ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಪಾರಸ್ಥರಿಗೆ ಪೀಕಲಾಟ...

Last Updated 16 ಜನವರಿ 2012, 10:35 IST
ಅಕ್ಷರ ಗಾತ್ರ

ರಾಯಚೂರು: ನಗರದಲ್ಲಿ ತರಕಾರಿ ಹೊಸ ಮಾರುಕಟ್ಟೆ ನಿರ್ಮಾಣ ಒಂದಿಲ್ಲೊಂದು ಕಾರಣದಿಂದ ಮುಂದೇ ಹೋಗುತ್ತಲೇ ಇದೆ. 

ನಗರದ ಹೃದಯ ಭಾಗದಲ್ಲಿರುವ ಬಹಳ ವರ್ಷ ಹಳೆಯದಾದ ಉಸ್ಮಾನಿಯಾ ತರಕಾರಿ ಮಾರುಕಟ್ಟೆ ಇಕ್ಕಟ್ಟಾಗಿದೆ. ಸ್ವಚ್ಛತೆ ಎಂಬುದನ್ನು ಇಲ್ಲಿ ಕಾಣುವಂತಿಲ್ಲ. ಇಂಥ ಅವ್ಯವಸ್ಥೆಯ ಮಾರುಕಟ್ಟೆಯಲ್ಲಿಯೇ ತರಕಾರಿ ಅಂಗಡಿ ವ್ಯಾಪಾರಸ್ಥರು ತರಕಾರಿ ಮಾರಾಟ ಮಾಡುತ್ತಾರೆ. ಗ್ರಾಹಕರು ಅನಿವಾರ್ಯವಾಗಿ ಖರೀದಿಸುತ್ತಾರೆ.
ಮಳೆ ಬಂದರೆ ಕೊಳಚೆ ಸಮಸ್ಯೆ. ಬಿಸಿಲು ಕಾಲ ಬಂದರೆ ಧೂಳು, ಘಾಟಿನ ಸಮಸ್ಯೆ.  ಹಂದಿ, ದನಕರುಗಳಿಗೆ ಇದು ವಾಸಸ್ಥಾನ.

ಇದರ ಪಕ್ಕವೇ ಕೆಲ ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ತರಕಾರಿ ಮಾರುಕಟ್ಟೆ ಹದಗೆಟ್ಟು ಕೊಳಚೆ ಸ್ವರೂಪ ಪಡೆದಿತ್ತು. ನಿರ್ವಹಣೆ ಎಂಬುದೇ ಮರೆತು ಹೋಗಿತ್ತು. ಈ ಕೊಳಚೆ ಪ್ರದೇಶದಂತ ಮಾರುಕಟ್ಟೆಯಲ್ಲಿಯೇ ತರಕಾರಿ ಹೊಲ್‌ಸೇಲ್ ವ್ಯಾಪಾರಸ್ಥರು ರೈತರಿಂದ ತರಕಾರಿ ಖರೀದಿ ಮಾಡುತ್ತಿದ್ದರು. ದೂರದ ಹಳ್ಳಿಗಳಿಂದ ವಾಹನದಲ್ಲಿ ತರಕಾರಿ ತಂದ ರೈತರು ಈ ಕೊಳಚೆ ಪ್ರದೇಶದಲ್ಲಿ ವ್ಯಾಪಾರಸ್ಥರಿಗೆ ಕಾಯ್ದು ಮಾರಾಟ ಮಾಡಿ ಹೋಗುತ್ತಿದ್ದರು.

ಮೊದಲೇ ಕೊಳಚೆ ಪ್ರದೇಶದಂಥ ಮಾರುಕಟ್ಟೆ. ಹೊಲ್‌ಸೇಲ್ ವ್ಯಾಪಾರಸ್ಥರು ಕೇಳಿದಷ್ಟು ದರಕ್ಕೆ ಮಾರಾಟ ಮಾಡಲೇಬೇಕು. ಇಲ್ಲದೇ ಇದ್ದರೆ ತರಕಾರಿಯನ್ನು ಈ ಕೊಳಚೆ ಪ್ರದೇಶದಲ್ಲಿ ಇಟ್ಟುಕೊಂಡು ಮತ್ತೊಬ್ಬ ವ್ಯಾಪಾರಸ್ಥರಿಗೆ ಕಾಯ್ದು ಕುಳಿತುಕೊಳ್ಳಲಾದೀತೇ? ಎಂಬ ಸಮಸ್ಯೆಯಿಂದ ರೈತರು ಅನಿವಾರ್ಯವಾಗಿ ಒಗ್ಗಿಕೊಂಡಿದ್ದರು.

ಸಗಟು ಮತ್ತು ಚಿಲ್ಲರೆ ವ್ಯಾಪಾರಸ್ಥರಿಗೆ ಅನುಕೂಲ ಆಗುವ ರೀತಿಯಲ್ಲಿ ತರಕಾರಿ ಹೊಸ ಮಾರುಕಟ್ಟೆ ನಿರ್ಮಾಣ ಮಾಡಬೇಕು ಎಂದು ತರಕಾರಿ ವ್ಯಾಪಾರಸ್ಥರ ಪ್ರಮುಖ ಬೇಡಿಕೆಗಳಲ್ಲೊಂದು. ನಗರಸಭೆ ಮತ್ತು ಜಿಲ್ಲಾಡಳಿತ ತಾಂತ್ರಿಕ ಕಾರಣದಿಂದ ಮುಂದೂಡುತ್ತ ಬಂದಿದ್ದವು.

ಕೊನೆಗೆ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಿದಾಗ ರಾಜ್ಯ ಸರ್ಕಾರ ತರಕಾರಿ ಹೊಸ ಮಾರುಕಟ್ಟೆ ನಿರ್ಮಾಣಕ್ಕೆ 2 ಕೋಟಿ ಮಂಜೂರು ಮಾಡಿದೆ. ಈ ಅನುದಾನ ಬಂದ ಬಳಿಕವೂ ಸುಮಾರು 4-5 ತಿಂಗಳು ಹಾಗೆಯೇ ಕಾಲ ಹರಣ ಮಾಡಲಾಯಿತು.

ಮೂರು ತಿಂಗಳ ಹಿಂದೆ ನಗರಸಭೆ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ ಅನ್ಬುಕುಮಾರ ಅವರು, ನೂತನ ತರಕಾರಿ ಮಾರುಕಟ್ಟೆ ನಿರ್ಮಾಣ ಪ್ರಕ್ರಿಯೆ ಆರಂಭಿಸಲು ನಗರಸಭೆ ಪ್ರಭಾರಿ ಆಯುಕ್ತರು ಹಾಗೂ ಸಹಾಯಕ ಆಯುಕ್ತ ತಿಮ್ಮಪ್ಪ ಅವರಿಗೆ ಆದೇಶ ನೀಡಿದ್ದರು.

ಒಂದೆರಡು ವಾರದಲ್ಲಿ ಹಳೆಯ ತರಕಾರಿ ಮಾರುಕಟ್ಟೆ ಸ್ಥಳವನ್ನು ಜೆಸಿಬಿ ಯಂತ್ರಗಳು ನಗರಸಭೆ ಪೌರಾಯುಕ್ತರ ಸಮ್ಮುಖದಲ್ಲಿ ತೆರವುಗೊಳಿಸಿದವು. ಈಗ ಈ ಜಾಗೆ ಹಾಳು ಸುರಿಯುತ್ತಿದೆ. ಇದೇ ಜಾಗೆಯಲ್ಲಿ ಶೀಘ್ರ ಹೊಸ ತರಕಾರಿ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಚಾಲನೆ ದೊರೆಯಲಿದೆ ಎಂದು ಆಶಯ ಹೊಂದಿದ್ದ ತರಕಾರಿ ವ್ಯಾಪಾರಸ್ಥರು ನಿರಾಸೆಗೊಂಡಿದ್ದಾರೆ.

ಈ ಜಾಗೆಯಲ್ಲಿದ್ದ ಹಳೆಯ ಕಟ್ಟಡ ತೆರವುಗೊಳಿಸಿ 40 ದಿನವಾಗಿದೆ. ತೆರವುಗೊಳಿಸಲಾಗಿದೆಯಷ್ಟೇ. ಅಲ್ಲಿನ ಕಸ, ಗುಡ್ಡದೆತ್ತರ ಬಿದ್ದಿರುವ ಮಣ್ಣನ್ನೂ ಬೇರೆ ಕಡೆ ಸಾಗಿಸಿಲ್ಲ. ಇಕ್ಕಟ್ಟಾದ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿನ ಮೋರಿಗಳು ದುರ್ನಾತ ಬೀರುತ್ತಿವೆ. ಕಸ ತೆಗೆಯುವುದಿಲ್ಲ ಎಂದು ತರಕಾರಿ ವ್ಯಾಪಾರಸ್ಥರು ಸಮಸ್ಯೆ ವಿವರಿಸಿದರು.

ಅವ್ಯವಸ್ಥೆ ಇದ್ದರೂ ಹಳೆಯ ಕಟ್ಟಡ ಇದ್ದ ಜಾಗೆಯಲ್ಲಿ ಹೊಲ್‌ಸೇಲ್ ತರಕಾರಿ ಮಾರಾಟ ಮತ್ತು ಖರೀದಿ ನಡೆಯುತ್ತಿತ್ತು. ಖರೀದಿ ಸ್ಥಳದಿಂದ ಅಂಗಡಿವರೆಗೆ ಹೆಚ್ಚಿನ ಖರ್ಚು ಇರುತ್ತಿರಲಿಲ್ಲ.  ಈಗ ಹೈದಾರಾಬಾದ್ ರಸ್ತೆಯ ಎಪಿಎಂಸಿಯ ಹತ್ತಿ ಮಾರುಕಟ್ಟೆ ಆವರಣಕ್ಕೆ ಹೊಲ್‌ಸೇಲ್ ತರಕಾರಿ ಖರೀದಿಗೆ ವ್ಯವಸ್ಥೆ ಮಾಡಲಾಗಿದೆ. ರೈತರು ಅದೇ ಸ್ಥಳಕ್ಕೆ ತರಕಾರಿ ಮಾರಾಟಕ್ಕೆ ತರುತ್ತಾರೆ. ವ್ಯಾಪಾರಸ್ಥರಾದ ನಾವು ಅಲ್ಲಿಗೆ ತೆರಳಿ ಖರೀದಿ ಮಾಡಬೇಕು. ತರಕಾರಿ ಖರೀದಿಗೆ ಅಲ್ಲಿ ವ್ಯವಸ್ಥೆ ಮಾಡಿರುವುದು ರೈತರಿಗೆ ಅನುಕೂಲ ಆಗಿದ್ದರೂ ವ್ಯಾಪಾರಸ್ಥರಿಗೆ ತುಂಬಾ ನಷ್ಟ ಆಗುತ್ತಿದೆ.

ಪ್ರತಿ ನಿತ್ಯ ಬೆಳಿಗ್ಗೆ 4.30ಕ್ಕೆ ತರಕಾರಿ ಖರೀದಿಗೆ ಅಲ್ಲಿಗೆ ತೆರಳಬೇಕು(ಹತ್ತಿ ಮಾರುಕಟ್ಟೆ ಸ್ಥಳ). ಖರೀದಿಸಿದ ಮೇಲೆ ವಾಹನಕ್ಕೆ, ವಾಹನದೊಳಗೆ ತರಕಾರಿ ಹಾಕಲು ಹಣ ಕೊಡಬೇಕು. ಅಂಗಡಿಗೆ ತಂದ ಮೇಲೆ ಇಲ್ಲಿ ತರಕಾರಿ ಇಳಿಸಿಕೊಳ್ಳಲು ಹಣ ಕೊಡಬೇಕು. ತರಕಾರಿ ಮಧ್ಯಮ ವ್ಯಾಪಾರಸ್ಥರಿಗೆ ಕನಿಷ್ಠ 250ರಿಂದ 300 ರೂಪಾಯಿ ಹೆಚ್ಚುವರಿ ಖರ್ಚಾಗುತ್ತದೆ. ಇದನ್ನು ವ್ಯಾಪಾರಸ್ಥರು ಹೇಗೆ ಭರಿಸಲು ಸಾಧ್ಯ. ಇದರ ಹೊರೆ ಗ್ರಾಹಕರ ಮೇಲೆ ಬೀಳುತ್ತದೆ. ಹೆಚ್ಚಿನ ಬೆಲೆಗೆ ತರಕಾರಿ ಮಾರಾಟ ಮಾಡಿ ವ್ಯಾಪಾರಸ್ಥ ತಾನು ಬದುಕಬೇಕು. ಈ ಸ್ಥಿತಿ ನಿರಂತರ ಮುಂದುವರಿದರೆ ಎಲ್ಲರಿಗೂ ಸಮಸ್ಯೆ ಆಗಲಿದೆ ಎಂದು ತರಕಾರಿ ವ್ಯಾಪಾರಸ್ಥರಾದ ಜಾಕೀರ್ ಪ್ರಜಾವಾಣಿಗೆ ಹೇಳಿದರು.

ಸಹಾಯಕ ಆಯುಕ್ತರ ಹೇಳಿಕೆ: ಹೊಸ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ರಾಜ್ಯ ಸರ್ಕಾರವು 2 ಕೋಟಿ ಅನುದಾನ ದೊರಕಿಸಿದೆ. ಹಳೆಯ ಮಾರುಕಟ್ಟೆ ತೆರವುಗೊಳಿಸಲಾಗಿದೆ. ಹೊಸ ಮಾರುಕಟ್ಟೆ ನಿರ್ಮಾಣ ಮಾಡುವ ಜಾಗೆಯ ಮಣ್ಣನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಬಹಳ ಆಳದವರೆಗೂ ಅಗೆದರೂ ಗಟ್ಟಿಯಾಗಿಲ್ಲ. ಮಣ್ಣು ಪರೀಕ್ಷೆ ವರದಿ ಬಂದ ಬಳಿಕ ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ಸಹಾಯಕ ಆಯುಕ್ತ ಹಾಗೂ ನಗರಸಭೆ ಪ್ರಭಾರಿ ಆಯುಕ್ತ ತಿಮ್ಮಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT