ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣ ಸಂಸ್ಕೃತಿ ತವರು; ವಿಶ್ವ ಪರಂಪರೆಯ ತಾಣ

Last Updated 30 ಡಿಸೆಂಬರ್ 2010, 10:55 IST
ಅಕ್ಷರ ಗಾತ್ರ

ಚಾಲುಕ್ಯರ ನಾಡು, ಶಿಲ್ಪಕಲೆಯ ತೊಟ್ಟಿಲು. ಕವಿ ಚಕ್ರವರ್ತಿ ರನ್ನನ ತವರು; ವಿಶ್ವಗುರು ಬಸವಣ್ಣನವರ ಐಕ್ಯಸ್ಥಳ, ಶರಣ ಸಂಸ್ಕೃತಿಯ ಕೋಟೆ, ಬೆಲ್ಲ, ಸಕ್ಕರೆ, ಸಿಮೆಂಟ್, ಗ್ರಾನೈಟ್‌ಗಳ ಆಗರ. ಬರದ ಬವಣೆಯಲ್ಲೂ ಇಂದಿರಾ ಗಾಂಧಿಯವರನ್ನು ಬಂಗಾರದಲ್ಲಿ ತೂಗಿ ಅದನ್ನು ದೇಶಕ್ಕೆ ಅರ್ಪಿಸುವ ಮೂಲಕ ಹೃದಯ ಶ್ರೀಮಂತಿಕೆ ಮೆರೆದ ಬಿಜಾಪುರ ಜಿಲ್ಲೆಯ ಭಾಗವಾಗಿತ್ತು. ಅದೇ ‘ಬಾಗಲಕೋಟೆ’ ಜಿಲ್ಲೆ.
ಆಲಮಟ್ಟಿ ಅಣೆಕಟ್ಟೆ ನಿರ್ಮಾಣವಾದ ಬಳಿಕ ಮುಳುಗಡೆ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಬಾಗಲಕೋಟೆ ಭವ್ಯ ಇತಿಹಾಸ, ಸಾಹಿತ್ಯ ಮತ್ತು ಶಿಲ್ಪಕಲೆಗಳ ಅಸಾಮಾನ್ಯ ಪರಂಪರೆ ಹೊಂದಿದೆ. ಶರಣ ಸಂಸ್ಕೃತಿಯ ಭದ್ರಕೋಟೆಯಾಗಿಯೂ ಜಿಲ್ಲೆ ಹೆಸರುವಾಸಿ.
ಶಿಲ್ಪಕಲೆಯ ತೊಟ್ಟಿಲು ಎಂದು ಕರೆಸಿಕೊಳ್ಳುವ ಐಹೊಳೆ, ವಿಶ್ವಪರಂಪರೆಯ ಪಟ್ಟಿಗೆ ಸೇರಿದ ಪಟ್ಟದಕಲ್ಲು ದೇವಸ್ಥಾನಗಳ ಸಮುಚ್ಚಯ, ದಕ್ಷಿಣ ಕಾಶಿ ಮಹಾಕೂಟ ಹಾಗೂ ಬಾದಾಮಿಯ ಗುಹಾಂತರ ದೇವಾಲಯಗಳು ಮತ್ತಿತರ ವಿಶ್ವ ಪ್ರಸಿದ್ಧ ಪ್ರವಾಸಿ ತಾಣಗಳು ಜಿಲ್ಲೆಯಲ್ಲಿವೆ.

ಬ್ರಿಟಿಷರ ವಿರುದ್ಧ ಸೆಡ್ಡುಹೊಡೆದು ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಹಲಗಲಿ ಬೇಡರು, ಪರಕೀಯರ ಆಡಳಿತ ಹಾಗೂ ಜಮೀನ್ದಾರರ ಉಪಟಳದ ವಿರುದ್ಧ ಬಂಡೆದ್ದ ವೀರ ಸಿಂಧೂರ ಲಕ್ಷ್ಮಣನ ಸಂಘರ್ಷದ ಬದುಕಿಗೆ ಈ ನೆಲ ಸಾಕ್ಷಿಯಾಗಿದೆ. ನಂತರದ ಕಾಲಘಟ್ಟದಲ್ಲಿ ಧಾರ್ಮಿಕ, ಸಾಂಸ್ಕೃತಿಕ ತಿರುವುಗಳನ್ನು ಪಡೆದುಕೊಂಡ ಬಾಗಲಕೋಟೆ ಜಿಲ್ಲೆಯು ಟೋಪ ತೇನಿ ಸೆರಗಿನ ಇಳಕಲ್ ಸೀರೆಗಳು, ಗುಳೇದಗುಡ್ಡದ ಖಣಗಳು, ಮಹಾಲಿಂಗಪುರ ಬೆಲ್ಲ, ಸಕ್ಕರೆಯ ಸಿಹಿ, ರಬಕವಿ- ಬನಹಟ್ಟಿಯ ಕೈಮಗ್ಗಗಳು, ಮುಧೋಳದ ವಿಶಿಷ್ಟ ಬೇಟೆ ನಾಯಿ ತಳಿ, ಖನಿಜ ಸಂಪತ್ತು, ಪಿಂಕ್ ಗ್ರಾನೈಟ್, ಸಿಮೆಂಟ್ ಉದ್ಯಮ ಹಾಗೂ ರೈತರೇ ನಿರ್ಮಿಸಿದ ಚಿಕ್ಕಪಡಸಲಗಿ ಬ್ಯಾರೇಜ್‌ನಿಂದ ದೇಶದ ಗಮನಸೆಳೆದಿದೆ.

ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಬಾಗಲಕೋಟೆ ನಗರದ ಬಹುಭಾಗವು ‘ಕೃಷ್ಣಾರ್ಪಣೆ’ಯಾಗಿದೆ. ನಗರದ ಸಂತ್ರಸ್ತರಿಗಾಗಿ ನವ ನಗರವನ್ನೇ ನಿರ್ಮಿಸಲಾಗಿದೆ. ದೇಶದ ಅತೀ ದೊಡ್ಡ ಪುನರ್ವಸತಿ ಯೋಜನೆಗಳಲ್ಲಿ ಈ  ನವನಗರವೂ ಒಂದು. 1963 ಜುಲೈ 2ರಂದು ಎಐಸಿಸಿ ಅಧ್ಯಕ್ಷೆ ಇಂದಿರಾ ಗಾಂಧಿ ಅವರನ್ನು ಚಿನ್ನದಿಂದ ತುಲಾಭಾರ ಮಾಡಲಾಯಿತು. ಆಗ ಸಂಗ್ರಹವಾದ 1,18,553 ತೊಲ ಚಿನ್ನವನ್ನು ರಾಷ್ಟ್ರಕ್ಕೆ ದೇಣಿಗೆ ನೀಡಿದ ಹಿರಿಮೆ ಈ ಭಾಗದ  ಜನರದು. ಅದರಲ್ಲಿ ಬಾಗಲಕೋಟೆ ಜಿಲ್ಲೆಯ ಪಾಲೂ ಇದೆ.

ಜಮಖಂಡಿಯ ಪಟವರ್ಧನ ರಾಜಮನೆತನದವರು ನಿರ್ಮಿಸಿದ ಸುಂದರ ಅರಮನೆ, ಶತಮಾನ ಕಂಡ ಶಿವಯೋಗ ಮಂದಿರ, ಶತಮಾನದತ್ತ ದಾಪುಗಾಲು ಹಾಕುತ್ತಿರುವ ಉತ್ತರ ಕರ್ನಾಟಕದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ, ಸಹಕಾರಿ ರಂಗದಲ್ಲಿ ಛಾಪು ಮೂಡಿಸಿರುವ ಜಿಲ್ಲಾ ಕೇಂದ್ರ ಸಹಕಾರಿ(ಡಿಸಿಸಿ) ಬ್ಯಾಂಕು ಹಾಗೂ ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕುಗಳು, ಇತ್ತೀಚೆಗಷ್ಟೇ ಆರಂಭಗೊಂಡಿರುವ ದೇಶದ ಮೂರನೇ ತೋಟಗಾರಿಕೆ ವಿಶ್ವವಿದ್ಯಾಲಯ ಜಿಲ್ಲೆಯ ಮುಕುಟಪ್ರಾಯಗಳಾಗಿವೆ.

ಬಸವ ತತ್ವ ಪ್ರಚಾರ ಕೈಂಕರ್ಯದ ಇಳಕಲ್‌ನ ಚಿತ್ತರಗಿ ಮಠದ ಡಾ. ಮಹಾಂತ ಸ್ವಾಮೀಜಿ, ಶರಣ ಸಂಸ್ಕೃತಿ ಪ್ರತಿಪಾದಿಸುವ ಮಾತೆ ಮಹಾದೇವಿ, ಭಾವೈಕ್ಯತೆಯ ಕೇಂದ್ರವಾದ ಇಳಕಲ್‌ನ ಮುರ್ತುಜಾ ಖಾದ್ರಿ ದರ್ಗಾ, ಪಂಚಮಸಾಲಿ ಗುರುಪೀಠ, ಭೋವಿ(ವಡ್ಡರ) ಗುರುಪೀಠ ಹೀಗೆ ಅನೇಕ ಧಾರ್ಮಿಕ ಸಂಸ್ಥೆಗಳು ಜಿಲ್ಲೆಯ ವಿಶೇಷಗಳು.

ಐತಿಹಾಸಿಕ ಹಿನ್ನೆಲೆ ಬಾಗಲಕೋಟೆ ರಾಮಾಯಣ ಕಾಲದಲ್ಲಿ ರಾವಣನ ಆಸ್ಥಾನದ ವಾದ್ಯ ಮೇಳದ(ವಾಜಂತ್ರಿ-ಭಜಂತ್ರಿ)ವರ ಊರಾಗಿತ್ತು ಎಂಬ ಐತಿಹ್ಯವಿದೆ. ವಿಜಾಪುರದ ಆದಿಲ್‌ಶಾಹಿ ತನ್ನ ಮಗಳ ಬಳೆ(ಉರ್ದುವಿನಲ್ಲಿ ಬಂಗಡಿ)ಯ ವೆಚ್ಚಕ್ಕೆ ಈ ಊರನ್ನು ಕೊಟ್ಟಿದ್ದರಿಂದ ಬಾಗಲಕೋಟೆಗೆ ‘ಬಂಗಡಿಕೋಟ್’ ಎಂಬ ಹೆಸರು ಬಂತು. ಅಪಭ್ರಂಶಗೊಳ್ಳುತ್ತ ಸಾಗಿದ ಬಂಗಡಿಕೋಟ್ ಕ್ರಮೇಣ ‘ಬಾಗಲಕೋಟೆ’ ಎಂಬ ಹೆಸರು ಪಡೆಯಿತು ಎಂದು ಹೇಳಲಾಗಿದೆ.

ಹಲವು ಅರಸೊತ್ತಿಗೆಗಳಿಗೆ ಸಾಕ್ಷಿಯಾಗಿರುವ ಈ ನೆಲ ಕೆಲಕಾಲ ರಾಷ್ಟ್ರಕೂಟರ, ಕಲಚೂರ್ಯರ ಆಡಳಿತಕ್ಕೆ ಒಳಪಟ್ಟಿತ್ತು. ಏಕಕಾಲದಲ್ಲಿ ಹುಟ್ಟಿಕೊಂಡ ವಿಜಯನಗರ ಮತ್ತು ಬಹುಮನಿ ಸಾಮ್ರಾಜ್ಯಗಳ ನಡುವೆ ಹಂಚಿಹೋಗಿತ್ತು. ಆದಿಲ್‌ಶಾಹಿ, ಪೇಶ್ವೆಯರ ಆಡಳಿತವನ್ನೂ ಕಂಡಿರುವ ಜಿಲ್ಲೆ 1818ರ ನಂತರ ಬ್ರಿಟಿಷರ ವಶವಾಯಿತು. ಆಗ ಜಮಖಂಡಿ, ಮುಧೋಳ ಸಂಸ್ಥಾನಗಳು ಪಟವರ್ಧನ ಮತ್ತು ಘೋರ್ಪಡೆ ಮನೆತನಗಳ ಆಡಳಿತದಲ್ಲಿತ್ತು. ಕೆಲವು ಕಡೆ ದೇಸಾಯಿಗಳು (ದೇಶಗತಿ ಮನೆತನ) ಆಳ್ವಿಕೆ ನಡೆಸಿದರು.

ಸ್ವಾತಂತ್ರ್ಯ ನಂತರ ಭಾರತ ಒಕ್ಕೂಟದಲ್ಲಿ ಸೇರ್ಪಡೆಗೊಂಡ ಸುಮಾರು 600 ಸಂಸ್ಥಾನಗಳ ಪೈಕಿ ಮೊದಲನೆಯದು ಜಮಖಂಡಿ ಸಂಸ್ಥಾನ ಎಂಬುದು ಗಮನಾರ್ಹ. ಸ್ವಾತಂತ್ರ್ಯದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಅಂದರೆ 1997 ಆಗಸ್ಟ್ 15ರಂದು ರಾಜ್ಯದ 23ನೇ ಜಿಲ್ಲೆಯಾಗಿ  ಬಾಗಲಕೋಟೆ ಹೊರಹೊಮ್ಮಿತು. ವಿಜಾಪುರ ಜಿಲ್ಲೆಯ ಹನ್ನೊಂದು ತಾಲ್ಲೂಕುಗಳಲ್ಲಿ ಬಾಗಲಕೋಟೆ, ಹುನಗುಂದ, ಬಾದಾಮಿ, ಬೀಳಗಿ, ಮುಧೋಳ ಹಾಗೂ ಜಮಖಂಡಿ ತಾಲ್ಲೂಕುಗಳನ್ನು ಸೇರಿಸಿ ಹೊಸ ಜಿಲ್ಲೆ ರಚಿಸಲಾಯಿತು.

 6575 ಚ.ಕಿ.ಮೀ ವಿಸ್ತೀರ್ಣ ಹೊಂದಿರುವ ಜಿಲ್ಲೆಯು ವಿಸ್ತೀರ್ಣದಲ್ಲಿ ರಾಜ್ಯದ 12ನೇ ಸ್ಥಾನದಲ್ಲಿದೆ. ಎರಡು ಕಂದಾಯ ಉಪ ವಿಭಾಗಗಳ, ಆರು ತಾಲ್ಲೂಕುಗಳ 18 ಹೋಬಳಿಗಳಲ್ಲಿ 623 ಜನವಸತಿ ಗ್ರಾಮಗಳು ಹಾಗೂ 4 ಜನವಸತಿ ಇಲ್ಲದ ಗ್ರಾಮಗಳು ಜಿಲ್ಲೆಯಲ್ಲಿವೆ. ಬಾಗಲಕೋಟೆ ಜಿಲ್ಲೆಯು ಐದು ಜಿಲ್ಲೆಗಳಿಂದ ಸುತ್ತುವರಿದಿದೆ. ಉತ್ತರಕ್ಕೆ ವಿಜಾಪುರ, ದಕ್ಷಿಣಕ್ಕೆ ಗದಗ, ಪೂರ್ವಕ್ಕೆ ರಾಯಚೂರು, ಕೊಪ್ಪಳ ಹಾಗೂ ಪಶ್ಚಿಮಕ್ಕೆ ಬೆಳಗಾವಿ ಜಿಲ್ಲೆಗಳಿವೆ.

ಆರು ತಾಲ್ಲೂಕು ಪಂಚಾಯ್ತಿಗಳು, 163 ಗ್ರಾಮ ಪಂಚಾಯ್ತಿಗಳು, 12 ಸ್ಥಳೀಯ ಸಂಸ್ಥೆಗಳು, 7 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬಾಗಲಕೋಟೆ ಜಿಲ್ಲೆಯ ಜನಸಂಖ್ಯೆ ಇತ್ತೀಚಿನ ಗಣತಿ ಪ್ರಕಾರ 19ಲಕ್ಷ. ಜಿಲ್ಲೆಯ 6,58,877 ಹೆಕ್ಟೇರ್ ಭೌಗೋಳಿಕ ಕ್ಷೇತ್ರದಲ್ಲಿ 4,67,407 ಹೆಕ್ಟೇರ್ ಕೃಷಿ ಭೂಮಿ. ಇದರಲ್ಲಿ 2,22,860 ಹೆಕ್ಟೇರ್ ನೀರಾವರಿ ಪ್ರದೇಶ, 81,126 ಹೆಕ್ಟೇರ್ ಅರಣ್ಯ ಪ್ರದೇಶವಿದೆ. ವಾರ್ಷಿಕ ವಾಡಿಕೆಯ ಮಳೆ ಪ್ರಮಾಣ 586 ಮಿ.ಮೀ.

ಕಬ್ಬು, ಕಡಲೆ, ಜೋಳ, ಭತ್ತ, ಮೆಕ್ಕೆಜೋಳ, ಸೂರ್ಯಕಾಂತಿ, ಹತ್ತಿ, ತೊಗರಿ, ಶೇಂಗಾ ಇಲ್ಲಿನ ಪ್ರಮುಖ ಬೆಳೆಗಳು. ಕೃಷಿ ಹಾಗೂ ನೇಕಾರಿಕೆ ಜಿಲ್ಲೆಯ ಜನರ ಪ್ರಮುಖ ಉದ್ಯೋಗಗಳು. ಕನ್ನಡ ಜಿಲ್ಲೆಯ ಮುಖ್ಯ ಭಾಷೆ. ಉರ್ದು, ಮರಾಠಿ, ರಾಜಸ್ತಾನಿ, ಗುಜರಾತಿ ಭಾಷಿಕರೂ ಜಿಲ್ಲೆಯಲ್ಲಿದ್ದಾರೆ. ಮೂರು ನದಿಗಳು ಹರಿಯುತ್ತಿದ್ದರೂ ಜಿಲ್ಲೆಯಲ್ಲಿ ಸಮರ್ಪಕ ನೀರಾವರಿ ವ್ಯವಸ್ಥೆ ಇಲ್ಲ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT