ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣಮ್ಮ ಅಧ್ಯಕ್ಷೆ, ಶ್ಯಾಮಲಾ ಉಪಾಧ್ಯಕ್ಷೆ

Last Updated 8 ಫೆಬ್ರುವರಿ 2011, 9:10 IST
ಅಕ್ಷರ ಗಾತ್ರ

ಯಾದಗಿರಿ: ಇಲ್ಲಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಹತ್ತಿಕುಣಿ ಕ್ಷೇತ್ರದಿಂದ ಆಯ್ಕೆಯಾಗಿರುವ ಕಾಂಗ್ರೆಸ್‌ನ ಶರಣಮ್ಮ ಬಸವರಾಜ ಕವಾಲ್ದಾರ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷೆಯಾಗಿ ಸೈದಾಪುರ ಕ್ಷೇತ್ರದ ಶ್ಯಾಮಲಾ ಪಾಂಡುರಂಗ ವಾರದ ಸಹ ಅವಿರೋಧವಾಗಿ ಆಯ್ಕೆಯಾದರು. ಮಧ್ಯಾಹ್ನ 12 ಗಂಟೆಗೆ ಆರಂಭವಾದ ಚುನಾವಣಾ ಪ್ರಕ್ರಿಯೆಯಲ್ಲಿ ಎರಡೂ ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಮಾತ್ರ ಸಲ್ಲಿಕೆ ಆಗಿದ್ದರಿಂದ ಚುನಾವಣಾ ಅಧಿಕಾರಿಗಳಾಗಿದ್ದ ಸಹಾಯಕ ಆಯುಕ್ತೆ ಕವಿತಾ ಮನ್ನಿಕೇರಿ, ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.

ಒಟ್ಟು 26 ಕ್ಷೇತ್ರಗಳಲ್ಲಿ 15 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದ್ದು, ಬಿಜೆಪಿ 10, ಜೆಡಿಎಸ್ ಒಂದು ಸ್ಥಾನ ಗಳಿಸಿವೆ. ಹೀಗಾಗಿ ತಾ.ಪಂ. ಅಧಿಕಾರ ಕಾಂಗ್ರೆಸ್ ತೆಕ್ಕೆಗೆ ಬಿದ್ದಂತಾಗಿದೆ.

ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯರಲ್ಲಿ ಶರಣಮ್ಮ ಮಾತ್ರ ಅರ್ಹತೆ ಪಡೆದಿದ್ದರಿಂದ ಅಧ್ಯಕ್ಷ ಸ್ಥಾನವು ಅನಾಯಾಸವಾಗಿ ಶರಣಮ್ಮ ಅವರಿಗೆ ಒಲಿದು ಬಂದಿತು. ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿದ್ದ ಹತ್ತಿಕುಣಿ ಕ್ಷೇತ್ರದಿಂದ ಆಯ್ಕೆಯಾಗಿರುವ ಶರಣಮ್ಮ ಕವಾಲ್ದಾರ ಅವರಿಗೆ ತಾ.ಪಂ. ಅಧ್ಯಕ್ಷ ಸ್ಥಾನದ ಮೀಸಲಾತಿ ವರದಾನವಾಗಿ ಪರಿಣಮಿಸಿತು.

ಇನ್ನೊಂದೆಡೆ ಸಾಮಾನ್ಯ ಮಹಿಳೆಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಎದುರಾಗಿತ್ತು. ಆದರೆ, ಕಾಂಗ್ರೆಸ್ ವರಿಷ್ಠರ ನಿರ್ಣಯದಂತೆ ಸೈದಾಪುರ ಕ್ಷೇತ್ರದಿಂದ ಆಯ್ಕೆಯಾಗಿರುವ ಶ್ಯಾಮಲಾ ವಾರದ ಅವರನ್ನು ಒಮ್ಮತದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಇದರಿಂದಾಗಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿಗಳನ್ನು ಹೊರತುಪಡಿಸಿ, ಬೇರಾರೂ ನಾಮಪತ್ರ ಸಲ್ಲಿಸದೇ ಇರುವುದರಿಂದ ಅವಿರೋಧ ಆಯ್ಕೆ ಸಾಧ್ಯವಾಯಿತು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷೆ-ಉಪಾಧ್ಯಕ್ಷೆಯನ್ನು ಸಹಾಯಕ ಆಯುಕ್ತೆ ಕವಿತಾ ಮನ್ನಿಕೇರಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಹಂಪಯ್ಯ, ತಹಸೀಲ್ದಾರ ಗುರು ಪಾಟೀಲ ಅಭಿನಂದಿಸಿದರು. ನಂತರ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮರಿಗೌಡ ಹುಲಕಲ್, ಪ್ರಧಾನ ಕಾರ್ಯದರ್ಶಿ ಸುರೇಶ ಜೈನ್ ಹಾಗೂ ಬೆಂಬಲಿಗರು, ನೂತನ ಅಧ್ಯಕ್ಷೆ-ಉಪಾಧ್ಯಕ್ಷೆಯರಿಗೆ ಹೂಮಾಲೆ ಹಾಕಿ ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT