶುಕ್ರವಾರ (ಫೆ.4) ಮಧ್ಯಾಹ್ನ ಮನೆಗೆ ಡ್ರಾಪ್ ಮಾಡಲು ಕರೆದೊಯ್ದ ರಾಜು, ನಗರದ ವಿವಿಧೆಡೆ ಸುತ್ತಾಡಿಸಿ ನಂತರ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಲೆತ್ನಿಸಿದ್ದ. ಇದಕ್ಕೆ ವಿದ್ಯಾರ್ಥಿನಿ ಪ್ರತಿರೋಧ ತೋರಿ ಕೂಗಿಕೊಂಡಿದ್ದರಿಂದ ಆತಂಕಗೊಂಡ ಆತ, ಅವಳನ್ನು ವಾಪಸ್ ಕರೆದುಕೊಂಡು ಬಂದು ಮನೆಗೆ ಬಿಟ್ಟು ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆ ವಿದ್ಯಾರ್ಥಿನಿಯ ಮೊಬೈಲ್‌ಗೆ ಭಾನುವಾರ ಮಧ್ಯಾಹ್ನ ಕರೆ ಮಾಡಿದ ರಾಜು ಅಶ್ಲೀಲವಾಗಿ ಮಾತನಾಡಿದ್ದ. ಇದರಿಂದ ಕೋಪಗೊಂಡ ವಿದ್ಯಾರ್ಥಿನಿ, ರಾಜು ತನ್ನ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದ ವಿಷಯವನ್ನು ಪೋಷಕರಿಗೆ ತಿಳಿಸಿದಳು. ಆತನ ಬಗ್ಗೆ ಮಾಹಿತಿ ಕಲೆ ಹಾಕಿದ ಪೋಷಕರು ಸೋಮವಾರ ಮಧ್ಯಾಹ್ನ ಕಾಸ್ಮೊ ಪಾಲಿಟನ್ ಕ್ಲಬ್‌ನ ಬಳಿ ಬಂದು ಆತನನ್ನು ಹಿಡಿದು ಸಾರ್ವಜನಿಕರೊಂದಿಗೆ ಸೇರಿಕೊಂಡು ಥಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಯಡಿಯೂರು ನಿವಾಸಿಯಾದ ವಿದ್ಯಾರ್ಥಿನಿಯ ತಂದೆ ನಗರದ ಪೊಲೀಸ್ ಠಾಣೆಯೊಂದರಲ್ಲಿ ಮುಖ್ಯ ಕಾನ್‌ಸ್ಟೆಬಲ್ ಆಗಿದ್ದಾರೆ. ಬಂಧಿತ ರಾಜು ವಿರುದ್ಧ ಅಪಹರಣ ಮತ್ತು ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮತ್ತೊಂದು ಪ್ರಕರಣ ಬಂಧನ: ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಕಾಮಾಕ್ಷಿಪಾಳ್ಯ ಸಮೀಪದ ಕೊಟ್ಟಿಗೆಪಾಳ್ಯ ನಿವಾಸಿ ವಿಕಾಸ್ (23) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಆತ ತನ್ನ ಮನೆಯ ಸಮೀಪವೇ ವಾಸವಿರುವ ಬಾಲಕಿಯೊಬ್ಬಳ ಮೇಲೆ ಶನಿವಾರ ಅತ್ಯಾಚಾರ ಎಸಗಿದ್ದ. ಬಾಲಕಿ ಈ ವಿಷಯವನ್ನು ತಾಯಿಗೆ ತಿಳಿಸಿದ್ದಳು. ಈ ಬಗ್ಗೆ ಬಾಲಕಿಯ ಪೋಷಕರು ದೂರು ನೀಡಿದ್ದರು, ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಕಾಮಾಕ್ಷಿಪಾಳ್ಯ ಪೊಲೀಸರು ತಿಳಿಸಿದ್ದಾರೆ.
ಅವಿವಾಹಿತನಾದ ವಿಕಾಸ್, ಗಾರ್ಮೆಂಟ್ಸ್‌ನಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT