ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆ ದುರಂತ: ಸರ್ಕಾರ, ಟಿಡಿಬಿಯಿಂದ ಶಿಫಾರಸು ನಿರ್ಲಕ್ಷ್ಯ

Last Updated 16 ಜನವರಿ 2011, 20:20 IST
ಅಕ್ಷರ ಗಾತ್ರ
ತಿರುವನಂತಪುರಂ (ಪಿಟಿಐ): ಶಬರಿಮಲೆ ತಲುಪಲು ಪರ್ಯಾಯ ಮಾರ್ಗವನ್ನು ಅಭಿವೃದ್ಧಿಪಡಿಸುವಂತೆ ಈ ಹಿಂದೆಯೇ ತಜ್ಞರ ಸಮಿತಿ ಶಿಫಾರಸು ಮಾಡಿದ್ದರೂ ಅದನ್ನು ಸಂಪೂರ್ಣ ನಿರ್ಲಕ್ಷ್ಯಿಸಲಾಗಿದೆ ಎಂಬ ಟೀಕೆಗೆ ಕೇರಳ ಸರ್ಕಾರ ಮತ್ತು ತಿರುವಾಂಕೂರ್ ದೇವಸ್ಥಾನ ಮಂಡಳಿ (ಟಿಡಿಬಿ) ಈಗ ಗುರಿಯಾಗಿದೆ.
 
ಶಬರಿಮಲೆಯಲ್ಲಿ ಶುಕ್ರವಾರ ಸಂಭವಿಸಿದ ಕಾಲ್ತುಳಿತದಂತಹ ದುರಂತ 1999ರ ಜನವರಿ 14ರಂದು ಕೂಡ ಸಂಭವಿಸಿತ್ತು. ಆಗ ಪಂಪಾ ನದಿ ತೀರದ ಮೂಲ ಬಿಡಾರದಲ್ಲಿ ಕಾಲ್ತುಳಿತ ಸಂಭವಿಸಿ ಆಂಧ್ರದ 52 ಯಾತ್ರಿಗಳು ಸಾವಿಗೀಡಾಗಿದ್ದರು.
 
ಆ ಘಟನೆ ಕುರಿತ ನ್ಯಾಯಾಂಗ ತನಿಖೆಯ ವರದಿಯನ್ನು ಜಾರಿಗೊಳಿಸಿದ್ದರೆ 102 ಜನರ ಸಾವಿಗೆ ಕಾರಣವಾದ ಪುಲ್‌ಮೇಡು ದುರಂತವನ್ನು ತಪ್ಪಿಸಬಹುದಾಗಿತ್ತು ಎಂದು ವಿರೋಧಪಕ್ಷಗಳು ಮತ್ತು ಹಿಂದೂ ಸಂಘಟನೆಗಳು ಅಭಿಪ್ರಾಯ ಪಟ್ಟಿವೆ.
 
1999ರ ದುರಂತದ ಬಗ್ಗೆ ತನಿಖೆ ನಡೆಸಿದ ನ್ಯಾಯಮೂರ್ತಿ ಚಂದ್ರಶೇಖರ ಮೆನನ್ ಅವರು, ತಮಿಳುನಾಡಿನ ಬಹುತೇಕ ಯಾತ್ರಿಗಳು ಪಯಣಿಸುವ ಪುಲ್‌ಮೇಡು ಮಾರ್ಗದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವ ಅಗತ್ಯವಿದೆ ಎಂದು ತಮ್ಮ ವರದಿಯಲ್ಲಿ ಸಲಹೆ ನೀಡಿದ್ದರು.
 
ಜನವರಿ ತಿಂಗಳಲ್ಲಿ ಶಬರಿಮಲೆಗೆ ಬರುವ ಭಕ್ತರಲ್ಲಿ ಶೇಕಡಾ 60ರಷ್ಟು ಮಂದಿ ಹೊರ ರಾಜ್ಯದವರೇ ಆಗಿರುತ್ತಾರೆ. ಇವರು ಶಬರಿಮಲೆಯಿಂದ ಹಿಂತಿರುಗುವಾಗ ಮದುರೆ ಮತ್ತಿತರ ಸ್ಥಳಗಳಿಗೆ ತೆರಳಲು ಈ ಮಾರ್ಗ ಸುಲಭದ ದಾರಿ ಆಗಿರುತ್ತದೆ.
 
ಪಂಪಾ ಮಾರ್ಗದಲ್ಲಿ ಭಕ್ತರ ನೂಕುನುಗ್ಗಲನ್ನು ತಡೆಯಲು ವಂಡಿಪೆರಿಯಾರ್ ಮಾರ್ಗವನ್ನು ಅಭಿವೃದ್ಧಿಪಡಿಸಬೇಕು. ಆಗ ಕನಿಷ್ಠ ಶೇ 40ರಷ್ಟು ಯಾತ್ರಾರ್ಥಿಗಳಾದರೂ ಈ ಮಾರ್ಗದಲ್ಲಿ ಸಾಗುತ್ತಾರೆ ಎಂದು ಸಮಿತಿ ಹೇಳಿತ್ತು. ಪ್ರಮುಖ ಶಿಫಾರಸುಗಳ ಪೈಕಿ, ದುರಂತ ಸಂಭವಿಸಿದ ಜಾಗವಾದ ಉಪ್ಪುಪಾರದಲ್ಲಿ ಪರ್ಯಾಯ ಮೂಲ ಬಿಡಾರವನ್ನು ತುರ್ತಾಗಿ ನಿರ್ಮಿಸುವ ಅಗತ್ಯವಿದೆ ಎಂಬುದೂ ಸೇರಿತ್ತು.
 
ಮೂಲ ಸೌಕರ್ಯಗಳನ್ನು ಮತ್ತು ಭದ್ರತೆಯನ್ನು ಒದಗಿಸದಿದ್ದರೆ ಪುಲ್‌ಮೇಡು ಮಾರ್ಗದಲ್ಲಿ ಸಂಚರಿಸಲು ಭಕ್ತಾದಿಗಳಿಗೆ ಅವಕಾಶ ನೀಡಬಾರದು. ಆಯಾಸ ನಿವಾರಣೆಗೆ ತಂಗುದಾಣಗಳು, ವಾಹನ ನಿಲುಗಡೆ, ಶೌಚಾಲಯ, ಬೆಳಕಿನ ವ್ಯವಸ್ಥೆ, ತಿಂಡಿ- ತಿನಿಸು ಅಂಗಡಿ ಸೌಲಭ್ಯ ಒದಗಿಸಿದ ಬಳಿಕವಷ್ಟೇ ಈ ಮಾರ್ಗದಲ್ಲಿ ಭಕ್ತಾದಿಗಳು ಸಂಚರಿಸಲು ಬಿಡಬೇಕು. 
 
ಪುಲ್‌ಮೇಡು ಮಾರ್ಗದಲ್ಲಿ ಬೆಟ್ಟ ಏರುವ ದಾರಿಯನ್ನು ಕನಿಷ್ಠ ನಾಲ್ಕು ಮೀಟರ್‌ನಷ್ಟು ವಿಸ್ತರಿಸಬೇಕು, ಮಾರ್ಗದ ಎರಡೂ ಕಡೆ ಕಬ್ಬಿಣದ ಕಟಕಟೆ ನಿರ್ಮಿಸಬೇಕು. ಶಬರಿಮಲೆ ಬೃಹತ್ ಯೋಜನೆಗೆ ಅನುಗುಣವಾಗಿ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಬೇಕು ಎಂದು ವರದಿ ತಿಳಿಸಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT