ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕರ ಬಿದರಿ ನೇತೃತ್ವ ಬೇಡ

Last Updated 28 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಕೃಷ್ಣಾ ಮೇಲ್ದಂಡೆ ಯೋಜನೆಯ ತುಂಡು ಗುತ್ತಿಗೆ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕುರಿತು ತನಿಖೆಗೆ ನಮ್ಮ ವಿರೋಧವಿಲ್ಲ. ಆದರೆ ಡಿಜಿಪಿ ಶಂಕರ ಬಿದರಿ ಅವರ ನೇತೃತ್ವದಲ್ಲಿ ಈ ತನಿಖೆ ನಡೆದರೆ ಪ್ರಕರಣದ ಸತ್ಯಾಂಶ ಹೊರಬರುವುದಿಲ್ಲ~ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಪಕ್ಷದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ತುಂಡು ಗುತ್ತಿಗೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬಿದರಿ ಅವರು ದ್ವೇಷದ ಮನೋಭಾವದಿಂದ ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಶೀಘ್ರದಲ್ಲೇ ಅಗತ್ಯ ದಾಖಲೆ ಬಿಡುಗಡೆ ಮಾಡಲಾಗುವುದು~ ಎಂದು ಹೇಳಿದರು.

ರಾಜ್ಯ ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ಕಾರ್ಯದರ್ಶಿ ಎಚ್.ಟಿ. ಸೋಮಶೇಖರ ರೆಡ್ಡಿ ಅವರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ 2009ರ ನವೆಂಬರ್ 9ರಂದು ನೀಡಿದ್ದ ತೀರ್ಪಿನಲ್ಲಿ ತುಂಡು ಗುತ್ತಿಗೆ ಕಾಮಗಾರಿಗಳ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಆರು ವಾರಗಳಲ್ಲಿ ಲಿಖಿತ ಮಾಹಿತಿ ನೀಡುವಂತೆ ಅರ್ಜಿದಾರರಿಗೆ ಸೂಚಿಸಿತ್ತು.
 
ರೆಡ್ಡಿ ಅವರು 10 ವಾರಗಳ ನಂತರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಸಲ್ಲಿಸಿದ್ದಾಗಿ ಹೇಳುತ್ತಿದ್ದಾರೆ. ಆದರೆ ಸಲ್ಲಿಸಿರುವ ಪತ್ರದಲ್ಲಿ ದಿನಾಂಕವೇ ನಮೂದಾಗಿಲ್ಲ. ಈ ಪತ್ರ ಕುರಿತೂ ತನಿಖೆ ನಡೆಯಲಿ. ಜತೆಗೆ ತುಂಡು ಗುತ್ತಿಗೆ ಕಾಮಗಾರಿಗೆ ಸಂಬಂಧಿಸಿದ ದೂರಿನ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಬಿದರಿ ಅವರ ಪಾತ್ರ ಏನಿದೆ ಎಂಬುದರ ಬಗೆಗೂ ತನಿಖೆ ಆಗಲಿ ಎಂದು ಅವರು ಸವಾಲು ಎಸೆದರು. 

`ಬಿದರಿ ಅವರು ಹೈಕೋರ್ಟ್ ಸೂಚನೆಗೆ ಅನುಗುಣವಾಗಿ ತನಿಖೆ ನಡೆಸುತ್ತಿಲ್ಲ. ಅಪ್ಪ-ಮಕ್ಕಳನ್ನು ಸ್ಮಶಾನಕ್ಕೆ ಕಳುಹಿಸುತ್ತೇವೆ ಎನ್ನುತ್ತಲೇ ಜೈಲು ಸೇರಿವರಿದ್ದಾರೆ. ಬಿದರಿ ಕೂಡ ಅಂಥವರ ಸಾಲಿನಲ್ಲೇ ಇದ್ದಾರೆ~ ಎಂದು ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT