ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿ ಸುವ್ಯವಸ್ಥೆ ಕಾಪಾಡಲು ಮನವಿ

Last Updated 6 ಆಗಸ್ಟ್ 2013, 5:51 IST
ಅಕ್ಷರ ಗಾತ್ರ

ಮಡಿಕೇರಿ: ನಗರದ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ನಡೆಯಲಿರುವ ರಂಜಾನ್ ಹಬ್ಬದ ಕುರಿತು ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಪ್ರಮುಖರನ್ನೊಳಗೊಂಡ ಸಭೆ ಸೋಮವಾರ ನಡೆಯಿತು.

ಹಿಂದೂ ಸಂಘಟನೆಯ ಪ್ರಮುಖ ಅರುಣ್ ಶೆಟ್ಟಿ ಮಾತನಾಡಿ, ರಂಜಾನ್ ಹಬ್ಬದಲ್ಲಿ ಮೆರವಣಿಗೆ ತೆರಳುವ ಸಂದರ್ಭ ಇತರೆ ಅನ್ಯ ಧರ್ಮಿಯರ ಭಾವನೆಗೆ ದಕ್ಕೆ ಉಂಟಾಗದಂತೆ ಮೆರವಣಿಗೆ ತೆರಳುವಂತೆ ಕ್ರಮ ವಹಿಸಬೇಕೆಂದು ಮನವಿ ಮಾಡಿದರು.

ಪ್ರಮುಖರಾದ ಮೇದಪ್ಪ ಮಾತನಾಡಿ, ರಂಜಾನ್ ಸಂದರ್ಭ ರಾಜಾಸೀಟು ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಅತಿಯಾದ ವೇಗವಾಗಿ ವಾಹನ ಚಲಾಯಿಸುವುದು, ನಾಗರೀಕರ ಎದುರು ಅಸಭ್ಯವಾಗಿ ವರ್ತಿಸುವ ಪ್ರಕರಣ ವರ್ಷಂಪ್ರತಿ ಕಂಡು ಬರುತ್ತಿದ್ದು, ಈ ಬಗ್ಗೆ ಕಡಿವಾಣ ಹಾಕಲು ಪೊಲೀಸರು ಮುಂದಾಗಬೇಕಿದೆ ಎಂದರು.

ಬದ್ರಿಯಾ ಜಮಾಯತ್‌ನ ಅಧ್ಯಕ್ಷ ಎಂ.ಇ. ಹನೀಫ್ ಮಾತನಾಡಿ, ಈ ಬಾರಿ ಕೊಡಗಿನಲ್ಲಿ ಅತ್ಯಧಿಕ ಮಳೆ ಬೀಳುತ್ತಿರುವ ಕಾರಣ ಮೆರವಣಿಗೆ ತೆರಳುವುದು ಸಂಶಯವಾಗಿದೆ. ಒಂದು ವೇಳೆ ತೆರಳಿದರೂ ಕೂಡ ಶಾಂತಿ ಕಾಪಾಡಲಾಗುವುದು ಎಂದರು.
ಈ ಬಾರಿ ಗುರುವಾರ ಅಥವಾ ಶುಕ್ರವಾರ ರಂಜಾನ್ ಆಚರಣೆ ನಡೆಯಲಿದ್ದು, ಎಲ್ಲರ ಬೆಂಬಲ ಅಗತ್ಯವಾಗಿದೆ ಎಂದರು.

ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಪ್ರಕಾಶ್‌ಗೌಡ ಮಾತನಾಡಿ, ಮಡಿಕೇರಿಯಲ್ಲಿ ಯಾವುದೇ ಹಬ್ಬಗಳ ಸಂದರ್ಭ ಅನ್ಯ ಧರ್ಮದ ಬಾಂಧವರ ನಡುವೆ ಕಲಹ ಉಂಟಾಗಿಲ್ಲ. ಇದು ಮುಂದೆಯೂ ಕೂಡ ಮುಂದುವರೆಯಲಿ ಎಂದರು.

ಈ ಬಾರಿ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಯ ವತಿಯಿಂದ ವಿಡಿಯೋ ಚಿತ್ರೀಕರಣ ಮಾಡಲಾಗುವುದು. ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ರಂಜಾನ್ ದಿನದಂದು ಅಹಿತಕರ ಘಟನೆ ಹಾಗೂ ಅತಿ ವೇಗದ ವಾಹನ ಚಾಲನೆ, ಮಹಿಳೆಯರ ಹಾಗೂ ನಾಗರಿಕರ ಎದುರು ಅಸಭ್ಯ ವರ್ತನೆ ಮಾಡುತ್ತಿರುವ ಬಗ್ಗೆ ಕಂಡು ಬಂದರೆ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಅವರು ಸೂಚಿಸಿದರು.

ಸಭೆಯಲ್ಲಿ ಪೊಲೀಸ್ ಇಲಾಖೆಯ ಚೆನ್ನೆಗೌಡ, ಮಂಜುನಾಥ್ ಹಾಗೂ ಜಾಮೀಯಾ ಮಸೀದಿಯ ಅಧ್ಯಕ್ಷ ಲತೀಫ್, ಸದಸ್ಯರಾದ ನಜೀರ್ ಅಹಮದ್, ಸಿರಾಜ್ ಅಹಮದ್, ಮಕ್ಕ ಮಸೀದಿಯ ಅಧ್ಯಕ್ಷ ಹಕ್ಕಿಂ ಹಾಗೂ ಹಿಂದೂ ಪರ ಸಂಘಟನೆಯ ಪ್ರಮುಖರು ಹಾಜರಿದ್ದರು.

ಸಾರ್ವಜನಿಕರ ಸಹಕಾರ ಅಗತ್ಯ 
ನಾಪೋಕ್ಲು ವರದಿ: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ವತಿಯಿಂದ ಸಮೀಪದ  ಮೂರ್ನಾಡುವಿನ ಸಹಕಾರ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಈಚೆಗೆ ಸಾರ್ವಜನಿಕ ಕುಂದು ಕೊರತೆಗಳ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿತ್ತು.

ಸಭೆಯಲ್ಲಿ ಮಡಿಕೇರಿ ಗ್ರಾಮಾಂತರ ಪಿಎಸ್‌ಐ ಎಸ್.ಎನ್. ಶ್ರೀಕಾಂತ್ ಸಾರ್ವಜನಿಕರ ಅಹವಾಲಗುಳನ್ನು ಆಲಿಸಿ, ಪ್ರತಿಕ್ರಿಯಿಸಿದರು. ಮೂರ್ನಾಡು ಪಟ್ಟಣದಲ್ಲಿ ವಾಹನ ದಟ್ಟಣೆ ಸಮಸ್ಯೆಯನ್ನು ಮಳೆಗಾಲ ಮುಗಿದ ತಕ್ಷಣ ಬಗೆಹರಿಸುವುದಾಗಿ ಅವರು ಭರವಸೆ ನೀಡಿದರು.

ಮೂರ್ನಾಡಿನ ಉಪಠಾಣೆಯಲ್ಲಿರುವ ಸಿಬ್ಬಂದಿ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಮೇಲಾಧಿಕಾರಿ ಗಳಿಗೆ ಮನವಿ ಮಾಡುವುದಾಗಿ ತಿಳಿಸಿದರು. ಶಾಲಾ-ಕಾಲೇಜುಗಳಲ್ಲಿ ಗಾಂಜಾ ಮುಂತಾದ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಸದ್ಯದಲ್ಲೇ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಶಾಲಾ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಾಲಾ ಮಕ್ಕಳ ಆಟೊಗಳಲ್ಲಿ ಕೇವಲ 4 ಮಕ್ಕಳನ್ನು ಮಾತ್ರ ಕರೆತರುವ ವ್ಯವಸ್ಥೆಯಿದ್ದು ಇದಕ್ಕೆ ಪೋಷಕರು ವಿದ್ಯಾಸಂಸ್ಥೆಯವರು ಕಾಳಜಿ ವಹಿಸಿಬೇಕು. ಶಾಲಾ ಮಕ್ಕಳ ಆಟೋಗಳಲ್ಲಿ ಹಳದಿ ಬಣ್ಣದ ಬಾವುಟ ಇರಲೇಬೇಕು ಮತ್ತು ಶಾಲಾ ಮಕ್ಕಳ ಕ್ಯಾಬ್ ಮತ್ತು ವ್ಯಾನ್‌ಗಳಲ್ಲಿ ಶಾಲೆಯ ಹಾಗೂ ಚಾಲಕನ ದೂರವಾಣಿ ಸಂಖ್ಯೆಗಳನ್ನು ಬರೆಯಬೇಕು. ಇಂತಹ ನಿಯಮಗಳನ್ನು ಪಾಲಿಸಬೇಕು ಎಂದರು.

ಕೊಂಡಂಗೇರಿಗೆ ಬಾಡಿಗೆ ವಾಹನಗಳು ಈಗ ಬಸ್ಸು ನಿಲ್ದಾಣದ ಹತ್ತಿರವೇ ಬಂದು ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದು ಇದರಿಂದ ಆಟೊಗಳಿಗೆ ಮತ್ತು ಇತರ ಬಾಡಿಗೆ ವಾಹನಗಳಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದರು.

ಕೊಂಡಂಗೇರಿಗೆ ತೆರಳುವ ವಾಹನಗಳು ಕೊಂಡಂಗೇರಿ ರಸ್ತೆಯಿಂದಲೇ ಜನರನ್ನು ಕರೆದುಕೊಂಡು ಹೋಗುವಂತೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹಾಗೂ ಕೊಡವ ಸಮಾಜದ ಬಳಿ ಪಾರ್ಕಿಂಗ್ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಪಟ್ಟಣದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕಾರ ನೀಡಿ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಪುದಿಯೊಕ್ಕಡ ಪೊನ್ನು ಮುತ್ತಪ್ಪ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಸದಸ್ಯ ವಿ.ವಿ. ಹರೀಶ್ ಕುಮಾರ್, ಚೇಂಬರ್ ಆಫ್ ಕಾಮರ್ಸ್‌ನ ಸ್ಥಾನೀಯ ಸಮಿತಿಯ ಅಧ್ಯಕ್ಷ ಬಡುವಂಡ ಅರುಣ್ ಅಪ್ಪಚ್ಚು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಕೆ. ಪೂವಪ್ಪ, ಮೂರ್ನಾಡು ಪೊಲೀಸ್ ಉಪಠಾಣಾಧಿಕಾರಿ ಬೋಜಪ್ಪ ಉಪಸ್ಥಿತರಿದ್ದರು.

ರಂಜಾನ್: ಶಾಂತಿ ಸಭೆ
ಶನಿವಾರಸಂತೆ ವರದಿ: ಸಮೀಪದ ಕೊಡ್ಲಿಪೇಟೆಯ ಪೊಲೀಸ್ ಉಪಠಾಣೆಯಲ್ಲಿ ರಂಜಾನ್ ಹಿನ್ನೆಲೆಯಲ್ಲಿ ಶಾಂತಿ ಸಭೆ ಆಯೋಜಿಸಲಾಗಿತ್ತು.

ಶನಿವಾರಸಂತೆ ಸಬ್‌ಇನ್ಸ್‌ಪೆಕ್ಟರ್ ಮಹದೇವಯ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಂಜಾನ್ ಆಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಸಾರ್ವಜನಿಕರು ಎಡೆಮಾಡಿಕೊಡಬಾರದು ಎಂದು ಮನವಿ ಮಾಡಿದರು.

ಸಲೀಂ ಸಿರಾಜ್ ಮಾತನಾಡಿ, ಮಳೆ ವಾತಾವರಣ ಇರುವುದರಿಂದ ಮೆರವಣಿಗೆ ನಡೆಸದೇ ಮಸೀದಿಯಲ್ಲೇ ವಿಶೇಷ ಪ್ರಾರ್ಥನೆ ಸಲ್ಲಿಸುವುದಾಗಿ ತಿಳಿಸಿದರು.

ಚೇಂಬರ್ ಆಫ್ ಕಾಮರ್ಸ್‌ನ ನಿರ್ದೇಶಕ ಗಿರೀಶ್ ಮಾತನಾಡಿ, ಮ್ಯಾಕ್ಸಿಕ್ಯಾಬ್‌ಗಳನ್ನು ಬಸ್ ನಿಲ್ದಾಣಕ್ಕೆ ತಂದು ನಿಲ್ಲಿಸುವುದರಿಂದ ಬಸ್‌ಗಳಿಗೆ ಹಾಗೂ ಪ್ರಯಾಣಿಕರಿಗೆ ತೊಂದರೆಯಾಗುತ್ತಿ ರುವುದರಿಂದ ಕ್ರಮಕೈಗೊಳ್ಳುವಂತೆ ತಿಳಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಇಂದ್ರೇಶ್, ಇಲಿಯಾಸ್, ಲೋಕೇಶ್,ಇಮ್ರಾನ್ ಮಾತನಾಡಿದರು. ನಂಜುಂಡೇಗೌಡ, ಧನಲಕ್ಷ್ಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT