ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆ: ಅಪ್ಪಸಾವು, ಬದುಕಿದ ಪುತ್ರ

Last Updated 16 ಜನವರಿ 2011, 19:30 IST
ಅಕ್ಷರ ಗಾತ್ರ

ಚೆನ್ನೈ: ಶಬರಿಮಲೆ ಕಾಲ್ತುಳಿತ ದುರಂತದಲ್ಲಿ ಮಗ ಬದುಕುಳಿದ, ಆದರೆ ಅಪ್ಪ ಸಾವಿಗೀಡಾದ ಕರುಣಾಜನಕ ಘಟನೆ ತಮಿಳುನಾಡಿನಿಂದ ವರದಿಯಾಗಿದೆ. ಚೆನ್ನೈನ 49 ವರ್ಷದ ಕೇಶವನ್ ಸರ್ಕಾರಿ ಬಸ್‌ನ ಕಂಡಕ್ಟರ್.  ಈ ವರ್ಷ 10 ದಿನಗಳಿಗೆ ಮುಂಚೆಯೇ ಶಬರಿಮಲೆಗೆ ತೆರಳಿದ್ದ ಕೇಶವನ್ ಮನೆಗೆ ಮರಳಿದ್ದರು.

‘ಮಗ ಲೋಕೇಶ್ ‘ಮಕರ ಜ್ಯೋತಿ’ ದರ್ಶನ ಮಾಡಲು ಬಯಸಿದಾಗ ಅವರು ಮತ್ತೆ ಎರಡನೇ ಸಲ ಶಬರಿಮಲೆ ಯಾತ್ರೆಗೆ ತೆರಳಿದ್ದರು. ಆದರೆ ಹಿಂತಿರುಗಿ ಬರಲಿಲ್ಲ’ ಎಂದು ತಮಿಳುನಾಡು- ಕೇರಳ ಗಡಿಯಲ್ಲಿರುವ ಕುಮುಲಿ ಆಸ್ಪತ್ರೆಯಿಂದ ಕೇಶವನ್ ಅವರ ಕಳೇಬರ ಭಾನುವಾರ ಮನೆಗೆ ತಲುಪುತ್ತಿದ್ದಂತೆಯೇ ಕೇಶವನ್ ಪತ್ನಿ ಮಹೇಶ್ವರಿ ಬಿಕ್ಕಿ ಬಿಕ್ಕಿ ಅತ್ತರು.

‘ಮಕರಜ್ಯೋತಿ’ ಕಂಡು ಸಂತೃಪ್ತರಾದ ತಂದೆ-ಮಗ ಹಿಂತಿರುಗುವಾಗ ಕಾಲ್ತುಳಿತ ಸಂಭವಿಸಿದೆ. ನಂತರದಲ್ಲಿ ಇಲ್ಲಿನ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ18 ವರ್ಷದ ಲೋಕೇಶನಿಗೆ ತಂದೆಯನ್ನು ಪತ್ತೆ ಹಚ್ಚಲು ಆಗಲಿಲ್ಲ.ಲೋಕೇಶ ಶನಿವಾರ ರಾತ್ರಿಯಷ್ಟೇ ಮನೆಗೆ ಮರಳಿದಾಗ ಕಾಲ್ತುಳಿತದಲ್ಲಿ ಕೇಶವನ್ ಸಾವಿಗೀಡಾದ ಸುದ್ದಿ ತಿಳಿಯಿತು.

ಹೋಗುವಾಗ 13, ಬರುವಾಗ 7 ಸದಸ್ಯರು!: ಕರ್ನಾಟಕದ ಬೆಳಗಾವಿಯಿಂದ ಗೋವಿಂದ ಅಪ್ಪ ಕಲಿಮಣಿ ಸ್ವಾಮಿ ಜೊತೆಗೆ 13 ಮಂದಿ ಸದಸ್ಯರು ಅಯ್ಯಪ್ಪ ದರ್ಶನಕ್ಕೆ ತೆರಳಿದ್ದರು. ಹಿಂತಿರುಗುವಾಗ 7ಮಂದಿ ಮಾತ್ರ ಗೋವಿಂದ ಜತೆಗೆ ಇದ್ದರು.

ಗೋಕರ್ಣದಲ್ಲಿ 13 ಮಂದಿ ಸದಸ್ಯರೂ ನಗುತ್ತಾ ತೆಗೆಸಿಕೊಂಡಿದ್ದ ಫೋಟೋವನ್ನು ಕೈಯಲ್ಲಿ ಹಿಡಿದುಕೊಂಡು ಗೋವಿಂದ ಅವರು ಕುಮಿಲಿ ಸರ್ಕಾರಿ ಆಸ್ಪತ್ರೆಯಲ್ಲಿ ಕಣ್ಣೀರಿಡುತ್ತಿದ್ದರು.

ಸೋದರರನ್ನು ಬೇರ್ಪಡಿಸಿದ ದುರಂತ: ಶಬರಿಮಲೆಯ ಕಾಲ್ತುಳಿತ ದುರಂತವು ತಮಿಳುನಾಡಿನ ಪೆನ್ನಾಲಂನ ಕಡಲೂರಿನ 25 ವರ್ಷದ ಅವಳಿ ಸಹೋದರರಾದ ರಮಣ ಮತ್ತು ಲಕ್ಷ್ಮಣನನ್ನು ಪರಸ್ಪರ ದೂರ ಮಾಡಿದೆ. 

ವಂಡಿಪೆರಿಯಾರ್‌ನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ ರಮಣ ಅಸುನೀಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಈ ಸೋದರರು ಶಬರಿಮಲೆಗೆ ಭೇಟಿ ನೀಡುತ್ತಿದ್ದರು. ‘ಕಣ್ಣೆದುರಿಗೇ ಸೋದರ ಅಸುನೀಗಿದನು. ಆತನನ್ನು ಉಳಿಸಿಕೊಳ್ಳಲು ಆಗಲಿಲ್ಲ’ ಎಂದು ಘಟನೆಯಿಂದ ಆಘಾತಕ್ಕೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವ ಲಕ್ಷ್ಮಣ ಹೇಳುತ್ತಾರೆ.

ಶವಗಳ ರಾಶಿ ನಡುವೆಯೂಬದುಕುಳಿದ!
ಕುಮಳಿ (ಇಡುಕ್ಕಿ): ಶಬರಿಮಲೆಯಲ್ಲಿ ದುರಂತ ಸಂಭವಿಸಿ 48 ಗಂಟೆಗಳು ಕಳೆದಿದ್ದರೂ ಪವಾಡಸದೃಶ ರೀತಿಯಲ್ಲಿ ಪಾರಾದವರ ಮತ್ತು ಅನಿರೀಕ್ಷಿತವಾಗಿ ಸಾವನ್ನಪ್ಪಿದವರ ಸಂಗತಿಗಳು ಕೇರಳ ಮತ್ತು ತಮಿಳುನಾಡು ನಡುವೆ ಇರುವ ಈ ಗಡಿ ಪಟ್ಟಣದ ಜನರಲ್ಲಿ ಸಂತೋಷ ಮತ್ತು ಭೀತಿ ಮೂಡಿಸುತ್ತಿವೆ. ಶಬರಿಮಲೆ ಯಾತ್ರೆಗೆ ಬಂದಿದ್ದ ಹತ್ತು ವರ್ಷದ ಆಕಾಶ್ ದುರಂತ ಸಂಭವಿಸಿದ ಬಳಿಕ ಶವಗಳ ರಾಶಿಯಡಿ  ಸುಮಾರು 30 ನಿಮಿಷಗಳನ್ನು ಕಳೆದಿದ್ದ. ನಂತರ ಕೈಯೊಂದು ಆತನನ್ನು ಹಿಡಿದು ಹೊರಕ್ಕೆ ಎಳೆಯಿತು. ‘ಅಯ್ಯಪ್ಪ ಸ್ವಾಮಿ ಕಾಪಾಡಿದ’ ಎಂದು ಆತ ಕುಮಿಲಿ ಆಸ್ಪತ್ರೆ ಮುಂದೆ ಭೇಟಿಯಾದ ‘ಪ್ರಜಾವಾಣಿ’ಗೆ ತಿಳಿಸಿದ.

 ‘ಮಿಸ್ಡ್ ಕಾಲ್’ ಭೀತಿ’: ಬಳ್ಳಾರಿಯ ನಿವಾಸಿ ಬದರಿನಾಥ್ ಮಿಸ್ಡ್ ಕಾಲ್‌ಗೆ ಇನ್ನು ಯಾವಾಗಲೂ ಹೆದರುವ ಸಂಭವವಿದೆ.  ಲಾರಿಯಲ್ಲಿ ಪೇರಿಸಲಾದ ಚಪ್ಪಟೆಮುಖದ ವ್ಯಕ್ತಿ ಆತನ ಸೋದರನೆಂದು ಗೆಳೆಯರು ಹೇಳಿದಾಗ ಬದರಿನಾಥ್ ನಂಬಲಿಲ್ಲ. ಸೋದರನ ಫೋನಿಗೆ ನೀಡುವ ಮಿಸ್ಡ್‌ಕಾಲ್‌ಗಳು ಮಾತ್ರ ಇದನ್ನು ದೃಢಪಡಿಸಬಹುದಿತ್ತು. ಆತಂಕದಿಂದಲೇ ಆತ ನಂಬರ್‌ಗಳನ್ನು ಒತ್ತಿದ.  ಲಾರಿಯಲ್ಲಿ ಹಾಕಿದ್ದ ಮೃತದೇಹದ ಕಡೆಯಿಂದಲೇ ಫೋನು ರಿಂಗುಣಿಸಿತು. ಖಚಿತವಾಗಿ ಆತ ಬದರಿಯ  ಸೋದರನಾಗಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT