ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿದೂತನ ಸ್ಮರಣೆಯ ಕ್ರಿಸ್‌ಮಸ್ ಸಂಭ್ರಮ

Last Updated 25 ಡಿಸೆಂಬರ್ 2012, 5:44 IST
ಅಕ್ಷರ ಗಾತ್ರ

ಶಿವಮೊಗ್ಗ: ಈಗ ಎಲ್ಲೆಡೆ ಕ್ರಿಸ್‌ಮಸ್ ಸಂಭ್ರಮ. ಚರ್ಚ್-ಮನೆ, ಮನದಂಗಳದಲ್ಲಿ ದಯಾಳು ಯೇಸುಕ್ರಿಸ್ತನ ಸ್ಮರಣೆ. ಜಗತ್ತಿಗೆ ಕ್ಷಮೆ, ಪ್ರೀತಿ ಹಾಗೂ ಶಾಂತಿ ಸಂದೇಶ ಸಾರಿದ ಕ್ರಿಸ್ತನ ಆಗಮನವನ್ನು ನೆನಪಿಸಿಕೊಂಡು ಸಂಭ್ರಮಿಸುವ ಕಾಲ.

ನಗರದಲ್ಲೂ ಕ್ರಿಸ್‌ಮಸ್ ಸಡಗರ ಜೋರಾಗಿದೆ. ಈಗ ಎಲ್ಲ ಚರ್ಚ್‌ಗಳಲ್ಲೂ ವಿಶೇಷ ಸಾಮೂಹಿಕ ಪ್ರಾರ್ಥನೆ ನಡೆಯುತ್ತದೆ. ಕ್ರೈಸ್ತ ಬಾಂಧವರು ಒಂದಾಗಿ ಸೇರಿ ಜಗತ್ತಿನ ಶಾಂತಿಗೆ ಪ್ರಾರ್ಥಿಸುತ್ತಾರೆ. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಕೇಕ್, ಗ್ರೀಟಿಂಗ್ ಕಾರ್ಡು ಹಂಚಿಕೊಂಡು ಖುಷಿಪಡುತ್ತಾರೆ. ಮನೆಯಲ್ಲಿ ವಿವಿಧ ತಿಂಡಿ-ತಿನಿಸು ಮಾಡಿ, ಗೆಳೆಯರೊಂದಿಗೆ ಸಂಭ್ರಮ ಪಡುತ್ತಾರೆ.

ಕ್ರಿಸ್‌ಮಸ್ ಸಿದ್ಧತೆ ನಾಲ್ಕು ಭಾನುವಾರಗಳ ಹಿಂದಿನಿಂದ ನಡೆಯುತ್ತದೆ. ನವೆಂಬರ್ ಅಂತ್ಯದಿಂದ ಡಿಸೆಂಬರ್ ಅಂತ್ಯದವರೆಗೂ ಕ್ರಿಸ್‌ಮಸ್ ಆಗಮನ ಕಾಲ ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಮದುವೆ ಮತ್ತಿತರ ಶುಭಕಾರ್ಯಗಳು ನಡೆಯುವುದು ಕಡಿಮೆ.

ನಳನಳಿಸುವ ಚರ್ಚ್‌ಗಳು
ಕ್ರಿಸ್‌ಮಸ್ ದಿನಗಳಂದು ಚರ್ಚ್‌ಗಳು ಸುಣ್ಣ-ಬಣ್ಣ ಬಳಿದುಕೊಂಡು ನಳ-ನಳಿಸುತ್ತವೆ. ತಳಿರು-ತೋರಣಗಳಿಂದ ಕಂಗೊಳಿಸುತ್ತವೆ. ಬಣ್ಣ-ಬಣ್ಣದ ವಿದ್ಯುತ್ ದೀಪಗಳ ಅಲಂಕಾರದಿಂದ ಚರ್ಚ್‌ಗಳ ಅಕೃತಿಯೇ ಬದಲಾಗುತ್ತದೆ.

ಚರ್ಚ್ ಒಳಗೆ ವಿಶೇಷ ಅಲಂಕಾರವಷ್ಟೇ ಅಲ್ಲ; ಚರ್ಚ್‌ನ ಹೊರಭಾಗದಲ್ಲಿ ಯೇಸು ಕ್ರಿಸ್ತ ಹುಟ್ಟಿದ ಬಗೆಯನ್ನು ವಿವರಿಸುವ ಗೋದಳಿ ನಿರ್ಮಿಸಲಾಗುತ್ತದೆ. ಕೇವಲ ಚರ್ಚ್‌ಗಳಲ್ಲಿ ಅಷ್ಟೇ ಅಲ್ಲ ಕೆಲವರು ಮನೆ, ಅಂಗಡಿ, ಕಚೇರಿಗಳಲ್ಲೂ ಇಂತಹ ಗೋದಳಿಗಳನ್ನು ನಿರ್ಮಿಸುತ್ತಾರೆ. ಒಂದಕ್ಕಿಂತ ಒಂದು ಗೋದಳಿಗಳು ರೂಪದಲ್ಲಿ ಭಿನ್ನವಾಗಿರುತ್ತವೆ.

ಈ ಬಾರಿ ಚರ್ಚ್ ಆವರಣದಲ್ಲಿ ವಿಶೇಷ ಆಕರ್ಷಣೆಯ ಕ್ರಿಸ್‌ಮಸ್ ಕ್ರಿಬ್ ನಿರ್ಮಿಸಲಾಗಿದ್ದು, ಭಕ್ತಾದಿಗಳು  ವೀಕ್ಷಿಸಬಹುದಾಗಿದೆ. ಕೆಲವರು ಮನೆಗಳಲ್ಲಿ ಕ್ರಿಸ್‌ಮಸ್ ಟ್ರೀ, ನಕ್ಷತ್ರಗಳನ್ನು ಮೂಡಿಸುತ್ತಾರೆ. ಮೋಂಬತ್ತಿ ಹಚ್ಚಿ ಸಂತೋಷಪಡುತ್ತಾರೆ.

ಬಿ.ಎಚ್. ರಸ್ತೆಯಲ್ಲಿರುವ ಸೇಕ್ರೆಡ್ ಹಾರ್ಟ್ ಪ್ರಧಾನಾಲಯದಲ್ಲಿ  ಕ್ರಿಸ್‌ಮಸ್ ಹಬ್ಬದ  ಪ್ರಯುಕ್ತ ಸೋಮವಾರ ರಾತ್ರಿ 11ಗಂಟೆಗೆ ಕ್ರಿಸ್‌ಮಸ್ ಭಕ್ತಿಗೀತೆಗಳ ಗಾಯನ ಮುಗಿದಿರುತ್ತದೆ. ಅಲ್ಲದೇ 11.30ಕ್ಕೆ ಹಬ್ಬದ ದಿವ್ಯಬಲಿಪೂಜೆ ನೆರವೇರಿರುತ್ತದೆ. ಮಂಗಳವಾರ ಬೆಳಿಗ್ಗೆ 7ಮತ್ತು 9ಗಂಟೆಗೆ ಎರಡು ಬಾರಿ ಪೂಜಾವಿಧಿಗಳು ನಡೆಯಲಿವೆ. ಇದೇ ರೀತಿ ಶರಾವತಿ ನಗರದ ಇನ್‌ಫ್ಯಾಂಟ್ ಜೀಸಸ್ ಚರ್ಚ್‌ನಲ್ಲಿ ಸಾಕಷ್ಟು ಪೂಜಾವಿಧಿಗಳು ಸೋಮವಾರವೇ ಮುಗಿಯುತ್ತವೆ. ಇಲ್ಲಿ ಮಂಗಳವಾರ ಬೆಳಿಗ್ಗೆ 8.30ಕ್ಕೆ ಮತ್ತೆ ಪೂಜಾವಿಧಿಗಳು ಜರುಗಲಿವೆ. ಅಂದು ಸಂಜೆ 6ಕ್ಕೆ ಚರ್ಚ್ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಗೋಪಾಳದ ಚರ್ಚ್, ಶಾಂತಿನಗರ (ರಾಗಿಗುಡ್ಡ) ಸಂತ ಅಂತೋಣಿ ದೇವಾಲಯದಲ್ಲಿ ಮಂಗಳವಾರ ಬೆಳಿಗ್ಗೆ 9.30ಕ್ಕೆ ಕ್ರಿಸ್‌ಮಸ್ ಪೂಜಾವಿಧಿಗಳು ನೆರವೇರಲಿವೆ.

ಕ್ರಿಸ್‌ಮಸ್ ಕ್ರಿಬ್‌ನ್ನು ಈ ಬಾರಿ ವಿಶೇಷವಾಗಿ ರೂಪಿಸಲಾಗಿದೆ. ಪ್ರತಿ ವರ್ಷ ಕೇವಲ ಕ್ರೈಸ್ತರಲ್ಲದೆ, ಎಲ್ಲ ಧರ್ಮದವರೂ ಬಂದು ಇದನ್ನು ವೀಕ್ಷಿಸುವುದು ರೂಢಿಯಲ್ಲಿದೆ. ಶುದ್ಧ ಪ್ರಾರ್ಥನೆ ಮಾತ್ರ ಸಾಕು ಎನ್ನುವ ಕಾರಣಕ್ಕೆ ಈ ಬಾರಿ ಪ್ರಧಾನಾಲಯದ ಆವರಣದಲ್ಲಿ ಮಂಗಳವಾರ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ ಎನ್ನುತ್ತಾರೆ ಸೇಕ್ರೆಡ್ ಹಾರ್ಟ್ ಫಾದರ್ ಏಸುರಕ್ಷಕ ನಾದನ್.

ಕೇಕ್, ಕ್ರಿಸ್‌ಮಸ್‌ನ ಮತ್ತೊಂದು ವಿಶೇಷ ತಿನಿಸು. ಎಲ್ಲರ ನೆಮ್ಮದಿಗಾಗಿ ಸಾಮೂಹಿಕ ಪ್ರಾರ್ಥನೆ ಈ ಹಬ್ಬದ ವಿಶೇಷ. ಎಲ್ಲ ಧರ್ಮಿಯರೂ ಇದರಲ್ಲಿ ಪಾಲ್ಗೊಳ್ಳುವುದು ವಿಶೇಷಗಳಲ್ಲಿ ವಿಶೇಷ ಎಂದು ಹರ್ಷದಿಂದ ಹೇಳುತ್ತಾರೆ ಶರಾವತಿ ನಗರದ ಇನ್‌ಫ್ಯಾಂಟ್ ಜೀಸಸ್ ಚರ್ಚ್‌ನ ಫಾದರ್ ಮಾರ್ಕ್ ಡಿಸಿಲ್ವಾ.

ಸಂದೇಶಗಳು
ಕ್ಷಮೆ, ಪ್ರೀತಿ, ಶಾಂತಿ ಈ ಜಗತ್ತಿಗೆ ಯೇಸು ಕ್ರಿಸ್ತ ಕೊಟ್ಟ ಸಂದೇಶಗಳು. ಅವುಗಳನ್ನು ನಾವೆಲ್ಲರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ಆತನಿಗೆ ನಾವು ಸಲ್ಲಿಸುವ ಪ್ರಾರ್ಥನೆ.
- ಫಾದರ್ ಏಸುರಕ್ಷಕ ನಾಧನ್

ನೆಮ್ಮದಿ ಮೂಡಲಿ
ಸಾರ್ವಜನಿಕ ನೆಮ್ಮದಿ, ಶಾಂತಿಗಳು ಕಡಿಮೆಯಾಗುತ್ತಿರುವ ಈ ಕಾಲದಲ್ಲಿ ಯೇಸುಕ್ರಿಸ್ತ ನೀಡಿದ ಎಲ್ಲ ಸಂದೇಶಗಳನ್ನು ನಾವು ಮತ್ತೊಮ್ಮೆ ಕ್ರಿಸ್‌ಮಸ್‌ನ ಈ ಸಂದರ್ಭದಲ್ಲಿ ಮನನ ಮಾಡಿಕೊಳ್ಳಬೇಕು.
-ಇನ್‌ಫೆಂಟ್ ಜೀಸಸ್ ಚರ್ಚ್ ಫಾದರ್ ಮಾರ್ಕ್ ಡಿಸಿಲ್ವಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT