ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರ್ಮಾ ಜನ್ಮದಿನಾಚರಣೆ: ಶ್ರಮಿಕರ ಹಬ್ಬ

Last Updated 1 ಅಕ್ಟೋಬರ್ 2011, 9:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜಿಂದಾಬಾದ್ ಜಿಂದಾಬಾದ್ ಎಂದು ಕೂಗಿದರು ಡಾ. ಕಲಾಶೇಖರ ಪೂಜಾರ. ಅವರಿಗೆ ಉತ್ತರವಾಗಿ ಶರ್ಮಾಜಿ ಜಿಂದಾಬಾದ್ ಎಂದು ನೆರೆದವರು ಪ್ರತಿಯಾಗಿ ಹೇಳಿದರು. ಚಿರಾಯುವಾಗಲಿ ಶರ್ಮಾ ಎಂದರು ಪೂಜಾರ. ಅವರನ್ನು ಬೆಂಬಲಿಸಿ ಚಿರಾಯುವಾಗಲಿ ಶರ್ಮಾ ಎಂದರು ಸಭಿಕರು. ಇದಾದ ಮೇಲೆ ಮತ್ತೆ ಡಾ. ಕಲಾಶೇಖರ ಪೂಜಾರ ಅವರು, `ಹಸಿವಿನ ಜ್ವಾಲೆಗೆ ಉರಿದುರಿವ ಅನಾಥರೆಲ್ಲರೂ ಎದ್ದೇಳಿ, ಹಿಂಸೆಯ ಆಳ್ವಿಕೆ ಸಹಿಸದೆ...~ ಎಂದು ಕ್ರಾಂತಿಗೀತೆ ಹಾಡಿದರು.
 
ಹೀಗೆ `ದಿನಗೂಲಿಗಳ ದಿನಕರ~ ಎಂದೇ ಖ್ಯಾತರಾದ ಡಾ.ಕೆ.ಎಸ್. ಶರ್ಮಾ ಅವರ 78ನೇ ಜನ್ಮದಿನಾಚರಣೆ ಇಲ್ಲಿಯ ಗೋಕುಲ ರಸ್ತೆಯ ಬಸವೇಶ್ವರನಗರದ ವಿಶ್ವಚೇತನ ಆವರಣದಲ್ಲಿ ಶನಿವಾರ ಆರಂಭಗೊಂಡಿತು.

ಇದಕ್ಕೂ ಮೊದಲು ಶಾಲೆಯ ಮಕ್ಕಳೆಲ್ಲ ಶರ್ಮಾ ಅವರನ್ನು ಬ್ಯಾಂಡ್‌ನೊಂದಿಗೆ ಸಮಾರಂಭ ನಡೆಯುವ ಬೇಂದ್ರೆ ಭೂ ವನವರೆಗೆ ಕರೆತಂದರು. ಇದಾದ ಮೇಲೆ ದಿನಗೂಲಿ ನೌಕರರ ಮಹಾಮಂಡಲದ ಕ್ರಾಂತಿಸಂದೇಶದ ಸಂಕೇತವಾದ ಹಿಲಾಲನ್ನು ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.

ನಂತರ ಶರ್ಮಾ ಅವರ ಸಮಗ್ರ ಸಾಹಿತ್ಯ ದರ್ಶನ-6 ಮತ್ತು 7ನೇ ಸಂಪುಟಗಳಾದ ಕುವಲಯ ಕ್ರಾಂತಿ ಜ್ವಾಲೆ-1, ಕುವಲಯ ಕ್ರಾಂತಿ ಜ್ವಾಲೆ-2 ಬಿಡುಗಡೆ ಜೊತೆಗೆ ಮಾರ್ಕ್ಸ್‌ವಾದಿ ಸೈದ್ಧಾಂತಿಕ ಸಪ್ತ ಕೃತಿಗಳಾದ ಲೆನಿನ್-ಗಾಂಧಿ, ಮಾರ್ಕ್ಸ್-ಮಾರ್ಕ್ಸ್‌ವಾದ, ಲೆನಿನ್‌ವಾದ-ಗಾಂಧಿವಾದ, ಹೊಚಿಮಿನ್, ಮಹಿಳಾ ವಿಮೋಚನೆ, ಸಮಾಜವಾದಿ ಮಹಿಳೆ ಹಾಗೂ ಕ್ರಾಂತಿಯೋ ಪ್ರತಿಕ್ರಾಂತಿಯೋ ಕೃತಿಗಳು ಬಿಡುಗಡೆಗೊಂಡವು.

ಭಾರತ ಏಕತಾ ಆಂದೋಲನದ ಪ್ರಧಾನ ಕಾರ್ಯದರ್ಶಿ ಮಹಾದೇವ ಬಣಕಾರ, `ನಿರಂತರವಾಗಿ ಹೋರಾಡಿ 70 ಸಾವಿರ ದಿನಗೂಲಿ ನೌಕರರನ್ನು ಕಾಯಂಗೊಳಿಸಿದ ಹೆಗ್ಗಳಿಕೆ ಡಾ.ಶರ್ಮಾ ಅವರಿಗೆ ಸಲ್ಲುತ್ತದೆ~ ಎಂದರು. ಸಮಾರಂಭದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಾರ್ಕ್ಸಿಸ್ಟ್ ಆ್ಯಂಡ್ ಪ್ರ್ಯಾಕ್ಟೀಸ್ ನಿರ್ದೇಶಕ ಡಾ.ಕೆ. ರಾಘವೇಂದ್ರ ರಾವ್, ಕರ್ನಾಟಕ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಡಾ.ಬಿ. ಕೃಷ್ಣಮೂರ್ತಿ, ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಕುಲಸಚಿವ ಡಾ.ಬಿ. ಕೃಷ್ಣಮೂರ್ತಿ, ಶಿಕ್ಷಣ ತಜ್ಞ ಬಿ.ಎಫ್. ವಿಜಾಪುರ, ಹೋಮಿಯೋಪತಿ ವೈದ್ಯ ಡಾ.ವಿ.ಆರ್.ಬಿ. ಆಚಾರ್ಯ, ಹಿರಿಯ ಸಾಹಿತಿ ಡಾ.ವಾಮನ ಬೇಂದ್ರೆ, ರಾಜೇಂದ್ರ ಕುಲಕರ್ಣಿ ಹಾಗೂ ಜಿಗಳೂರು ಲಕ್ಷ್ಮಣ ಮೊದಲಾದವರು ಹಾಜರಿದ್ದರು.

ಕಾರ್ಲ್‌ಮಾರ್ಕ್ಸ್ ಪ್ರಶಸ್ತಿ: ಡಾ.ಕೆ.ಎಸ್. ಶರ್ಮಾ ಅಮೃತ ಮಹೋತ್ಸವ ಸಂದರ್ಭದಲ್ಲಿ ಆರಂಭಿಸಿದ ಕಾರ್ಲ್‌ಮಾರ್ಕ್ಸ್ ಪ್ರಶಸ್ತಿಯನ್ನು ಮಾರ್ಕ್ಸ್‌ವಾದಿ ಸಿದ್ಧಾಂತ ಹಾಗೂ ಕಾರ್ಯಾಚರಣೆಗೆ ಸಲ್ಲಿಸಿದ ಸೇವೆಗೆ ದೆಹಲಿಯ 94 ವರ್ಷದ ಪ್ರೊ. ರಣಧೀರ ಸಿಂಗ್ ಅವರಿಗೆ ಘೋಷಿಸಲಾಗಿದ್ದು, ಅನಾರೋಗ್ಯ ನಿಮಿತ್ತ ಅವರು ಬಾರದೆ ಇರುವುದರಿಂದ ದೆಹಲಿಗೆ ತೆರಳಿ ಪ್ರಶಸ್ತಿ ನೀಡಲಾಗುತ್ತದೆ ಎಂದು ನಿರೂಪಕ ಡಾ.ರವೀಂದ್ರ ಶಿರೋಳ್ಕರ ಪ್ರಕಟಿಸಿದರು.

`ವಿಶ್ವಶ್ರಮ ಚೇತನದ ಶರ್ಮಾ ಸಮೂಹ ಶಿಕ್ಷಣ ಸಂಸ್ಥೆಗಳ ಸಮಸ್ತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಒಲವಿನ ಬಳಗವು ಶರ್ಮಾ ಅವರ 78ನೇ ಜನ್ಮದಿನಾಚರಣೆಯನ್ನು `ಶರ್ಮಾ 78-ಸಂತಸದ ಸಮಾಗಮ~ವೆಂದು ಆಚರಿಸುತ್ತಿದ್ದೇವೆ. ಇಡೀ ನಾಡು ನವರಾತ್ರಿ ಆಚರಿಸುತ್ತಿದೆ. ದುಡಿಯುವ ಸ್ತ್ರೀ-ಪುರುಷರಿಗೆ ಶರ್ಮಾ ಜನ್ಮದಿನವೇ ನಾಡಹಬ್ಬ, ನುಡಿಹಬ್ಬ, ದುಡಿಯುವವರ ಹಬ್ಬ ಜೊತೆಗೆ ಶ್ರಮಜೀವಿಗಳ ಶುಭದಿನವೂ ಹೌದು~ ಎಂದು ಅವರು ವಿವರಿಸಿದರು.

ನಂತರ ರಾಜ್ಯದ ವಿವಿಧೆಡೆಯಿಂದ ಬಂದ ಅನೇಕರು ಶರ್ಮಾ ಅವರಿಗೆ ಹೂಗುಚ್ಛ ನೀಡಿ, ಮಾಲೆ ಹಾಕಿ, ನೆನಪಿನ ಕಾಣಿಕೆ ನೀಡುವ ಮೂಲಕ ಶುಭ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT