ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿ ದೇವತೆ ಹುಲಿಗೆಮ್ಮ

Last Updated 28 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಕೊಪ್ಪಳ ತಾಲ್ಲೂಕಿನಲ್ಲಿ  ಶ್ರಿ ಹುಲಿಗೆಮ್ಮ ದೇವಸ್ಥಾನ ರಾಜ್ಯದ ಪ್ರಮುಖ ಶಕ್ತಿ ದೇವತೆಯ ಕ್ಷೇತ್ರ.  ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ತಮಿಳುನಾಡುಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಇಲ್ಲಿಗೆ ಬರುತ್ತಾರೆ. ಮಹಾನವಮಿ, ಗೌರಿ ಹುಣ್ಣಿಮೆ, ಸೀಗೆ ಹುಣ್ಣಿಮೆ, ಭರತ ಹುಣ್ಣಿಮೆಗಳಂದು ಅಸಂಖ್ಯಾತ ಜನರು ಇಲ್ಲಿಗೆ ಬರ‌್ತುತಾರೆ.

ಪ್ರತಿ ವರ್ಷ ಭರತ ಹುಣ್ಣಿಮೆಯ ಒಂಬತ್ತು ದಿನಗಳ ನಂತರ ಇಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ಆ ಸಂದರ್ಭದಲ್ಲಿ ಕುದಿಯುವ ಪಾಯಸದ ಪಾತ್ರೆಗೆ ಕೈ ಹಾಕಿ ಪಾಯಸ ತೆಗೆದು ದೇವಿಗೆ ನೈವೇದ್ಯ ಅರ್ಪಿಸುವುದು ಇಲ್ಲಿನ ವಿಶೇಷ.

ಇಲ್ಲಿಗೆ ಬರುವ ಭಕ್ತರಲ್ಲಿ ತಳ ಸಮುದಾಯಗಳ ಜನರೇ ಹೆಚ್ಚಿನವರು. ಜಾತ್ರೆ ಸಂದರ್ಭದಲ್ಲಿ ದೇವಸ್ಥಾನದ ಬಯಲಿನಲ್ಲಿ ಅಡಿಗೆ ಮಾಡಿ ಅಮ್ಮನಿಗೆ ನೈವೇದ್ಯ ಅರ್ಪಿಸುತ್ತಾರೆ.

ವಿಜಯದಶಮಿ ಸಂದರ್ಭದಲ್ಲಿ ವಿಶೇಷ ಪೂಜೆಯ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಒಂಬತ್ತು ದಿನಗಳೂ ನಡೆಯುತ್ತವೆ. ಉಳಿದಂತೆ ಮಂಗಳವಾರ, ಶುಕ್ರವಾರ ಮತ್ತು ಹುಣ್ಣಿಮೆ ದಿನಗಳಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಿ ದರ್ಶನಕ್ಕೆ ಬರುತ್ತಾರೆ.

ಹುಲಗಿ ಕ್ಷೇತ್ರ ಎಂಟುನೂರು ವರ್ಷಗಳಿಂದಲೂ ಜನರನ್ನು ಸೆಳೆಯುತ್ತಿದೆ. ಈ ಕ್ಷೇತ್ರದ ಪೂರ್ವಕ್ಕೆ ತುಂಗಭದ್ರಾ ಹರಿಯುತ್ತದೆ. ನದಿಯ ದಂಡೆಯಲ್ಲಿ  ಶ್ರಿ ಸೋಮೇಶ್ವರ ಲಿಂಗವಿದೆ. ಅಲ್ಲಿಯೂ ವಿಶೇಷ ಪೂಜೆಗಳು ನಡೆಯುತ್ತದೆ.

ಕ್ಷೇತ್ರದ ಹಿನ್ನೆಲೆಯಲ್ಲಿ ಒಂದು ಕಥೆ ಇದೆ. ನೂರಾರು ವರ್ಷಗಳ ಹಿಂದೆ ಹುಲಗಿಯಲ್ಲಿ ನಾಗ ಜೋಗಿ ಮತ್ತು ಬಸವ ಜೋಗಿ ಎಂಬ ಸೋದರರಿದ್ದರು. ಅವರು ಸವದತ್ತಿ ಯಲ್ಲಮ್ಮನ ಭಕ್ತರು. ತುಂಗಭದ್ರಾ ನದಿಯಲ್ಲಿ ಹರಿಗೋಲು ಹಾಕುತ್ತ ಜೀವನ ಮಾಡುತ್ತಿದ್ದರು. ಪ್ರತಿ ಹುಣ್ಣಿಮೆಗೆ ಸವದತ್ತಿಗೆ ಹೋಗಿ ಅಮ್ಮನ ದರ್ಶನ ಮಾಡಿ ಬರುತ್ತಿದ್ದರು.

ಒಮ್ಮೆ ಇಬ್ಬರೂ ಸವದತ್ತಿಯ ಸಮೀಪ ಬರುಷ್ಟರಲ್ಲಿ ಮಳೆ ಆರಂಭವಾಯಿತು. ಮಾರನೇ ದಿನ ಹುಣ್ಣಿಮೆ. ಈ ಸೋದರರು ಹುಣ್ಣಿಮೆ ದಿನ ಅಮ್ಮನ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ. ಎರಡು ದಿನ ಸತತ ಮಳೆ ಸುರಿಯಿತು. ಮಳೆ ಗಾಳಿಗೆ ಸಿಕ್ಕಿ ತತ್ತರಿಸಿ ಹೋದರು. ಆದರೂ ದೇವಿಯ ಸ್ಮರಣೆ ಮಾಡುತ್ತಲೇ ಇದ್ದರು. ಅವರ ಭಕ್ತಿಗೆ ಮೆಚ್ಚಿದ ಯಲ್ಲಮ್ಮ ಪ್ರತ್ಯಕ್ಷಳಾಗಿ ಮಕ್ಕಳೇ, ನೀವು ಇನ್ನು ಮುಂದೆ ನನ್ನ ದರ್ಶನಕ್ಕಾಗಿ ಸವದತ್ತಿ ಗುಡ್ಡಕ್ಕೆ ಬರುವುದು ಬೇಡ. ನಾನೇ ನಿಮ್ಮೂರಿಗೆ ಬಂದು ನೆಲೆಸುತ್ತೇನೆ ಎಂದು ಅಭಯ ನೀಡಿದಳು.

ಆನಂತರ ತುಂಗಭದ್ರಾ ತೀರದ ವ್ಯಾಘ್ರಪುರಕ್ಕೆ ಬಂದ ಯಲ್ಲಮ್ಮ ಹುಲಿಗೆಮ್ಮ ಎಂಬ ಹೆಸರಿನಲ್ಲಿ ಅಲ್ಲಿ ನೆಲೆಸಿದಳು. ಅದೇ ಇಂದಿನ ಹುಲಿಗಿ ಕ್ಷೇತ್ರ. ಹುಲಿಗೆಮ್ಮನ ದೇವಸ್ಥಾನದ ಎದುರಿಗೆ ಮಾತಂಗಿ ಗುಡಿ ಇದೆ. ಬಲಕ್ಕೆ ಪರಶುರಾಮನ ಗುಡಿ ಇದೆ. ನದಿ ದಡದಲ್ಲಿ ಸೋಮೇಶ್ವರ, ಪಾರ್ವತಿ ದೇವಸ್ಥಾನ, ಸುಬ್ರಮಣ್ಯಸ್ವಾಮಿ, ಗಣಪತಿ ಹಾಗೂ ನವಗ್ರಹ ದೇವಸ್ಥಾನಗಳಿವೆ.

ಇಲ್ಲಿಗೆ ಬರುವ ಭಕ್ತರು ತಂಗಲು ಯಾತ್ರಿ ನಿವಾಸವಿದೆ. ಒಂದು ಕಲ್ಯಾಣ ಮಂಟಪವೂ ಇದೆ. ಕ್ಷೇತ್ರ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದೆ. ಇಲ್ಲಿ ಇನ್ನೂ ಹೆಚ್ಚಿನ ಸೌಕರ್ಯಗಳನ್ನು ಒದಗಿಸಲು  ಸರ್ಕಾರ 30 ಕೋಟಿ ರೂಗಳನ್ನು ನೀಡಲು ನಿರ್ಧರಿಸಿದೆ. ಈ ಕ್ಷೇತ್ರಕ್ಕೆ ಲಕ್ಷಾಂತರ ಜನರು ಬರುವುದರಿಂದ ಇನ್ನೂ ಹೆಚ್ಚಿನ ಮೂಲಭೂತ ಸೌಕರ್ಯ ಒಗದಿಸಲು ಸರ್ಕಾರ ಹೆಚ್ಚಿನ ಒತ್ತು ನೀಡಬೇಕಿದೆ.

ಹುಲಗಿ ಕೊಪ್ಪಳದಿಂದ 22 ಕಿ.ಮೀ, ಹೊಸಪೇಟೆಯಿಂದ 15 ಕಿ.ಮೀ ದೂರದಲ್ಲಿದೆ. ಈ ಕ್ಷೇತ್ರಕ್ಕೆ ರೈಲ್ವೆ ಸಂಪರ್ಕವಿದೆ. ದೇವಸ್ಥಾನ ನಿತ್ಯ ಬೆಳಿಗ್ಗೆ 6 ಗಂಟೆಗೆ ತೆರೆಯುತ್ತದೆ. ಬೆಳಗಿನ ಅವಧಿಯ ಅಭಿಷೇಕ, ಪೂಜೆಯ ನಂತರ ದರ್ಶನ ಆರಂಭವಾಗುತ್ತದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ನಂಬರ್: 08539-274604, 274926.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT