ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿಯೇ ಇಲ್ಲದ ಸ್ಥಿತಿ

Last Updated 23 ಮೇ 2012, 19:30 IST
ಅಕ್ಷರ ಗಾತ್ರ

ಕೇಂದ್ರದಲ್ಲಿನ ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ (ಯುಪಿಎ-2) ಮುಳುಗುತ್ತಿರುವ ಹಡಗು ಎಂಬ ಅಭಿಪ್ರಾಯ ಜನರಲ್ಲಿ ಮೂಡಿದ್ದರೆ ಆಶ್ಚರ್ಯವಿಲ್ಲ. ತನ್ನ ಎರಡನೆಯ ಅವಧಿಯ ಮೂರನೆಯ ವರ್ಷ ಮುಗಿಸಿ ಇದೀಗ ತಾನೆ ನಾಲ್ಕನೆಯ ವರ್ಷಕ್ಕೆ ಕಾಲಿರಿಸಿರುವ ಸರ್ಕಾರ ಶಕ್ತಿಹೀನತೆಯಿಂದ ನರಳುತ್ತಿರುವಂತಿದೆ.
 
ಯುಪಿಎ ಸರ್ಕಾರ ತನ್ನ ಮೊದಲ ಅವಧಿಯ ಸಾಧನೆಗಳನ್ನು ಮೆಲುಕು ಹಾಕುವುದರೊಳಗಾಗಿ ಸುತ್ತಿಕೊಂಡ 2-ಜಿ ಸ್ಪೆಕ್ಟ್ರಮ್ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಸಂಬಂಧಿಸಿದ ಭ್ರಷ್ಟಾಚಾರದ ಹಗರಣಗಳಿಂದ ಇನ್ನೂ ಹೊರಬರಲು ಸಾಧ್ಯವಾಗಿಲ್ಲ.

2-ಜಿ ಸ್ಪೆಕ್ಟ್ರಮ್ ಹಗರಣದ ಪೂರ್ಣ ಜವಾಬ್ದಾರಿಯನ್ನು ಆಗಿನ ಟೆಲಿಕಾಂ ಸಚಿವ ಎ.ರಾಜಾ, ಕಾಮನ್‌ವೆಲ್ತ್ ಕ್ರೀಡಾಕೂಟ ಹಗರಣದ ಜವಾಬ್ದಾರಿಯನ್ನು ಸುರೇಶ್ ಕಲ್ಮಾಡಿ ಅವರ ತಲೆಗೆ ಸುತ್ತಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಕೇಂದ್ರ ಸರ್ಕಾರ ಪ್ರಯತ್ನ ಮಾಡಿತಾದರೂ ಅದರಲ್ಲಿ ಯಶಸ್ವಿಯಾಗಲಿಲ್ಲ.
 
ಭ್ರಷ್ಟಾಚಾರ ವಿರೋಧಿ ಅಣ್ಣಾ ಹಜಾರೆ ಚಳವಳಿಯನ್ನು ಸರ್ಕಾರ ನಿರ್ವಹಿಸಿದ ರೀತಿ ಮತ್ತು ಲೋಕಪಾಲ ಮಸೂದೆಯನ್ನು ತರಲಾಗದ ಸರ್ಕಾರದ ಅಸಹಾಯಕತೆ ಸಹಜವಾಗಿಯೇ ಜನರನ್ನು ಹತಾಶೆಯ ಅಂಚಿಗೆ ದೂಡಿದೆ. ಮಿತ್ರ ಪಕ್ಷಗಳ ಜೊತೆ ಹೊಂದಾಣಿಕೆ ಸಾಧಿಸಲಾಗದೆ ಏನೂ ಮಾಡಲಾಗದಂಥ ಸ್ಥಿತಿಗೆ ಸರ್ಕಾರ ತಲುಪಿರುವುದು ಒಂದು ದುರಂತ.

ಸರ್ಕಾರದ ನಿಷ್ಕ್ರಿಯತೆಗೆ ಮಿತ್ರ ಪಕ್ಷಗಳ ಹಠಮಾರಿ ಧೋರಣೆಯನ್ನು ಸಬೂಬಾಗಿ ಸರ್ಕಾರ ಬಳಸಿಕೊಳ್ಳುತ್ತಿದೆ. ವಾಸ್ತವವಾಗಿ ದೌರ್ಬಲ್ಯ ಸರ್ಕಾರ ನಡೆಸುವವರಲ್ಲಿಯೇ ಇದ್ದಂತಿದೆ.

 ಪ್ರಧಾನಿ ಮನಮೋಹನ ಸಿಂಗ್ ಮತ್ತು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಇಬ್ಬರೂ  ಆರ್ಥಿಕ ತಜ್ಞರು. ಆದರೆ ಅವರು ದೇಶದ ಆರ್ಥಿಕ ಸ್ಥಿತಿಯನ್ನು ನಿರ್ವಹಿಸುತ್ತಿರುವ ರೀತಿ ನೋಡಿದರೆ ಅವರ ಸಾಮರ್ಥ್ಯದ ಬಗ್ಗೆಯೇ ಅನುಮಾನ ಬರುತ್ತದೆ.

ಬೆಲೆ ಏರಿಕೆ, ಹಣದುಬ್ಬರವನ್ನು ನಿಯಂತ್ರಿಸಲು ಅವರು ಹೆಣಗಾಡುತ್ತಿರುವುದು ಎದ್ದು ಕಾಣುತ್ತಿದೆ. ಅವರ ಅಸಾಮರ್ಥ್ಯದಿಂದ ಸಂಕಷ್ಟಕ್ಕೆ ಒಳಗಾಗಿರುವವರು ಸಾಮಾನ್ಯ ಜನರು.

ವಿಶ್ವದ ಅರ್ಥವ್ಯವಸ್ಥೆ ಕುಸಿಯುತ್ತಿರುವ ಈ ಸಂದರ್ಭದಲ್ಲಿಯೂ ಭಾರತದ ಆರ್ಥಿಕ ಬೆಳವಣಿಗೆ ಗಮನಾರ್ಹವಾದುದು ಎಂದು ಪ್ರಧಾನಿ ಅವರು ಕೊಚ್ಚಿಕೊಂಡಿದ್ದಾರೆ. ಜನಕ್ಕೆ ಬೇಕಿರುವುದು ಅಂಕಿ ಸಂಖ್ಯೆಗಳ ಕಸರತ್ತು ಅಲ್ಲ.

ಅವರಿಗೆ ಬೇಕಿರುವುದು ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಿಯಂತ್ರಣ, ಹೆಚ್ಚು ಹೆಚ್ಚು ಉದ್ಯೋಗಗಳ ಸೃಷ್ಟಿ, ಎಲ್ಲರಿಗೂ ಆಹಾರ, ವಸತಿ ಸಿಗುವಂತೆ ಮಾಡುವ ಕಡೆಗೆ ಪ್ರಯತ್ನ. ಆದರೆ ಈ ದಿಕ್ಕಿನಲ್ಲಿ ಸರ್ಕಾರ ದಿಟ್ಟ ಪ್ರಯತ್ನಗಳನ್ನು ಮಾಡಿಲ್ಲದಿರುವುದು ಎದ್ದು ಕಾಣುತ್ತದೆ.
 
ಹಾಗೆ ನೋಡಿದರೆ ಇದುವರೆಗೆ ಸರ್ಕಾರವನ್ನು ಉಳಿಸಿಕೊಂಡಿರುವುದೇ ಮನಮೋಹನ್ ಸಿಂಗ್ ಅವರ ದೊಡ್ಡ ಸಾಧನೆ. ಅಧಿಕಾರದ ಅವಧಿ ಮುಗಿಯಲು ಎರಡು ವರ್ಷಗಳು ಮಾತ್ರ ಉಳಿದಿವೆ. ಇನ್ನಾದರೂ ಪರಿಸ್ಥಿತಿ ಸುಧಾರಿಸಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಧಾನಿ ಮುಂದಾಗಬೇಕು.
 
ಪ್ರಧಾನಿ ಒಳ್ಳೆಯವರು, ಪ್ರಾಮಾಣಿಕರು ಸರಿ. ಆದರೆ ಉತ್ತಮ ಸರ್ಕಾರ ಕೊಡದಿದ್ದರೆ ಆ ಗುಣಗಳಿದ್ದೂ ವ್ಯರ್ಥ. ಈ ಹಿನ್ನೆಲೆಯಲ್ಲಿ ಆಡಳಿತ ಮೈತ್ರಿ ಕೂಟ ಪರಿಣಾಮಕಾರಿ ಆಡಳಿತ ನೀಡಲು ಪರ್ಯಾಯ ನಾಯಕತ್ವದ ಬಗ್ಗೆ ಯೋಚಿಸುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT