ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣ ಸಂಸ್ಕೃತಿ ಉತ್ಸವದಲ್ಲಿ ಸಂತೋಷ್ ಹೆಗ್ಡೆ ಅಭಿಮತ...

Last Updated 4 ಅಕ್ಟೋಬರ್ 2011, 9:05 IST
ಅಕ್ಷರ ಗಾತ್ರ

ಚಿತ್ರದುರ್ಗ: ಭ್ರಷ್ಟರಿಗೆ ಮಾನವೀಯತೆ ಇಲ್ಲ. ಒಂದು ರೀತಿಯಲ್ಲಿ ಅವರು ಮಾನವರೇ ಅಲ್ಲ ಎಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಕಿಡಿಕಾರಿದರು.ಮುರುಘಾಮಠ, ಬಸವಕೇಂದ್ರ ಆಶ್ರಯದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಸೋಮವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದು ಯಾವುದೇ ಯೋಜನೆಯಲ್ಲಿ ರೂ10ರಲ್ಲಿ 10 ಪೈಸೆ ಸಹ ನಿಜವಾದ ಫಲಾನುಭವಿಗೆ ತಲುಪುತ್ತಿಲ್ಲ. ಲೋಕಪಾಲ್ ಅಥವಾ ಲೋಕಾಯುಕ್ತರಿಂದ ಭ್ರಷ್ಟಾಚಾರದ ಸಂಪೂರ್ಣ ನಿರ್ಮೂಲನೆ ಸಾಧ್ಯವಿಲ್ಲ. ಆದರೆ, ನಿಯಂತ್ರಿಸಬಹುದು. ಆದ್ದರಿಂದ, ಲಂಚ ಕೊಡುವುದಿಲ್ಲ ಮತ್ತು ತೆಗೆದು ಕೊಳ್ಳುವುದಿಲ್ಲ ಎಂದು ಎಲ್ಲರೂ ಸಂಕಲ್ಪ ಮಾಡಿದರೆ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ ಎಂದು ಪ್ರತಿಪಾದಿಸಿದರು.

ಭ್ರಷ್ಟಾಚಾರ ಮತ್ತು ಆಡಳಿತ ಸುಧಾರಣೆ ಕೆಲವು ಅಂಶಗಳನ್ನು ಸಭಿಕರ ಮುಂದಿಟ್ಟ ಅವರು, ಕೆಲಸ ಮಾಡದ ಜನಪ್ರತಿನಿಧಿಗಳನ್ನು ವಾಪಸ್ ಕರೆಯಿಸಿಕೊಳ್ಳುವ ವ್ಯವಸ್ಥೆ ಜಾರಿಯಾಗಬೇಕು. ಅಭ್ಯರ್ಥಿಗಳ ಚುನಾವಣೆ ವೆಚ್ಚವನ್ನು ಚುನಾವಣಾ ಆಯೋಗವೇ ಭರಿಸಬೇಕು. ಮತದಾನವನ್ನು ಕಡ್ಡಾಯ ಮಾಡಬೇಕು.

ಶೇ. 51ರಷ್ಟು ಮತ ಪಡೆದವರನ್ನು ಮಾತ್ರ ಜಯಗಳಿಸಿದ ಅಭ್ಯರ್ಥಿಯನ್ನಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು.ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತರ ವರದಿಯಲ್ಲಿ ಕೆಲವು ಪತ್ರಕರ್ತರ ಹೆಸರು ಪ್ರಸ್ತಾಪವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ತಮಗೆ ದೊರೆತ ದಾಖಲೆಗಳ ಆಧಾರದ ಮೇಲೆ ಹೆಸರುಗಳನ್ನು ನಮೂದಿಸಿದ್ದೇವೆ. ದಾಖಲೆಯಲ್ಲಿರುವುದನ್ನು ಮಾತ್ರ ಯಥಾವತ್ತಾಗಿ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ನುಡಿದರು.

ಈ ಹಿಂದೆ ಭ್ರಷ್ಟರನ್ನು ಹುಡುಕಲು ಐದು ಬೆರಳುಗಳು ಬೇಕಾಗಿತ್ತು. ಆದರೆ, ಇಂದು ಪ್ರಾಮಾಣಿಕರನ್ನು ಹುಡುಕಲು ಐದು ಬೆರಳುಗಳು ಮಾತ್ರ ಬೇಕಾಗಿವೆ. ಭ್ರಷ್ಟಾಚಾರದ ಬೆಳವಣಿಗೆಯಿಂದ ನೊಂದವರು ಗ್ರಾಮೀಣ ಪ್ರದೇಶದ ಜನರು. 1950ರಲ್ಲಿ ರೂ10 ಲಂಚ ತೆಗೆದು ಕೊಂಡಿದ್ದರೆ ಇಂದು 2-ಜಿ ತರಂಗಾತರಂಗನಲ್ಲಿ ರೂ 1.76ಲಕ್ಷ ಕೋಟಿ ಭ್ರಷ್ಟಾಚಾರ ನಡೆದಿದೆ. ಇದೇ ಹಣವನ್ನು ಗ್ರಾಮೀಣಾಭಿವೃದ್ಧಿಗೆ ಬಳಸಿದ್ದರೆ ಚಿತ್ರಣವೇ ಬದಲಾಗುತ್ತಿತ್ತು ಎಂದು ತಿಳಿಸಿದರು.

ಕೇವಲ ಒಂದು ಕೊಡ ನೀರಿಗಾಗಿ ನಾಲ್ಕೈದು ಕಿ.ಮೀ. ದೂರ ನಡೆಯಬೇಕಾದ ಸ್ಥಿತಿ ನಮ್ಮ ರಾಜ್ಯದಲ್ಲಿದೆ. ದೇಶ ಉದ್ಧಾರವಾಗಿದೆ ಎಂದು ಪ್ರಗತಿಯ ಚಿತ್ರಣವನ್ನು ಇಂದು ನಮ್ಮ ಮುಂದಿಡಲಾಗುತ್ತಿದೆ. ಆದರೆ, ಎಲ್ಲಿ ? ಎನ್ನುವ ಪ್ರಶ್ನೆ ಮುಖ್ಯ. ಕೆಲವು ಪಟ್ಟಣ ಮತ್ತು ವ್ಯಕ್ತಿಗಳು ಮಾತ್ರ ಉದ್ಧಾರವಾಗಿದ್ದಾರೆ. ಲಕ್ಷ, ಕೋಟಿ ರೂಪಾಯಿಗಳು ಸೋರಿಕೆಯಾಗುತ್ತಿವೆ ಎಂದರು.

2006-07ರ ಸಿಎಜಿ ವರದಿ ಪ್ರಕಾರ ಕೇಂದ್ರ ಸರ್ಕಾರದ 8 ಯೋಜನೆಗಳಿಗೆ ಮಾತ್ರ ಬಿಡುಗಡೆ ಮಾಡಿದ್ದ ಅನುದಾನದಲ್ಲಿ ರೂ 51 ಸಾವಿರ ಕೋಟಿಗೆ ಲೆಕ್ಕ ಇಲ್ಲ. ಯೋಜನಾ ಆಯೋಗದ ಪ್ರಕಾರ ರೂ 35 ಸಂಪಾದಿಸುವವನು ಬಡವನಲ್ಲ.

ಸ್ವಿಸ್ ಬ್ಯಾಂಕ್‌ನಲ್ಲಿರುವ ದೇಶದ ಹಣವನ್ನು ವಾಪಸ್ ತಂದರೆ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ತೆರಿಗೆ ಹೇರುವ ಅವಕಾಶವೇ ಬರುವುದಿಲ್ಲ. ಹೊರದೇಶದ ಸಾಲವನ್ನು ಸಹ 24 ಗಂಟೆಯಲ್ಲಿ ತೀರಿಸಬಹುದು. ಜಿಲ್ಲೆಗಳ ಅಭಿವೃದ್ಧಿ ಮಾಡಬಹುದು ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. ಆದರೆ, ಸ್ವಿಸ್ ಬ್ಯಾಂಕ್‌ನಿಂದ ಹಣ ವಾಪಸ್ ತರುವ ಇಚ್ಛೆಯನ್ನು ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.

ಕೆಲವು ಜನಪ್ರತಿನಿಧಿಗಳಿಗೆ ಪ್ರಜಾಪ್ರಭುತ್ವದ ಮಹತ್ವವೇ ಗೊತ್ತಿಲ್ಲ. ಜನಪ್ರತಿನಿಧಿಗಳು ಜನ ಸೇವಕರೇ ಹೊರತು ನಮ್ಮ ಪ್ರತಿನಿಧಿಗಳು ಅಲ್ಲ. ಭ್ರಷ್ಟಾಚಾರ ಆಡಳಿತ ರಾಜಕೀಯದಲ್ಲಿ ಮಾತ್ರವಲ್ಲ ಖಾಸಗಿ ವ್ಯವಸ್ಥೆಯಲೂ ಇದೆ. ಯುವಕರು ಮತ್ತು ಯುವತಿಯರು ನಿಮಗಾಗಿ ಮತ್ತು ಮುಂದಿನ ಪೀಳಿಗೆಗಾಗಿ ನಿಮ್ಮ ಮನೋಭಾವ ಬದಲಾಯಿಸಿ ಕೊಳ್ಳಬೇಕು. ಕಾನೂನಿನ ಚೌಕಟ್ಟಿನೊಳಗೆ ಸಂಪಾದಿಸಿದ ಹಣದಿಂದ ಮಾತ್ರ ತೃಪ್ತಿ ಸಿಗುತ್ತದೆ ಎಂದರು.

ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ತಮ್ಮ ಹೋರಾಟಕ್ಕೆ ಕೇವಲ ರೂ 8 ಲಕ್ಷ  ಮಾತ್ರ ಖರ್ಚು ಮಾಡಿದ್ದಾರೆ. ಆದರೆ, ರೂ80 ಲಕ್ಷ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಹಜಾರೆ ಅವರ ಸ್ವಗ್ರಾಮಕ್ಕೆ ನಾನು ಭೇಟಿ ನೀಡಿದ್ದೇನೆ. ಅವರ ಸರಳ ಜೀವನ, ಬದುಕು ಕಂಡಿದ್ದೇನೆ ಎಂದು ವಿವರಿಸಿದರು.ಕಾರ್ಯಕ್ರಮದಲ್ಲಿ ಸಂತೋಷ್ ಹೆಗ್ಡೆ ವಿದ್ಯಾರ್ಥಿಗಳು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.

ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ವಿದ್ಯಾರ್ಥಿಗಳೆಲ್ಲರೂ ಸಕಾರತ್ಮಕ ಆಲೋಚನೆ ಮಾಡಬೇಕು. ಇರುವುದು ಒಂದೇ ಜನ್ಮ. ಇದೇ ಮೊದಲು ಮತ್ತು ಕೊನೆ. ಮುಂದೆ ಯಾವುದೇ ಜನ್ಮ ಇಲ್ಲ. ಪುನರ್ಜನ್ಮದ ಭ್ರಮೆ ಇಟ್ಟುಕೊಳ್ಳಬೇಡಿ ಎಂದು ನುಡಿದರು.

ಖಾಸಗಿ ವಾಹಿನಿಯಲ್ಲಿನ ಪುನರ್ಜನ್ಮದ ಕಾರ್ಯಕ್ರಮ ನೋಡಿದ ತುಮಕೂರಿನ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆಯನ್ನು ಪ್ರಸ್ತಾಪಿಸಿದ ಅವರು, ಇದೊಂದು ನಕಾರತ್ಮಕ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು. ಆ ವಿದ್ಯಾರ್ಥಿನಿ ಸಕಾರಾತ್ಮಕವಾಗಿ ಯೋಚಿಸಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ ಎಂದರು.ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಪ್ರೊ.ಎಸ್.ಎಚ್. ಪಟೇಲ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT