ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣರ ನುಡಿಗೆ ರೇಖೆಯ ನಡೆ

Last Updated 20 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮೂವತ್ತಕ್ಕೂ ಹೆಚ್ಚು ವಚನಕಾರರು. ನೂರಕ್ಕೂ ಹೆಚ್ಚು ವಚನಗಳು. ಕೆಳಗೆ ಶರಣರ ನುಡಿ ಸಾಲು. ಮೇಲೆ ಅದರ ಸಚಿತ್ರ ರೂಪ. ನಾಡಿನ ಪ್ರಮುಖ ಕಲಾವಿದ ಜಿ.ಕೆ. ಶಿವಣ್ಣ ವಚನಗಳಿಗೆ ಚಿತ್ರ ರೂಪ ನೀಡಿದ್ದಾರೆ. ಅವರ ವಚನಾಧಾರಿತ ರೇಖಾಚಿತ್ರ ಸಂಪುಟ `ವಚನ ಚಿತ್ತಾರ~ ಇಂದು (ಅ. 21) ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ.

ಮೂಲತಃ ಚಳ್ಳಕೆರೆಯವರಾದ ಶಿವಣ್ಣ ಚಿಕ್ಕಂದಿನಿಂದಲೇ ವಚನಗಳಿಗೆ ಮಾರು ಹೋದವರು. ತಂದೆಯವರ ಅಧ್ಯಾತ್ಮ ಬದುಕು ಹಾಗೂ ಮಾತು ಮಾತಿಗೂ ಮೇಷ್ಟ್ರು ಹೇಳುತ್ತಿದ್ದ ಶರಣರ ಸಾಲುಗಳು ಅವರನ್ನು ವಚನಗಳತ್ತ ಆಕರ್ಷಿಸಿದವು. ಬೆಂಗಳೂರಿನ ಕೆನ್ ಕಲಾಶಾಲೆಯಲ್ಲಿ ಕಲಾಭ್ಯಾಸ ಮಾಡುತ್ತಿದ್ದಾಗ ಅವರ ವಚನ ಧ್ಯಾನಕ್ಕೊಂದು ಸ್ಪಷ್ಟತೆ ದಕ್ಕಿತು.
 
ತೊಂಬತ್ತರ ದಶಕದಲ್ಲಿ ಬಸವಣ್ಣನವರ ವಚನಗಳಿಗೆ ಚಿತ್ರ ಬರೆದು ಪ್ರದರ್ಶಿಸಿದರು. ಆಗ ಗೆಳೆಯರಿಂದ ದೊರೆತ ಪ್ರೋತ್ಸಾಹ ಅಪಾರ. ನಂತರ ಚಿಕ್ಕಮಗಳೂರಿನಲ್ಲಿ ನಡೆದ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಅರವತ್ತೆರಡು ವಚನ ಕಲಾಕೃತಿಗಳ ಪ್ರದರ್ಶನ.

ಈ ನಡುವೆ ಗುರುಗಳಾದ ಆರ್.ಎಂ. ಹಡಪದ, ಪ್ರೊ. ಎಂ.ಎಚ್. ಕೃಷ್ಣಯ್ಯ ಬೆನ್ನು ತಟ್ಟಿದರು. ಪ್ರದರ್ಶನ ಯಶಸ್ವಿಯಾಗುತ್ತ ಹೋಯಿತು. ಎಷ್ಟರ ಮಟ್ಟಿಗೆ ಎಂದರೆ ಅವರ ಇತರ ಕಲಾ ಪ್ರದರ್ಶನಗಳಿಗೆ ಒಂದು ತೂಕವಾದರೆ ವಚನ ಚಿತ್ತಾರ ಪ್ರದರ್ಶನಕ್ಕೇ ಮತ್ತೊಂದು ತೂಕ.

ಮುಂದೊಂದು ದಿನ ದೂರದರ್ಶನ ಕೂಡ ಕಲಾಕೃತಿಗಳ ಕುರಿತು ಕಾರ್ಯಕ್ರಮ ನೀಡಿತು. ಕಲಾಕೃತಿಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಬೇಕೆಂಬ ಅಭಿಪ್ರಾಯ ಕೇಳಿ ಬರುತ್ತಲೇ ಇದ್ದವು.
 
ಆದರೆ ಅದು ಸಾಧ್ಯವಾಗುತ್ತಿರುವುದು ಇದೀಗ. ಸುಮಾರು ಎರಡು ದಶಕಗಳ ಕಾಲ ಚಿತ್ರಿಸಿದ ಕಲಾಕೃತಿಗಳು ಇಲ್ಲಿವೆ. ಅತ್ತ ಅಮೂರ್ತಕ್ಕೂ ಸಲ್ಲುವ ಇತ್ತ ವಾಸ್ತವ ನೆಲೆಯಲ್ಲೂ ಬೆಳಗುವ ಕಲಾಕೃತಿಗಳು ಇವು. ಚಿತ್ರಕ್ಕೆ ಒಗ್ಗುವಂತಹ ವಚನಗಳನ್ನೇ ಕಲಾಕೃತಿಗೆ ಬಳಸಿಕೊಳ್ಳಲಾಗಿದೆ.
 
ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ, ದೇವರ ದಾಸಿಮಯ್ಯ ಮಾತ್ರವಲ್ಲದೆ ಜನಪ್ರಿಯರಲ್ಲದಿದ್ದರೂ ಮುಖ್ಯ ವಚನಕಾರರ ವಚನಗಳಿಗೆ ರೇಖಾರೂಪ ನೀಡಲಾಗಿದೆ. ದಾಸ ಸಾಹಿತ್ಯ, ಸರ್ವಜ್ಞನ ವಚನಗಳು ಹಾಗೂ ಜನಪದ ತ್ರಿಪದಿಗಳಿಗೂ ಇದೇ ರೀತಿ ರೇಖಾರೂಪ ನೀಡುವ ಇಂಗಿತ ಅವರದು.

ಎ-4 ಗಾತ್ರದಲ್ಲಿರುವ ಪುಸ್ತಕದ ಒಟ್ಟು ಪುಟಗಳು 104. ಬೆಲೆ 200 ರೂಪಾಯಿ. ಒನೆರಿಸ್ ಪ್ರಕಾಶನ ಸಂಪುಟವನ್ನು ಹೊರತರುತ್ತಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕ ಡಾ. ಸಿ. ಸೋಮಶೇಖರ್, ಕಲಾ ವಿಮರ್ಶಕ ಎಂ. ಎಚ್. ಕೃಷ್ಣಯ್ಯ, ಕಲಾವಿದ ಬಿ. ಜಿ. ಗುಜ್ಜಾರಪ್ಪ ಮತ್ತಿತರರು ಭಾಗವಹಿಸುತ್ತಿದ್ದಾರೆ.
 
ಹಿಂದೂಸ್ತಾನಿ ಗಾಯಕ ಪಂಚಾಕ್ಷರಯ್ಯ ಹಿರೇಮಠರಿಂದ ವಚನ ಗಾಯನ ಕೂಡ ಏರ್ಪಡಿಸಲಾಗಿದೆ. ಸಮಯ ಬೆಳಿಗ್ಗೆ: 10.30. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ: 9964952586.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT