ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿ ಪ್ರಶಸ್ತಿಯ ಉಡುಗೊರೆ

Last Updated 15 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಯೂರೋಪಿಯನ್ ಒಕ್ಕೂಟಕ್ಕೆ(ಇಸಿ) 2012ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿರುವುದು ಸರಿಯಷ್ಟೆ. ಇದಕ್ಕೆ ಪ್ರಶಂಸೆ ಜೊತೆಗೆ ಟೀಕೆಗಳೂ ಭಾರಿ ಪ್ರಮಾಣದಲ್ಲಿ ವ್ಯಕ್ತವಾಗಿರುವುದು ನಿರೀಕ್ಷಿತವೇ.
 
ಕಳೆದ ಆರು ದಶಕಗಳಲ್ಲಿ ಯೂರೋಪ್‌ನಲ್ಲಿ ಶಾಂತಿ ಪ್ರತಿಷ್ಠಾಪನೆಗೆ ಯೂರೋಪಿಯನ್ ಒಕ್ಕೂಟ ವಹಿಸಿದ ಪಾತ್ರವನ್ನು ಈ ಪ್ರಶಸ್ತಿಯ ಮೂಲಕ ಗೌರವಿಸಲಾಗುತ್ತಿದೆ ಎಂಬುದು ನೊಬೆಲ್ ಪ್ರಶಸ್ತಿ ಸಮಿತಿಯ ಹೇಳಿಕೆ.

1870ರಿಂದ 1945ರವರೆಗೆ ಮೂರು ಯುದ್ಧಗಳನ್ನು ಯೂರೋಪ್ ಖಂಡ ಕಂಡಿತ್ತು. ಆದರೆ 1950ರ ದಶಕದಲ್ಲಿ `ಯೂರೋಪಿಯನ್ ಒಕ್ಕೂಟ~ ಅಸ್ತಿತ್ವಕ್ಕೆ ಬಂದ ನಂತರ, ಅದರ ಸದಸ್ಯ ರಾಷ್ಟ್ರಗಳ ನಡುವೆ ಯಾವುದೇ ಯುದ್ಧಗಳು ನಡೆದಿಲ್ಲವೆಂಬುದೇ ದೊಡ್ಡ ಸಾಧನೆ ಎಂಬುದನ್ನು ಪ್ರಶಸ್ತಿ ನೀಡಿಕೆ ಸಂದರ್ಭದಲ್ಲಿ ಪರಿಗಣಿಸಲಾಗಿದೆ. ನಿಜ.

ಯೂರೋಪಿಯನ್ ರಾಷ್ಟ್ರಗಳ ನಡುವೆ ಸಹಕಾರ ಸಂಬಂಧ ಹಾಗೂ ಒಟ್ಟಾದ ಯೂರೋಪಿಯನ್ ಅಸ್ಮಿತೆಯನ್ನು ರೂಪಿಸುವಲ್ಲಿ ಯೂರೋಪಿಯನ್ ಒಕ್ಕೂಟದ ಪಾತ್ರ ಮಹತ್ವದ್ದು. ಹೀಗಿದ್ದೂ, ಪ್ರಶಸ್ತಿ ನಿರ್ಧಾರ ಕೈಗೊಳ್ಳುವಾಗ, `ಶಾಂತಿ~ಯ ಅರ್ಥ ವ್ಯಾಖ್ಯಾನವನ್ನು ಸೀಮಿತ ನೆಲೆಯಲ್ಲಿ ಪರಿಗಣಿಸಿದಂತೆ ಕಾಣಿಸುತ್ತದೆ.
 
ಬಹುಶಃ `ಯುದ್ಧ ಇಲ್ಲ~ ಎಂದಾದಲ್ಲಿ ಅದು `ಶಾಂತಿ~ ಎಂದು ಪರಿಗಣಿಸಿದಂತೆ ತೋರುತ್ತದೆ. ಈ ಪ್ರಕ್ರಿಯೆಯಲ್ಲಿ, ಆರ್ಥಿಕ ಸಂಘರ್ಷ ಹಾಗೂ ಅಶಾಂತಿಗೆ ಕೊಡುಗೆ ನೀಡಬಲ್ಲಂತಹ ಯೂರೋಪಿಯನ್ ಒಕ್ಕೂಟದ  ನೀತಿಗಳನ್ನು ನಿರ್ಲಕ್ಷಿಸಲಾಗಿದೆ.

ಈ ನೀತಿಗಳು ಭವಿಷ್ಯದ ಯುದ್ಧಗಳಿಗೂ ದಾರಿಯಾಗಬಹುದಾದ ಸಾಧ್ಯತೆಗಳಿವೆ. ಮುಖ್ಯವಾಗಿ ಯೂರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರಗಳಲ್ಲಿನ ಆಂತರಿಕ ಯುದ್ಧಗಳು, ಬಂಡಾಯಗಳು ಹಾಗೂ ಅಶಾಂತಿಯನ್ನು ನೊಬೆಲ್ ಸಮಿತಿ ಪೂರ್ಣ ನಿರ್ಲಕ್ಷಿಸಿರುವುದು ಪ್ರಶ್ನಾರ್ಹ.

 ಕಳೆದ ಹಲವು ವರ್ಷಗಳಿಂದ ವಿಶ್ವದಲ್ಲಿ ಶಾಂತಿ ನಿರ್ಮಾಣಕ್ಕಾಗಿ ಶ್ರಮಿಸಿದವರ ಸಾಧನೆಗಳನ್ನು ಗೌರವಿಸುವ ಪ್ರಶಸ್ತಿಯಾಗಿ ನೊಬೆಲ್ ಶಾಂತಿ ಪ್ರಶಸ್ತಿ ಉಳಿದುಕೊಂಡಿಲ್ಲ. ಪ್ರಶಸ್ತಿ ಪಡೆದುಕೊಳ್ಳುವವರು ಭರವಸೆಯ ಶಕ್ತಿಯಾಗಿ ರೂಪುಗೊಳ್ಳಲಿ ಎಂಬ ಆಶಯವೇ ಮುಖ್ಯವಾದಂತಾಗಿದೆ.

2009ರಲ್ಲಿ ಅಮೆರಿಕ ಅಧ್ಯಕ್ಷರಾಗಿ ಒಂದು ವರ್ಷ ಕಳೆಯುವ ಮೊದಲೇ ಬರಾಕ್ ಒಬಾಮಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿತ್ತು. ಈಗ ಯೂರೋಪಿಯನ್ ಒಕ್ಕೂಟದ ಪತನ, ತೀವ್ರವಾದಿ ರಾಷ್ಟ್ರೀಯತಾ ಸಿದ್ಧಾಂತಗಳಿಗೆ ಕಾರಣವಾಗುತ್ತದೆ ಎಂಬ ಎಚ್ಚರಿಕೆಯನ್ನು ನೊಬೆಲ್ ಸಮಿತಿ ನೀಡಿರುವುದನ್ನು ಗಮನಿಸಬೇಕು.
 
ಏಕೆಂದರೆ ಹಲವಾರು ಯೂರೋಪಿಯನ್ ರಾಷ್ಟ್ರಗಳಲ್ಲಿನ ಆರ್ಥಿಕ ಬಿಕ್ಕಟ್ಟು, ಯೂರೋಪಿಯನ್ ಒಕ್ಕೂಟದ ಭವಿಷ್ಯದ ಬಗೆಗೇ ಅನುಮಾನಗಳ ಎಳೆಗಳನ್ನು ಎತ್ತಿದೆ. ಈ ಹಂತದಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ, ಕುಸಿಯುತ್ತಿರುವ ಯೂರೋಪಿಯನ್ ಒಕ್ಕೂಟಕ್ಕೆ ಹೊಸ ದಿಕ್ಕು ನೀಡಿದಂತಾಗಿದೆ.

ಆದರೆ ನಿಜಕ್ಕೂ ಶಾಂತಿ ಕಾಪಾಡುವ ಶಕ್ತಿಯಾಗಿ ಯೂರೋಪಿಯನ್ ಒಕ್ಕೂಟ ಉದಯವಾಗಬೇಕಾದಲ್ಲಿ ತನ್ನ ಅತಿಯಾದ ಸ್ವಹಿತಾಸಕ್ತಿಯಿಂದ ಅದು ಮೊದಲು ಹೊರಬರಬೇಕಾಗಿದೆ. ಇತರರ ದಮನ, ಶೋಷಣೆಯಿಂದಲೇ ಬಹಳ ಕಾಲದಿಂದ ಯೂರೋಪ್ ತನ್ನ ಸಂಪತ್ತು ಬೆಳೆಸಿಕೊಂಡಿದೆ. ಇದು ಬದಲಾಗಬೇಕು.
 
ವಿಶ್ವದ ಇತರ ಭಾಗಗಳಲ್ಲಿನ ಜನರನ್ನೂ ಅದರ ನೀತಿಗಳು ಒಳಗೊಳ್ಳದಿದ್ದಲ್ಲಿ ಯೂರೋಪಿಯನ್ ಒಕ್ಕೂಟ ಸುಸ್ಥಿರ ಶಾಂತಿ ಹಾಗೂ ಸಮೃದ್ಧಿ ಸಾಧಿಸುವುದು ಸಾಧ್ಯವಿಲ್ಲ. ನೊಬೆಲ್ ಶಾಂತಿ ಪ್ರಶಸ್ತಿ ಈ ನೋಟದಲ್ಲಿನ ಬದಲಾವಣೆಗೆ ನಾಂದಿ ಹಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT