ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿ ಪಾಲನಾ ಸಮಿತಿ ವಜಾಕ್ಕೆ ಆಗ್ರಹ

ಹಿಂದೂ ಸಂಘಟನೆಗಳಿಂದ ಸಾಮಾಜಿಕ ಬಹಿಷ್ಕಾರದ ಎಚ್ಚರಿಕೆ
Last Updated 9 ಜನವರಿ 2013, 8:32 IST
ಅಕ್ಷರ ಗಾತ್ರ

ಬಾಗಲಕೋಟೆ: ಹಿಂದೂ ಸಮಾಜ, ಸಂಘಟನೆಗಳ ಮೇಲೆ ಭವಿಷ್ಯದಲ್ಲಿ ಮತೀಯ ಆಕ್ರಮಣ ಮಾಡುವವರ ಮೇಲೆ ಸಾಮಾಜಿಕ ಬಹಿಷ್ಕಾರ ಹಾಕುವುದಾಗಿ ಹಿಂದೂ ಸಂಘಟನೆಗಳ ಮುಖಂಡರು ಇಲ್ಲಿ ಜಿಲ್ಲಾಡಳಿತದ ಗಮನಕ್ಕೆ ತಂದರು.

ನಗರದಲ್ಲಿ ಇತ್ತೀಚೆಗೆ ಆರ್‌ಎಸ್‌ಎಸ್ ಪಥ ಸಂಚಲನದ ಮೇಲೆ ನಡೆದ ಕಲ್ಲು ತೂರಾಟ, ಬಳಿಕ ಬೈಕುಗಳಿಗೆ ಬೆಂಕಿ ಹಚ್ಚಿದ ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರನ್ನು ಹಿಂದೂ ಸಂಘಟನೆಗಳ ಮುಖಂಡರು ಮಂಗಳವಾರ ಕಚೇರಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.

ನಗರದಲ್ಲಿ ಅಹಿತಕರ ಘಟನೆ ನಡೆಯಲು ಕಾರಣರಾದವರನ್ನು ಕೂಡಲೇ ಬಂಧಿಸಿ, ಕಾನೂನು ಕ್ರಮಕೈಗೊಳ್ಳಬೇಕು. ಸಮಾಜದ ಶಾಂತಿ ಕದಡುವ ಕೃತ್ಯ ನಗರದಲ್ಲಿ ನಡೆದರೇ ಅಂತಹ ಮತೀಯ ದುಷ್ಕರ್ಮಿಗಳ ವಿರುದ್ಧ ಸಾಮಾಜಿಕ ಬಹಿಷ್ಕಾರ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿಎಚ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಗಣ್ಣ ಕುಪ್ಪಸ್ತ ಮಾತನಾಡಿ, `ಬಾಗಲಕೋಟೆಯಲ್ಲಿ ಈ ಹಿಂದೆ ಯಾವುದೇ ಧರ್ಮದವರು ಮೆರವಣಿಗೆ ನಡೆಸಿದರೂ ಎಲ್ಲೂ ಅಹಿತಕರ ಘಟನೆ ನಡೆದಿಲ್ಲ. ಆದರೆ, ಇತ್ತೀಚೆಗೆ ಹಿಂದೂ ಸಂಘಟನೆಗಳು ಮೆರವಣಿಗೆ, ಜಾಥಾ, ಪಥಸಂಚಲನ ನಡೆಸುವ ಸಂದರ್ಭದಲ್ಲಿ ಪಟಾಕಿ ಸಿಡಿಸಬಾರದು, ವಾದ್ಯ ನುಡಿಸಬಾರದು, ಪಥಸಂಚಲನ ಹೋಗಬಾರದು ಎಂದು ಪೊಲೀಸ್ ಇಲಾಖೆ ಅನಗತ್ಯ ನಿರ್ಬಂಧ ಹಾಕುತ್ತಿದೆ' ಎಂದು ಆಕ್ಷೇಪ ವ್ಯಕ್ತಪಡಿಸಿದರು.

`ಅನ್ಯ ಧರ್ಮಿಯರ ಪ್ರಾರ್ಥನಾ ಮಂದಿರಗಳ ಎದುರು ಹಿಂದೂ ಧರ್ಮಿಯರ ಮೆರವಣಿಗೆ ಹೋಗುವುದನ್ನು ನಿರ್ಬಂಧಿಸುವುದಾದರೇ, ಹಿಂದೂ ದೇವಾಲಯಗಳ ಎದುರೂ ಅನ್ಯ ಧರ್ಮಿಯರ ಮೆರವಣಿಗೆ ಹೋಗಲು ಪೊಲೀಸರು ಅವಕಾಶ ನೀಡಬಾರದು' ಎಂದು ಹೇಳಿದರು.

`ಆರ್‌ಎಸ್‌ಎಸ್ ಪಥ ಸಂಚಲನ ಕಿಲ್ಲಾ ಓಣಿಯಲ್ಲಿ ಸಾಗದಂತೆ ದುಷ್ಕರ್ಮಿಗಳು ವಿರೋಧ ವ್ಯಕ್ತಪಡಿಸಿ, ಪೊಲೀಸರ ಕಣ್ಣೆದುರೇ ಕಲ್ಲು ತೂರಾಟ ನಡೆದರೂ ಇದುವರೆಗೆ ಕಿಡಿಗೇಡಿಗಳನ್ನು ಬಂಧಿಸದಿರುವುದು ಖಂಡನೀಯ' ಎಂದರು.

ಕಿಲ್ಲಾ ಓಣಿಯಲ್ಲಿ ಆರ್‌ಎಸ್‌ಎಸ್ ಪಥ ಸಂಚಲನ ಸಾಗಲು ಅನುಮತಿ ಪಡೆದಿರಲಿಲ್ಲ ಎಂದು ಹೇಳಲಾಗುತ್ತಿದೆ. ಪಥಸಂಚಲನ ನಡೆಸಲು, ಧಾರ್ಮಿಕ ಮೆರವಣಿಗೆ ನಡೆಸಲು ಯಾರ ಅನುಮತಿ ಏಕೆ? ಇದೇನು ಪಾಕಿಸ್ತಾನವೇ? ಎಂದು ಪ್ರಶ್ನಿಸಿದರು.

ನಗರದಲ್ಲಿ ನಡೆದ ಅಹಿತಕರ ಘಟನೆ ನಿಯಂತ್ರಿಸುವಲ್ಲಿ ವಿಫಲರಾದ ಮತ್ತು ಒಂದು ಕೋಮಿನವರನ್ನು ತುಷ್ಟೀಕರಿಸಲು ಯತ್ನಿಸಿರುವ ಪೊಲೀಸ್ ಅಧಿಕಾರಿಗಳನ್ನು ಅಮಾನತು ಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಶಾಂತಿ ಸಮಿತಿ ವಜಾಗೊಳಿಸಿ
ನಗರಸಭೆ ಮಾಜಿ ಸದಸ್ಯ ಗುಂಡುರಾವ್ ಶಿಂಧೆ ಮಾತನಾಡಿ, ನಗರದಲ್ಲಿ ಅಸ್ತಿತ್ವದಲ್ಲಿರುವ ಶಾಂತಿ ಪಾಲನಾ ಸಮಿತಿ ಪ್ರಯೋಜನಕ್ಕೆ ಬಾರದವರಿಂದ ತುಂಬಿರುವುದರಿಂದ ತಕ್ಷಣ ಸಮಿತಿಯನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಶಾಂತಿ ಪಾಲನಾ ಸಮಿತಿಯಲ್ಲಿರುವ ಸದಸ್ಯರು ತಂಟೆಕೋರರನ್ನು ಹದ್ದುಬಸ್ತಿನಲ್ಲಿಡುವಷ್ಟು ಪ್ರಭಾವಶಾಲಿಗಳಲ್ಲ. ನಗರದಲ್ಲಿ ಅಹಿತಕರ ಘಟನೆಗಳು ನಡೆದಾಗ ದುಷ್ಕರ್ಮಿಗಳನ್ನು ಎಳೆದು ತರುವಂತ ಸಾಮಾರ್ಥ್ಯವಿರುವವರನ್ನು ಶಾಂತಿ ಸಮಿತಿಗೆ ಸದಸ್ಯರನ್ನಾಗಿ ಆಯ್ಕೆ ಮಾಡಿ ಎಂದು ಜಿಲ್ಲಾಧಿಕಾರಿ ಅವರಿಗೆ ಸಲಹೆ ನೀಡಿದರು.

ಧ್ವನಿ ವರ್ಧಕ ನಿರ್ಬಂಧಕ್ಕೆ ಆಗ್ರಹ
ಬಾಗಲಕೋಟೆಯ ನವನಗರ, ವಿದ್ಯಾಗಿರಿಯಲ್ಲಿ ಪ್ರಾರ್ಥನಾ ಮಂದಿರಗಳಲ್ಲಿ ಅನಧಿಕೃತವಾಗಿ ಧ್ವನಿವರ್ಧಕಗಳನ್ನು ಬಳಸಲಾಗುತ್ತಿದೆ. ಇದರಿಂದ ಶಾಲೆ, ಕಾಲೇಜು, ಆಸ್ಪತ್ರೆ ಮತ್ತು ಸುತ್ತಮುತ್ತಲಿನ ನಿವಾಸಿಗಳಿಗೆ ಕಿರಿಕಿರಿಯಾಗುತ್ತಿದೆ. ತಕ್ಷಣ ಅನಧಿಕೃತವಾಗಿ ಧ್ವನಿವರ್ಧಕ ಬಳಸುತ್ತಿ ರುವುದನ್ನು ಜಿಲ್ಲಾಡಳಿತ ನಿರ್ಬಂಧಿಸಬೇಕು ಎಂದು ಸಂಗಣ್ಣ ಕುಪ್ಪಸ್ತ ಒತ್ತಾಯಿಸಿದರು.

ಪರಿಹಾರ ನೀಡಿ
ಹಿಂದೂ ಸಂಘಟನೆಯ ಮುಖಂಡ ಅಶೋಕ ಮುತ್ತಿನಮಠ ಮಾತನಾಡಿ, ದುಷ್ಕರ್ಮಿಗಳು ಹಚ್ಚಿದ ಬೆಂಕಿಯಿಂದ ಸುಟ್ಟು ಹೋಗಿರುವ ಬೈಕುಗಳ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.

ಪ್ರಾರ್ಥನಾ ಮಂದಿರಕ್ಕೆ ಬೆಂಕಿ ಹಚ್ಚಿರುವ ಪ್ರಕರಣ ಅನುಮಾನಸ್ಪದವಾಗಿದೆ. ಅನಗತ್ಯವಾಗಿ ಹಿಂದೂ ಸಂಘಟನೆಗಳ ಮೇಲೆ ಗೂಬೆ ಕೂರಿಸುವ ಯತ್ನ ನಡೆದಿದೆ ಎಂದು ಆರೋಪಿಸಿದರು.

ಸಾಮರಸ್ಯಕ್ಕೆ ಸಲಹೆ
ಸಾಮರಸ್ಯ ಕಾಪಾಡಲು ಎಲ್ಲರೂ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ ಮನವಿ ಮಾಡಿದರು.ನಗರದಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ತಪ್ಪಿತ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೇ ಕ್ರಮಕೈಗೊಳ್ಳಲು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಪಥಸಂಚಲನ, ಮೆರವಣಿಗೆ ನಡೆಸುವ ಮುನ್ನ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಗಮನಕ್ಕೆ ತಂದು ಅನುಮತಿ ಪಡೆಯಬೇಕು ಎಂದು ಅವರು ಸ್ಪಷ್ಟಪಡಿಸಿದರು.ಸುಟ್ಟಿರುವ ಬೈಕುಗಳಿಗೆ ಜಿಲ್ಲಾಡಳಿತದಿಂದ ಯಾವುದೇ ಪರಿಹಾರ ನೀಡಲಾಗುವುದಿಲ್ಲ. ಪೊಲೀಸ್ ವರದಿ ಆಧರಿಸಿ ಸರ್ಕಾರದಿಂದ ಪರಿ ಹಾರ ಕೊಡಿಸಲು ಯತ್ನಿಸುವುದಾಗಿ ತಿಳಿಸಿದರು.

ಹಿಂದೂ ಧರ್ಮದ ವಿವಿಧ ಸಮಾಜದ ಮುಖಂಡರಾದ ಡಾ. ಬಾಬು ರಾಜೇಂದ್ರ ನಾಯಕ, ಸುರೇಶ ಪೂಜಾರ, ಸಂಗಪ್ಪ ಹಡಪದ, ಜೆ.ಬಿ.ದೇವದಾಸ, ಚಂದ್ರಕಾಂತ ತೇಲ್ಕರ, ಡಾ.ಸಿ.ಎಸ್.ಪಾಟೀಲ, ಎಂ.ಡಿ.ಕಾಂಬಳೆ, ಹಣಮಂತ ಘೇರಡ, ದ್ಯಾವಪ್ಪ ರಾಕುಂಪಿ, ಆರ್.ಎಲ್.ಕಟಗೇರಿ, ಮಲ್ಲೇಶಪ್ಪ ಜಿಗಜಿನ್ನಿ, ವಿ.ವಿ.ಪತ್ತಾರ, ಯಲ್ಲಪ್ಪ ಬೆಂಡಿಗೇರಿ, ಎಸ್.ಜಿ.ರಾಯ್ಕರ, ಶಿವಾನಂದ ನಾರಾ, ಯಲ್ಲಪ್ಪ ಅಂಬಿಗೇರ, ಘನಶ್ಯಾಮ ಧರಕ, ನಗರಸಭೆ ಅಧ್ಯಕ್ಷೆ ಭೀಮಾಬಾಯಿ ವಡ್ಡರ, ಸದಸ್ಯರಾದ ರಾಜೂ ಬಳೂಲಮಠ, ಸದಾನಂದ ನಾರಾ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT