ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶವರ್ಮ್ ಪ್ರೇಮಿಗಳ ದಾಖಲೆ ಮೋಹ

Last Updated 25 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬಿಸಿಲು ನೆತ್ತಿ ಸುಡುತ್ತಿದ್ದರೂ ಆ ಮೈದಾನದಲ್ಲಿ ವಿದ್ಯಾರ್ಥಿಗಳೆಲ್ಲಾ ಸಾಲುಸಾಲಾಗಿ ನಗುತ್ತಾ ನಿಂತಿದ್ದರು. ಬಿಳಿಯ ಕಾಗದ ಹಾಸಿದ ಟೇಬಲ್ ಮುಂದೆ  200 ವಿದ್ಯಾರ್ಥಿಗಳು ನಿಂತು ಕಾತರಿಸುತ್ತಿದ್ದದ್ದು ಲಿಮ್ಕಾ ದಾಖಲೆಗಾಗಿ. `ಏನು ಮಾಡುತ್ತೀರಿ ಇಲ್ಲಿ' ಎಂದಾಗ, `ನೋಡಿ ಈ ಟೇಬಲ್ ಇಲ್ಲಿಂದ ಅಲ್ಲಿಯವರೆಗೆ ಇದೆ. ಇಷ್ಟುದ್ದದ ಶವರ್ಮ್ ರೋಲ್ (ಚಿಕನ್‌ನಿಂದ ತಯಾರಿಸುವ ರೋಲ್) ಮಾಡುತ್ತೇವೆ' ಎಂದು ಬ್ರಿಗೇಡ್ ರಸ್ತೆಯಲ್ಲಿರುವ ಸಂತ ಜೋಸೆಫ್ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಬಂದವರಿಗೆಲ್ಲಾ ಹೇಳುತ್ತಿದ್ದರು.

ಶವರ್ಮ್ ರೋಲ್ ಅರಬ್ ಖಾದ್ಯ. ಟರ್ಕಿಶ್ ಶೈಲಿಯಲ್ಲಿ ಇದನ್ನು ಚಿಕನ್ ಅಥವಾ ಕುರಿಮರಿಯ ಎಳೆಯ ಮಾಂಸದಿಂದ ತಯಾರಿಸಲಾಗುತ್ತದೆ.
ಟೇಬಲ್ ಹತ್ತಿರ ಇದ್ದ ವಿದ್ಯಾರ್ಥಿಗಳ ಅಚ್ಚ ಬಿಳುಪಿನ ಟಿ-ಶರ್ಟ್ ಮೇಲೆ ಲಾಂಗೆಸ್ಟ್ ಶವರ್ಮ್ ಎಂಬ ಬರಹ ಎದ್ದು ಕಾಣಿಸುತ್ತಿತ್ತು. 139.8 ಅಡಿ ಉದ್ದದ, 217 ಕೆ.ಜಿ. ತೂಕದ ಶವರ್ಮ್ ರೋಲ್ ಮಾಡಲು ಅವರು ಸಿದ್ಧರಾಗಿದ್ದರು. ಕಾಲೇಜಿನ ಪ್ರಿನ್ಸಿಪಾಲ್ ಡಾ. ಲಿಲಿ ಎನ್. ಡೇವಿಡ್ ಅವರ ಅನುಮತಿ ದೊರೆತೊಡನೆ ವಿದ್ಯಾರ್ಥಿಗಳಲ್ಲಿನ ಹುಮ್ಮಸ್ಸು ಹೆಚ್ಚಾಯಿತು. ಅಷ್ಟು ಹೊತ್ತಿಗೆ ಅವರೆಲ್ಲರೂ ನರ್ತಿಸಲು ಆರಂಭಿಸಿದರು.

ಟೇಬಲ್‌ಗೆ ಹಾಸಿರುವ ಪೇಪರ್ ಮೇಲೆ ಅಗಲವಾದ ಬ್ರೆಡ್ ತಂದು ಸುರಿದರು. ನೋಡುವುದಕ್ಕೆ ಚಪಾತಿ ಹಾಗೆ ಕಾಣಿಸುತ್ತಿತ್ತು. ಸಾಲಾಗಿ ನಿಂತ ವಿದ್ಯಾರ್ಥಿಗಳು ಅದರ ಬದಿಯನ್ನು ಜೋಡಿಸಲು ಶುರು ಮಾಡಿದರು. ಆಗ ಒಂದಿಷ್ಟು ವಿದ್ಯಾರ್ಥಿಗಳು ಪಾತ್ರೆಯಲ್ಲಿ ಅದರ ಮೇಲೆ ಹಾಕಲು ಕತ್ತರಿಸಿದ ತರಕಾರಿ, ಚಿಕನ್ ಪೀಸ್‌ಗಳನ್ನು ತಂದರು. ಸ್ವಲ್ಪ ಸ್ವಲ್ಪವೇ ಆ ಮಿಶ್ರಣಗಳನ್ನು ಹಾಕಿದಾಗ ವಿದ್ಯಾರ್ಥಿಗಳು ಅದನ್ನು ಚೆನ್ನಾಗಿ ಜೋಡಿಸಿಕೊಳ್ಳುತ್ತಿದ್ದರು.
ಇಷ್ಟೆಲ್ಲ ಕೆಲಸವಾದ ಮೇಲೆ ಅವರ ಮುಖದಲ್ಲಿ ಒಂದು ರೀತಿ ಆತಂಕ, ಕುತೂಹಲ ಕಾಣಿಸುತ್ತಿತ್ತು. ಅವರನ್ನು ಹುರಿದುಂಬಿಸಲು ಕಾಲೇಜಿನ ಪ್ರಾಧ್ಯಾಪಕರೆಲ್ಲಾ ಅಲ್ಲಿ ಸೇರಿದ್ದರು. ನಿಧಾನವಾಗಿ ಆ ರೋಲ್ ಮಡಚಲು ಶುರುಮಾಡಿದರು. ಅದು ಪೂರ್ಣಗೊಂಡಾಗ ಆ ವಿದ್ಯಾರ್ಥಿಗಳ ಮುಖದಲ್ಲಿ ಸಾರ್ಥಕ್ಯದ ನಗು. ಅಷ್ಟಕ್ಕೇ ಅವರ ಸಾಧನೆ ಮುಗಿದಿಲ್ಲ.

ರೋಲ್‌ನ್ನು ನಿಧಾನವಾಗಿ ಎತ್ತಿ ಹಿಡಿದಾಗ `ಲಿಮ್ಕಾ ದಾಖಲೆಯಲ್ಲಿ ಈವರೆಗೆ ಇದ್ದ ದಾಖಲೆಯನ್ನು ನೀವು ಮುರಿದಿದ್ದೀರಿ' ಎಂದು ಪ್ರಾಧ್ಯಾಪಕರು ಪ್ರಕಟಿಸಿದರು. ಹೋ ಎಂದು ಕೇಕೆ ಹಾಕುತ್ತಾ ರೋಲ್‌ನ್ನು ಸಾವಕಾಶ ಕೆಳಗಿಳಿಸಿ ಪ್ರಾಧ್ಯಾಪಕರನ್ನೂ ಸೇರಿಸಿಕೊಂಡು ಮಕ್ಕಳೆಲ್ಲರೂ ಕುಣಿದು ಸಂಭ್ರಮಿಸಿದರು. ಈ ಸಾಧನೆಗಾಗಿ ಕಾಲೇಜಿನೊಂದಿಗೆ ಕೈಗೂಡಿಸಿದ್ದು ನಗರದ `ರ‌್ಯಾಪ್ಜ್' ಹೋಟೆಲ್. ಹೋಟೆಲ್‌ನ ಕಾರ್ಯಕಾರಿ ನಿರ್ದೇಶಕ ಡಾ.ಎಂ.ಎ. ಬಾಬು ಕಾರ್ಯಕ್ರಮದ ರೂವಾರಿ.

`ಇದು ನನ್ನೊಬ್ಬನ ಸಾಧನೆ ಅಲ್ಲ, ವಿದ್ಯಾರ್ಥಿಗಳ ಸಾಧನೆ. ನಾನು ಕೇವಲ ಅವರಿಗೆ ಮಾರ್ಗದರ್ಶನ ನೀಡಿದ್ದೆ ಅಷ್ಟೇ. ಅವರಲ್ಲಿನ ಉತ್ಸಾಹ, ಆಸಕ್ತಿ ಇದಕ್ಕೆ ಕಾರಣ. ಕಳೆದ ಎರಡು ತಿಂಗಳಿನಿಂದ ನಾವು ಶ್ರಮಪಟ್ಟಿದ್ದೇವೆ. ಇದು ಲಿಮ್ಕಾ ದಾಖಲೆಗೆ ಸೇರುವ ಸಾಧ್ಯತೆ ಇದೆ' ಎಂದು ನಗು ಸೂಸಿದರು.
ಇಷ್ಟುದ್ದದ ಚಿಕನ್ ರೋಲ್‌ಗೆ ಏನೇನು ಬಳಸಿದ್ದೀರಿ ಎಂಬ ಪ್ರಶ್ನೆಗೆ ಉತ್ತರವಾಗಿ ತಮ್ಮಲ್ಲಿದ್ದ ಪಟ್ಟಿಯನ್ನು ಓದಿದರು: 52 ಕೆ.ಜಿ. ಚಿಕನ್, 20 ಕೆ.ಜಿ. ಟೊಮೆಟೋ, 28 ಕೆ.ಜಿ. ಸೊಪ್ಪು, 15 ಕೆ.ಜಿ. ದಪ್ಪ ಮೆಣಸಿನಕಾಯಿಯ ಉಪ್ಪಿನಕಾಯಿ, 20 ಕೆ.ಜಿ. ಸೌತೆಕಾಯಿ, 10 ಕೆ.ಜಿ. ಮಯೋ, 72 ಕೆ.ಜಿ. ಬ್ರೆಡ್. ಎಲ್ಲಾ ಸೇರಿ 217 ಕೆ.ಜಿ. ಸಾಮಗ್ರಿ!

`ಈ ರೋಲ್ ತಿನ್ನಬಹುದೇ' ಎಂಬ ಪ್ರಶ್ನೆಗೆ ಅವರು, `ನಾನೇ ತಿನ್ನುತ್ತೇನೆ ಆಮೇಲೆ ನೋಡಿ' ಎಂದು ಹೇಳಿದರು. `ಇಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದೆ. ವಿದ್ಯಾರ್ಥಿಗಳೆಲ್ಲಾ  ಕೈಗವಸು, ತಲೆಗೆ ಟೋಪಿ ಹಾಕಿದ್ದಾರೆ. ಹಾಗಾಗಿ ಇದು ಸಂಪೂರ್ಣವಾಗಿ ಪರಿಶುದ್ಧ ವಾತಾವರಣದಲ್ಲಿಯೇ ನಿರ್ಮಾಣವಾಗಿದೆ' ಎಂದು ಹೇಳಲು ಮರೆಯಲಿಲ್ಲ.

`ನನಗೆ ತುಂಬಾ ಖುಷಿಯಾಗುತ್ತಿದೆ. ಇದೇ ಮೊದಲ ಬಾರಿಗೆ ನಾನು ಈ ರೀತಿಯ ಸಾಧನೆಯಲ್ಲಿ ಭಾಗವಹಿಸಿದ್ದು. ಒಂದು ಸಾಧನೆ ಪೂರ್ಣಗೊಳಿಸಿದ ಖುಷಿ ನನಗಾಗುತ್ತಿದೆ' ಎಂದು ಬಿ.ಕಾಂ. ಅಂತಿಮ ವರ್ಷದ ವಿದ್ಯಾರ್ಥಿನಿ ಅಪೇಕ್ಷಾ  ಖುಷಿಯಿಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT