ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಭುಲಿಂಗೇಗೌಡರ ಚುನಾವಣಾ `ದಂಡ'ಯಾತ್ರೆ!

Last Updated 19 ಏಪ್ರಿಲ್ 2013, 6:06 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಗಾಂಧಿ ವೇಷ ಧರಿಸಿ, ಬೈಸಿಕಲ್ ಏರಿ ಚುನಾವಣಾ ಪ್ರಚಾರ ಮಾಡುವ ಶಂಭುಲಿಂಗೇಗೌಡ ಶ್ರೀರಂಗಪಟ್ಟಣ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಪಕ್ಷೇತರ ಅಭ್ಯರ್ಥಿಯಾಗಿ ಬುಧವಾರ ಉಮೇದುವಾರಿಕೆ ಸಲ್ಲಿಸುವ ಮೂಲಕ 8ನೇ ಬಾರಿ ಚುನಾವಣಾ ಕಣಕ್ಕೆ ಧುಮುಕಿದ್ದಾರೆ.

ಮಳವಳ್ಳಿ ತಾಲ್ಲೂಕಿನ ದೇಶವಳ್ಳಿ ಗ್ರಾಮದ ಶಂಭುಲಿಂಗೇಗೌಡ ಇದುವರೆಗೆ 7 ಚುನಾವಣೆಗಳನ್ನು ಎದುರಿಸಿದ್ದಾರೆ. ದೇಶವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸುವುದರೊಂದಿಗೆ ಆರಂಭವಾದ ಅವರ ಚುನಾವಣಾ ದಂಡಯಾತ್ರೆ ಮುಂದುವರೆಯುತ್ತಿದೆ. 2008ರ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಟಿ.ದಾಸರಹಳ್ಳಿ ಕ್ಷೇತ್ರದಿಂದ ಎಸ್.ಮುನಿರಾಜು ಅವರ ಎದುರು ಸ್ಪರ್ಧಿಸಿ 1651 ಮತಗಳನ್ನು ಪಡೆದಿದ್ದರು. 2009ರಲ್ಲಿ ನಡೆದ ಮದ್ದೂರು ಕ್ಷೇತ್ರದ ಉಪ ಚುನಾವಣೆಯಲ್ಲಿ 2554 ಮತಗಳನ್ನು ಪಡೆದು 4ನೇ ಸ್ಥಾನ ಗಳಿಸಿದ್ದರು. ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಅಂಬರೀಷ್ ಹಾಗೂ ಎನ್.ಚೆಲುವರಾಯಸ್ವಾಮಿ ಅವರಂತಹ ಘಟಾನುಘಟಿಗಳ ಎದುರು ಸ್ಪರ್ಧಿಸಿ ರಾಜ್ಯದ ಗಮನ ಸೆಳೆದಿದ್ದರು. ಆ ಚುನಾವಣೆಯಲ್ಲಿ ಶಂಭುಲಿಂಗೇಗೌಡ ಅವರ ಹೊಲಿಗೆ ಯಂತ್ರಕ್ಕೆ 15,300 ಮತಗಳು ಬಿದ್ದಿದ್ದವು.

ಬೆಂಗಳೂರು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಕ್ಕೆ 2010ರಲ್ಲಿ ನಡೆದ ಉಪ ಚುನಾಣೆಯಲ್ಲಿ ವಿ.ಸೋಮಣ್ಣ ಅವರ ವಿರುದ್ಧ ಕಣಕ್ಕೆ ಇಳಿದಿದ್ದರು. 2011ರಲ್ಲಿ ನಡೆದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸಿ.ಪಿ.ಯೋಗೇಶ್ವರ್ ಅವರ ವಿರುದ್ಧ ಸ್ಪರ್ಧೆ ನಡೆಸಿದ್ದರು. ಅದೇ ವರ್ಷ ಶ್ರೀರಂಗಪಟ್ಟಣ ತಾಲ್ಲೂಕು ಅರಕೆರೆ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇದೀಗ ಕಾಂಗ್ರೆಸ್ ಬಿ ಫಾರಂ ಗೊಂದಲದಿಂದಾಗಿ ರಾಜ್ಯವ್ಯಾಪಿ ಚರ್ಚೆಗೆ ಗ್ರಾಸವಾಗಿರುವ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಪದೇ ಪದೇ ಚುನಾಣೆಗೆ ಸ್ಪರ್ಧಿಸುತ್ತಿರುವ ಗುಟ್ಟೇನು? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ 52 ವರ್ಷದ ಶಂಭುಲಿಂಗೇಗೌಡ, `ಸರ್ಕಾರಗಳು ರೈತರ ಬಗ್ಗೆ ಅಸಡ್ಡೆ ತೋರುತ್ತಿವೆ. ರಸಗೊಬ್ಬರದ ಬೆಲೆ ಮಿತಿ ಮೀರುತ್ತಿದೆ. ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ದೇವೇಗೌಡರು ರೈತರಿಗೆ ಅನುಕೂಲ ಮಾಡುತ್ತಾರೆ ಎಂಬ ನಂಬಿಕೆಯಿಂದ ಕನಕಪುರ ಕ್ಷೇತ್ರದಿಂದ ಅವರು ಲೋಕಸಭೆಗೆ ಸ್ಪರ್ಧಿಸಿದ್ದಾಗ ನನ್ನ ಮಕ್ಕಳನ್ನು ಅಡ್ಡೆಯಲ್ಲಿ ಕೂರಿಸಿಕೊಂಡು, ಹೆಂಡತಿ ಜತೆ ಸೇರಿ 34 ದಿನಗಳ ಕಾಲ ಗೌಡರ ಪರ ಪ್ರಚಾರ ನಡೆಸಿದ್ದೆ. ಅವರಿಂದ ಪ್ರಯೋಜನ ಇಲ್ಲ ಎಂದು ತಿಳಿದ ಮೇಲೆ ಚುನಾವಣಾ ಕಣಕ್ಕೆ ಇಳಿಯುವ ನಿರ್ಧಾರ ಮಾಡಿದೆ. ಬಟ್ಟೆ ಹೊಲಿದು ಬದುಕುವ ನನ್ನಲ್ಲಿ ಹಣ ಇಲ್ಲ. ಆದರೆ ಜನರ ಬಗ್ಗೆ ಕಾಳಜಿ ಇದೆ. ಒಂದಲ್ಲ ಒಂದು ದಿನ ಗೆಲ್ಲುತ್ತೇನೆ ಎಂಬ ಭರವಸೆ ಇದೆ' ಎಂಬ ವಿಶ್ವಾಸ ಮಾತುಗಳನ್ನಾಡುತ್ತಾರೆ ಅವರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT