ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಪಾರಕ್ಕೆ ಮಳೆ ತಂದ ಅದೃಷ್ಟ

Last Updated 20 ಜೂನ್ 2011, 8:20 IST
ಅಕ್ಷರ ಗಾತ್ರ

ಬೆಳಗಾವಿ: ಮಲೆನಾಡು ಸೆರಗಿನಲ್ಲಿರುವ ಬೆಳಗಾವಿಯಲ್ಲಿ ಮಳೆ ಆರಂಭವಾಯಿತು ಎಂದರೆ ಕೆಲವು ವ್ಯಾಪಾರಸ್ಥರು ತೊಂದರೆಗೆ ಒಳಗಾಗುತ್ತಾರೆ. ಆದರೆ ಇನ್ನು ಕೆಲವು ವ್ಯಾಪಾರಸ್ಥರಿಗೆ ಅದೃಷ್ಟ ಖುಲಾಯಿಸುತ್ತದೆ.

ನಗರದ ವಿವಿಧೆಡೆ ರಸ್ತೆ ಬದಿ ಕಾಯಿಪಲ್ಲೆ, ಹಣ್ಣು, ಹೂವು ಮುಂತಾದ ವಸ್ತುಗಳನ್ನು ಮಾರಾಟ ಮಾಡುವವರಿಗೆ ಮಳೆಗಾಲ ಬಂತೆಂದರೆ ಸಾಕು ಮನದಲ್ಲಿ ಆತಂಕ ಮೂಡುತ್ತದೆ. ಮಳೆ ಬಂತೆಂದರೆ ವ್ಯಾಪಾರಕ್ಕೆ ಸಂಚಕಾರ ಉಂಟಾಗುತ್ತದೆ.

ನಿತ್ಯವೂ ನೂರಾರು ರೂಪಾಯಿ ವ್ಯಾಪಾರ ಮಾಡಿ ಕುಟಂಬ ಸಾಗಿಸುವ ವ್ಯಾಪಾರಸ್ಥರು ಮಳೆಯಿಂದಾಗಿ ತೊಂದರೆ ಎದುರಿಸಬೇಕಾಗುತ್ತದೆ. ಮಳೆಗಾಲ ಪೂರ್ತಿ ಆಕಾಶವನ್ನು ನೋಡಿಕೊಂಡೇ ವ್ಯಾಪಾರ ಮಾಡುತ್ತಾರೆ.
ಆದರೆ ಇನ್ನೊಂದೆಡೆ ಮಳೆಗಾಲ ಆರಂಭವಾಯಿತೆಂದರೆ ಕೆಲ ವ್ಯಾಪಾರಿಗಳ ಅದೃಷ್ಟ ಖುಲಾಯಿಸುತ್ತದೆ.  ಕೊಡೆ, ಜರ್ಕಿನ್, ಸ್ವೆಟರ್, ಟೋಪಿ, ದ್ವಿಚಕ್ರ ವಾಹನದ ಸೀಟುಗಳ ಪ್ಲಾಸ್ಟಿಕ್ ಕವರ್‌ಗಳ ವ್ಯಾಪಾರ  ಜೋರಾಗುತ್ತದೆ.

ಮಳೆಗಾಲ ಆರಂಭ ಆಗುತ್ತಿದ್ದೆಂತೆಯೇ ನಗರದ ವಿವಿಧೆಡೆ ಹೊಸದಾಗಿ ಜರ್ಕಿನ್ ಮಾರಾಟದ ಮಳಿಗೆಗಳು ತಲೆ ಎತ್ತುತ್ತವೆ. ಬೆಳಗಾವಿಯಲ್ಲಿ ಮಳೆ ಸ್ವಲ್ಪ ಹೆಚ್ಚಾಗಿಯೇ ಬೀಳುವುದರಿಂದ ಜರ್ಕಿನ್‌ಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಹೆಚ್ಚಾಗಿದೆ. ಹೀಗಾಗಿ ಅವುಗಳ ಮಾರಾಟ ರಸ್ತೆ ಬದಿಯಿಂದ ಹಿಡಿದು ಮಳಿಗೆಗಳವರೆಗೂ ಭರ್ಜರಿಯಾಗಿಯೇ ನಡೆಯುತ್ತದೆ.

100 ರೂಪಾಯಿಂದ ಹಿಡಿದು ಒಂದು ಸಾವಿರ ರೂಪಾಯಿವರೆಗಿನ ಬೆಲೆಯಲ್ಲಿ ಇಲ್ಲಿ ಲಭ್ಯವಾಗುತ್ತವೆ. ಬಗೆ  ಬಗೆಯ ವಿನ್ಯಾಸದಲ್ಲಿ ಸಿಗುತ್ತವೆ. ಅದರಂತೆಯೇ ಹೊಸ ಕೊಡೆಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಜತೆಗೆ ರಿಪೇರಿ ಮಾಡುವವರಿಗೂ ಬೇಡಿಕೆ ಉಂಟಾಗುತ್ತದೆ.

ದ್ವಿಚಕ್ರ ವಾಹನದ ಸೀಟು ಮುಚ್ಚಿಕೊಳ್ಳುವುದಕ್ಕಾಗಿ ಕೆಲವು ಕಡೆ ಪ್ಲಾಸ್ಟಿಕ್ ಕವರ್ ಮಾರಾಟ ಮಾಡುವ ರಸ್ತೆಯ ಬದಿಯ ವ್ಯಾಪಾರಿಗಳು ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಸಿಗುತ್ತಾರೆ.

ನಗರದಲ್ಲಿರುವ ಇನ್ನು ಕೆಲವು ವ್ಯಾಪಾರಿಗಳು ಸೀಸನ್ ವ್ಯಾಪಾರಿಗಳಾಗಿದ್ದಾರೆ. ಕಾಲಕ್ಕೆ ತಕ್ಕಂತೆ ವ್ಯಾಪಾರದ ವಸ್ತುಗಳನ್ನು ಬದಲಾಯಿಸುತ್ತಾ ಹೋಗುತ್ತಾರೆ. ವರ್ಷಪೂರ್ತಿ ಒಂದಲ್ಲ, ಒಂದು ವಸ್ತುವಿನ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುತ್ತಾರೆ.

ಮಳೆಗಾಲದಲಿ ಜರ್ಕಿನ್ ಮಾರಿದರೆ, ಚಳಿಗಾಲದಲ್ಲಿ ಸ್ವೆಟರ್ ಮಾರಾಟ ಮಾಡುತ್ತಾರೆ. ಬೇಸಿಗೆಯಲ್ಲಿ ಮಕ್ಕಳ ಆಟಿಕೆ, ಬಟ್ಟೆ, ಪುಸ್ತಕ ಇತ್ಯಾದಿ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ವರ್ಷಪೂರ್ತಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT