ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರದ ಶ್ರೀ ಚರಬಸವೇಶ್ವರ

Last Updated 16 ಜುಲೈ 2012, 19:30 IST
ಅಕ್ಷರ ಗಾತ್ರ

ಹೈದರಾಬಾದ್ ಕರ್ನಾಟಕದ ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣಕ್ಕೆ ತಾಗಿ ಪಶ್ಚಿಮ ದಿಕ್ಕಿನಲ್ಲಿ ಸುಮಾರು 10 ಕಿಮಿ ಬೆಟ್ಟಗಳ ಸಾಲು. ಭಗವಾನ ಬುದ್ಧ ಜಗತ್ತಿನೆಲ್ಲೆಡೆ ಸಂಚರಿಸಿ ವಿಶ್ರಾಂತಿಗಾಗಿ ಈ ಬೆಟ್ಟವನ್ನೇ ಆಯ್ದುಕೊಂಡಂತೆ ಇಲ್ಲಿ ಮಲಗಿಬಿಟ್ಟಿದ್ದಾನೆ.
 
ಏಕೆಂದರೆ ಒಂದು ಪಾರ್ಶ್ವದಿಂದ ನೋಡಿದರೆ ಇಡೀ ಬೆಟ್ಟವೆ ಮಲಗಿರುವ ಬುದ್ಧನಂತೆ ಕಾಣುತ್ತದೆ.

ಇಲ್ಲಿನ ಬೆಟ್ಟಗಳಲ್ಲಿ ಕಾಲ ಕಳೆದ ಅನೇಕ ಸಂತರು, ಮಹಾತ್ಮರು ತಮ್ಮ ಜೀವಿತಾವಧಿಯಲ್ಲಿ ಸಮಾಜಕ್ಕೆ ಮಾರ್ಗದರ್ಶನ ಮಾಡಿ ಹೋಗಿದ್ದಾರೆ.

ಅಂಥವರಲ್ಲೊಬ್ಬರು ಚರಬಸವೇಶ್ವರರು. ಅವರ ಹೆಸರಿನ ದೇವಸ್ಥಾನ ಬೆಟ್ಟಗಳ ಮಧ್ಯದಲ್ಲಿ ರಾರಾಜಿಸುತ್ತ ಮುಕುಟಪ್ರಾಯವಾಗಿದೆ.

ಸುಮಾರು 150 ವರ್ಷದ ಹಿಂದೆ ಆಗಿ ಹೋದ ಚರಬಸವೇಶ್ವರರು ಕಾಯಕ ಮತ್ತು ದಾಸೋಹ ತತ್ವವನ್ನು ಪ್ರತಿಪಾದಿಸಿದ ಅನುಭಾವಿಗಳು. ಅವರು ಲಿಂಗೈಕ್ಯರಾದ ಮೇಲೆ ಅವರ ಗದ್ದುಗೆಯನ್ನೇ ಭಕ್ತಾದಿಗಳು ದೇವಸ್ಥಾನವಾಗಿ ಪರಿವರ್ತಿಸಿದ್ದಾರೆ.

ವಿಶಾಲವಾದ ಕೆರೆಯಂಗಳದಲ್ಲಿ ಅತ್ಯಂತ ಸುಂದರವಾಗಿ ನಿರ್ಮಾಣಗೊಂಡ ಈ ಮಂದಿರದಲ್ಲಿ  ಗರ್ಭಗುಡಿಯ ಮೇಲೆ ಪೂರ್ವಾಭಿಮುಖವಾಗಿ ಚರಬಸವೇಶ್ವರರ 2 ಅಡಿ ಸುಂದರವಾದ ಅಮೃತಶಿಲೆಯ ಮೂರ್ತಿ ಇದೆ.

ಇಲ್ಲಿಗೆ ಬರುವ ಯಾತ್ರಿಕರಿಗಾಗಿ ದಿನಂಪ್ರತಿ ದಾಸೋಹದ ವ್ಯವಸ್ಥೆಯಿದೆ. ಅಂದು ಚರಬಸವೇಶ್ವರರು ಪ್ರಾರಂಭಿಸಿದ ಈ ದಾಸೋಹ ಸೇವೆ ಒಂದೇ ಒಂದು ದಿನವೂ ನಿಂತಿಲ್ಲ.

ಮಂದಿರದಲ್ಲಿ ನಿತ್ಯ ಬೆಳಿಗ್ಗೆ ಮಹಾರುದ್ರಾಭಿಷೇಕ, ತ್ರಿಕಾಲ ಪೂಜೆ, ಅರ್ಚನೆ, ಭಜನೆ ನಡೆಯುತ್ತವೆ. ವಿಶೇಷ ಎಂದರೆ ಇಲ್ಲಿ ಸೇವಾ ಪಟ್ಟಿ ಮಾತ್ರವಲ್ಲ ಹುಂಡಿಯೂ ಇಲ್ಲ.
ಯುಗಾದಿ ಅಮಾವಾಸ್ಯೆಯಾದ ಐದು ದಿನಗಳಿಗೆ ಅದ್ಧೂರಿ ಜಾತ್ರೆ, ರಥೋತ್ಸವ ನಡೆಯುತ್ತದೆ.

ಆಗ ದನಗಳ ಜಾತ್ರೆ, ಕುಸ್ತಿ ಇನ್ನಿತರ ಗ್ರಾಮೀಣ ಕ್ರೀಡೆಗಳೂ ಇರುತ್ತವೆ. ಪ್ರತಿ ವರ್ಷ ವಿಜಾಪುರ, ಬೆಳಗಾವಿ, ಮಹಾರಾಷ್ಟ್ರದ ವಿವಿಧ ಕಡೆಗಳಿಂದ ಶ್ರೀಶೈಲಕ್ಕೆ ಪಾದಯಾತ್ರೆ ಹೋಗುವ ಭಕ್ತರ ತಂಡಗಳು ಒಂದು ದಿನ ಇಲ್ಲಿಯೇ ತಂಗಿ ಭೋಜನ ಪ್ರಸಾದ ಸ್ವೀಕರಿಸಿ ಮುಂದೆ ಸಾಗುವುದು ವಾಡಿಕೆ.

ಗುಲ್ಬರ್ಗಕ್ಕೆ ಹೋಗುವ ಹೆದ್ದಾರಿಯಲ್ಲಿ ಶಹಾಪುರ ಪಟ್ಟಣಕ್ಕೆ ಹೊಂದಿಕೊಂಡು ಒಂದು ಕಿಮಿ ಒಳಗೆ ಈ ದೇವಸ್ಥಾನ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT