ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಸ್ತ್ರಚಿಕಿತ್ಸೆ-ಕಣ್ಣಲ್ಲಿ ನೋವು: ಜನರ ಪರದಾಟ

ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
Last Updated 7 ಡಿಸೆಂಬರ್ 2012, 6:30 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ನೇತ್ರ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ 23 ಜನರ ಪೈಕಿ 9 ಜನರಿಗೆ ಕಣ್ಣಲ್ಲಿ ತೀವ್ರ ನೋವು ಉಂಟಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿವೇಕಾನಂದ ಯುವ ವೇದಿಕೆ ಹಾಗೂ ಇತರ ಸಂಘಟನೆಯ ಕಾರ್ಯಕರ್ತರು ಗುರುವಾರ ತಾಲ್ಲೂಕು ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದರು.

ಇಲ್ಲಿಯ ಲಯನ್ಸ ಕ್ಲಬ್, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಹಾಗೂ ಜಿಲ್ಲಾ ಸಂಚಾರಿ ನೇತ್ರ ಚಿಕಿತ್ಸಾ ಘಟಕದ ಆಶ್ರಯದಲ್ಲಿ ಏರ್ಪಡಿಸಿದ್ದ ನೇತ್ರ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ 23 ಜನರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

“ಜಾಹೀರಾತಿನಲ್ಲಿ ತಿಳಿಸಿದಂತೆ ದೃಷ್ಟಿಹೀನರಿಗೆ ಐ.ಓ.ಎಲ್. ಲೆನ್ಸ್ ಅಳವಡಿಸದೇ ಶಸ್ತ್ರಚಿಕಿತ್ಸೆ ಮಾಡಿದ್ದು ಈ ಎಲ್ಲ ಅವಘಡಗಳಿಗೆ ಕಾರಣ. ತಪ್ಪಿತಸ್ಥ ನೇತ್ರ ಚಿಕಿತ್ಸಕರು ಹಾಗೂ ಸಂಘಟನೆಯ ವಿರುದ್ಧ ಕ್ರಮ ಜರುಗಿಸಬೇಕು. ಜಿಲ್ಲಾ ಆರೋಗ್ಯಾಧಿಕಾರಿಗಳು ಸ್ವತಃ ಸ್ಥಳಕ್ಕೆ ಬಂದು ತೊಂದರೆಗೊಳಗಾದವರಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು” ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಮಧ್ಯೆ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ಸೋಮಲಿಂಗಪ್ಪ ಗೆಣ್ಣೂರ ಅವರು ಪ್ರತಿಭಟನಾಕಾರರಿಂದ ತೀವ್ರ ವಿರೋಧ ಎದುರಿಸಬೇಕಾಯಿತು. “ಧರಣಿ ಕೈಬಿಟ್ಟು ರೋಗಿಗಳ ಚಿಕಿತ್ಸೆಗೆ ಸಹಕರಿಸಿರಿ” ಎಂದು ಗೆಣ್ಣೂರ ಮನವಿ ಮಾಡಿಕೊಂಡರಾದರೂ ಪ್ರಯೋಜನವಾಗಲಿಲ್ಲ. ಜಿಲ್ಲಾ ಆರೋಗ್ಯಾಧಿಕಾರಿ  ಸ್ಥಳಕ್ಕಾಗಮಿಸುವವರೆಗೆ ತಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರಲ್ಲದೇ ತಹಶೀಲ್ದಾರರ ಮಾತನ್ನು ಕೇಳಲು ನಿರಾಕರಿಸಿದರು. ಆಗ ತಹಶೀಲ್ದಾರರು ವಾಪಸ್ ಹೋದರು.

ಪ್ರತಿಭಟನೆಯಲ್ಲಿ ಶರಣು ಬೂದಿಹಾಳಮಠ, ಎಚ್.ಬಿ.ಸಾಲಿಮನಿ, ಅರುಣಕುಮಾರ ನರಸರೆಡ್ಡಿ, ಶಫೀಕ್ ನದಾಫ, ಸಿದ್ರಾಮ ಹರಿಂದ್ರಾಳ, ಸಿದ್ದಣ್ಣ ಚಲವಾದಿ, ಸಿದ್ರಾಮ ಗುಡದಿನ್ನಿ, ದಾನಯ್ಯ ಹಿರೇಮಠ, ಬಾಪುಗೌಡ ಪಾಟೀಲ, ವೀರೇಶ ಮಂಕಣಿ ಪಾಲ್ಗೊಂಡಿದ್ದರು.

ಹೋರಾಟ ಅಬಾಧಿತ: “ತಹಶೀಲ್ದಾರರು ಪ್ರತಿಭಟನಾಕಾರರೊಡನೆ ಸೌಜನ್ಯದಿಂದ ಮಾತನಾಡಲಿಲ್ಲ. ರೋಗಿಗಳಿಗೆ ತಮ್ಮ ಸಂಘಟನೆಯ ವತಿಯಿಂದ ಹುಬ್ಬಳ್ಳಿ, ಬೆಳಗಾವಿ ಅಥವಾ ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತದೆ. ಆರೋಗ್ಯ ಇಲಾಖೆಯ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವವರೆಗೆ ಹೋರಾಟ ಮಾಡಲಾಗುತ್ತದೆ” ಎಂದು ಸಂಘಟನೆಯ ಮುಖಂಡ ಅರವಿಂದ ಕೊಪ್ಪ ಅವರು `ಪ್ರಜಾವಾಣಿ' ಪ್ರತಿನಿಧಿಗೆ ಹೇಳಿದರು.

“ರೋಗಿಗಳಿಗೆ ಅಗತ್ಯ ಚಿಕಿತ್ಸೆ ದೊರಕಿಸುವ ಉದ್ದೇಶದಿಂದ ಅಂಬ್ಯುಲನ್ಸ್ ಸಮೇತ ನಾನು ಅಲ್ಲಿಗೆ ಹೋಗಿದ್ದೆ, ಆದರೆ ಪ್ರತಿಭಟನಾಕಾರರು ನನಗೆ ಮಾತನಾಡಲು ಅವಕಾಶ ನೀಡಲಿಲ್ಲ. ಮೊದಲು ರೋಗಿಗಳಿಗೆ ಚಿಕಿತ್ಸೆ ಕೊಡಿಸೋಣ, ನಂತರ ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳುವ ಕುರಿತು ಚರ್ಚಿಸೋಣ ಎಂದರೂ ಕೇಳಲಿಲ್ಲ” ಎಂದು ತಹಶೀಲ್ದಾರ ಗೆಣ್ಣೂರ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT