ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿ ಮಾತುಕತೆ: ಉಗ್ರ ಗುಂಪುಗಳಿಗೆ ಚಿದಂಬರಂ ಸಲಹೆ

Last Updated 6 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹಿಂಸಾಚಾರ ತ್ಯಜಿಸಿ ಸಂಧಾನ ಪ್ರಕ್ರಿಯೆಗೆ ಮುಂದಾದರೆ ಮಾತ್ರ ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂಬುದು ಉಗ್ರಗಾಮಿಗಳಿಗೆ, ಅದರಲ್ಲೂ ಮುಖ್ಯವಾಗಿ ಈಶಾನ್ಯ ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿರುವ ಗುಂಪುಗಳಿಗೆ ಮನವರಿಕೆಯಾಗಿದೆ ಎಂದು ಗೃಹ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.

`ಕಳೆದ ಎರಡು ವರ್ಷಗಳಿಂದ ಕೇಂದ್ರ ಸರ್ಕಾರ ಆಯಾಯ ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಉಗ್ರರ ದಮನಕ್ಕೆ ಹಲವು ಕಾರ್ಯಾಚರಣೆಗಳನ್ನು ಜಾರಿಗೆ ತಂದಿದೆ. ಸರ್ಕಾರವನ್ನು ನಡುಗಿಸಲು ಈ ಗುಂಪುಗಳು ನಡೆಸುವ ಯಾವುದೇ ಪ್ರಯತ್ನ ಯಶಸ್ಸು ಕಾಣದು. ಶಾಂತಿ ಮಾತುಕತೆ ಮಾತ್ರ ಅವರ ಸಮಸ್ಯೆಗಳಿಗೆ ಉತ್ತರ ನೀಡುತ್ತದೆ~ ಎಂದು ಅವರು ಸ್ಪಷ್ಟಪಡಿಸಿದರು.

ಈಶಾನ್ಯ ರಾಜ್ಯಗಳ 7ನೇ ವ್ಯವಹಾರ ಶೃಂಗಸಭೆಯನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದ ಅವರು, `ಹೆಚ್ಚಿನ ಉಗ್ರಗಾಮಿ ಗುಂಪುಗಳು ಸಂಧಾನ ಮಾತುಕತೆಗೆ ಆಸಕ್ತಿ ತೋರಿಸುತ್ತಿದ್ದು, ಈಶಾನ್ಯ ಭಾಗದ ಬಹುತೇಕ ಪ್ರದೇಶ ಹಿಂಸಾಚಾರದಿಂದ ಮುಕ್ತಗೊಂಡಿದೆ. ಆದರೂ ಸುಲಿಗೆಯೇ ಈ ಗುಂಪುಗಳ ಮುಖ್ಯ ಆರ್ಥಿಕ ಮೂಲವಾದ್ದರಿಂದ, ಹಣಕ್ಕಾಗಿ ಅಪಹರಣದಂತಹ ಪ್ರಕರಣಗಳು ಕೆಲವೆಡೆ ಮುಂದುವರಿದಿವೆ~ ಎಂದು ಕಳವಳ ವ್ಯಕ್ತಪಡಿಸಿದರು.

`ಸುಲಿಗೆ ತಡೆಗಟ್ಟಲು ರಾಜ್ಯ ಸರ್ಕಾರಗಳು ಕೈಗೊಂಡಿರುವ ಕ್ರಮಗಳಿಗೆ ಕೇಂದ್ರ ಸೂಕ್ತ ಬೆಂಬಲ ನೀಡುತ್ತಿದ್ದು, ಕಳೆದ ವರ್ಷ ಇಂಥ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ. ಈ ವರ್ಷ ಈ ಸಂಖ್ಯೆ ಮತ್ತಷ್ಟು ಇಳಿಯಲಿದೆ~ ಎಂದು ವಿಶ್ವಾಸ ವ್ಯಕ್ತಪಡಿಸಿದರು.

`ಪಶ್ಚಿಮ ಬಂಗಾಳದಲ್ಲಿ ಗೂರ್ಖಾ ಜನಮುಕ್ತಿ ಮೋರ್ಚಾ, ಅಸ್ಸಾಂನ ಯುಪಿಡಿಎಸ್ ಜತೆ ರಾಜ್ಯ ಸರ್ಕಾರಗಳು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ. ಅಲ್ಲದೆ ಅಸ್ಸಾಂನ ಇನ್ನೂ ಎರಡು ಗುಂಪುಗಳೊಂದಿಗೆ ಇನ್ನೊಂದು ಒಪ್ಪಂದಕ್ಕೆ ಸಹಿ ಹಾಕಲಿವೆ. ಉಲ್ಫಾ ಕೂಡ ಮಾತುಕತೆಯ ಹಾದಿಯಲ್ಲಿದೆ~ ಎಂದು ಅವರು ಮಾಹಿತಿ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT