ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಕಾಧೀಶನಾಗಲಿ ಸಚಿನ್: ಅಭಿಮಾನಿಗಳ ಆಶಯ

Last Updated 6 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಮೇಲೆ ಈಗ ಎಲ್ಲರ ಕಣ್ಣು. ಫೆಬ್ರುವರಿ 19ರಿಂದ ಆರಂಭವಾಗುವ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಸಚಿನ್ ‘ಶತಕಾಧೀಶ’ರಾಗುತ್ತಾರೆ ಎನ್ನುವ ನಿರೀಕ್ಷೆ ಈಗ ಕ್ರಿಕೆಟ್ ಅಭಿಮಾನಿಗಳ ಕಂಗಳಲ್ಲಿ ಕುಣಿದಾಡುತ್ತಿದೆ. ಟೆಸ್ಟ್‌ನಲ್ಲಿ 51 ಶತಕ ಮತ್ತು ಏಕದಿನ ಪಂದ್ಯಗಳಲ್ಲಿ 46 ಶತಕ ಗಳಿಸಿರುವ ಮುಂಬೈಕರ್ ಖಾತೆಯಲ್ಲಿ ಒಟ್ಟು 97 ಶತಕಗಳಿವೆ.

ಏಕದಿನ ಪಂದ್ಯಗಳಲ್ಲಿ ಇನ್ನೂ ನಾಲ್ಕು, ನೂರುಗಳನ್ನು ಹೊಡೆದು ಶತಕಗಳ ಅರ್ಧಶತಕ ಗಳಿಸುವ ಮತ್ತು ಕ್ರಿಕೆಟ್‌ನಲ್ಲಿ ನೂರು ಶತಕಗಳ ಗಡಿ ದಾಟುವ ಅವಕಾಶ ಅವರಿಗೆ ಇದೆ.ತಂಡದಲ್ಲಿರುವ ಇತರ ಎಲ್ಲ ಸದಸ್ಯರಿಗಿಂತಲೂ ಹೆಚ್ಚು ಅನುಭವ ಮತ್ತು ಉತ್ತಮ ಫಾರ್ಮ್‌ನಲ್ಲಿರುವ ಸಚಿನ್ ಗೆಲುವಿನ ‘ರಾಯಭಾರಿ’ ಯಾಗಲಿ ಎನ್ನುವುದು ಈಗ ಎಲ್ಲರ ಆಶಯ.
ವಿಶ್ವಕಪ್ ಟೂರ್ನಿ ಆರಂಭವಾಗಲು ಇನ್ನೂ 14 ದಿನಗಳು ಬಾಕಿ ಇವೆ. ಆದರೆ ಈಗಾಗಲೇ ಹುಬ್ಬಳ್ಳಿ- ಧಾರವಾಡದ ಗಲ್ಲಿಗಳಲ್ಲಿ ಮೆಲ್ಲನೆ ಕ್ರಿಕೆಟ್ ಜ್ವರ ಏರುತ್ತಿದೆ. ಈ ಕುರಿತು ಕೆಲವು ಹಿರಿಯ ಕ್ರಿಕೆಟ್ ಆಟಗಾರರು ‘ಪ್ರಜಾವಾಣಿ’ಯೊಂದಿಗೆ ತಮ್ಮ ಅಭಿಪ್ರಾಯ ಮತ್ತು ಆಶಯಗಳನ್ನು ಹಂಚಿಕೊಂಡಿದ್ದಾರೆ.

***
ಸಚಿನ್ ‘ಶತಕ’ದ ನಿರೀಕ್ಷೆ
ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸುತ್ತಿರುವುದು ಪ್ರತಿಷ್ಠೆಯ ವಿಷಯ. ತವರುನೆಲದ ನೆರವು ನಮ್ಮ ತಂಡಕ್ಕೇ ಇರುವುದರಿಂದ ಅವಕಾಶಗಳನ್ನೂ ಸದುಪಯೋಗಪಡಿಸಿಕೊಳ್ಳಬೇಕು. ಮಾಸ್ಟರ್-ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ‘ಶತಕಗಳ ಶತಕ’ ದಾಖಲಿಸುವುದು ಖಚಿತ. ಅದೃಷ್ಟ ಅವರೊಂದಿಗೆ ಇದ್ದರೆ ಇಡೀ ಟೂರ್ನಿಯಲ್ಲಿ ಮೂರು ಶತಕ ಗಳಿಸುವ ಅವಕಾಶ ಅವರಿಗೆ ಇದೆ. ಮಹೇಂದ್ರಸಿಂಗ್ ದೋನಿ ಉತ್ತಮ ನಾಯಕ. ಹಿಂದಿನ ಎಲ್ಲ ಪಂದ್ಯಗಳಲ್ಲಿ ತಂಡದ ಪ್ರದರ್ಶನ ಉತ್ತಮವಾಗಿದೆ. ದೋನಿ ನಾಯಕತ್ವದ ಮೇಲೆ ವಿಶ್ವಾಸವಿದೆ. ಬೆಂಗಳೂರಿನಲ್ಲಿ ನಡೆ ಯುವ ಭಾರತ-ಇಂಗ್ಲೆಂಡ್ ಪಂದ್ಯ ವನ್ನು ವೀಕ್ಷಿಸಲು ಹೋಗುವ ಇಚ್ಛೆಯಿದೆ.
ಮದನ್ ಬಾಂದೇಕರ್, ಹುಬ್ಬಳ್ಳಿ
(ವಿಜಿ ಟ್ರೋಫಿ ಟೂರ್ನಿ ಆಡಿದ ಆಟಗಾರ/ಅಂಪೈರ್)

ಮಾಸ್ಟರ್-ಬ್ಲಾಸ್ಟರ್ ಸ್ಪೂರ್ತಿ!
ಉಪಖಂಡದ ಆತಿಥ್ಯದಲ್ಲಿ ನಡೆಯುತ್ತಿರುವುದು ಎಲ್ಲರಿಗೂ ಹೆಮ್ಮೆಯ ವಿಷಯ. ಸಚಿನ್ ಅನುಭವದ ಆಟ ರಂಗೇರುವ ನಿರೀಕ್ಷೆಯಿದೆ. ಅವರ ಆಟ ಉಳಿದವರಿಗೆ ಸ್ಫೂರ್ತಿಯಾಗುತ್ತದೆ.ಸುಮ್ಮನೆ ವಿಕೆಟ್ ಚೆಲ್ಲುವ ಜಾಯಮಾನ ಸಚಿನ್ ಅವರದ್ದಲ್ಲ. ಭಾರತಕ್ಕೆ ವಿಶ್ವಕಪ್ ಗೆಲ್ಲುವ 50:50 ಅವಕಾಶವಿದೆ. ಪಂದ್ಯಗಳ ಗೆಲುವಿನಲ್ಲಿ ಆಲ್‌ರೌಂಡರ್‌ಗಳ ಪಾತ್ರ ಮುಖ್ಯ. ತಂಡದಲ್ಲಿ ಮತ್ತೊಬ್ಬ ವಿಕೆಟ್ ಕೀಪರ್ ಮತ್ತು ಆಲ್‌ರೌಂಡರ್ ಇದ್ದಿದ್ದರೆ ತಂಡಕ್ಕೆ ಬಲ ಬರುತ್ತಿತ್ತು. ಭಾರತ- ಇಂಗ್ಲೆಂಡ್ ಪಂದ್ಯ ಫೆಬ್ರುವರಿ 27ರಂದು ಬೆಂಗಳೂರಿನಲ್ಲಿ ನಡೆಯಲಿ ರುವುದು ಖುಷಿಯ ವಿಷಯ. ಬೆಂಗಳೂರಿನಲ್ಲಿ ಈ ಮೊದಲು ನಿಗದಿಯಾಗಿರುವ ಪಂದ್ಯಗಳಿಗಿಂತಲೂ ಈ ಪಂದ್ಯ ರೋಚಕವಾಗಿರುವುದು ಖಚಿತ. ಎರಡೂ ತಂಡಗಳೂ ಚೆನ್ನಾಗಿವೆ. ಸ್ಥಳೀಯರಿಗೆ ಉತ್ತಮ ಪಂದ್ಯವೊಂದನ್ನು ವೀಕ್ಷಿಸುವ ಅವಕಾಶ ಸಿಕ್ಕಂತಾಗಿದೆ.
ಬಾಬಾ ಭೂಸದ್, ಹುಬ್ಬಳ್ಳಿ.
(ವಿಜಿ ಟ್ರೋಫಿ ಟೂರ್ನಿಯಲ್ಲಿ ಆಡಿದ ಕ್ರಿಕೆಟಿಗ/
ಧಾರವಾಡ ವಲಯ ನಿಮಂತ್ರಕ)

ಭಾರತಕ್ಕೆ ಬೌಲಿಂಗ್ ಸವಾಲು
ಹುಬ್ಬಳ್ಳಿ: ಆತಿಥೇಯ ಭಾರತ ತಂಡದ ಬೌಲಿಂಗ್ ವಿಭಾಗ ದುರ್ಬಲವಾಗಿ ಕಾಣುತ್ತಿದೆ. ಗಾಯದ ಸಮಸ್ಯೆ, ಫಿಟ್‌ನೆಸ್ ಕೊರತೆ ಕಾಡುತ್ತಿದೆ. ಆದರೆ ಬ್ಯಾಟಿಂಗ್ ನಮ್ಮ ಪ್ಲಸ್ ಪಾಯಿಂಟ್. ಪಂದ್ಯದ ದಿನ ಯಾವ ತಂಡ ಪಕ್ಕಾ ಫಾರ್ಮ್‌ನಲ್ಲಿರುತ್ತದೆಯೋ ಅದೇ ತಂಡಕ್ಕೆ ಗೆಲುವು ನಿಶ್ಚಿತ. ಭಾರತಕ್ಕೆ ಗೆಲ್ಲುವ ಅವಕಾಶಗಳಿವೆ. ಸಚಿನ್ ತೆಂಡೂಲ್ಕರ್‌ಗೆ ಬಹುಶಃ ಇದು ಕೊನೆಯ ವಿಶ್ವಕಪ್ ಟೂರ್ನಿ. ಅವರಿಗಾಗಿ ಕಪ್ ಗೆಲ್ಲುವ ಹುಮ್ಮಸ್ಸು ತಂಡದಲ್ಲಿದೆ. ಅವರೇ ಗೆಲುವಿಗೆ ಸ್ಫೂರ್ತಿಯಾಗುತ್ತಾರೆ.
ವಿಜಯ್ ಕಾಮತ್, ಹುಬ್ಬಳ್ಳಿ.
(ವಿಜಿ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸಿದ ಹಿರಿಯ ಕ್ರಿಕೆಟಿಗ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT