ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿ, ಸುವ್ಯವಸ್ಥೆ ಕಾಪಾಡಲು ಮನವಿ

ದೇವಾಲಯ ದ್ವಾರ ಹಾನಿ ಪ್ರಕರಣ
Last Updated 4 ಜನವರಿ 2014, 10:23 IST
ಅಕ್ಷರ ಗಾತ್ರ

ಮೂಡಿಗೆರೆ: ಬಿಳಗುಳದ ಏಳುಮುಖಚೌಡೇಶ್ವರಿ ದೇವಿ ದೇವಾಲಯಕ್ಕೆ ನಿರ್ಮಿಸುತ್ತಿರುವ ದ್ವಾರವನ್ನು ಶುಕ್ರವಾರ ಹಾನಿಗೊಳಿಸಿದ ಪ್ರಕರಣ ಸಂಬಂಧ ಸ್ಥಳಕ್ಕೆ ಬಂದ ಸರ್ಕಲ್‌ ಇನ್ಸ್‌ಪೆಕ್ಟರ್ ಎಸ್‌.ಎಸ್‌. ಹಿರೇಮಠ್‌ ಮತ್ತು ಪೊಲೀಸ್‌ ಸಿಬ್ಬಂದಿ ಪ್ರತಿಭಟನಾಕಾರರೊಂದಿಗೆ ದೇವಾಲಯದ ಆವರಣದಲ್ಲಿ ಮಾತುಕತೆ ನಡೆಸಿ, ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದರು.

ನಂತರ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು, ಜಿಲ್ಲಾ ಕೇಂದ್ರದಿಂದ ಪೊಲೀಸ್‌ ಶ್ವಾನದಳವನ್ನು ಕರೆಯಿಸಿ ತಪಾಸಣೆ ನಡೆಸಿದರು. ಸ್ಥಳ ಪರಿಶೀಲನೆ ನಡೆಸಿದ ಶ್ವಾನ, ಸ್ಥಳದಂದ ಒಂದು ಕಿಮೀ ದೂರದಲ್ಲಿರುವ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಜಿಲ್ಲಾ ಕಾರ್ಯದರ್ಶಿ ಬಿಳಗುಳ ಅಲ್ತಾಫ್‌ ಅವರ ಮನೆಯ ಸಮೀಪಕ್ಕೆ ತೆರಳಿ, ಮನೆಯ ಸುತ್ತಮುತ್ತಲೂ ತಿರುಗಿ, ಮನೆಯ ಒಳಾಂಗಣವನ್ನು ಪ್ರವೇಶಿಸಿತು.

ಇದನ್ನು ಕಂಡ ಗ್ರಾಮಸ್ಥರು ಮತ್ತು ವಿವಿಧ ಸಂಘಟನೆಗಳ ಕಾರ್ಯಕರ್ತರು, ಅಲ್ತಾಫ್‌ ಆರೋಪಿ ಎಂದು ಆರೋಪಿಸಿ ತಕ್ಷಣ ಬಂದಿಸುವಂತೆ ಧ್ವಂಸದ ಸ್ಥಳದಿಂದ ಗ್ರಾಮ ಪಂಚಾಯಿತಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಅಲ್ತಾಫ್‌ ವಿರುದ್ಧ ಘೋಷನೆಗಳನ್ನು ಕೂಗಿದರು.

ನಂತರ ಗ್ರಾ.ಪಂ. ಕಚೇರಿ ಎದುರು ಸಮಾವೇಶಗೊಂಡ ಬಿಜೆಪಿ, ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮತ್ತು ಗ್ರಾಮಸ್ಥರು, ಘಟನೆ ನಡೆದು, ಅರ್ಧ ದಿನ ಕಳೆದರೂ, ಜಿಲ್ಲಾ ಕೇಂದ್ರದಿಂದ ಯಾರೊಬ್ಬ ಹಿರಿಯ ಅಧಿಕಾ ರಿಗಳು ಬಾರದಿರುವುದನ್ನು ಖಂಡಿಸಿ ಕೆ.ಎಂ. ರಸ್ತೆ ತಡೆ ನಡೆಸಿದರು.

ನಂತರ ಗ್ರಾ.ಪಂ. ಕಚೇರಿಯಿಂದ ಪಟ್ಟಣದ ಲಯನ್ಸ್‌ ವೃತ್ತದ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಲಯನ್ಸ್‌ ವೃತ್ತದಲ್ಲಿ ಅರ್ಧ ಗಂಟೆಗೂ ಹೆಚ್ಚುಕಾಲ ರಾಜ್ಯ ಹೆದ್ದಾರಿ ಬಂದ್‌ ಮಾಡಿ , ಪ್ರತಿಭಟನೆ ನಡೆಸಿದರು. ಈ ವೇಳೆ ಪಟ್ಟಣದಲ್ಲಿ ವರ್ತಕರು ಸ್ವ ಇಚ್ಛೆಯಿಂದ ತಮ್ಮ ಅಂಗಡಿ ಮುಂಗಟ್ಟುಗಳನ್ನು ಎರಡು ಗಂಟೆಗೂ ಹೆಚ್ಚುಕಾಲ ಬಂದ್‌ಗೊಳಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ಈ ವೇಳೆಗೆ ಸ್ಥಳಕ್ಕೆ ಆಗಮಿಸಿದ ಕಂದಾಯ ಉಪ ವಿಭಾಗಾಧಿಕಾರಿ ಚೆನ್ನಬಸಪ್ಪ ಅವರಿಗೆ ಘಟನೆಯ ಕುರಿತು ಮತ್ತು ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ದೇವಾಲಯ ಸಮಿತಿ ಅಧ್ಯಕ್ಷ ಅತುಲ್‌ ರಾವ್‌ ಮನವಿ ಸಲ್ಲಿಸಿದರು. ಆರೋಪಿಗಳ ವಿರುದ್ಧ ತಕ್ಷಣವೇ ಕ್ರಮ ತೆಗೆದು ಕೊಳ್ಳುವುದಾಗಿ ಭರವಸೆ ನೀಡಿದ ನಂತರ ಗಡುವಿನ ಮೇರೆಗೆ ಪ್ರತಿಭಟನೆಯನ್ನು ಕೈ ಬಿಡಲಾಯಿತು.

ಘಟನೆಗೆ ಸಂಬಂದಿಸಿದಂತೆ ದೇವಾಲಯ ಸಮಿತಿ ಅಧ್ಯಕ್ಷ ಅತುಲ್‌ ರಾವ್‌ ಎಂಬುವವರು ಅಲ್ತಾಫ್‌, ಬಾಬಾ ಮತ್ತು ಹಮೀದ್‌ ಎಂಬುವವರ ವಿರುದ್ಧ ದೂರು ನೀಡಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು, ಹಮೀದ್‌ ಎಂಬುವವರನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT