ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರ್ಪೋವಾ, ಅಜರೆಂಕಾ ಜಯಭೇರಿ

ಫ್ರೆಂಚ್ ಓಪನ್ ಟೆನಿಸ್: ನಿಶಿಕೊರಿಗೆ ಗೆಲುವು
Last Updated 1 ಜೂನ್ 2013, 19:59 IST
ಅಕ್ಷರ ಗಾತ್ರ

ಪ್ಯಾರಿಸ್ (ರಾಯಿಟರ್ಸ್‌): ರಷ್ಯಾದ ಮರಿಯಾ ಶರ್ಪೋವಾ ಮತ್ತು ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯ ನಾಲ್ಕನೇ ಸುತ್ತು ಪ್ರವೇಶಿಸಿದರು.

ರೋಲಂಡ್ ಗ್ಯಾರೋಸ್‌ನ ಫಿಲಿಪ್ ಚಾಟ್ರಿಯರ್ ಕೋರ್ಟ್‌ನಲ್ಲಿ ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯ ದಲ್ಲಿ ಹಾಲಿ ಚಾಂಪಿಯನ್ ಶರ್ಪೋವಾ 6-1, 7-5 ರಲ್ಲಿ ಚೀನಾದ ಜೀ ಜೆಂಗ್ ಅವರನ್ನು ಮಣಿಸಿದರು. ಮೂರನೇ ಶ್ರೇಯಾಂಕದ ಆಟಗಾರ್ತಿ ಅಜರೆಂಕಾ 4-6, 6-3, 6-1 ರಲ್ಲಿ ಫ್ರಾನ್ಸ್‌ನ ಅಲೈಜ್ ಕಾರ್ನೆಟ್ ಎದುರು ಪ್ರಯಾಸದ ಜಯ ಸಾಧಿಸಿದರು. ಆಸ್ಟ್ರೇಲಿಯಾ ಓಪನ್ ಟೂರ್ನಿಯ ಚಾಂಪಿಯನ್ ಅಜರೆಂಕಾ ಮೊದಲ ಸೆಟ್‌ನಲ್ಲಿ ಸೋಲು ಅನುಭವಿಸಿದರೂ ಮರುಹೋರಾಟ ನೀಡುವಲ್ಲಿ ಯಶಸ್ವಿಯಾದರು.

ಇಟಲಿಯ ಫ್ರಾನ್ಸಿಸ್ಕಾ ಶಿಯವೋನ್ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದರು. ಅವರು 6-2, 6-1 ರಲ್ಲಿ 13ನೇ ಶ್ರೇಯಾಂಕದ ಆಟಗಾರ್ತಿ ಫ್ರಾನ್ಸ್‌ನ ಮೇರಿಯೊನ್ ಬರ್ಟೊಲಿಗೆ ಆಘಾತ ನೀಡಿದರು. ಮಹಿಳೆಯ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಇತರ ಪಂದ್ಯಗಳಲ್ಲಿ ಅಮೆರಿಕದ ಸ್ಲೊವಾನೆ ಸ್ಟೀಫನ್ಸ್ 6-4, 6-7, 6-3 ರಲ್ಲಿ ನ್ಯೂಜಿಲೆಂಡ್‌ನ ಮರಿನಾ ಎರಕೋವಿಚ್ ಎದುರೂ, ಅಮೆರಿಕದ ಬೆಥನಿ ಮಟೆಕ್ ಸ್ಯಾಂಡ್ಸ್ 4-6, 6-1, 6-3 ರಲ್ಲಿ ಅರ್ಜೆಂಟೀನಾದ ಒರ್ಮಚೇವಾ ಮೇಲೂ, ರಷ್ಯಾದ ಮರಿಯಾ ಕಿರಿಲೆಂಕೊ 7-6, 7-5 ರಲ್ಲಿ ಸ್ವಿಟ್ಜರ್‌ಲೆಂಡ್‌ನ ಸ್ಟೆಫಾನಿ ವೊಗೇಲ್ ವಿರುದ್ಧವೂ ಗೆಲುವು ಪಡೆದರು.

ನಿಶಿಕೊರಿಗೆ ಗೆಲುವು: ಜಪಾನ್‌ನ ಕೀ ನಿಶಿಕೊರಿ ಪುರುಷರ ಸಿಂಗಲ್ಸ್ ವಿಭಾಗದ ನಾಲ್ಕನೇ ಸುತ್ತು ಪ್ರವೇಶಿಸಿದರು. ಶನಿವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಅವರು 6-3, 6-7, 6-4, 6-1 ರಲ್ಲಿ ಬೆನೊಟ್ ಪೇರ್ ವಿರುದ್ಧ ಗೆದ್ದರು. ಇನ್ನೊಂದು ಪಂದ್ಯದಲ್ಲಿ ರಷ್ಯಾದ ಮಿಖಾಯಿಲ್ ಯೂಜ್ನಿ 6-4, 6-4, 6-3 ರಲ್ಲಿ ಸರ್ಬಿಯದ ಜಾಂಜೊ ತಿಪ್ಸರೆವಿಕ್ ಅವರನ್ನು ಮಣಿಸಿದರು.

ಪೇಸ್ ಜೋಡಿಗೆ ಸೋಲು
ಪ್ಯಾರಿಸ್ (ಪಿಟಿಐ): ಭಾರತದ ಲಿಯಾಂಡರ್ ಪೇಸ್ ಮತ್ತು ಆಸ್ಟ್ರಿಯದ ಜರ್ಗನ್ ಮೆಲ್ಜರ್ ಜೋಡಿ ಇದೇ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ ಸೋಲು ಅನುಭವಿಸಿತು. ಶನಿವಾರ ನಡೆದ ಪಂದ್ಯದಲ್ಲಿ ಪೇಸ್- ಮೆಲ್ಜರ್ 7-5, 4-6, 6-7 ರಲ್ಲಿ ಉರುಗ್ವೆಯ ಪ್ಯಾಬ್ಲೊ ಕೆವಾಸ್ ಮತ್ತು ಅರ್ಜೆಂಟೀನಾದ ಹೊರಾಸಿಯೊ ಜೆಬಲ್ಲೊಸ್ ಎದುರು ಪರಾಭವಗೊಂಡರು.

ಇದರಿಂದ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಆಟಗಾರರ ಸವಾಲಿಗೆ ತೆರೆಬಿದ್ದಿತು. ಮಹೇಶ್ ಭೂಪತಿ ಮತ್ತು ರೋಹನ್ ಬೋಪಣ್ಣ ಜೋಡಿ ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿದ್ದರು. 

ಮಿಶ್ರ ಡಬಲ್ಸ್‌ನಲ್ಲೂ ನಿರಾಸೆ: ಭಾರತದ ಸ್ಪರ್ಧಿಗಳಿಗೆ ಮಿಶ್ರ ಡಬಲ್ಸ್‌ನಲ್ಲೂ ನಿರಾಸೆ ಎದುರಾಯಿತು. ಮಹೇಶ್ ಭೂಪತಿ ಮತ್ತು ಆಸ್ಟ್ರೇಲಿಯಾದ ಕ್ಯಾಸೆ ಡೆಲಾಕ್ವ 4-6, 6-1, 9-11 ರಲ್ಲಿ ಆಸ್ಟ್ರೇಲಿಯದ ಅನಸ್ತೇಸಿಯಾ ರೊಡಿಯೊನೋವಾ ಮತ್ತು ಮೆಕ್ಸಿಕೊದ ಸಾಂಟಿಯಾಗೊ ಗೊನ್ಸಾಲೆಸ್ ಎದುರು ಸೋತು ಹೊರಬಿದ್ದರು.

ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯದ ಆಶ್ಲೇ ಬಾರ್ಟಿ 4-6, 4-6 ರಲ್ಲಿ ಜೆಕ್ ಗಣರಾಜ್ಯದ ಲೂಸಿ ಹಡೆಕಾ ಮತ್ತು ಫ್ರಾಂಟಿಸೆಕ್ ಸೆರ್ಮಾಕ್ ಕೈಯಲ್ಲಿ ಪರಾಭವಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT