ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಲ್ಯೂ ರೀಸರ್ಚ್: ಷೇರುಪೇಟೆಗೆ ಬೆಳಕಿಂಡಿ

Last Updated 21 ಜೂನ್ 2011, 19:30 IST
ಅಕ್ಷರ ಗಾತ್ರ

ಪ್ರಶ್ನೆ-1: ನನ್ನ ವಯಸ್ಸು 38. ನನಗೆ ಮೂರು ವರ್ಷದ ಮಗಳಿದ್ದಾಳೆ. ಅವಳ ಭವಿಷ್ಯಕ್ಕಾಗಿ ನಾನೆಷ್ಟು ಹಣ ಉಳಿಸಬೇಕು? ಷೇರುಪೇಟೆಯಲ್ಲಿ ಹಣ ಹೂಡಲು ನನಗೆ ಭಯ. ಪ್ರತಿದಿನ ಸೂಚ್ಯಂಕದ ಏರಿಳಿಕೆ ಗಮನಿಸುವಷ್ಟು ಸಮಯ ನನಗಿಲ್ಲ.

ಪ್ರಶ್ನೆ-2: ನಾನು ತಿಂಗಳಿಗೆ 3000   ಹಣ ಉಳಿಸಬಲ್ಲೆ. ನನ್ನ 1 ವರ್ಷದ ಮಗನನ್ನು ಚೆನ್ನಾಗಿ ಓದಿಸುವುದು ಮತ್ತು 10 ವರ್ಷದ ನಂತರ ಮನೆ ಕಟ್ಟುವುದು ನನ್ನ ಪ್ರಮುಖ ಆರ್ಥಿಕ ಗುರಿ. ಹೇಳಿ ನಾನೇನು ಮಾಡಲಿ?

ಪ್ರಶ್ನೆ-3: ಮ್ಯೂಚ್ಯುಯಲ್ ಫಂಡ್‌ಗಳಲ್ಲಿ ಹಣ ಹೂಡುವುದು ಕ್ಷೇಮ ಎಂದು ನನ್ನ ಗೆಳೆಯ ಸಲಹೆ ನೀಡಿದ. ಆದರೆ ಮಾರುಕಟ್ಟೆಯಲ್ಲಿ 100ಕ್ಕೂ ಹೆಚ್ಚು ಫಂಡ್‌ಗಳಿವೆ. ಯಾವುದು ಒಳ್ಳೆಯದು ತಿಳಿಯುತ್ತಿಲ್ಲ.

***
ಇಂಥ ಹಲವಾರು ಗೊಂದಲಗಳು ಅನೇಕರಲ್ಲಿ ಮೂಡಿರುತ್ತವೆ. ಕೆಲಸಕ್ಕೆ ಸೇರಿದ ಹೊಸತರಲ್ಲಿ ತಿಂಗಳ ಕೊನೆಗೂ ಸಂಬಳ ಬ್ಯಾಂಕಿನಲ್ಲಿ ಉಳಿದಿರುತ್ತೆ. ಆಗ ಅದನ್ನು ಹೇಗೆ ವಿನಿಯೋಗಿಸಬೇಕು ತಿಳಿಯುವುದಿಲ್ಲ. ಮದುವೆಯಾಗಿ ಮಕ್ಕಳಾದ ನಂತರ ಅರ್ಧ ತಿಂಗಳಿಗೇ ಸಂಬಳ ಕರಗುತ್ತದೆ. ಆಗ ಸಂಸಾರ ನಿರ್ವಹಿಸುವ ಸೂಕ್ಷ್ಮ ತಿಳಿಯದೆ ಹಣಕಾಸಿನ ಗೊಂದಲಗಳು ಕಾಡುತ್ತವೆ.

ಇಂಥ ಹಲವು ಸಂದಿಗ್ಧ ಸಂದರ್ಭಗಳಲ್ಲಿ ಹಿರಿಯರು `ಆರ್ಥಿಕ ಶಿಸ್ತು~ ಇರಬೇಕು ಎಂಬ ಪಾಠ ಹೇಳುತ್ತಾರೆ. ಪಾಠ ಕೇಳಿಕೊಂಡು ಹೂಡಿಕೆಯತ್ತ ಮನಸ್ಸು ಮಾಡಿದರೂ ಷೇರುಪೇಟೆಯೆಂದರೇ ಹೆದರಿ ಹೌಹಾರುವ ಮಧ್ಯಮ ವರ್ಗದ ಮನಸ್ಥಿತಿಯ ತರುಣರು ಏನು ಮಾಡುವುದು ತಿಳಿಯದೆ ಕಂಗಾಲಾಗುತ್ತಾರೆ.

ವ್ಯಾಲ್ಯೂರಿಸರ್ಚ್ ವೆಬ್‌ಸೈಟ್‌ನಲ್ಲಿರುವ ಪ್ರಶ್ನೋತ್ತರ ಅಂಕಣದಲ್ಲಿರುವ ಸಿಂಹಪಾಲು ಪ್ರಶ್ನೆಗಳು ಇಂಥ ಮನಸ್ಥಿತಿಯಲ್ಲಿ ಹುಟ್ಟಿವೆ. ಹೀಗಾಗಿಯೇ ಈ ಪ್ರಶ್ನೆಗಳ ಉತ್ತರಗಳು ನೂರಾರು ಮಂದಿಗೆ ಮಾರ್ಗದರ್ಶನ ಮಾಡುವ ಸಾಮರ್ಥ್ಯ ಹೊಂದಿವೆ.

ವೈಯಕ್ತಿಕ ಹಣಕಾಸು (ಪರ್ಸನಲ್ ಫೈನಾನ್ಸ್) ನಿರ್ವಹಣೆ ವಿಚಾರದಲ್ಲಿ ಗೊಂದಲಗೊಂಡ ನೂರಾರು ಮಂದಿ ಈ ವೆಬ್‌ಸೈಟ್‌ಗೆ ಪ್ರಶ್ನೆಗಳನ್ನು ಕಳಿಸುತ್ತಾರೆ. ವೆಬ್‌ಸೈಟ್ ನಿರ್ವಹಿಸುವ ತಜ್ಞರು ಬಹುತೇಕ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುತ್ತಾರೆ.

ಇಂಥ ಹಲವು ಅಂಕಣಗಳು ವಿವಿಧ ಮಾಧ್ಯಮಗಳಲ್ಲಿ ಇವೆಯಾದರೂ ವ್ಯಾಲ್ಯೂರಿಸರ್ಚ್ ವೆಬ್‌ಸೈಟ್‌ನಲ್ಲಿ ದೇಶಮಾನ್ಯ ಸ್ಟಾರ್‌ಗ್ರೇಡಿಂಗ್ ಪದ್ಧತಿ ಈ ಉತ್ತರಗಳಿಗೆ ಹೊಸ ಮೆರಗು ತಂದಿರುವುದು ಸುಳ್ಳಲ್ಲ.

`ನನ್ನ ಕೈಲಿ ತಿಂಗಳಿಗೆ 1000  ಮಾತ್ರ ಉಳಿಸಲು ಸಾಧ್ಯವಿದೆ ಏನು ಮಾಡಲಿ?~ ಎಂದು ಮುಗ್ಧವಾಗಿ ಪ್ರಶ್ನಿಸುವ ಎರಡು ಮಕ್ಕಳ ತಂದೆಯಿಂದ ಹಿಡಿದು, `ತಿಂಗಳ ಕೊನೆಗೆ ನನ್ನ ಬ್ಯಾಂಕ್ ಖಾತೆಯಲ್ಲಿ 50 ಸಾವಿರ  ಉಳಿದಿರುತ್ತದೆ. ಅದನ್ನು ಏನು ಮಾಡಬೇಕೆಂಬುದೇ ತೋಚುವುದಿಲ್ಲ~ ಎಂದು ಹಲುಬುವ ಶ್ರೀಮಂತರವರೆಗೂ ಹಲವರು ತರತರದ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಕಂಡುಕೊಳ್ಳುತ್ತಾರೆ. ಈ ಪ್ರಶ್ನೋತ್ತರಗಳನ್ನು ಸೂಕ್ಷ್ಮವಾಗಿ ಗಮನಿಸುವುದರಿಂದಲೇ ನಾವು ಹಲವು ಸಂಗತಿಗಳನ್ನು ಅರಿಯಬಹುದು.

`ನಿಮ್ಮ ಅಲ್ಪಾವಧಿ ಮತ್ತು ದೀರ್ಘಾವಧಿ ಗುರಿಗಳನ್ನು ಮೊದಲು ಗುರುತಿಸಿಕೊಳ್ಳಿ. ನಿಮ್ಮ ವಯಸ್ಸು, ನಿಮ್ಮ ಮೇಲೆ ಅವಲಂಬಿತರಾಗಿರುವವರ ಸಂಖ್ಯೆ, ಮಕ್ಕಳ ವಯಸ್ಸು, ಪಿತ್ರಾರ್ಜಿತ ಆಸ್ತಿ, ನಿಮ್ಮ ಗಳಿಕೆಯ (ದುಡಿಯುವ) ಸಾಮರ್ಥ್ಯ ಇತ್ಯಾದಿ ಮೂಲ ಮಾಹಿತಿಯನ್ನು ಒಂದೆಡೆ ಬರೆದುಕೊಳ್ಳಿ.

ಆರೋಗ್ಯ ವಿಮೆ, ಟರ್ಮ್ ಇನ್ಷುರೆನ್ಸ್‌ಗಳನ್ನು ಮೊದಲು ಮಾಡಿಸಿ. ಉಳಿದ ಹಣದ ಹೂಡಿಕೆಯ ಬಗ್ಗೆ ನಂತರ ಆಲೋಚಿಸಿ~ ಎನ್ನುವುದು ವ್ಯಾಲ್ಯೂರಿಸರ್ಚ್ ಹೇಳುವ ಮೊದಲ ಪಾಠ.

ಇತರ ವೆಬ್‌ಸೈಟ್‌ಗಳು ಮ್ಯೂಚ್ಯುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿ ಎಂದಷ್ಟೇ ಹೇಳಿ ಕೈತೊಳೆದುಕೊಳ್ಳುತ್ತವೆ. ಆದರೆ ಇಲ್ಲಿ, ನಿರ್ದಿಷ್ಟವಾಗಿ ಇಂಥದ್ದೇ ಫಂಡ್‌ಗಳಲ್ಲಿ ಹೂಡಿಕೆ ಮಾಡಿ ಎಂಬ ನಿಖರ ಸಲಹೆ ಸಿಗುತ್ತದೆ. ತನ್ನ ವಿಶಿಷ್ಟ ಮಾನದಂಡದಿಂದ ಗ್ರೇಡಿಂಗ್ ಮಾಡಿರುವ 17 ಫಂಡ್‌ಗಳ ಪಟ್ಟಿಯನ್ನೂ ವ್ಯಾಲ್ಯೂ ರಿಸರ್ಚ್ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಕಳೆದ ಐದು ವರ್ಷಗಳಲ್ಲಿ ನಿರ್ದಿಷ್ಟ ಫಂಡ್ ತನ್ನ ಹೂಡಿಕೆದಾರರಿಗೆ ನೀಡಿರುವ ಪ್ರತಿಫಲ, ಫಂಡ್ ಮ್ಯಾನೇಜರ್ ಹಣ ಹೂಡಿರುವ ಕಂಪೆನಿಗಳ ರಿಸ್ಕ್ ಗ್ರೇಡ್ ಮತ್ತು ಫಂಡ್ ಮ್ಯಾನೇಜರ್‌ನ ಸಾಧನೆಯನ್ನು ಆಧರಿಸಿ ಈ ಗ್ರೇಡಿಂಗ್ ಪ್ರಕಟವಾಗುತ್ತದೆ. ಫಂಡ್‌ನ ಕಾರ್ಯನಿರ್ವಹಣೆಗೆ ತಕ್ಕಂತೆ ಗ್ರೇಡಿಂಗ್ ಸಹ ಏರುಪೇರಾಗುತ್ತದೆ.

ಇದರ ಜತೆಗೆ ಕಂಪೆನಿ ಷೇರುಗಳು ಮತ್ತು ಮ್ಯೂಚ್ಯುಯಲ್ ಫಂಡ್‌ಗಳ ವಿಸ್ತೃತ ಮಾಹಿತಿಯಿರುವ ಗ್ರಾಫ್ ಸಹ ಇಲ್ಲಿ ಲಭ್ಯ. ಈ ವೆಬ್‌ಸೈಟ್‌ನಲ್ಲಿರುವ ಫಂಡ್‌ಕಾರ್ಡ್‌ಗಳು ಮ್ಯೂಚ್ಯುಯಲ್ ಫಂಡ್‌ಗಳ ಪ್ರತಿಫಲದ ಸರಾಸರಿಯನ್ನು ಸುಲಭವಾಗಿ ಅರಿಯಲು ನೆರವಾಗುತ್ತವೆ.

ಇದರ ಜತೆಗೆ ಫಂಡ್ ಸೆಲೆಕ್ಟರ್ ಎಂಬ ಆಯ್ಕೆ  ಮೂಲಕ ನಮ್ಮ ಅಗತ್ಯಕ್ಕೆ ಯಾವ ಫಂಡ್ ಸೂಕ್ತ ಎಂಬುದನ್ನು ನಾವೇ ಸುಲಭವಾಗಿ ಕಂಡುಕೊಳ್ಳಲು ಸಾಧ್ಯವಿದೆ. ವ್ಯಾಲ್ಯೂ ರಿಸರ್ಚ್‌ನ ಅಂತರಜಾಲದ ತಾಣದ ವಿಳಾಸ
http://valueresearchonline.com  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT