ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಕ್ ನೀಡಿದ ಬಾಂಗ್ಲಾ

Last Updated 11 ಮಾರ್ಚ್ 2011, 18:30 IST
ಅಕ್ಷರ ಗಾತ್ರ

ಚಿತ್ತಗಾಂಗ್: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮತ್ತೊಂದು ಅಚ್ಚರಿ ಫಲಿತಾಂಶ ಹೊರಹೊಮ್ಮಿದೆ. ವೆಸ್ಟ್‌ಇಂಡೀಸ್ ವಿರುದ್ಧ 58 ರನ್‌ಗಳಿಗೆ ಆಲ್‌ಔಟ್ ಆಗಿ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದ ಬಾಂಗ್ಲಾದೇಶ ತಂಡದವರು ಈಗ ಇಂಗ್ಲೆಂಡ್‌ಗೆ ಶಾಕ್ ನೀಡಿದ್ದಾರೆ.ಆದರೆ ಇಂಗ್ಲಿಷ್ ಆಟಗಾರರು ಈ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಬಾರಿ ಆಘಾತಕ್ಕೆ ಒಳಗಾಗಿದ್ದಾರೆ. ಈ ಮೊದಲು ಐರ್ಲೆಂಡ್ ಎದುರು ಸೋಲು ಕಂಡಿದ್ದ ಅವರು ಈಗ ಬಾಂಗ್ಲಾಕ್ಕೆ ಶರಣಾಗಿದ್ದಾರೆ. ಹಾಗಾಗಿ ಈ ತಂಡದ ಕ್ವಾರ್ಟರ್ ಫೈನಲ್ ಹಾದಿ ಕಠಿಣವಾಗಿದೆ.

ಶುಕ್ರವಾರ ರಾತ್ರಿ ಜಹುರ್ ಅಹ್ಮದ್ ಚೌಧುರಿ ಕ್ರೀಡಾಂಗಣದಲ್ಲಿ ಬಾಂಗ್ಲಾಕ್ಕೆ ವಿಶ್ವಕಪ್ ಗೆದ್ದಷ್ಟೆ ಖುಷಿ. ಅಂಗಳದೊಳಗೆ ಆಟಗಾರರು ಕುಣಿದು ಕುಪ್ಪಳಿಸಿದರು. ಪ್ರೇಕ್ಷಕರ ಸಂಭ್ರಮ ಹೇಳತೀರದು!
‘ಬಿ’ ಗುಂಪಿನ ಈ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ 226 ರನ್‌ಗಳ ಗುರಿಯನ್ನು ಬಾಂಗ್ಲಾದೇಶ ತಂಡದವರು 49 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಗುರಿ ತಲುಪಿದರು. ಈಗ ಶಕೀಬ್ ಅಲ್ ಹಸನ್ ಪಡೆ ತನ್ನ ನಾಲ್ಕು ಪಂದ್ಯಗಳಿಂದ ಒಟ್ಟು ನಾಲ್ಕು ಪಾಯಿಂಟ್ ಹೊಂದಿದೆ. ಹಾಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಎದುರು ಉಳಿದ ಪಂದ್ಯಗಳನ್ನು ಆಡಬೇಕಿದೆ, ಹಾಗಾಗಿ ಕ್ವಾರ್ಟರ್ ಫೈನಲ್ ತಲುಪುವ ಈ ತಂಡದ ಕನಸು ಇನ್ನೂ ಜೀವಂತವಾಗಿದೆ.

ಈ ಗೆಲುವಿಗೆ ಪ್ರಮುಖ ಕಾರಣ ಮಹ್ಮದುಲ್ಲಾ (ಔಟಾಗದೆ 21) ಹಾಗೂ ಶಫಿಯುಲ್ ಇಸ್ಲಾಮ್ (ಔಟಾಗದೆ 24). ಇವರಿಬ್ಬರು ಮುರಿಯದ ಎಂಟನೇ ವಿಕೆಟ್ ಜೊತೆಯಾಟದಲ್ಲಿ ಅಮೂಲ್ಯ 58 ರನ್ ಸೇರಿಸಿದರು.ತಮೀಮ್ ಇಕ್ಬಾಲ್ ಹಾಗೂ ಇಮ್ರುಲ್ ಕೇಯ್ಸಾ ಮೊದಲ ವಿಕೆಟ್‌ಗೆ 52 ರನ್ ಸೇರಿಸಿದರು. 100 ಎಸೆತಗಳನ್ನು ಎದುರಿಸಿದ ಕೇಯ್ಸಾ ಐದು ಬೌಂಡರಿ ಗಳಿಸಿದರು. ಇಂಗ್ಲೆಂಡ್ ಬೌಲರ್‌ಗಳು ಕೇವಲ ವೈಡ್ ರೂಪದಲ್ಲಿ 23 ರನ್ ನೀಡಿದರು.

ನಾಯಕ ಶಕೀಬ್ ಟಾಸ್ ಗೆದ್ದು ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಈ ಕ್ರಮವನ್ನು ಬೌಲರ್‌ಗಳು ಸಮರ್ಥಿಸಿಕೊಂಡರು. 53 ರನ್‌ಗಳ ಅಂತರದಲ್ಲಿ ಎದುರಾಳಿಯ ಮೂರು ವಿಕೆಟ್ ಕಬಳಿಸಿದ್ದೇ ಇದಕ್ಕೆ ಸಾಕ್ಷಿ.ಆಡಿದ ಐದು ಪಂದ್ಯಗಳಿಂದ ಇಂಗ್ಲೆಂಡ್ ಕೇವಲ ಐದು ಪಾಯಿಂಟ್ ಹೊಂದಿದೆ. ವೆಸ್ಟ್‌ಇಂಡೀಸ್ ಎದುರು ಒಂದು ಪಂದ್ಯ ಬಾಕಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT