ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕರ್ ಪರಾರಿಗೆ ವ್ಯವಸ್ಥಿತ ಸಂಚು

Last Updated 3 ಸೆಪ್ಟೆಂಬರ್ 2013, 19:24 IST
ಅಕ್ಷರ ಗಾತ್ರ

ಬೆಂಗಳೂರು: ಕೈದಿ ಜೈಶಂಕರ್ ಹಲವು ತಿಂಗಳಿನಿಂದ ವ್ಯವಸ್ಥಿತವಾಗಿ ಸಂಚು ರೂಪಿಸಿ ಜೈಲಿನಿಂದ ತಪ್ಪಿಸಿಕೊಂಡಿದ್ದಾನೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

`ಕೆಲ ತಿಂಗಳ ಹಿಂದೆ ಜೈಶಂಕರ್‌ನ ಸೆಲ್ ಸಮೀಪವೇ ಪೊಲೀಸ್ ಸಮವಸ್ತ್ರ ಪತ್ತೆಯಾಗಿತ್ತು. ಈ ಬಗ್ಗೆ ಆತನನ್ನು ವಿಚಾರಿಸಿದಾಗ ತನಗೂ ಅದಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದ. ಇದಾದ ಕೆಲ ದಿನಗಳ ನಂತರ ಜೈಶಂಕರ್, ಪೊಲೀಸ್ ಸಿಬ್ಬಂದಿಯಂತೆ ಕ್ಷೌರ ಮಾಡಿಸಿಕೊಂಡಿದ್ದ. ಇದರಿಂದ ಅನುಮಾನ ಮೂಡಿ ನಿರಂತರವಾಗಿ ಆತನ ಸೆಲ್ ಪರಿಶೀಲಿಸುತ್ತಿದ್ದೆವು. ಹೀಗೆ ಆತ ಕೃತ್ಯಕ್ಕೆ ಹಲವು ತಿಂಗಳಿಂದ ಸಂಚು ರೂಪಿಸಿ, ಕಾರ್ಯಗತಗೊಳಿಸಿದ್ದಾನೆ' ಎಂದು ಕಾರಾಗೃಹದ ನಿವೃತ್ತ ಅಧೀಕ್ಷಕರೊಬ್ಬರು ಮಾಹಿತಿ ನೀಡಿದರು.

`ಕೈದಿಗಳು ರಾತ್ರಿ ಮಲಗುವಾಗ ಧರಿಸಲು ಕಾನ್‌ಸ್ಟೆಬಲ್‌ಗಳಿಂದ ಹಳೆಯ ಸಮವಸ್ತ್ರ ಪಡೆದುಕೊಳ್ಳುತ್ತಿದ್ದರು. ಇನ್ನೂ ಕೆಲವರು ಜೈಲಿನ ದೋಬಿ ವಿಭಾಗದಿಂದ ಸಮವಸ್ತ್ರ ಕಳವು ಮಾಡುತ್ತಿದ್ದರು. ಅಂತೆಯೇ ಆತ ದೋಬಿ ವಿಭಾಗದಿಂದ ಸಮವಸ್ತ್ರ ಕಳವು ಮಾಡಿರುವ ಸಾಧ್ಯತೆ ಇದೆ' ಎಂದು ಅವರು ಹೇಳಿದ್ದಾರೆ.

ಜೈಶಂಕರ್‌ನ ಭಾವಚಿತ್ರ ಮತ್ತು ವೈಯಕ್ತಿಕ ವಿವರವನ್ನು ಒಳಗೊಂಡ ಕರಪತ್ರಗಳನ್ನು ಮುದ್ರಿಸಿ, ಹೊಸೂರು ರಸ್ತೆ ಸುತ್ತಮುತ್ತಲ ಬಡಾವಣೆಗಳಲ್ಲಿ ಹಂಚಲಾಗಿದೆ. ಆತನ ಬಗ್ಗೆ ಸುಳಿವು ಸಿಕ್ಕರೆ ಅಥವಾ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ಅಲ್ಲದೇ, ತಮಿಳುನಾಡು ಕಡೆಗೆ ಹೋಗುವ ಪ್ರತಿ ವಾಹನವನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೋಜುಕೂಟ ನಡೆದಿಲ್ಲ
`ಸಿಬ್ಬಂದಿ ಘಟನೆಯ ದಿನ ರಾತ್ರಿ ಜೈಲಿನ ಆವರಣದಲ್ಲಿ ಯಾವುದೇ ಮೋಜುಕೂಟ ನಡೆಸಿಲ್ಲ. ಆದರೆ, ಅದೇ ದಿನ ವೃತ್ತಿಯಿಂದ ನಿವೃತ್ತರಾದ ಸಿಬ್ಬಂದಿಯೊಬ್ಬರು ಜೈಲಿನಿಂದ ಸ್ವಲ್ಪ ದೂರದಲ್ಲಿರುವ ಇಲಾಖೆಯ ವಸತಿ ಸಮುಚ್ಚಯದಲ್ಲಿನ ತಮ್ಮ ಮನೆಯಲ್ಲಿ ಸಹೋದ್ಯೋಗಿಗಳಿಗೆ ಊಟ ಏರ್ಪಡಿಸಿದ್ದರು. ಈ ಬಗ್ಗೆ ಕೆಲ ಸಿಬ್ಬಂದಿ ಮಾಧ್ಯಮಗಳಿಗೆ ಸುಳ್ಳು ಮಾಹಿತಿ ನೀಡುವ ಮೂಲಕ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ' ಎಂದು ಕಾರಾಗೃಹಗಳ ಇಲಾಖೆ ಎಡಿಜಿಪಿ ಕೆ.ವಿ.ಗಗನ್‌ದೀಪ್ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT