ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣರ ನೆನೆದು...

Last Updated 12 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

‘ಒಬ್ಬ ಕಲಾವಿದನ ವೃತ್ತಿ ಜೀವನದಲ್ಲಿ ಕಾಡುವ ಪಾತ್ರಗಳು ಸಾಮಾನ್ಯವಾಗಿ ಮೂರ್‍ನಾಲ್ಕು ಇರಬಹುದು. ಆದರೆ ಈ ಪಾತ್ರ ಕಾಡುವ ಪಾತ್ರವಲ್ಲ, ಪರಿವರ್ತನೆಯಾಗುವ ಪಾತ್ರ’– ‘ಮಹಾಶರಣ ಹರಳಯ್ಯ’ ಚಿತ್ರದಲ್ಲಿ ಹರಳಯ್ಯನ ಪಾತ್ರದಲ್ಲಿ ನಟಿಸಿರುವ ನಟ ಶ್ರೀಧರ್ ಅವರ ಮಾತಿದು.

ಚಿತ್ರದ ಗೀತೆಗಳ ಧ್ವನಿಸುರುಳಿ ಬಿಡುಗಡೆಯ ಸಂದರ್ಭದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಸವಾದಿ ಶರಣದ ಸ್ಮರಣೆ ನಡೆಯಿತು. ‘ಇದು ನಮ್ಮ ನೆಲದ ಕಥೆ’ ಎಂದ ಶ್ರೀಧರ್, ಬಸವೇಶ್ವರರು ಮತ್ತು ಹರಳಯ್ಯನವರು ನಡೆದಾಡಿದ ಕಾರ್ಯಕ್ಷೇತ್ರಗಳಲ್ಲೂ ಚಿತ್ರವನ್ನು ಸೆರೆಹಿಡಿಯಲಾಗಿದೆ ಎಂದರು.

‘ಇಂಥ ಸಿನಿಮಾದ ಪ್ರಯತ್ನ ಬಹಳ ಹಿಂದೆಯೇ ಆಗಬೇಕಿತ್ತು’ ಎಂದವರು ಬಸವಣ್ಣನವರಾಗಿ ಅಭಿನಯಿಸಿರುವ ರಮೇಶ್ ಅರವಿಂದ್‌. ಚಿತ್ರಕ್ಕೆ ಖಂಡಿತಾ ಅತ್ಯುತ್ತಮವಾದ ಪ್ರತಿಕ್ರಿಯೆ ದೊರೆಯುವ ಆಶಾಭಾವ ಅವರದು.

ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಹಾಜರಿದ್ದ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ– ‘12ರಿಂದ 21ನೇ ಶತಮಾನಕ್ಕೆ ಬಂದಿದ್ದರೂ ಜಾತಿ ವ್ಯವಸ್ಥೆ ಜೀವಂತವಾಗಿದೆ’ ಎಂದು ವಿಷಾದಿಸಿದರು. ‘ಇತ್ತೀಚಿಗೆ ನಮ್ಮ ಅಕ್ಕ, ಬಾಡಿಗೆ ಮನೆ ಪಡೆಯಲು ಮುಂಗಡ ಹಣವನ್ನೂ ನೀಡಿದ್ದರು. ಆ ಮನೆಯವರಿಗೆ ಈಕೆ ನನ್ನ ಅಕ್ಕ ಎನ್ನುವುದು ತಿಳಿಯಿತು. ನಯವಾಗಿ ಮನೆ ನೀಡುವುದನ್ನು ನಿರಾಕರಿಸಿದರು’ ಎಂದವರು ಹೇಳಿದರು. ಪುಟ್ಟಣ್ಣ ಕಣಗಾಲರ ‘ನಾಗರಹಾವು’ ಚಿತ್ರೀಕರಣದ ವೇಳೆ, ತಾವು ನಟರಾಗಲು ಹಂಬಲಿಸಿ ಛಾಯಾಚಿತ್ರವನ್ನು ಅವರಿಗೆ ಕೊಟ್ಟಿದ್ದನ್ನು ನೆನಪಿಸಿಕೊಂಡರು.

ನಿರ್ದೇಶಕ ಪುರುಷೋತ್ತಮ್‌, ‘ಮಹಾಶರಣ ಹರಳಯ್ಯ’ ಚಿತ್ರಕ್ಕೆ ಸಿಕ್ಕ ಬೆಂಬಲದಿಂದ ಹರ್ಷಗೊಂಡಿದ್ದಾರೆ. ‘ಮುಂದೆಯೂ ಈ ರೀತಿಯ ಪ್ರಯತ್ನಗಳಾಗಬೇಕು. ಭಕ್ತಿ ಪ್ರಧಾನ ಚಿತ್ರಗಳನ್ನು ಜನರು ಸ್ವೀಕರಿಸುವುದಿಲ್ಲ ಎನ್ನುವ ಮಾತಿಗೆ ಈ ಚಿತ್ರ ಅಪವಾದವಾಗಲಿದೆ’ ಎಂದರು. ಜನವರಿ 10ರಂದು ಚಿತ್ರ ಬಿಡುಗಡೆಯಾಗಲಿದೆಯಂತೆ. ‘ಮಹಾಶರಣ ಹರಳಯ್ಯ ಟ್ರಸ್ಟ್’ ಉತ್ತರ ಕರ್ನಾಟಕದ ಭಾಗದಲ್ಲಿ ಪ್ರದರ್ಶಿಸಲು 1.50 ಕೋಟಿ ರೂಪಾಯಿಗೆ ಈಗಾಗಲೇ ಚಿತ್ರದ ಹಕ್ಕುಗಳನ್ನು ಖರೀದಿಸಿದೆ.

ನಿರ್ಮಾಪಕರಾದ ವೆಂಕಟೇಶ್, ದೇವರಾಜ್, ಛಾಯಾಗ್ರಹಕ ಗೌರಿವೆಂಕಟೇಶ್, ಹರಳಯ್ಯ ಟ್ರಸ್ಟ್‌ನ ಸದಾನಂದ ಬಿ. ತೆರದಾಳ, ಕಲಾವಿದರಾದ ಜೇಮ್ಸ್ ಶಿವು, ಸೂರ್ಯಕಲಾ, ಸ್ವಾತಿ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT