ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಮಾನದ ಶಾಲೆಯಲ್ಲಿ ಸಮಸ್ಯೆ ನೂರಾರು!

ಕಾಮನಬಾವಿ ಬಡಾವಣೆಯ ಸರ್ಕಾರಿ ಮಾದರಿ ಬಾಲಕಿಯರ ಶಾಲೆ
Last Updated 24 ಜುಲೈ 2013, 6:09 IST
ಅಕ್ಷರ ಗಾತ್ರ

ಚಿತ್ರದುರ್ಗ: ಆ ಶಾಲೆ ನೂರು ವರ್ಷ ಪೂರೈಸಿದೆ. ಮಜಬೂತಾದ ಕಲ್ಲು ಕಟ್ಟಡ. ಅಂದವಾದ ವಿನ್ಯಾಸ. ಗಟ್ಟಿಯಾದ ಸೂರು.. ಹೀಗೆ ಎಲ್ಲವೂ ಸಮರ್ಪಕವಾಗಿದೆ. ಆದರೆ ಶಿಕ್ಷಕಿಯರಿಗೆ ಶಾಲೆಯ ಅಂಗಳದಲ್ಲಿ ಮುಳ್ಳು ಕಂಟಿಗಳನ್ನು ಹರಡಿಕೊಂಡು ಪಾಠ ಮಾಡುವ ಸ್ಥಿತಿ ಬಂದೊದಗಿದೆ.

ಇದು ನಗರದ ಕೋಟೆ ಸಮೀಪದ ಕಾಮನಬಾವಿ ಬಡಾವಣೆಯ ಸರ್ಕಾರಿ ಮಾದರಿ ಬಾಲಕಿಯರ ಶಾಲೆಯ ಕಥೆ. 1896ರಲ್ಲಿ ಶಾಲೆ ಆರಂಭವಾಗಿದೆ. ನಗರದಲ್ಲಿರುವ ಶತಮಾನ ಪ್ರಾಯದ ಎರಡು ಶಾಲೆಗಳಲ್ಲಿ ಇದೂ ಒಂದು. ಮೊದಲನೆಯದು ಮುನ್ಸಿಪಲ್ ಹೈಸ್ಕೂಲು.

ಸದ್ಯ ಶಾಲೆಯಲ್ಲಿ 130 ವಿದ್ಯಾರ್ಥಿಗಳು, ಏಳು ಮಂದಿ ಶಿಕ್ಷಕಿಯರಿದ್ದಾರೆ. ಸುತ್ತಲಿನ ಬಡವಾಣೆಯ ಮಕ್ಕಳೇ ಈ ಶಾಲೆಯ ವಿದ್ಯಾರ್ಥಿಗಳು. ಶೇ 50ರಷ್ಟು ಹಿಂದುಳಿದ ವರ್ಗದ ಮಕ್ಕಳಿದ್ದರೆ. ಉಳಿದಿದ್ದರಲ್ಲಿ ಮುಸ್ಲಿಂ ಸಮುದಾಯದವರು ಹಾಗೂ ಇತರೆ ಸಮುದಾಯದ ಮಕ್ಕಳಿದ್ದಾರೆ. ಎಲ್ಲರೂ ಕೆಳ ವರ್ಗಕ್ಕೆ ಸೇರಿದ ಮಕ್ಕಳು.

ಕಟ್ಟಡ ತೆಗೆದ ನಂತರ...: ಕೆಲವು ವರ್ಷಗಳ ಹಿಂದೆ, ಶಾಲೆಯ ಕಾಂಪೌಂಡ್‌ನ ಮಧ್ಯಭಾಗಕ್ಕೆ ಹೊಂದಿಕೊಂಡಂತೆ ನಗರಸಭೆಯ ಕಟ್ಟಡವೊಂದಿತ್ತು. ಅದರಲ್ಲಿ ನಗರಸಭೆಯ ಕಾರ್ಮಿಕರು ವಾಸಿಸುತ್ತಿದ್ದರು. ಇತ್ತೀಚೆಗೆ ರಸ್ತೆ ವಿಸ್ತರಣೆಯ ನೆಪದಲ್ಲಿ ಕಟ್ಟಡವನ್ನು ತೆರವುಗೊಳಿಸಿದರು. ಹಾಗಾಗಿ ಕಾಂಪೌಂಡ್ ಗೋಡೆ ಇಲ್ಲದಾಯಿತು.  ಕೆಲವರು ಕಾಂಪೌಂಡ್‌ನ ಮೂಲೆಯನ್ನು ತಿಪ್ಪೆಗುಂಡಿ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರಿಗೆ ಬಯಲು ಶೌಚಾಲಯದಂತಾಗಿದೆ !

`ಕಾಂಪೌಂಡ್ ಇಲ್ಲದಿರುವುದರಿಂದ ಜಾನುವಾರುಗಳು ಶಾಲಾ ಅಂಗಳಕ್ಕೆ ಬರುತ್ತವೆ. ಅವುಗಳನ್ನು ನಿಯಂತ್ರಿಸುವುದಕ್ಕಾಗಿ ಶಾಲೆಯ ಕೆಲವು ಕಡೆ ಮುಳ್ಳು ಕಂಟಿಗಳನ್ನು ಹರಡಿದ್ದೇವೆ. ಪ್ರತಿ ನಿತ್ಯ ಶಿಕ್ಷಕರೇ ಈ ಮುಳ್ಳು ಕಂಟಿ ಹರಡುತ್ತಾರೆ. ಕಾಂಪೌಂಡ್ ನಿರ್ಮಿಸಿದರೆ ಸಾಕು. ನಾವು ಗೇಟ್‌ಗೆ ಬೀಗ ಹಾಕಿಕೊಳ್ಳುತ್ತೇವೆ. ಆಗ ಈ ಸಮಸ್ಯೆ ಇರುವುದಿಲ್ಲ' ಎಂದು ಶಿಕ್ಷಕಿಯರು ಹೇಳುತ್ತಾರೆ.

ಅನುದಾನದ ಕೊರತೆ: ಗೋಡೆ ನಿರ್ಮಾಣಕ್ಕೆ ಶಾಲೆಗೆ ಅನುದಾನ ನೀಡುವುದಿಲ್ಲ. ಕಟ್ಟಡ ದುರಸ್ತಿಗೆ ನೀಡಿದ ್ಙ. 1 ಲಕ್ಷದ ಅನುದಾನದಲ್ಲಿ ಕೊಠಡಿಗಳ್ನು ದುರಸ್ತಿಗೊಳಿಸಿದ್ದಾರೆ. ಶಾಲೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಶಿಕ್ಷಕಿಯರು ಶ್ರಮವಹಿಸಿದ್ದಾರೆ.

`ಕಾಂಪೌಂಡ್ ಕೊರತೆ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಕಟ್ಟಡ ತೆರವುಗೊಳಿಸುವಾಗ ನಗರಸಭೆಯವರಿಗೂ ಈ ವಿಷಯ ತಿಳಿಸಿದ್ದೆವು. ಸುತ್ತಲಿನ ಜನ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯವರು ಕೌನ್ಸೆಲರಿಗೆ ತಿಳಿಸಿದ್ದಾರೆ. ಆದರೆ ಕಾಂಪೌಂಡ್ ನಿರ್ಮಾಣವಾಗಿಲ್ಲ' ಎಂದು ಶಿಕ್ಷಕಿಯರು ಅವಲತ್ತುಕೊಳ್ಳುತ್ತಾರೆ.

ಶಾಲೆಯೊಳಗೆ ಕ್ರಿಕೆಟ್: ಸುತ್ತಲಿನ ಮಕ್ಕಳಿಗೆ ಶಾಲೆಯ ಆವರಣ ಕ್ರಿಕೆಟ್ ಆಟದ ತಾಣವಾಗಿದೆ. ಹೀಗಾಗಿ ಶಾಲೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ತಂದಿ ಪ್ರತಿ ದಿನ ಹರಿದು ಹೋಗುತ್ತದೆ. ಪದೇ ಪದೇ ದುರಸ್ತಿ ಮಾಡಿಸಿದರೂ ಮಕ್ಕಳು ಕಿತ್ತು ಹಾಕುತ್ತಾರೆ.

ಪಕ್ಕದ ಮೈದಾನವಂತೂ ಈ ಭಾಗದ ಜನರಿಗೆ ಅಕ್ಷರಶಃ ಓಡಾಡು ಹಾದಿಯಾಗಿದೆ. ಕಾಂಪೌಂಡ್ ಇಲ್ಲದಿರುವುದರಿಂದ ಅದನ್ನೇ ಮುಖ್ಯದ್ವಾರವನ್ನಾಗಿಸಿಕೊಂಡು ಅಡ್ಡಾಡುತ್ತಾರೆ. ಪಾಠ ಮಾಡಲು ತೊಂದರೆಯಾಗುತ್ತಿದೆ.

ವಾಹನಗಳ ಕಿರಿಕಿರಿ: ಶಾಲೆಯ ಎದುರು ವಾಹನಗಳ ಪಾರ್ಕಿಂಗ್ ಮಾಡುತ್ತಾರೆ. ಕೋಟೆಗೆ ಸಂಚರಿಸುವ ರಸ್ತೆಯಾಗಿರುವುದರಿಂದ ವಾಹನಗಳ ಸಂಖ್ಯೆ ಅಧಿಕವಾಗಿರುತ್ತದೆ. ಅವುಗಳ ಹಾರನ್ ಕಿರಿಕಿರಿಯಿಂದ ಶಿಕ್ಷಕಿಯರಿಗೆ ಪಾಠ ಮಾಡುವುದೇ ಕಷ್ಟವಾಗಿದೆ. ಈ ಎಲ್ಲ ಸಮಸ್ಯೆಗಳ ನಿಯಂತ್ರಣಕ್ಕಾಗಿ ಶಾಲೆಯ ಸಮೀಪದಲ್ಲಿ ಪೊಲೀಸ್ ಚೌಕಿ ನಿರ್ಮಿಸಬೇಕೆಂದು ನಗರಸಭೆ ತೀರ್ಮಾನಿಸಿತ್ತು. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ.

`ಸರ್ಕಾರ ಶಾಲೆಗಳೇ ಮುಚ್ಚುವ ಸ್ಥಿತಿಯಲ್ಲಿರುವ ಕಾಲದಲ್ಲಿ ಶತಮಾನಗಳಿಂದ ಮಕ್ಕಳಿಗೆ ಜ್ಞಾನ ಹಂಚುತ್ತಿರುವ ಇಂಥ ಶಾಲೆಗಳನ್ನು ರಕ್ಷಿಸಿಕೊಳ್ಳುವುದು ನಗರದ ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಇಂಥ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಲ್ಲಿ ಹಣಕ್ಕೇನೂ ಕೊರತೆಯಿಲ್ಲ. ಆದರೆ ಅದನ್ನು ಸೂಕ್ತ ಕಡೆ, ಸರಿಯಾದ ಸಮಯದಲ್ಲಿ ಬಳಸುವ ಕೆಲಸವಾಗುತ್ತಿಲ್ಲ' ಎನ್ನುತ್ತಾರೆ ನಾಗರಿಕರು.

ಶೀಘ್ರ ಪರಿಹಾರ
ನಗರಸಭೆಯವರು ಚರಂಡಿ ನಿರ್ಮಿಸುವುದಕ್ಕಾಗಿ ಕಾಂಪೌಂಡ್ ಕೆಡವಿದ್ದಾರೆ. ಈ ಬಗ್ಗೆ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಅಲ್ಲಿನ ಜನರ ಜೊತೆ ಮಾತನಾಡಿದ್ದೇನೆ. ಜಿಲ್ಲಾಧಿಕಾರಿಯವರ ಗಮನಕ್ಕೂ ತಂದಿದ್ದೇನೆ. ಮತ್ತೊಮ್ಮೆ ಶಾಲೆಗೆ ಭೇಟಿ ನೀಡಿ, ಪರಿಶೀಲಿಸಿ, ಕಾಂಪೌಂಡ್ ನಿರ್ಮಿಸುವ ಕುರಿತು ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡುತ್ತೇನೆ. ಶೀಘ್ರದಲ್ಲೇ ಸಮಸ್ಯೆ  ಪರಿಹರಿಸುತ್ತೇನೆ..
- ಎಚ್.ಮಂಜುನಾಥ್, ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT