ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಶಾಂತಿಯುತ ಮತದಾನಕ್ಕೆ ಅವಕಾಶ ನೀಡಿ'

Last Updated 25 ಏಪ್ರಿಲ್ 2013, 6:21 IST
ಅಕ್ಷರ ಗಾತ್ರ

ತರೀಕೆರೆ: ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿಗಳು ಶಿಸ್ತು ಮತ್ತು ಸಂಯಮದಿಂದ ವರ್ತಿಸುವ ಮೂಲಕ ಶಾಂತಿಯುತ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಚುನಾವಣಾ ವೀಕ್ಷಕ ಟಿ.ಎನ್.ವೆಂಕಟೇಶ್ ತಿಳಿಸಿದರು.

ಪಟ್ಟಣದ ಎಂ.ಜಿ.ಹಾಲ್‌ನಲ್ಲಿ ಬುಧವಾರ ನಡೆದ ಮತಗಟ್ಟೆ ಅಧಿಕಾರಿ ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಮತಗಟ್ಟೆಯಲ್ಲಿ ಇರುವ ಅಧಿಕಾರಿಗಳು ಪರಸ್ಪರ ಸಮನ್ವಯತೆ ಸಾಧಿಸಿ ಕಾರ್ಯನಿರ್ವಹಿಸಬೇಕು. ಮತದಾನದ ಗೌಪ್ಯತೆ ಕಾಪಾಡುವುದರೊಂದಿಗೆ ಯಾವುದೇ ಅಭ್ಯರ್ಥಿಯ ಪರವಾಗಿ ನಿಲುವು ತಾಳುವುದಾಗಲೀ, ಯಾವುದೇ ವ್ಯಕ್ತಿಯನ್ನು ಕೀಳಾಗಿ ಕಾಣುವುದಾಗಲೀ ಮಾಡಬಾರದು ಎಂದು ತಿಳಿಸಿದರು.

ಮತಗಟ್ಟೆ ಅಧಿಕಾರಿಗಳು ಭಾವನಾತ್ಮಕ ವಿಷಯಗಳಿಗೆ ಕಡಿವಾಣ ಹಾಕಿಕೊಳ್ಳಬೇಕು. ಯಾವುದಕ್ಕೂ ಭಾವುಕರಾಗದೇ ದೃಢ ಮನಸ್ಸಿನಿಂದ ಕಾರ್ಯನಿರ್ವಹಿಸುವಂತೆ ತಿಳಿಸಿದರು. ಮತದಾನದ ಸಮಯದಲ್ಲಿ ಹಾಜರಿರುವ ಎಲ್ಲ ಮತದಾರರಿಗೆ ಮತದಾನಕ್ಕೆ ಅವಕಾಶ ನೀಡಬೇಕು. ಮತದಾರನ ಚಲನವಲನಗಳ ಮೇಲೆ ನಿಗಾವಹಿಸಿ, ನಕಲು ಮತದಾರರನ್ನು ತಕ್ಷಣವೇ ಪೋಲಿಸ್ ವಶಕ್ಕೆ ನೀಡುವಂತೆ ತಿಳಿಸಿದರು.

ಮತಯಂತ್ರದ ಕಾರ್ಯವಿಧಾನ ಮತ್ತು ಇತ್ತೀಚಿನ ಚುನಾವಣಾ ಸುತ್ತೋಲೆ, ಆದೇಶಗಳ ಜ್ಞಾನ ಹೊಂದಿರುವುದು ಸೂಕ್ತ. ಮತದಾನ ಆರಂಭವಾಗುವುದಕ್ಕೂ ಮುನ್ನ ಅಣಕು ಮತದಾನವನ್ನು ಕಡ್ಡಾಯವಾಗಿ ಮಾಡುವಂತೆ ಸೂಚಿಸಿದರು.
ಮತಗಟ್ಟೆಗೆ ಬಂದ ಮತದಾರ ಮತದಾನ ಮಾಡಲು ನಿರಾಕರಿಸಿದಲ್ಲಿ ಆ ಬಗ್ಗೆ ಸೂಕ್ತ ಅರ್ಜಿ ನಮೂನೆಯಲ್ಲಿ ವಿವರ ಪಡೆಯುವಂತೆ ತಿಳಿಸಿದ ಅವರು, ಮತಗಟ್ಟೆಯಲ್ಲಿ ನಡೆಯುವ ಎಲ್ಲ ಘಟನೆಯನ್ನು ದಿನಚರಿಯಲ್ಲಿ ನಮೂದಿಸುವಂತೆ ಅವರು ಸಲಹೆ ನೀಡಿದರು.

ಮತದಾನ ಪ್ರಕ್ರಿಯೆ ಕುರಿತಂತೆ ಸಹಾಯಕ ಚುನಾವಣಾಧಿಕಾರಿ ಎಂ.ಪಿ.ರಂಜಿತಾ ಸ್ಲೈಡ್ ಶೋ ಮೂಲಕ ಮತಗಟ್ಟೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.ಕಾರ್ಯಾಗಾರದಲ್ಲಿ ಚುನಾವಣಾಧಿಕಾರಿ ಜಿ.ಅನುರಾಧಾ, ಚುನಾವಣಾ ಪ್ರಾಂತೀಯ ಅಧಿಕಾರಿ ಸುರೇಶ್, ಎಂ.ಸಿ.ಸಿ. ತಂಡದ ಪರಮೇಶ್ವರಪ್ಪ, ದೇವರಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT