ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾವಹಾರಿಕ ಸಾಹಿತ್ಯದ ಅನರ್ಘ್ಯನಿಧಿ

Last Updated 22 ಅಕ್ಟೋಬರ್ 2010, 18:30 IST
ಅಕ್ಷರ ಗಾತ್ರ


ಭಾರತಿ ಸಂಪಂಗಿರಾಮೈಯನವರ ‘ಪ್ರಶ್ನೋತ್ತರ ಲೇಖ್ಯಬೋಧಿನಿ’ 1927ರಲ್ಲಿ ಒಂಬತ್ತನೆಯ ಮುದ್ರಣ ಕಂಡ ಒಂದು ಕನ್ನಡ ಪುಸ್ತಕ. ಮೊದಲ ಮುದ್ರಣದ ಕಾಲ ಗೊತ್ತಿಲ್ಲ. ಆದರೆ ಕೃತಿಯಲ್ಲಿ ಉಲ್ಲೇಖಗೊಂಡಿರುವ ಪತ್ರಗಳ ಆಧಾರದ ಮೇಲೆ 1906ರಲ್ಲಿ ಮೊದಲ ಮುದ್ರಣ ಕಂಡಿರುವುದೆಂದು ಊಹಿಸಬಹುದು.

‘ಸವಿನುಡಿ ಗ್ರಂಥಮಾಲೆ’ಯ ಈ ಕೃತಿ ಬೆಂಗಳೂರಿನ ‘ವಿ.ನೈಡ್ ಅಂಡ್ ಕಂಪನಿ, ಪವರ್ ಪ್ರೆಸ್ಸಿನಲ್ಲಿ’ ಮುದ್ರಣಗೊಂಡಿದೆ. ಇದನ್ನು ಪ್ರಕಟಿಸಿರುವವರು ಟಿ.ಎನ್.ಶ್ರೀನಿವಾಸ ಶೆಟ್ಟರು. ಪುಸ್ತಕದ ಆರಂಭದಲ್ಲಿ- ‘ಸಂಪಾದಕರಾದ ಭಾರತಿ ಸಂಪಂಗಿರಾಮೈಯನವರ ಅಥವಾ ಪ್ರಚಾರಕರಾದ ಶೆಟ್ಟರವರ ಕೈಬರಹವಾದರೂ ಅವರುಗಳ ನಾಮಧಾಮಗಳಡಗಿದ ಮುದ್ರೆಯಾದರೂ ಇಲ್ಲದ ಪ್ರಶ್ನೋತ್ತರ ಲೇಖ್ಯಬೋಧಿನಿಯೆನುವ ಈ ಪುಸ್ತಕವು ಯಾರ ಬಳಿಯಲ್ಲಿ ಇದ್ದರೂ ಅಂತವರು ರಾಜಶಾಸನವನ್ನು ಅನುಸರಿಸಿ ಕಳುವಿನ ಆಪಾದನೆಗೆ ಗುರಿಯಾಗತಕ್ಕದ್ದು’ ಎಂಬ ಒಕ್ಕಣೆಯಿದೆ.

ಸುಮಾರು ಇಪ್ಪತ್ತೊಂದು ವರ್ಷಗಳಲ್ಲಿ ಒಂಬತ್ತು ಮುದ್ರಣಗಳಲ್ಲಿ ಈ ಕೃತಿಯ ಒಟ್ಟು ಹದಿನೈದು ಸಾವಿರ ಪ್ರತಿಗಳು ಹೊರಬಂದಿರುವುದರಿಂದ ಇದು ಆ ಕಾಲಕ್ಕೆ ತುಂಬಾ ಉಪಯುಕ್ತ ಹಾಗೂ ಜನಪ್ರಿಯವಾಗಿತ್ತು ಎಂದು ಭಾವಿಸಬಹುದು. ಕೃತಿಯ ಪೀಠಿಕೆಯಲ್ಲಿ ‘ಸಜ್ಜನ ವಿಧೇಯ, ಭಾರತಿ ಸಂಪಂಗಿರಾಮ’ ಅವರು ಕುಗ್ರಾಮವಾಸಿಗಳಾದ ನಮ್ಮ ದೇಶಸೋದರರ ಉಪಯೋಗ ಮತ್ತು ಉಪಕಾರಕಾರಿಯಾಗಿರಲೆಂದು ಪ್ರಪ್ರಥಮದಲ್ಲಿ ಇದನ್ನು ಪ್ರಕಟಿಸಲಾಯಿತು. ಎಂಟಾವರ್ತಿಯ ಮುದ್ರಣದ ಹನ್ನೆರಡು ಸಾವಿರ ಪ್ರತಿಗಳು ಜನತೆಯ ಕೈಯಲ್ಲಿ ಸೇರಿ ಒಂಬತ್ತನೆಯ ಈ ಮುದ್ರಣಕ್ಕೆ ಅವಕಾಶ ದೊರೆತಿರುವುದರಿಂದ ತಕ್ಕಮಟ್ಟಿನ ಅಲ್ಪ ಮಾತ್ರ ಪ್ರಯೋಜನವಿರಬಹುದೆಂದು ಊಹಿಸುವುದಕ್ಕೆ ಅವಕಾಶವುಂಟಾಯಿತು’ ಎನ್ನುವ ವಿನಯದ ಮಾತಿದೆ.

576 ಪುಟಗಳಿರುವ ಈ ಕೃತಿಯಲ್ಲಿ ವಿದ್ಯಾರ್ಥಿಕಾಂಡ, ಶಾಸನಕಾಂಡ, ವ್ಯವಹಾರಕಾಂಡ ಹಾಗೂ ಜ್ಞಾನಕಂಡ ಎಂಬ ನಾಲ್ಕು ಅಧ್ಯಾಯಗಳಿವೆ. ವಿದ್ಯಾರ್ಥಿಕಾಂಡದಲ್ಲಿ ಲೇಖನ ಚಿಹ್ನೆಗಳು- ಕ್ಷೇಮ ಸಮಾಚಾರ ಕಾಗದಗಳು, ವಿವಿಧ ಮಠಮಾನ್ಯಗಳಿಗೆ ಬರೆಯುವ ಕಾಗದಗಳು, ಅಂಗಡಿ ಮುಂಗಟ್ಟು- ದಸ್ತಾವೇಜು- ಕಂದಾಯ ಇಲಾಖೆ- ಬಾಡಿಗೆ ಕರಾರು- ಮರಣ ಶಾಸನ- ದತ್ತುಸ್ವೀಕಾರ- ಕೌಟುಂಬಿಕ ಮುಂತಾದ ಪತ್ರಗಳ ವಿವರಗಳೂ ಉದಾಹರಣೆಗಳೊಂದಿಗಿವೆ. ಒಟ್ಟು ವಿಶೇಷವೆಂದರೆ ಪ್ರತಿಯೊಂದು ವಿಷಯವೂ ಪ್ರಶ್ನೋತ್ತರಗಳ ಮಾದರಿಯಲ್ಲಿದೆ. ಕೆಲವನ್ನು ಗಮನಿಸಿ.

ಗಂಡನು ಹೆಂಡತಿಗೆ ಪತ್ರ ಬರೆದಾಗ ನಿರ್ದೇಶಿಸುವ ರೀತಿ: ಶ್ರಿಮತ್ಸಕಲಸದ್ಗುಣಗಣಾಲಂಕೃತೆಯಾದ ಉಭಯಕುಲಪವಿತ್ರೀಕೃತ ಸಮಸ್ತ ಪುರುಷಾರ್ಥಭಾಗಿನಿ ಯಾದ ಹರಿದ್ರಾಕುಂಕುಮಾನ್ವಿತೆ ಸೌಭಾಗ್ಯವತಿ ಮತ್ಪ್ರಿಯಪತ್ನಿ ಭಾಗೀರಥಿಗೆ.ವಟನೊಬ್ಬ ನಾಯಕಿಯನ್ನುದ್ದೇಶಿಸಿ ನಿರ್ದೇಶಿಸುವುದು: ಶ್ರೀಮನ್ಮಹಾರಾಜಾಧಿ ರಾಜಾಸ್ಥಾನಾದಿ ಸಭಾಲಂಕಾರಭೂತೆಯಾದ ನಾಟ್ಯಾಭಿನಯ ಗಾನಪ್ರವೀಣಳಾದ ಸಕಲ ಸದ್ಗುಣಾಭರಣೆಯಾದ ದೇವಬ್ರಾಹ್ಮಣ ಪೂಜಾಧನ್ಯದೇವಿಯಾದ ನಿತ್ಯಮಾಂಗಲ್ಯಶೋಭಿತೆಯಾದ ಮನ್ಮನೋನಾಯಕಿ ರಾಜರಾಜೇಶ್ವರಿಗೆ.
ಮತ್ತೊಂದು ಪ್ರಶ್ನೋತ್ತರ ಗಮನಿಸಿ:

ಪ್ರಶ್ನೆ: ಅಚ್ಚು ಕಾರಖಾನೆಯವರಿಗೆ ಲಗ್ನಪತ್ರಿಕೆ ಮುಂತಾದುವುಗಳಿಗೋಸ್ಕರ ಬರೆಯುವುದು ಹೇಗೆ?
ಉತ್ತರ: ಸ್ವಾಮಿ, ಇದರೊಂದಿಗಿರುವ ಲಗ್ನಪತ್ರಿಕೆಯ (ಪುಸ್ತಕವು) ಅಥವ ಪ್ರಕಟನೆಯು, ವೊಂದುಸಾವಿರ ಪ್ರತಿ ಅಚ್ಚಾಗಿ ವೊಂದು ವಾರದೊಳಗಾಗಿ ನನ್ನ ಕೈ ಸೇರಬೇಕಾಗಿದೆ.

ಲಗ್ನಪತ್ರಿಕೆಯ ಆಕಾರವು ನಾನು ಬರೆದಿರುವ ಕಾಗದದಂತಾದ್ದೇ ಆಗಿರಬೇಕು. ಕಾಗದ ಥಳಥಳಿಸುತ ದಪ್ಪನಾಗಿರಬೇಕು. ಭಂಗಾರ ಬಣ್ಣದ ಮಶಿಯಿರಬೇಕು. ಅಂಚುಬಳ್ಳಿ ಹೊದರುಗಳಿಂದಲಂಕರಿಸಲ್ಪಡಬೇಕು. ಇನ್ನೂ ನಿಮಗೆ ಯುಕ್ತ ತೋರಿದಂತೆ ಅಂದವಾಗಿರುವ ಹಾಗೆ ಜಾಗ್ರತೆ ಕೆಲಸವು ಪೂರೈಸಿ ಆಗುವಷ್ಟು ಹಣಕ್ಕೆ .... ರೈಲ್ವೆ ಸ್ಟೇಷನಿಗೆ ಭಾಂಗಿಯನ್ನು ಕಳುಹಿಸಿ ಅದರ ರಶೀದಿಯನ್ನು ಅಂಚೆ ವಿ.ಪಿ. ಮೂಲಕವಾಗಿ ಕಳುಹಿಸಬೇಕಾಗಿ ಬೇಡುವ.
                            
ತಾ18-8-1906  ತಮ್ಮ ವಿಧೇಯ,
ಹೊಸಕೋಟೆ ರಂಗನಾಥ                                                         

ಶಾಸನಕಾಂಡದಲ್ಲಿ ಸಿವಿಲ್ ಕೋರ್ಟಿನ ಸಂಬಂಧವಾದ ವಿಶೇಷ ವಿಷಯಗಳು, ಸಿವಿಲ್ ಕೋರ್ಟಿನ ಸಂಬಂಧವಾದ ಅರ್ಜಿ ಮುಂತಾದ ಮಾದರಿಗಳನ್ನು ನೀಡಲಾಗಿದೆ. ಈ ಕಾಂಡದಲ್ಲಿ ದಾವಾ ವಿಚಾರಣೆ, ದಿವಾಳಿ ಅರ್ಜಿ, ಡಿಕ್ರಿ ಅಮಲ್ಜಾರಿ, ಜೀವನಾಂಶ, ಕಂಟ್ರಾಕ್ಟು, ಪೋಸ್ಟಾಫೀಸು ರೂಲುಗಳು, ದೇವಸ್ತಾನದ ಇನಾಮತಿ ವಿಚಾರಗಳು, ಛಾಪಾ ಪತ್ರ ವಿಚಾರಗಳು, ರೆವಿನ್ಯೂ ಇಲಾಖೆಯ ಮುಖ್ಯ ಸಂಗತಿಗಳು, ಮ್ಯಾಜಿಸ್ಟ್ರೇಟು ವಿಚಾರಗಳು, ದಾಂಪತ್ಯ ಕಲಹಸಂಬಂಧೀ ಕೋರ್ಟು ವ್ಯವಹಾರಗಳು, ಎಜಿಸ್ಟ್ರೇಷನ್ನಿನ ವಿಷಯಗಳು- ಮುಂತಾದ ಆ ಕಾಲಕ್ಕೆ ಅತ್ಯಂತ ಅವಶ್ಯಕವಿದ್ದ ವಿಚಾರಗಳ ಬಗ್ಗೆ ಸಾಕಷ್ಟು ಸಮಗ್ರವಾಗಿ ವಿಚಾರಗಳನ್ನು ನಿರೂಪಿಸಿದ್ದಾರೆ.

ವ್ಯವಹಾರಕಾಂಡದಲ್ಲಿ- ಮಾನವನ ನಿತ್ಯಕ್ರಮ, ಮಾನವಧರ್ಮ, ನೀತಿ, ಪತ್ನಿ, ಸಂತತಿ, ದ್ರವ್ಯಾರ್ಜನೆ, ಗೆಳೆಯರು, ಮಕ್ಕಳ ವಿದ್ಯಾಭ್ಯಾಸ- ಈ ಮುಂತಾದ ಕುಟುಂಬದಲ್ಲಿ ದಿನನಿತ್ಯ ವ್ಯವಹಾರಗಳನ್ನು ನಡೆಸಬೇಕಾದ ವಿಚಾರಗಳ ಪ್ರಸ್ತಾಪ ಬಂದಿದೆ.ಕೊನೆಯ ಅಧ್ಯಾಯವಾದ ಜ್ಞಾನಕಾಂಡದಲ್ಲಿ- ಸಂಸಾರವೆಂದರೇನು? ಸಂಸಾರ ಬೇಡವೇ? ವಿರಕ್ತಿ, ಸುಖದುಃಖಗಳ ಅಸ್ಥಿರತೆ, ಪರೋಪಕಾರ, ಚಿತ್ತಸ್ಥೈರ್ಯ, ಶಾಂತತೆ- ಎಂಬ ಉಪಶೀರ್ಷಿಕೆಗಳಡಿಯಲ್ಲಿ ಸಂಸಾರವನ್ನು ಕುರಿತು ಸಾಮಾನ್ಯರಿಗಿರಬೇಕಾದ ಪರಿಕಲ್ಪನೆಗಳ ನಿರೂಪಣೆಯಿದೆ.

ವ್ಯಾವಹಾರಿಕ ಸಾಹಿತ್ಯದ ಇತಿಹಾಸದಲ್ಲಿ ಭಾರತಿ ಸಂಪಂಗಿರಾಮೈಯನವರ ‘ಪ್ರಶ್ನೋತ್ತರ ಲೇಖ್ಯಬೋಧಿನಿ’ ಕೃತಿಗೆ ಮಹತ್ವದ ಸ್ಥಾನವಿದೆ. ಇದು ಶತಮಾನದ ಹಿಂದಿನ ಕೃತಿ. ಈಗ, ಜನಸಾಮಾನ್ಯರಿಗೆ ಉಪಯುಕ್ತವೆನ್ನಿಸುವ ಇಂಥ ಪ್ರಯೋಗಗಳ ಉದಾಹರಣೆ ಯಾವುದಾದರೂ ನೆನಪಿಗೆ ಬರುತ್ತದೆಯೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT