ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕರ್‌ನಾಗ್ ಡಿವಿಡಿ ಸಿನಿಮಾ

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನಟ ಶಂಕರ್‌ನಾಗ್ ಮೇರು ಪ್ರತಿಭೆ. ಆತ ನಮ್ಮಂದಿಗೆ ಇರದಿದ್ದರೂ ಅವರನ್ನು ಇಂದಿಗೂ ಆರಾಧಿಸುವ ದೊಡ್ಡ ಅಭಿಮಾನಿ ಬಳಗ ನಮ್ಮ ನಡುವೆ ಇದೆ. ಆಟೊ ರಾಜ ಸಿನಿಮಾ ಮೂಲಕ ಆಟೊ ಚಾಲಕರ ದೊಡ್ಡ ಅಭಿಮಾನಿಗಳ ಬಳಗ ಸೃಷ್ಟಿಸಿಕೊಂಡ ಶಂಕರ್‌ನಾಗ್ ಇವತ್ತಿಗೂ ಅವರ ಹೃದಯ ಸಿಂಹಾಸನದಲ್ಲಿ ಜೀವಂತವಾಗಿದ್ದಾರೆ. ಈಗ ಅದೇ ಆಟೊ ಚಾಲಕನೊಬ್ಬ ಶಂಕರ್‌ನಾಗ್ ಅವರ ಬಗ್ಗೆ ತನಗಿರುವ ಅಭಿಮಾನವನ್ನು ಜಾಹೀರುಗೊಳಿಸಲು ಒಂದು ಡಿವಿಡಿ ಸಿನಿಮಾ ತೆಗೆದಿದ್ದಾರೆ. ನಟ ಶಂಕರ್‌ನಾಗ್ ಅವರನ್ನು ಆರಾಧಿಸುವವರಲ್ಲಿ ಜೂನಿಯರ್ ಶಂಕರ್‌ನಾಗ್ ಆಲಿಯಾಸ್ ಆಟೊ ರಾಮಣ್ಣ ಕೂಡ ಒಬ್ಬರು. ಆಟೊ ರಾಮಣ್ಣ ತಮ್ಮ ಅಭಿಮಾನದ ದ್ಯೋತಕವಾಗಿ ಶಂಕರ್‌ನಾಗ್ ನೆನಪು ಕುರಿತ ಒಂದು ಸಿನಿಮಾ ಮಾಡಿದ್ದಾರೆ. ಸಿನಿಮಾದ ಹೆಸರು `ಶಂಕರ್‌ನಾಗ್ ಸವಿನೆನಪು ಆಟೊ ಚಾಲಕರ ಕನಸು~.

ರಾಮಣ್ಣ ಅವರ ನಾಲಗೆಯ ಮೇಲೆ ಶಂಕರ್‌ನಾಗ್ ಅವರ ಇಡೀ ಜೀವನ ಚರಿತ್ರೆ ಹರಿದಾಡುತ್ತದೆ. ಶಂಕರ್‌ನಾಗ್ ಜೀವನದಲ್ಲಿ ಘಟಿಸಿದ ಎಲ್ಲ ಮಾಹಿತಿಗಳನ್ನು ಇವರು ಜತನದಿಂದ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಬಾಲ್ಯದಿಂದ ಹಿಡಿದು ಅವರ ಕೊನೆ ದಿನದವರೆಗಿನ ಅನೇಕ ಅಪರೂಪದ ಚಿತ್ರಗಳು, ಮಾಹಿತಿಗಳು ಇವರ ಬಳಿ ಇವೆ. ಈ ಎಲ್ಲವನ್ನೂ ಎರಕ ಹೊಯ್ದು ಸಿನಿಮಾ ಮಾಡಿದ್ದಾರೆ.

ಆಟೊ ರಾಮಣ್ಣ ಸಿನಿಮಾ ನಿರ್ದೇಶನದ ಜತೆಗೆ ನಟನೆ ಕೂಡ ಮಾಡಿದ್ದಾರೆ. ಅವರದೇ ಗತ್ತು, ಗೈರತ್ತಿನಲ್ಲಿ ಆ್ಯಕ್ಷನ್, ಡ್ಯಾನ್ಸ್, ಡೈಲಾಗ್ ಡೆಲಿವರಿ ಎಲ್ಲವನ್ನು ಸಂಭಾಳಿಸಿದ್ದಾರೆ. ಈ ಸಿನಿಮಾದಲ್ಲಿ ಶಂಕರ್‌ನಾಗ್ ಅವರ ಆರಂಭದ ದಿನಗಳು, ಅವರ ಸಿನಿಮಾ ಯಾನ, ಮೆಟ್ರೊ ರೈಲಿನ ಕನಸು, ಶಂಕರ್‌ನಾಗ್ ಅವರ ಅಪ್ರತಿಮ ಅಭಿಮಾನಿಗಳು ಸೇರಿದಂತೆ ಅನೇಕ ಕುತೂಹಲಕರ ಸಂಗತಿಗಳು ಅಡಗಿವೆ.

`ಶಂಕರ್‌ನಾಗ್ ನನ್ನ ಆರಾಧ್ಯ ದೈವ. ನಿತ್ಯ ದೇವರನ್ನು ನೆನೆಯದಿದ್ದರೂ ಅವರನ್ನು ನಾನು ನೆನಪಿಸಿಕೊಳ್ಳುತ್ತೇನೆ. ನನ್ನ ಉಸಿರು ಉಸಿರಿನಲ್ಲೂ ಅವರ ಬಗೆಗಿನ ಅಭಿಮಾನ ತುಂಬಿಕೊಂಡಿದೆ.  ನಮ್ಮಡನೆ ಶಂಕರ್‌ನಾಗ್ ಇರದಿದ್ದರೂ ಇವತ್ತಿಗೂ ಶಂಕರ್‌ನಾಗ್ ಅವರನ್ನು ಜೀವಂತವಾಗಿಟ್ಟಿರುವುದು ಆಟೊ ಚಾಲಕರು. ಅವರ ಮೇಲಿರುವ ಅಭಿಮಾನದಿಂದಾಗಿ ನಾನು ಶಂಕರ್‌ನಾಗ್ ಪುತ್ಥಳಿಯನ್ನು ಕೂರಿಸಿದ್ದೇನೆ. ಅದರ ಮುಂದುವರಿದ ಭಾಗವಾಗಿ ಈ ಡಿವಿಡಿ ಸಿನಿಮಾ ಮಾಡಿದ್ದೇನೆ. ಈ ಸಿನಿಮಾವನ್ನು ಥಿಯೇಟರ್‌ನಲ್ಲಿ ಬಿಡುಗಡೆ ಮಾಡುತ್ತಿಲ್ಲ. ಬದಲಾಗಿ ಡಿವಿಡಿ ಮೂಲಕ ಬಿಡುಗಡೆ ಮಾಡಿ ರಾಜ್ಯ ಮೂಲೆ ಮೂಲೆಗೂ ತಲುಪಿಸುವ ಗುರಿ ನನ್ನದು~ ಎಂದು ಅಭಿಮಾನದಿಂದ ಹೇಳುತ್ತಾರೆ ಆಟೊ ರಾಮಣ್ಣ.  

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT