ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿದೂತನ ಸ್ಮರಣೆಯ ಕ್ರಿಸ್‌ಮಸ್ ಹಬ್ಬ

Last Updated 25 ಡಿಸೆಂಬರ್ 2012, 5:38 IST
ಅಕ್ಷರ ಗಾತ್ರ

ಚಿತ್ರದುರ್ಗ: ಸೇವೆಯೇ ಪರಮ ಧ್ಯೇಯ. ಸೇವೆಯಿಂದಲೇ ಶಾಂತಿ, ಸಾಮರಸ್ಯ, ಸಮಾನತೆ, ಸಹಬಾಳ್ವೆಯ ಸಮಾಜ ನಿರ್ಮಿಸಲು ಸಾಧ್ಯ....

ಏಸುಕ್ರಿಸ್ತನ ಈ ಸಂದೇಶಗಳು ಬದುಕನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುತ್ತವೆ. ತನ್ನ ಬದುಕನ್ನೇ ಒಂದು ಸಂದೇಶವಾಗಿ ರೂಪಿಸಿಕೊಂಡವರು ಏಸು. ಸೇವೆಯನ್ನೇ ಬದುಕಿನ ಉಸಿರಾಗಿಸಿಕೊಳ್ಳಬೇಕು ಎಂದು ನುಡಿದಂತೆ ನಡೆದು ಜಗತ್ತಿನಲ್ಲಿನ ಅಶಾಂತಿ, ಗೊಂದಲಗಳಿಗೆ ಪರಿಹಾರ ರೂಪಿಸಿದವರು.

ಏಸು ತಂದೆ ಜೋಸೆಫ್ ಮತ್ತು ತಾಯಿ ಮೇರಿ. ಅಂದಿನ ರೋಮ್ ರಾಜನಾಗಿದ್ದ ಆಗಸ್ತಸ್ ಚಕ್ರವರ್ತಿ ಜನಗಣತಿಗೆ ಆದೇಶ ನೀಡಿದ್ದ. ಆದ್ದರಿಂದ, ಬೆಥ್ಲೆಹೆಮ್‌ನಲ್ಲಿ ಜನಗಣತಿಯ ಸಮೀಕ್ಷೆ ಕಾರ್ಯ ಕೈಗೊಂಡಿದ್ದರಿಂದ ತಂದೆ ತಾಯಿ ಅಲ್ಲಿಗೆ ಆಗಮಿಸುತ್ತಾರೆ. ಪ್ಯಾಲೇಸ್ತಿನ್ ನಾಡಿನ ಬೆಥ್ಲೆಹೆಮ್ (ಪ್ರಸ್ತುತ ಇಸ್ರೇಲ್) ಊರಿನ ಕೊಟ್ಟಿಗೆಯೊಂದರಲ್ಲಿ ಯೇಸು ಜನಿಸುತ್ತಾರೆ. ಯೇಸು ಕ್ರಿಸ್ತ ಹುಟ್ಟಿದಾಗ ದೇವದೂತರು ಕುರುಬರಿಗೆ ಸಂದೇಶ ನೀಡಿದರು ಎನ್ನುವ ಪ್ರತೀತಿಯೂ ಇದೆ.

ಯೇಸು ಜನನದ ನಂತರ ನಜಕಿತ್ ಎನ್ನುವ ಊರಿಗೆ ತಂದೆ ತಾಯಿ ತೆರಳುತ್ತಾರೆ. ಸುಮಾರು 30 ವರ್ಷಗಳ ಕಾಲ ತಂದೆ ತಾಯಿ ಜತೆ ಬಡಗಿ ಕೆಲಸದಲ್ಲಿ ತೊಡಗುತ್ತಾರೆ. 30 ವರ್ಷಗಳ ನಂತರ ಬೋಧನೆಯಲ್ಲಿ ತೊಡಗುತ್ತಾರೆ. ಜೆರುಸಲೆಮ್ ಮತ್ತು ಗಲಿಲಿಯೋ ಪ್ರದೇಶದಲ್ಲಿ ಬೋಧನೆಯಲ್ಲಿ ತೊಡಗುತ್ತಾರೆ. ರೋಗಿಗಳನ್ನು ಗುಣಪಡಿಸುತ್ತಾರೆ. ಕಷ್ಟದಲ್ಲಿರುವವರಿಗೆ ಸಾಂತ್ವನ ಹೇಳುತ್ತಾರೆ. ಧೈರ್ಯ, ಆತ್ಮಸ್ಥೈರ್ಯ ತುಂಬುತ್ತಾರೆ.

`ಏಸು ಜನಿಸಿದಾಗ ಬೆಥ್ಲೆಹೆಮ್ ರೋಮ್ ಆಡಳಿತಕ್ಕೆ ಒಳಪಟ್ಟಿತ್ತು. ಅಲ್ಲಿಯೂ ಅಶಾಂತಿ, ದಂಗೆಗಳು ನಡೆಯುತ್ತಿದ್ದವು. ಇಂತಹ ಸನ್ನಿವೇಶದಲ್ಲಿ ಯೇಸು ಜನಿಸಿ ಜಗತ್ತಿಗೆ ಶಾಂತಿಯ ಸಂದೇಶ ಸಾರಿದ. ಕ್ರೈಸ್ತ ಧರ್ಮದ ಜೀವಾಳವೇ ಸೇವೆ. ಸೇವೆಯ ಮೂಲಕವೇ ಶಾಂತಿ, ಸಾಮರಸ್ಯ ಕಾಪಾಡುವುದೇ ಏಸುವಿನ ಮುಖ್ಯ ಉದ್ದೇಶ.

ಏಸುಕ್ರಿಸ್ತರು ಎಲ್ಲರನ್ನು ಸಮಾನತೆಯಿಂದ ಕಂಡರು. ಕ್ಷಮೆ ಮತ್ತು ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಅಶಾಂತಿ, ವೈಮನಸ್ಸು, ಗುಂಪುಗಾರಿಕೆ, ಗೊಂದಲಗಳು ನಿವಾರಣೆಯಾಗುತ್ತವೆ. ಏಸುವಿನ ಸಂದೇಶದಂತೆ ದಯೆ, ಕ್ಷಮೆ, ಸೇವೆ ತತ್ವಗಳು ಬದುಕಿನ ತಳಹದಿಯಾಗಬೇಕು. ಈ ಮೂರು ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು.

ಶಾಂತಿ ಅಂದರೆ ಕೇವಲ ಯುದ್ಧದ ನಡೆಯುವುದಿಲ್ಲ ಎನ್ನುವ ಭ್ರಮೆಯಲ್ಲಿ ಬದುಕುವುದಲ್ಲ. ಶಾಂತಿಯ ಅಸ್ತಿತ್ವವನ್ನು ಛಾಪು ಮೂಡಿಸಿ ಪ್ರದರ್ಶಿಸುವುದು. ಯೇಸು ಸಂದೇಶಗಳನ್ನು ಅಳವಡಿಸಿಕೊಂಡು ಸಮಾನತೆಯಿಂದ, ಸಹಬಾಳ್ವೆಯಿಂದ ಬದುಕು ಸಾಗಿಸುವ ಸಮಾಜ ನಿರ್ಮಿಸಬೇಕಾಗಿದೆ. ಇಂದಿಗೂ, ಭವಿಷ್ಯಕ್ಕೂ ಯೇಸುವಿನ ಸಂದೇಶಗಳು ಪ್ರಸ್ತುತವಾಗಿವೆ' ಎಂದು ಚಿತ್ರದುರ್ಗದ ಹೋಲಿ ಫ್ಯಾಮಿಲಿ ಚರ್ಚ್‌ನ ರಿಚರ್ಡ್ ಪೈಸ್ ಹೇಳುತ್ತಾರೆ.

ಕ್ರಿಸಮಸ್ ಆಚರಣೆ: ಏಸು ಜನಿಸಿದ ದಿನದಂದು ಕ್ರಿಸಮಸ್ ಆಚರಣೆಯನ್ನು ಸಂಭ್ರಮದಿಂದ ಜಗತ್ತಿನಲ್ಲೆಡೆ ಆಚರಿಸಲಾಗುತ್ತದೆ. ಡಿ. 24ರ ಮಧ್ಯರಾತ್ರಿ ಎಲ್ಲ ಚರ್ಚ್‌ಗಳಲ್ಲಿ ಭಕ್ತರು ಸೇರಿ `ದಿವ್ಯ ಬಲಿಪೂಜೆ'ಯಲ್ಲಿ ಪಾಲ್ಗೊಳ್ಳುತ್ತಾರೆ. ಬೈಬಲ್‌ನಲ್ಲಿನ ಸಂದೇಶಗಳ ವಾಚನ ಮತ್ತು ಪ್ರಾರ್ಥನೆಯನ್ನು ಭಕ್ತರು ಕೈಗೊಳ್ಳುತ್ತಾರೆ.

ಚರ್ಚ್‌ಗಳಲ್ಲಿ ಗೋದಲಿ ನಿರ್ಮಿಸಿ ಏಸು ಜನಿಸಿದಾಗಿನ ಸನ್ನಿವೇಶವನ್ನು ಬಿಂಬಿಸಲಾಗುತ್ತದೆ. ಏಸು, ಏಸುವಿನ ತಂದೆ, ತಾಯಿ ಹಾಗೂ ದನ, ಕುರಿಗಳ ಒಳಗೊಂಡ ಕೊಟ್ಟಿಗೆಯ ದೃಶ್ಯವನ್ನು ಗೋದಲಿಯಲ್ಲಿ ಪ್ರದರ್ಶಿಸಲಾಗುತ್ತದೆ. ಕ್ರೈಸ್ತ ಬಾಂಧವರು ಪರಸ್ಪರ ಸಂದೇಶಗಳನ್ನು ಕಳುಹಿಸಿ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ.

ಕ್ರಿಸ್‌ಮಸ್ ಆಚರಣೆ ಜತೆಯಲ್ಲೇ `ಕ್ರಿಸ್‌ಮಸ್ ಟ್ರಿ' ಸಹ ಖ್ಯಾತಿಗೆ ಬಂದಿದೆ. ಜರ್ಮನಿಯಲ್ಲಿ ಈ ಗಿಡ ಖ್ಯಾತಿ ಪಡೆದಿದೆ. ಚಳಿಗಾಲದಲ್ಲಿ ಈ ಮರ ಮಾತ್ರ ಒಣಗದೆ ಉಳಿದುಕೊಂಡಿರುತ್ತದೆ. ಕ್ರಿಸ್‌ಮಸ್ ಸಂದರ್ಭದಲ್ಲಿ ಈ ಮರದಲ್ಲಿ ಕಾಣಿಕೆಗಳನ್ನು ಇಡಲಾಗುತ್ತದೆ. ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಇಲ್ಲಿನ ಕಾಣಿಕೆಗಳನ್ನು ಹಂಚಿಕೊಳ್ಳುವುದು ಸಂಪ್ರದಾಯ. ಇದೇ ಆಚರಣೆ ಎಲ್ಲೆಡೆ ವ್ಯಾಪಿಸಿದೆ.

ಕ್ರಿಸಮಸ್ ಆಚರಣೆಯಲ್ಲಿ ನಕ್ಷತ್ರಗಳ ಬಳಕೆಯೂ ಹೆಚ್ಚು ಮಹತ್ವ ಪಡೆದಿದೆ. ಯೇಸು ಕ್ರಿಸ್ತ ಜನಿಸಿದಾಗ ಪೂರ್ವ ದಿಕ್ಕಿನಲ್ಲಿ ನಕ್ಷತ್ರ ಕಾಣಿಸಿಕೊಳ್ಳುತ್ತದೆ ಎನ್ನುವ ಐತಿಹ್ಯವಿದೆ. ಈ ವಿಶೇಷ ನಕ್ಷತ್ರ ಹುಡುಕಿಕೊಂಡು ಜ್ಯೋತಿಷಿಗಳು ಬೆಥ್ಲೆಹೆಮ್‌ಗೆ ಆಗಮಿಸಿ ಯೇಸುವಿಗೆ ನಮಿಸಿ ಕಾಣಿಕೆ ಸಲ್ಲಿಸುತ್ತಾರೆ. ಈ ಹಿನ್ನೆಲೆಯಲ್ಲಿ ನಕ್ಷತ್ರಗಳು ಮಹತ್ವ ಪಡೆದಿವೆ.

ಸಾಂಟಾ ಕ್ಲೂಸ್: ಕ್ರಿಸ್‌ಮಸ್ ಆಚರಣೆ ಸಂದರ್ಭದಲ್ಲಿ ಸಾಂಟಾಕ್ಲೂಸ್ ಎಲ್ಲರ ಆಕರ್ಷಣೆ. ಈತನನ್ನು ಕಂಡರೆ ಮಕ್ಕಳಿಗೆ ಅತಿ ಪ್ರೀತಿ. ಸಾಂಟಾ ಕ್ಲೂಸ್‌ಗೂ ಆಸಕ್ತಿಕರ ಹಿನ್ನೆಲೆ ಇದೆ. ಸೇಂಟ್ ನಿಕೋಲಸ್ ಎನ್ನುವ ಒಬ್ಬ ಸಂತನ ಹೆಸರುಸಾಂಟಾಕ್ಲೂಸ್ ಎಂದು ಪರಿವರ್ತನೆಗೊಂಡಿದೆ. ಈತ ಮಹಾದಾನಿಯಾಗಿದ್ದ. ದಾನದಿಂದಲೇ ಖ್ಯಾತಿ ಪಡೆದಿದ್ದ. ಈ ವ್ಯಕ್ತಿ ನಿಧನದ ನಂತರ ವಿಶೇಷವಾಗಿ ಮಕ್ಕಳಿಗೋಸ್ಕರ ಮಧ್ಯರಾತ್ರಿ ನಂತರ ಕಾಣಿಕೆಗಳನ್ನು ಹಂಚುತ್ತಾನೆ ಎನ್ನುವ ಪ್ರತೀತಿ ಬೆಳೆದು ಬಂದಿದೆ.

ಕ್ರಿಸ್‌ಮಸ್ ಕೇಕ್: ಕ್ರಿಸ್‌ಮಸ್ ಆಚರಣೆಯಲ್ಲಿ ಕೇಕ್ ಸಾಮಾನ್ಯ ಆಹಾರ. ಯೂರೋಪಿಯನ್ನರ ಪ್ರಮುಖ ಆಹಾರ ಕೇಕ್ ಇದು ಇತ್ತೀಚಿನ ವರ್ಷಗಳಲ್ಲಿ ವಾಣಿಜ್ಯ ಸ್ವರೂಪವನ್ನು ಪಡೆದುಕೊಂಡು ಹೆಚ್ಚು ಜನಪ್ರಿಯವಾಗಿದೆ. ಕೇಕ್ ಜತೆ ಹತ್ತು ಹಲವು ತಿಂಡಿತಿನಿಸುಗಳನ್ನು ಕ್ರೈಸ್ತರು ತಯಾರಿಸುತ್ತಾರೆ.

ಐತಿಹಾಸಿಕ ಚರ್ಚ್: ಚಿತ್ರದುರ್ಗದಲ್ಲಿ ಹೋಲಿ ಫ್ಯಾಮಿಲಿ ಚರ್ಚ್, ಡಾನ್‌ಬಾಸ್ಕೋ ಚರ್ಚ್, ಸಿಎಸ್‌ಐ ಚರ್ಚ್‌ಗಳು ಪ್ರಮುಖವಾಗಿವೆ. ಮೈಸೂರು ಮಹಾರಾಜರು 1866ರಲ್ಲಿ ಹೋಲಿ ಫ್ಯಾಮಿಲಿ ಚರ್ಚ್‌ಗೆ ಜಮೀನು ಮಂಜೂರು ಮಾಡಿದರು. 1870ರಲ್ಲಿ ಚರ್ಚ್ ನಿರ್ಮಿಸಲಾಯಿತು. ನಗರದಲ್ಲಿ ಎಲ್ಲ ಚರ್ಚ್‌ಗಳು ವಿಶೇಷವಾದ ವಿದ್ಯುತ್ ದೀಪಗಳ ಅಲಂಕಾರದಿಂದ ಸಿಂಗಾರಗೊಂಡಿವೆ. ಯೇಸು ಸಾರಿದ ಸಂದೇಶಗಳನ್ನು ಪ್ರಾರ್ಥನೆ ಮೂಲಕ ಬಿತ್ತುವ ಕೈಂಕರ್ಯ ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT