ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾನ್ ಮಕ್ಕಳು

Last Updated 27 ಜೂನ್ 2012, 19:30 IST
ಅಕ್ಷರ ಗಾತ್ರ

ನಗರದ ಮಕ್ಕಳಿಗೆ ಮನೆಯೆಂಬುದು ಮಲಗುವ ಗೂಡು ಮಾತ್ರ. ಮನೆ ಗೋಡೆ ಮೇಲೆ ಚಿತ್ರ ಬರೆಯುವ, ಅಜ್ಜನ ಕೋಲಿನಿಂದ ಆಟವಾಡುವ ಮಕ್ಕಳೀಗ ಇಲ್ಲವೇ ಇಲ್ಲ.

ಬೆಳಗಿನ ಸಿಹಿನಿದ್ದೆಯ ಸಮಯ. ಅಪಾರ್ಟ್‌ಮೆಂಟ್‌ನ ಕಿಟಕಿಯಿಂದಲೇ ಕಾಣುವ ಎತ್ತರೆತ್ತರದ ಓಕ್ ಮರಗಳಿಂದ ಹಕ್ಕಿಗಳ ಚಿಲಿಪಿಲಿ... ಬಾಲ್ಕನಿಯಲ್ಲಿ ಆಗಾಗ ಇಣುಕಿ ಮರೆಯಾಗುವ ಸೂರ್ಯನ ಹೊಂಗಿರಣ...
 
ಆಗಲೇ ಹಾಸಿಗೆಯಲ್ಲಿ ಮಿಸುಕಾಡುವ ಕಂದಮ್ಮ, ಕಣ್ಣು ಬಿಡಲಾಗದೇ ಇದ್ದರೂ ಕೇಳುತ್ತದೆ: `ವ್ಯಾನ್ ಟೈಮ್ ಆಯಿತಾ...? ಚೂರೇಚೂರು ನಿದ್ದೆ... ಒಂದ್ ಸಣ್ಣ ನಿದ್ದೆ... ಅಮ್ಮಾ... ನೀ ಬ್ರಷ್ ಮಾಡೋವರೆಗೂ ಮಲಗಿರಲಾ...?~

ಅಮ್ಮನಿಗೆಲ್ಲಿ ಉತ್ತರಿಸುವ ಪುರುಸೊತ್ತು? ಹೊದಿಕೆ ಕೊಡವಿ ಮಡಿಸಿಟ್ಟು, ಬ್ರಷ್‌ಗೆ ಆಗಲೇ ಪೇಸ್ಟ್ ಹಾಕಿದ್ದಾಗಿದೆ... ಅಲಾರಾಂನ ಇನ್ನೊಂದು ಗಂಟೆ ಹೊಡೆಯುವ ಮುನ್ನ ಹಲ್ಲುಜ್ಜಬೇಕು.

ಮತ್ತೊಂದು ಗಂಟೆಗೆ ಮುನ್ನ ಹಾಲು ಕುಡೀಬೇಕು... ಬಕೆಟ್‌ಗೆ ನೀರು ತುಂಬೋದ್ರಲ್ಲಿ ತಲೆ ಬಾಚೋದು ಮುಗೀಬೇಕು. ಒಂದು ಸಣ್ಣ ಗುಬ್ಬಿ ಸ್ನಾನ... ಸಾಬೂನಿನ ನೊರೆ ಜೊತೆ ಆಟವಾಡೋ ಹಾಗೂ ಇಲ್ಲ. ನೊರೆಯನ್ನು ಅಂಗೈಯಲ್ಲಿ ಹಿಡಿದು ಬಲೂನು ಮಾಡಿ, ಅದರ ಬಣ್ಣಗಳನ್ನು ಕಣ್ಣರಳಿಸಿ ನೋಡುವಂತೆಯೂ ಇಲ್ಲ.

ವ್ಯಾನ್ ಬರುತ್ತದೆ. ಈ ಸ್ಕೂಲ್ ಬಸ್‌ಗೆ ಮತ್ತೊಂದು ಗಂಟೆ... ಓಡಬೇಕು... ಯಾಕೆಂದರೆ ಅವರೆಲ್ಲ `ವ್ಯಾನ್ ಚಿಲ್ಡ್ರನ್~. ಶಾಲೆ ಶುರುವಾಗೋದು 9 ಗಂಟೆಗಾದರೂ 7.30ಕ್ಕೇ ಇವರ ದಿನ ಆರಂಭವಾಗಲೇಬೇಕು.

`ವ್ಯಾನ್ ಚಿಲ್ಡ್ರನ್~ ಶಾಲೆಗೆ ಹೋದೊಡನೆ, `ರೂಟ್ ನಂ. ಚಿಲ್ಡ್ರನ್~ ಆಗ್ತಾರೆ. ಉದ್ಯೋಗಸ್ಥ ಅಮ್ಮಂದಿರ ಎಳೆ ಮಕ್ಕಳಾದರೆ ಶಾಲೆ ಮುಗಿದೊಡನೆ `ಡೇ ಕೇರ್ ಚಿಲ್ಡ್ರನ್~ ಆಗ್ತಾರೆ.

ಡೇ ಕೇರ್ ಮುಗಿಸಿ ಮನೆಗೆ ಕಾಲಿಡುವ ಮುನ್ನವೇ ಟ್ಯೂಷನ್‌ಗೆ ಹೋಗುವ ತಯಾರಿ ಮಾಡಿಕೊಳ್ಳಬೇಕು. ಮತ್ತೆ ಹಾಲು ಗುಟುಕರಿಸಬೇಕು. ಗುಟುಕರಿಸುವಷ್ಟು ವ್ಯವಧಾನವೆಲ್ಲಿ? ಗಂಟಲಿಗಿಳಿಸಬೇಕು. ಅದು ಹೊಟ್ಟೆಗಿಳಿಯುವ ಮುನ್ನವೇ ಟ್ಯೂಷನ್‌ಗೆ ಹೊರಡಬೇಕು.

ಟ್ಯೂಷನ್‌ನಲ್ಲಿಯೂ ಮನೆಯದ್ದೇ ಚಿಂತೆ... “ಅಮ್ಮ ಬಂದಿರಬಹುದು... ನಾಳೆಗೆ ಡಬ್ಬಕ್ಕೆ ದೋಸೆ ಜೊತೆ ಜಾಮ್ ಬೇಡ, ಸಾಸ್ ಕೇಳಬೇಕು... ಅಪ್ಪ ಬಂದಿರಬಹುದು.

ಇವೊತ್ತಾದರೂ `ಪಾರ್ಟ್ಸ್ ಆಫ್ ಬಾಡಿ~ ಚಾರ್ಟ್ ತಂದಿರ್ತಾರೇನೋ..? ಬೇಗ ಹೋಮ್ ವರ್ಕ್ ಮುಗಿದರೆ ಒಂದರ್ಧ ಗಂಟೆಯಾದರೂ `ಓಗ್ಗಿ ಅಂಡ್ ಕಾಕ್ರೋಚ್~ ಕಾರ್ಟೂನ್ ನೋಡಬಹುದು. ನಾವ್ಯಾಕಪ್ಪ ಟ್ಯೂಷನ್ ಚಿಲ್ಡ್ರನ್ ಆದ್ವಿ..?” ಹೀಗೆ.. ಒಂದೇ ಸಮ ಮಾತುಗಳ ಹರಿದಾಟ. 

`ಡೇ ಕೇರ್ ಇರ್ದಿದ್ರೆ.. ಮನೆಗೆ ಬಂದು, ಒಂದು ದೊಡ್ಡ ಸ್ನಾನ ಮಾಡಿ, ಚಿತ್ರ ಬರೆದು, ಆಟ ಆಡಿ, ಅಮ್ಮನೊಂದಿಗೆ ಹೋಮ್ ವರ್ಕ್ ಮಾಡುತ್ತ, ಅಪ್ಪನೊಂದಿಗೆ ಕುಳಿತು ಟೀವಿ ನೋಡುವ ಸುಖ ಇರ್ತಿತ್ತಲ್ಲ.. ಈ ಡೇ ಕೇರ್‌ಗೆ ಯಾಕೆ ಹೋಗ್ಬೇಕು? ಶಾಲೆಯಿಂದ ಇನ್ನೊಂದು ಶಾಲೆಗೆ...~ ಮಗುವಿನ ತಲೆಯಲ್ಲಿ ಚಿಂತೆ.

ಇನ್ನು ಟ್ಯೂಷನ್ ಮುಗಿಸಿ ಮನೆಗೆ ಬಂದಾಗಲೇ ನಿದ್ರಾ ದೇವತೆ ಆಗಲೇ ಅಪ್ಪಿರುತ್ತಾಳೆ. ಕಣ್ಣು ತೇಲಿಸುತ್ತಲೇ ಊಟ ಮಾಡುವ ಮಕ್ಕಳಿಗೆ ಕತೆ ಕೇಳುವ ಆಸಕ್ತಿ ಇರುವುದಿಲ್ಲ. ಕೆಲಸದಿಂದ ಬಸವಳಿದು ಬರುವ ಅಮ್ಮನಿಗೆ ಕತೆ ಹೇಳುವಷ್ಟು ಸಮಯವೂ ಇರುವುದಿಲ್ಲ. ಊಟ ಮುಗಿಸಿ ನೀರುಣಿಸುವಷ್ಟರಲ್ಲಿ, ನಿದ್ರಾದೇವತೆಯ ಆಲಿಂಗನದಲ್ಲಿ ಈ ಮಕ್ಕಳು ಲೀನರಾಗಿರುತ್ತಾರೆ.

ಮರುದಿನ ಮತ್ತದೇ ದಿನಚರಿ... ಈ ಬಿಗಿಯಾದ ದಿನಚರಿಯಿಂದ ಬೇಸತ್ತ ಪುಟ್ಟ ಮಗು ಬೆಳಗ್ಗೆ ವ್ಯಾನ್ ಚಿಲ್ಡ್ರನ್, ನಂತರ ಡೇ ಕೇರ್ ಚಿಲ್ಡ್ರನ್, ಆಮೇಲೆ ಟ್ಯೂಷನ್ ಚಿಲ್ಡ್ರನ್... ಹಾಗಾದ್ರೆ ನಾವು ಪೇರೆಂಟ್ ಚಿಲ್ಡ್ರನ್ ಆಗೋದು ಯಾವಾಗ?

ಬೆಂಗಳೂರು ನಗರವೇ ಹಾಗೆ. ಬದುಕಿಗಾಗಿ ಬದುಕನ್ನೇ ಕಸಿಯುತ್ತದೆ. ದುಡಿಯುವುದೇ ಜೀವನಕ್ಕಾಗಿ. ಆದರೆ ಜೀವವನ್ನೇ ಕಸಿಯುವ ಊರಿದು. ಪ್ರತಿ ದಿನದ 24 ಗಂಟೆಗಳಲ್ಲಿ ಮೂರ‌್ನಾಲ್ಕು ಗಂಟೆಗಳಷ್ಟು ಕಾಲ ರಸ್ತೆಯ ಮೇಲೆ ಕಳೆಯುತ್ತೇವೆ.
 
ಆರರಿಂದ ಎಂಟು ತಾಸು ನಿದ್ದೆ. ಎಂಟು ಗಂಟೆ ಕಚೇರಿಯಲ್ಲಿ. ಒಂದು ಗಂಟೆ ವೈಯಕ್ತಿಕ ಕೆಲಸಕ್ಕೆ ವ್ಯಯವಾಗುತ್ತದೆ. ಇವಿಷ್ಟರಲ್ಲಿ ಯಾವುದನ್ನೂ ಕಡಿಮೆ ಮಾಡುವಂತಿಲ್ಲ ಅಥವಾ ತೆಗೆದುಹಾಕುವಂತಿಲ್ಲ. ಇನ್ನುಳಿದ ಆರೇಳು ಗಂಟೆಯಲ್ಲಿ ನಮ್ಮಿಡೀ ಜೀವನವೇ ಹಂಚಿಹೋಗುತ್ತದೆ.

ಅಪ್ಪನಿಗೆ ಕಚೇರಿಯೊಂದಿಗೆ ಮನೆಯ ಜವಾಬ್ದಾರಿ. ಅಮ್ಮನಿಗೆ ಕಚೇರಿ, ಮನೆ, ಮಕ್ಕಳ ಜವಾಬ್ದಾರಿ. ಮಕ್ಕಳಿಗೆ ಶಾಲೆ, ಮತ್ತದೇ ವ್ಯಾನು ರಸ್ತೆ, ಆಮೇಲೆ ಕ್ಲಾಸುಗಳು, ಟ್ಯೂಷನ್‌ಗಳು... ಇನ್ಯಾವಾಗ ನಾವು ಬದುಕೋದು?

ಅಪ್ಪ ಅಮ್ಮನಾಗುವುದು ಅಂದರೆ ಕೇವಲ ಎಲ್ಲೆಡೆಯೂ ಶುಲ್ಕಗಳನ್ನು ತುಂಬುತ್ತ, ಪಾಲಕರ ಸಭೆಗಳಲ್ಲಿ ನಮ್ಮ ಮಕ್ಕಳ ಬೆಳವಣಿಗೆಯ ವರದಿ ಕೇಳುವುದೇ? ದೂರುಗಳ ಪಟ್ಟಿ ತರುವುದೇ? ದೂರುಗಳನ್ನು ಕೇಳಿ, ಹೌದಾ... ನಮ್ಮ ಮಗು ಹಟಮಾರಿಯಾ? ಮನೆಯಲ್ಲಿ ಹಾಗಿಲ್ಲವಲ್ಲ.. ಎಂಬ ಉತ್ತರ ಎಲ್ಲ ಪಾಲಕರದ್ದೂ ಆಗಿರುತ್ತದೆ. ಆದರೆ ಮನೆಯಲ್ಲಿ ಯಾರು ಇರ್ತಾರೆ? ಎಷ್ಟು ಹೊತ್ತು ಇರ್ತಾರೆ?

ಈ `ಸೌ ಗ್ರಾಂ~ ಜಿಂದಗಿಯಲ್ಲಿ ಸಂಭಾಳಿಸಿ ಖರ್ಚು ಮಾಡಬೇಕಾದರೆ ಮಾಡುವುದಾದರೂ ಎಲ್ಲಿ? ನಾವ್ಯಾರ ಪಾಲಕರು? ನಮ್ಮ ಮಕ್ಕಳು ಯಾರ ಮಕ್ಕಳು..? ಐದಾರು ವರ್ಷದ ಮಕ್ಕಳು, `ನಾವಿನ್ನು ಪೇರೆಂಟ್ ಚಿಲ್ಡ್ರನ್ ಅಲ್ಲ, ವ್ಯಾನ್ ಚಿಲ್ಡ್ರನ್~ ಎಂದಾಗಲೇ ನಮ್ಮ ಜೀವನಚಕ್ರ ನಮ್ಮನ್ನು ಎಚ್ಚರಿಸಬೇಕು.

ಹಾಗಾದರೆ ಪೇರೆಂಟ್ ಚಿಲ್ಡ್ರನ್ ಮಾಡುವುದಾದರೂ ಹೇಗೆ? ಇದು ಮೆಟ್ರೊ ನಗರಿ... ಪ್ರಶ್ನೆಗಳಿವೆ... ಉತ್ತರಗಳಿಲ್ಲ. ಉತ್ತರಗಳಿದ್ದರೂ ಉತ್ತರಿಸುವ ವ್ಯವಧಾನವಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT