ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣರ ಚಿಂತನೆ ವರ್ತಮಾನಕ್ಕೆ ಅವಶ್ಯ

Last Updated 27 ಫೆಬ್ರುವರಿ 2011, 19:40 IST
ಅಕ್ಷರ ಗಾತ್ರ

ಆನೇಕಲ್ : ಪ್ರಸ್ತುತ ಸಮಾಜದಲ್ಲಿ ಮೌಲ್ಯಗಳ ಕುಸಿತ ಉಂಟಾಗಿದ್ದು, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಶರಣರ ಚಿಂತನೆಗಳು ಅವಶ್ಯಕವಾಗಿವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹಾಗೂ ವಚನ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ತಾ.ನಂ.ಕುಮಾರಸ್ವಾಮಿ ನುಡಿದರು. ಪಟ್ಟಣದಲ್ಲಿ ಭಾನುವಾರ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಲಾಗಿದ್ದ ಬೆಂಗಳೂರು ನಗರ ಜಿಲ್ಲಾ ಎರಡನೇ ವಚನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

12ನೇ ಶತಮಾನದಲ್ಲಿ ಶರಣರು ವಚನಗಳ ಮೂಲಕ ಜನರಲ್ಲಿ ಜಾಗೃತಿ ಉಂಟು ಮಾಡಲು ಶ್ರಮಿಸಿದರು. ಆದ್ಯ ವಚನಕಾರ ದೇವ ದಾಸಿಮಯ್ಯ, ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ, ಸೇರಿದಂತೆ ನೂರಾರು ವಚನಕಾರರು ವಚನಗಳಲ್ಲಿ ತಮ್ಮ ಅನುಭವಗಳನ್ನು ಬಿಡಿಸಿಟ್ಟರು. ಸಂಕೇತಗಳಿಗೆ ಸ್ವರ ತುಂಬಿ ಸಾವಿರಾರು ವಚನಗಳನ್ನು ಸೃಷ್ಟಿಸಿದರು. ಹಬ್ಬ ಹರಿದಿನಗಳಲ್ಲಿ ಕಬ್ಬವಾಗಿ ಮೂಡಿದ ಜನಪದರು ಕೂಡ ಬದುಕನ್ನು ಕಟ್ಟಿಕೊಟ್ಟದ್ದು ವಚನಗಳ ಮೂಲಕ ಎಂದು ನುಡಿದರು.

ಜನರಲ್ಲಿ ಸಾಹಿತ್ಯ ಪ್ರೀತಿ ಕಡಿಮೆಯಾಗುತ್ತಿದೆ. ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ಅಂಡಾಗುಂಡಿ ಮಾಡಿಯಾದರೂ ಗಡಿಗೆ ತುಪ್ಪ ಕುಡಿಯಬೇಕು ಎಂಬ ಮನೋಭಾವನೆ ಬೆಳೆದಿದೆ ಹಾಗಾಗಿ ಸಮಾಜದಲ್ಲಿ ಮೌಲ್ಯಗಳ ಬೆಳವಣಿಗೆಗೆ ಗೋಷ್ಠಿಗಳು, ಚಿಂತನೆಗಳು ಸಹಕಾರಿಯಾಗಿವೆ ಎಂದು ನುಡಿದರು. ಗಮಕ ಕಲಾ ಪರಿಷತ್ ಅಧ್ಯಕ್ಷ ಬೇ.ಗೋ ರಮೇಶ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿ,

 ಗ್ರಾಮಾಂತರ ಪ್ರದೇಶದಲ್ಲಿ ವಚನ ಸಾಹಿತ್ಯ ಸಮ್ಮೇಳನ ನಡೆಸಿರುವುದು ಶ್ಲಾಘನೀಯ. ಬಸವಣ್ಣನವರ ಚಿಂತನೆಗಳು ಕೇವಲ ಒಂದು ಸಮಾಜಕ್ಕೆ ಒಂದು ರಾಜ್ಯಕ್ಕೆ ಸೀಮಿತವಾಗಿಲ್ಲ. ಶರಣರ ಚಿಂತನೆಗಳು ಸರ್ವ ಕಾಲೀಕವಾದವು ವಿಶ್ವ ವ್ಯಾಪಿಯಾದದು ಎಂದರು. ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ ಮಾತನಾಡಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಚನ ಸಾಹಿತ್ಯದ ಕಂಪನ್ನು ಹಬ್ಬಿಸಲು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.

ಕನ್ನಡ ಉಪನ್ಯಾಸಕ ಡಾ.ಎಸ್.ಹೆಚ್ ಭುವನೇಶ್ವರ ಅಧ್ಯಕ್ಷತೆಯಲ್ಲಿ ವಚನ ಸಾಹಿತ್ಯ ವಿಚಾರ ಗೋಷ್ಠಿ ನಡೆಯಿತು. ಪ್ರವಾಚಕಿ ಬಿ.ಕೆ.ಶಶಿಕಲಾ ಅವರು ಶಿವ ಶರಣೆಯರ ವಚನಗಳು ಎಂಬ ವಿಷಯದ ಬಗ್ಗೆ ಹಾಗೂ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕೆ.ಶಿವಣ್ಣ ಶರಣರು ಕಟ್ಟ ಬಯಸಿದ ಸಮಾಜ, ಮತ್ತು ಉಪನ್ಯಾಸಕ ವಾದಿ ರಾಜು ಆಧುನಿಕ ವಚನಕಾರರ ಒಲವು ನಿಲುವು ಎಂಬ ವಿಷಯಗಳ ಬಗ್ಗೆ ವಿಚಾರ  ಮಂಡಿಸಿದರು. ಉಪನ್ಯಾಸಕ ಡಾ.ಕೆ.ರಮಾನಂದ್ ಇತರರು ಪಾಲ್ಗೊಂಡಿದ್ದರು.

ನಾಟಕಕಾರ ಡಾ.ಮೋಹನ್ ಕುಮಾರ್ ಕದಂ ಅವರ ಅಧ್ಯಕ್ಷತೆಯಲ್ಲಿ ವಚನ ಚಿಂತನ ಗೋಷ್ಠಿ ನಡೆಯಿತು. ಸಾಹಿತಿ ಎಂ.ಎಸ್.ಶಶಿಕಲಾ ಗೌಡ, ಉಪನ್ಯಾಸಕರಾದ ಶಿವಕುಮಾರ ಪಾವಟೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಡೆಯೂರು ಮೂಡಲಗಿರಿ, ಶ್ರೀಶೈಲ ಮಸೂತೆ ವಿಷಯಗಳ ಮಂಡಿಸಿದರು. ಆಧುನಿಕ ವಚನಕಾರ ತಾ.ಸಿ.ತಿಮ್ಮಯ್ಯ ಅವರ ಅಧ್ಯಕ್ಷತೆಯಲ್ಲ ನಡೆದ ವಚನಗೋಷ್ಠಿಯಲ್ಲಿ ಸವಿರಾಜ್, ಆದೂರ್ ಪ್ರಕಾಶ್, ಬಿ.ಎಸ್.ಶ್ರೀನಾಥ್, ತುಷಾರಹಾರ, ನಾ.ಕು.ಗಣೇಶ್, ವಿಶಾಲಾರಾಧ್ಯ, ಶ್ರೀವಲ್ಲಿ ಅವರು ಸ್ವರಚಿತ ವಚನ ವಾಚಿಸಿದರು.ಬಿ.ವಿ.ಅರಳಪ್ಪನವರ್, ಡಿ.ಎ.ಅಂಬರೀಷ್, ಕಸ್ತೂರಿ ಕನ್ನಡ ಸಂಘದ ಅನಂತು, ಕೆ.ಚಂದ್ರಶೇಖರ್, ಬಸವರಾಜ ಬಾಳೆಕಾಯಿ, ಅನುಪಮ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT