ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿಯಿಂದ ಹಬ್ಬ ಆಚರಿಸಿ: ಡಿಸಿ ಮನವಿ

Last Updated 4 ಸೆಪ್ಟೆಂಬರ್ 2013, 6:44 IST
ಅಕ್ಷರ ಗಾತ್ರ

ರಾಯಚೂರು: ಸಾರ್ವಜನಿಕರು ಈ ವರ್ಷದ ಗೌರಿ ಮತ್ತು ಗಣೇಶ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಸ್.ಎನ್ ನಾಗರಾಜು ಮನವಿ ಮಾಡಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭಾಂಗಣದಲ್ಲಿ ಮಂಗಳವಾರ ನಡೆದ ಗೌರಿ,ಗಣೇಶ ಹಬ್ಬದ ಆಚರಣೆ ಅಂಗವಾಗಿ ಶಾಂತಿಪಾಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಪ್ರತಿ ವರ್ಷದಂತೆ ಈ ವರ್ಷವೂ ಜಿಲ್ಲೆಯಲ್ಲಿ ಗೌರಿ ಗಣೇಶ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಣೆ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸಂಘಟಕರು ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನಗರಸಭೆ, ಜೆಸ್ಕಾಂ ಹಾಗೂ ಪೊಲೀಸ್ ಇಲಾಖೆಯಿಂದ ಕಡ್ಡಾಯವಾಗಿ ಪರವಾನಗಿ ಪಡೆದುಕೊಳ್ಳಬೇಕು ಎಂದು ಸೂಚಿಸಿದರು.

ವಿದ್ಯುತ್ ಸಂಪರ್ಕಕ್ಕೆ ಜೆಸ್ಕಾಂ, ಧ್ವನಿವರ್ದಕಗಳ ಅಳವಡಿಕೆಗೆ  ಪೊಲೀಸ್ ಇಲಾಖೆ ಹಾಗೂ ನಗರಸಭೆ ಅನುಮತಿ ಪಡೆಯುವುದು ಅಗತ್ಯ. ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳುವುದು ಹಾಗೂ ಧ್ವನಿವರ್ಧಕ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.

ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಜನರೇಟರ್ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಮಣ್ಣಿನಿಂದ ಮಾಡಿದ ಗಣಪತಿ ಮೂರ್ತಿ ಅದಕ್ಕೆ ನೈಸರ್ಗಿಕ ಬಣ್ಣವನ್ನು ಮಾತ್ರ ಬಳಸಬೇಕು. ರಾಸಾಯನಿಕ ಬಣ್ಣಗಳನ್ನು ಬಳಸಬಾರದು. ಇದರಿಂದ ಪರಿಸರ ಮಾಲಿನ್ಯ ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ  ದುಷ್ಪರಿಣಾಮ ಉಂಟಾಗುತ್ತದೆ ಎಂದು ವಿವರಿಸಿದರು.

ಅಬಕಾರಿ ಇಲಾಖೆಯವರು ಮದ್ಯಮಾರಾಟ ತಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಶಾಂತಿ ಹಾಗೂ ಸೌಹಾರ್ದತೆಯಿಂದ ಗೌರಿ-ಗಣೇಶ ಹಬ್ಬ ಆಚರಣೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ತಿಮ್ಮಪ್ಪ, ವಿಭಾಗಾಧಿಕಾರಿ ಎನ್.ಮಂಜುಶ್ರೀ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್ ನಾಗರಾಜ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ ಸದಲಗಿ,ನಗರಸಭೆ ಪೌರಾಯುಕ್ತ ಬಸಣ್ಣ, ತಹಶೀಲ್ದಾರ್ ಎಂ.ಐ ಶಾಹನೂರು, ವಕೀಲರಾದ ಭಾನುರಾಜ, ವೀರೇಶಗೌಡ, ಬಿಜೆಪಿ ಮುಖಂಡ ಬಂಡೇಶ ವಲ್ಕಂದಿನ್ನಿ, ಆದೆಪ್ಪ ಕಾಡ್ಲೂರು, ನಜೀರ ಪಂಜಾಬಿ, ಬಾಳಪ್ಪ, ಶ್ರೀನಿವಾಸ ಪತಂಗೆ, ಜಸ್ವಂತರಾವ್ ಕಲ್ಯಾಣಿಕರ್, ಸಿಪಿಐ ಚಂದ್ರಶೇಖರ, ಇನ್ಸ್‌ಸ್ಪೆಕ್ಟರಗಳಾದ ದಯಾನಂದ, ಹಿರೇಮಠ ಹಾಗೂ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT