ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಪ ವಿಮೋಚನೆ: ಜಿಲ್ಲೆಗೆ ದಕ್ಕಿದ 2 ಸಚಿವ ಸ್ಥಾನ

Last Updated 13 ಜುಲೈ 2012, 7:40 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಬಿಜೆಪಿ 2008ರ ಚುನಾವ ಣೆಗೂ ಮೊದಲು ಹಿಂದುತ್ವದ ಪ್ರಯೋಗ ಶಾಲೆ ಎಂದೇ ಭಾವಿಸಿದ್ದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ, ಐವರು ಶಾಸಕರು ಮತ್ತು ಒಬ್ಬ ಸಂಸದರು ಇದ್ದರೂ ಯಡಿಯೂರಪ್ಪ ನೇತೃತ್ವದ ಸಂಪುಟ ದಲ್ಲಿ ಜಿಲ್ಲೆಗೆ ಪ್ರಾತಿನಿಧ್ಯ ಸಿಕ್ಕಿರಲಿಲ್ಲ.
 
ಜಿಲ್ಲೆಯ ಸಂಸದರಾಗಿದ್ದ ಡಿ.ವಿ.ಸದಾನಂದಗೌಡರು ಮುಖ್ಯ ಮಂತ್ರಿಯಾದಾಗಲೂ ಜಿಲ್ಲೆಗೆ ಸಚಿವ ಸ್ಥಾನ ಒಲಿಯಲಿಲ್ಲ. ಈಗ ಶೆಟ್ಟರ್ ಸಂಪುಟದಲ್ಲಿ ಜಿಲ್ಲೆಗೆ ಶಾಪ ವಿಮೋಚನೆ ಆಗಿದ್ದು, ಎರಡು ಸಚಿವ ಸ್ಥಾನಗಳು ಒಲಿದಿವೆ. ಅಭಿವೃದ್ಧಿಯ ನಿರೀಕ್ಷೆಗಳು ಗರಿಗೆದರಿವೆ. ಜಿಲ್ಲೆಯನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳಿಗೂ ಪರಿಹಾರ ಸಿಗಬಹುದೆಂಬ ಆಶಾಭಾವನೆ ಜನರಲ್ಲಿ ಚಿಗುರೊಡೆದಿದೆ.

ಬಿಜೆಪಿ ಸರ್ಕಾರದಲ್ಲಿ ಉಳಿದಿರುವ ಕಡಿಮೆ ಅವಧಿಗಾದರೂ ಜಿಲ್ಲೆಗೆ ಎರಡು ಸಚಿವ ಸ್ಥಾನ ಸಿಕ್ಕಂತಾಯಿಲ್ಲ ಎನ್ನುವ ಖುಷಿ ಪಕ್ಷದ ಕಾರ್ಯಕರ್ತರಲ್ಲಿ ಮನೆಮಾಡಿದೆ. ಬಿಜೆಪಿ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದ ಮೇಲೆ ಜಿಲ್ಲೆಗೆ ಭೇಟಿ ನೀಡಿದ್ದ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟ ವಿಸ್ತರಣೆ ಸಂದರ್ಭ ಜಿಲ್ಲೆಗೆ ಪ್ರಾತಿನಿಧ್ಯ ಕೊಡುವುದಾಗಿ ಹೇಳಿಕೊಂಡು ಮೂರು ವರ್ಷ ಕಳೆದಿದ್ದರು. ನಂತರದ ರಾಜ ಕೀಯ ಬೆಳವಣಿಗೆಯಲ್ಲಿ ಅನಿರೀಕ್ಷಿತವಾಗಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಸದಾನಂದಗೌಡರಿಂದಲೂ ಜಿಲ್ಲೆಗೆ ಪ್ರಾತಿನಿಧ್ಯ ಒದಗಿಸಿಕೊಡಲು ಆಗಿರಲಿಲ್ಲ.

ಜಿಲ್ಲೆಯ ಶಾಸಕರಲ್ಲೆ ಎರಡು ಗುಂಪುಗಳಾಗಿವೆ. ಹಾಗಾಗಿ ಒಬ್ಬರಿಗೆ ಸಚಿವ ಸ್ಥಾನ ನೀಡಿದರೆ ಮತ್ತೊಬ್ಬರಿಗೆ ಅಸಾಮಾಧಾನ ಆಗುತ್ತದೆ ಎಂಬ ಕಾರಣದಿಂದ ಸಚಿವ ಸ್ಥಾನ ಜಿಲ್ಲೆಗೆ ದೊರಕದಂತಾ ಗಿದೆ ಎಂಬ ಮಾತುಗಳು ರಾಜಕೀಯ ಚಿಂತಕರ ಚಾವಡಿಯಲ್ಲಿ ಕೇಳಿಬರುತ್ತಿತ್ತು.

ಈ ಮಾತು ಹೆಚ್ಚು ಮಾರ್ಧನಿಸಲು ಪ್ರಾರಂಭಿಸಿದಾಗ ಜಿಲ್ಲೆಯ ಐವರು ಶಾಸಕರು ಒಂದಾಗಿ `ಜಿಲ್ಲೆಗೆ ಸಚಿವ ಸ್ಥಾನ ಕೊಡಬೇಕು. ಯಾರಿಗೂ ಕೊಟ್ಟರು ಸರಿಯೇ~ ಎಂದು ಮುಖ್ಯಮಂತ್ರಿ ಮತ್ತು ಬಿಜೆಪಿ ವರಿಷ್ಠರಿಗೆ ಬೇಡಿಕೆ ಇಟ್ಟಿದ್ದರು. ಬಹಿರಂಗ ಹೇಳಿಕೆ ನೀಡುತ್ತಿದ್ದ ಶಾಸಕರು ಸಚಿವ ಸ್ಥಾನ ಜಿಲ್ಲೆಗೆ ಬೇಕೆ ಬೇಕೆಂದು ವರಿಷ್ಠರಿಗೆ ತಿಳಿಸಲಾಗಿದೆ. ಯಾರಿಗೆ ಕೊಟ್ಟರು ಸರಿಯೇ.
 
ಜಿಲ್ಲೆಯ ಅಭಿವೃದ್ಧಿ ಮತ್ತು ಪಕ್ಷ ಸಂಘಟನೆ ದೃಷ್ಟಿಯಿಂದ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಬೇಕೆ ಬೇಕು ಎನ್ನುವ ದನಿಯನ್ನು ದಿನದಿನಕ್ಕೂ ಗಟ್ಟಿಗೊಳಿಸುತ್ತಿದ್ದರು. ಡಿ.ವಿ. ಸದಾ ನಂದಗೌಡರು ಮುಖ್ಯಮಂತ್ರಿಯಾದ ನಂತರ ಸಚಿವ ಸ್ಥಾನದ ಆಕಾಂಕ್ಷಿಗಳ ರೇಸ್‌ನಲ್ಲಿ ಸಿ.ಟಿ.ರವಿ, ಡಿ.ಎನ್.ಜೀವರಾಜ್ ಮತ್ತು ಎಂ.ಪಿ.ಕುಮಾರಸ್ವಾಮಿ ಹೆಸರು ಹೆಚ್ಚು ಚಾಲ್ತಿಯಲ್ಲಿದ್ದರು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಯ ನೂತನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಜಿಲ್ಲೆಗೆ ಎರಡು ಸಂಪುಟ ದರ್ಜೆಯ ಸಚಿವ ಸ್ಥಾನಗಳು ಅಯಾಚಿತವಾಗಿ ಒಲಿದಿವೆ. ಸಚಿವ ಸ್ಥಾನದ ಆಕಾಂಕ್ಷಿಗಳ ರೇಸ್‌ನಲ್ಲಿದ್ದ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಸಹಜವಾಗಿಯೇ ನಿರಾಸೆಯಾಗಿದೆ.

ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ಸಿಗದೆ ಚಿಕ್ಕಮಗಳೂರು ಜಿಲ್ಲೆ ಅಭಿವೃದ್ಧಿ ಹೊಂದುತ್ತಿಲ್ಲ ಎಂಬ ಮಾತುಗಳು  ಪಕ್ಷಾತೀತವಾಗಿ ಕೇಳಿ ಬರುತ್ತಿದ್ದವು. ಇಬ್ಬರಿಗೆ ಸಚಿವರ ಸ್ಥಾನ ಸಿಕ್ಕಿರುವುದರಿಂದ ಇವರಲ್ಲಿ ಯಾರಾದರೊಬ್ಬರಿಗೆ ಜಿಲ್ಲೆಯ ಉಸ್ತುವಾರಿ ಹೊಣೆ ಸಿಗುವ ನಿರೀಕ್ಷೆ ಇದ್ದು, ಇವರ ಅವಧಿಯಲ್ಲಾದರೂ ಜಿಲ್ಲೆ ಅಭಿ ವೃದ್ಧಿ ಚಕ್ರಕ್ಕೆ ವೇಗ ಸಿಗಲಿದೆಯೇ ಎನ್ನುವುದನ್ನು ಕಾದುನೋಡಬೇಕು.

ಸರ್ಕಾರದ ಪ್ರತಿಪಾದಕನಿಗೆ ಸಚಿವ ಪದವಿ

ಪಕ್ಷ ಮತ್ತು ಸರ್ಕಾರದ ನೀತಿಗಳ ಸಮರ್ಪಕ ಪ್ರತಿಪಾದಕನಾಗಿ ಪಕ್ಷದೊಳಗೆ ಪ್ರಭಾವಿಯಾಗಿ ಗುರುತಿಸಿಕೊಂಡಿರುವ ರವಿ ಅವರಿಗೆ ಸ್ವಾಭಾವಿಕ ವಾಗಿಯೇ ಸಚಿವ ಸ್ಥಾನ ಒಲಿದಿದೆ. ರಾಜಕೀಯ ಬದುಕು ನೀಡಿದ ದತ್ತಪೀಠ ಹೋರಾಟ, ರಾಜಕೀಯ ಶಿಸ್ತು ಮತ್ತು ಪಕ್ಷ ನಿಷ್ಠೆ ಕಲಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅವರನ್ನು ಇಂದು ಸಚಿವ ಸ್ಥಾನ ಅಲಂಕಿರಿಸುವಂತೆ ಮಾಡಿದೆ.

ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿದ ಸಿ.ಟಿ.ರವಿ ವಿದ್ಯಾರ್ಥಿ ದಿಸೆಯಲ್ಲಿ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದರು. ರೈತಪರ ಧ್ವನಿ ಎತ್ತಿ ಕಾಲೇಜು ದಿನಗಳಲ್ಲಿ ಜೈಲು ವಾಸ ಕೂಡ ಅನುಭವಿಸಿದ್ದರು.
ರೈತ ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ, ಎಬಿವಿಪಿ ಮೂಲಕ ರಾಷ್ಟ್ರೀಯ ಚಿಂತನೆಗಳತ್ತ ಒಲವು ಬೆಳೆಸಿಕೊಂಡರು. ಐಡಿಎಸ್‌ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕಾಲೇಜು ದಿನಗಳಲ್ಲೇ ರಾಮಜನ್ಮಭೂಮಿ ಮುಕ್ತಿ ಹೋರಾಟದಲ್ಲಿ ಪಾಲ್ಗೊಂಡಿದ್ದರು.

1989ರಲ್ಲಿ ಬಿಜೆಪಿ ಸಾಮಾನ್ಯ ಸದಸ್ಯರಾಗಿ ಸಕ್ರಿಯ ರಾಜಕೀಯ ಪ್ರವೇಶಿಸುವ ಮೂಲಕ ಆಲ್ದೂರು ಹೋಬಳಿ ಬಿಜೆಪಿ ಘಟಕ ಕಾರ್ಯದರ್ಶಿ ಹುದ್ದೆ ನಿಭಾಯಿಸಿದರು. ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಜಿಲ್ಲಾ ಯುವ ಸಮ್ಮೇಳನ ಯಶಸ್ವಿಯಾಗಿ ನಿರ್ವಹಿಸುವ ಮೂಲಕ ನಾಯಕತ್ವ ಗುಣವನ್ನು ಪ್ರದರ್ಶಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಯುವಮೋರ್ಚಾ ರಾಜ್ಯಕಾರ್ಯದರ್ಶಿ, ಯುವ ಮೋರ್ಚಾ ರಾಜ್ಯ ಅಧ್ಯಕ್ಷ, ಬಿಜೆಪಿ ರಾಜ್ಯ ಕಾರ್ಯದರ್ಶಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರ ಹೀಗೆ ಪಕ್ಷದ ನಾನಾ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಆಯೋಧ್ಯೆ ಹೋರಾಟದಲ್ಲಿಯೂ ಸಕ್ರಿಯವಾಗಿ ಭಾಗವಹಿದ್ದರು. 1993ರ ದೆಹಲಿ ಸತ್ಯಾಗ್ರಹದಲ್ಲೂ ಪಾಲ್ಗೊಂಡು ಮಹಾರಾಷ್ಟ್ರದಲ್ಲಿ ಜೈಲುವಾಸ ಅನುಭವಿಸಿದ್ದಾರೆ. ಮುರಳಿ ಮನೋಹರ ಜೋಷಿಯವರ `ಭಾರತ ಏಕತಾ ಯಾತ್ರೆ~ಯಲ್ಲಿ ಶ್ರೀನಗರದವರೆಗೂ ಪ್ರಯಾಣ ಮಾಡಿ ್ದದರು. ಹುಬ್ಬಳ್ಳಿ ಧ್ವಜ ಸತ್ಯಾಗ್ರಹ, ದತ್ತಪೀಠ ಮುಕ್ತಿ ಹೋರಾಟದ ಪಕ್ಷ ದೊಳಗೆ ಅವರನ್ನು ರಾಷ್ಟ್ರೀಯ ಮುಖಂಡರು ಗುರುತಿಸುವಂತೆ ಮಾಡಿದವು.

1999ರ ವಿದಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಂದಿನ ಪ್ರಭಾವಿ ಸಚಿವ ಕಾಂಗ್ರೆಸ್‌ನ ಸಗೀರ್ ಅಹಮದ್‌ಅವರಿಗೆ ತೀವ್ರ ಪೈಪೋಟಿವೊಡ್ಡಿದ್ದರು. ಅತ್ಯಲ್ಪ ಮತಗಳ ಅಂತರದಿಂದ ಸೋಲು ಕಂಡಿದ್ದರು. 2004ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ 24 ಸಾವಿರಕ್ಕೂ ಅಧಿಕ ಮತಗಳಿಂದ ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.

2008ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ವಿಧಾನಸಭಾ ಪುನರ್‌ವಿಂಗಡಿತ ಕ್ಷೇತ್ರದಿಂದ 15 ಸಾವಿರಕ್ಕೂ ಅಧಿಕ ಮತಗಳಿಂದ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.   ರೈತರು, ದಲಿತರು ಹಾಗೂ ಹಿಂದುಳಿದ ವರ್ಗದವರ ಸಮಸ್ಯೆಗಳು ಸೇರಿ ದಂತೆ, ಮಳಲೂರು ಏತ ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ ಚಿಕ್ಕಮ ಗಳೂರಿನಿಂದ ಬೆಂಗಳೂರಿಗೆ 295 ಕಿ.ಮೀಗಳ 10 ದಿನಗಳ ಕಾಲ್ನಡಿಗೆ ಜಾಥಾ ನಡೆಸಿ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಕಾಯಕಲ್ಪಕ್ಕಾಗಿ ಶ್ರಮಿಸಿ, ದತ್ತಪೀಠ ಸತ್ಯ ಸಂದೇಶ ಯಾತ್ರೆಯ ಮೂಲಕ ದತ್ತಪೀಠದ ವಾಸ್ತಾವಂಶ  ಇತ್ತೀಚೆಗೆ ತಮ್ಮ ಕ್ಷೇತ್ರ ವ್ಯಾಪ್ತಿಯ ಪ್ರತಿ ಗ್ರಾಮ ಪಂಚಾ ಯಿತಿಯಲ್ಲೂ ಗ್ರಾಮ ವಾಸ್ತವ್ಯ ಹಾಗೂ ಸತ್ಸಂಗ ನಡೆಸುವ ಮೂಲಕ ಹಳ್ಳಿಗಳಲ್ಲಿ ಸಾಮರಸ್ಯದ ಭಾವ ಮೂಡಿಸುವ ಕೆಲಸ ಮಾಡಿದ್ದಾರೆ.
 

 ರೈತ ಪರ ಹೋರಾಟದಿಂದ ಮಂತ್ರಿ ಪದವಿಯವರೆಗೆ
ಸಾಮಾನ್ಯವರ್ಗದ ಕುಟುಂಬದಲ್ಲಿ ಜನಿಸಿದ ಡಿ.ಎನ್.ಜೀವರಾಜ್ ತಮ್ಮ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ನರಸಿಂಹರಾಜಪುರ ಸರ್ಕಾರ ಶಾಲೆಯಲ್ಲಿ ಪೂರ್ಣ ಗೊಳಿಸಿ, ನಂತರ ಶಿವಮೊಗ್ಗ ದೇಶಿಯ ವಿದ್ಯಾ ಶಾಲೆಯಲ್ಲಿ ಪಿಯುಸಿ ಶಿಕ್ಷಣ ಪಡೆದರು. ಪದವಿ ಪೂರ್ಣಗೊಳಿಸದೆ ರಾಜಕೀಯ ಕ್ಷೇತ್ರಕ್ಕೆ ದುಮುಕಿದರು. 1986ರಲ್ಲಿ ಸಕ್ರಿಯ ರಾಜಕೀಯ ಪ್ರವೇಶ ಮಾಡಿದ ಜೀವರಾಜ್, 1990ರಲ್ಲಿ ಎನ್.ಆರ್.ಪುರ ತಾಲ್ಲೂಕು ಬಿಜೆಪಿ ಅಧ್ಯಕ್ಷರಾಗಿ, ನಂತರದಲ್ಲಿ ಶೃಂಗೇರಿ ಕ್ಷೇತ್ರದ ಪಕ್ಷದ ಅಧ್ಯಕ್ಷರಾಗಿ ಪಕ್ಷ ಸಂಘಟಿಸಿದ್ದಾರೆ. 

1994ರಲ್ಲಿ ಪ್ರಥಮ ಬಾರಿಗೆ ಎಚ್.ಜಿ.ಗೋವಿಂದೇಗೌಡರು ಮತ್ತು 1998ರಲ್ಲಿ ಡಿ.ಬಿ.ಚಂದ್ರೇಗೌಡರ ವಿರುದ್ಧ ಸ್ಪರ್ಧಿಶಿ ಅತ್ಯಲ್ಪ ಮತಗಳ ಅಂತರದಿಂದ ಸೋಲು ಕಂಡಿದ್ದರು. 2004ರ ಚುನಾವಣೆಯಲ್ಲಿ ಗೆದ್ದು, ವಿಧಾನಸಭೆ ಪ್ರವೇಶಿಸಿದರು. ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಮುಖ್ಯ ಸಚೇತಕರಾಗಿ ಕಾರ್ಯನಿರ್ವಹಿಸಿದ್ದಾರೆ.

2008ರ ಸಾರ್ವತ್ರಿಕ ಚುನಾ ವಣೆಯಲ್ಲಿ ಪುನರಾಯ್ಕೆಗೊಂಡು, ಮತ್ತೆ ಮುಖ್ಯ ಸಚೇತಕರಾಗಿ ಮುಂದು ವರಿದಿದ್ದರು. ಪಕ್ಷದ ಆಂತರಿಕ ಬೆಳವಣಿಗೆಯಿಂದ ಬೇಸತ್ತು ಮುಖ್ಯ ಸಚೇತಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಕ್ಷೇತ್ರಕ್ಕೆ ಸೀಮಿತಗೊಂಡಿದ್ದರು. ಅವರ ಚುರು ಕುತನದ ವ್ಯಕ್ತಿತ್ವ ಮತ್ತು ಪಕ್ಷ ಸಂಘಟನೆ ಸಾಮರ್ಥ್ಯ ಅವರಿಗೆ ಸಚಿವ ಸ್ಥಾನ ದಕ್ಕಿಸಿಕೊಟ್ಟಿದೆ.

ಚಿಕ್ಕ ವಯಸ್ಸಿನಲ್ಲೇ ರೈತರು ಮತ್ತು ಅಡಿಕೆ ಬೆಳೆಗಾರರ ಪರ ಹೋರಾಟ ನಡೆಸಿದ್ದಾರೆ. ಅಡಿಕೆ ಬೆಳೆಗಾರರ ಸಂಕಟ ನಿವಾರಣೆಗಾಗಿ ಕೊಪ್ಪ ತಾಲ್ಲೂಕಿನ ಗುಡ್ಡೆತೋಟದಿಂದ ಕೊಪ್ಪದವರೆಗೆ ಕಾಲ್ನಡಿಗೆ ಜಾಥಾ ನಡೆಸಿ ಶೃಂಗೇರಿ ಕ್ಷೇತ್ರದಲ್ಲಿ ಪಕ್ಷದೊಳಗೆ ಪ್ರಭಾವಿ ನಾಯಕನಾಗಿ ಗುರುತಿಸಿಕೊಂಡಿದ್ದರು. ಸಹಕಾರಿ ಕ್ಷೇತ್ರದಲ್ಲೂ ತೊಡಗಿಸಿಕೊಂಡು, ಎನ್.ಆರ್.ಪುರದ ಪಿಸಿಎಆರ್‌ಡಿ ಬ್ಯಾಂಕ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾಗಿಯೂ ಕೆಲಸ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT