ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಪಗ್ರಸ್ತ ಮಾಲವಿ

Last Updated 16 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ ತಾಲ್ಲೂಕಿನ ಮಾಲವಿ ಗ್ರಾಮದಲ್ಲಿರುವ ಪುಟ್ಟ ಅಣೆಕಟ್ಟೆಗೆ ಮಾಲವಿ ಜಲಾಶಯ ಎಂಬ ದೊಡ್ಡ ಹೆಸರಿದೆ! ಎರಡು ಟಿ.ಎಂ.ಸಿ. ನೀರು ಸಂಗ್ರಹ ಸಾಮರ್ಥ್ಯದ ಈ ಜಲಾಶಯ ಎಂಬತ್ತರ ದಶಕದಿಂದೀಚೆಗೆ ಸದಾ ಬರಿದು.

ಎಂಬತ್ತರ ದಶಕದಲ್ಲಿ ಕಬ್ಬು, ಬತ್ತ, ಕಡಲೆ, ಸೂರ್ಯಕಾಂತಿ, ಹತ್ತಿ ಮತ್ತಿತರ ಬೆಳೆಗಳಿಂದ ನಳನಳಿಸುತ್ತಿದ್ದ ಮಾಲವಿ ಅಚ್ಚುಕಟ್ಟು ಪ್ರದೇಶದ ಭೂಮಿಗಳು ಈಗ ಬಂಜರಾಗಿವೆ. ಅಚ್ಚುಕಟ್ಟು ಪ್ರದೇಶದ ಕೆಲವು ರೈತರು ಕೊಳವೆ ಬಾವಿ ಕೊರೆಸಿ ಅಷ್ಟೋ ಇಷ್ಟೋ ಬೆಳೆ ಬೆಳೆದುಕೊಳ್ಳುವ ಭಗೀರಥ ಪ್ರಯತ್ನ ಮಾಡಿದ್ದಾರೆ. ಜಲಾಶಯ ಒಣಗಿದ್ದರಿಂದ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿದಿದೆ. ಈ ಭಾಗದಲ್ಲಿ ಸರಿಯಾಗಿ ಮಳೆ ಬೀಳದೇ ಇರುವುದರಿಂದ ಮಾಲವಿ ಜಲಾಶಯದ ಅಚ್ಚುಕಟ್ಟು ಪ್ರದೇಶ ಬೆಂಗಾಡಿನಂತಾಗಿದೆ. ಮಾಲವಿ ಜಲಾಶಯ ಕಳೆದ ನಲವತ್ತು ವರ್ಷಗಳಲ್ಲಿ ಒಂದೆರಡು ಬಾರಿ ತುಂಬಿದೆ.

ಜಲಾಶಯದ ನೀರನ್ನು ರೈತರ ಹೊಲಗಳಿಗೆ ಹರಿಸಲು ನಿರ್ಮಿಸಿದ್ದ ಕಾಲುವೆಗಳೆಲ್ಲ ಹೂತು ಹೋಗಿವೆ. ಈ ಜಲಾಶಯಕ್ಕೆ ಭದ್ರಾ ನದಿಯಿಂದ ನೀರು ತುಂಬಿಸುವ ಮೂಲಕ ಶಾಶ್ವತ ಪುನಶ್ಚೇತನ ನೀಡಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ರೈತರು ಸಂಘಟಿತರಾಗಿ ಹೋರಾಟ ನಡೆಸಿದ್ದರು. ಜಲಾಶಯಕ್ಕೆ ಶಾಶ್ವತ ನೀರು ಪೂರೈಸುವ ಭರವಸೆ ನೀಡಿ ಜನರ ಬೆಂಬಲ ಪಡೆದು ಹೋದ ರಾಜಕಾರಣಿಗಳು ಈ ನಿಟ್ಟಿನಲ್ಲಿ ಯಾವ  ಪ್ರಯತ್ನವನ್ನೂ ಮಾಡಲಿಲ್ಲ.

ಹೀಗಾಗಿ ಈ ಜಲಾಶಯದಿಂದ ರೈತರಿಗೆ ಮೂರು ಕಾಸಿನ ಪ್ರಯೋಜನವೂ ಇಲ್ಲ. ಎಸ್. ನಿಜಲಿಂಗಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಂದಿನ ಶಾಸಕ ಬಾಚಿಗೊಂಡನಹಳ್ಳಿ ಚನ್ನಬಸವನಗೌಡರ ಪ್ರಯತ್ನದಿಂದಾಗಿ ಮಾಲವಿ ಜಲಾಶಯ ನಿರ್ಮಾಣವಾಯಿತು. ಮಳೆಗಾಲದಲ್ಲಿ ಹಳ್ಳಗಳ ಮೂಲಕ ಹರಿದು ಹೋಗುತ್ತಿದ್ದ ಸುಮಾರು 2 ಟಿಎಂಸಿ ನೀರನ್ನು ತಡೆದು ನಿಲ್ಲಿಸಿ ಅರೆ ನೀರಾವರಿ ಬೆಳೆಗಳಿಗೆ ಪೂರೈಸುವ ಉದ್ದೇಶ ಈ ಯೋಜನೆಯದಾಗಿತ್ತು. 1970ರ ದಶಕದ ಕೊನೆಯ ವೇಳೆಗೆ ಈ ಜಲಾಶಯಕ್ಕೆ ಹರಿದು ಬರುತ್ತಿದ್ದ ಹಳ್ಳಗಳಿಗೆ ಮೇಲ್ಭಾಗದಲ್ಲಿ ಅಲ್ಲಲ್ಲಿ ಚೆಕ್‌ಡ್ಯಾಂಗಳನ್ನು ನಿರ್ಮಿಸಲಾಯಿತು. ಆನಂತರ ಜಲಾಶಯಕ್ಕೆ ಬರುವ ನೀರಿನ ಪ್ರಮಾಣ ಕಡಿಮೆಯಾಯಿತು.

ಈ ಶಾಪಗ್ರಸ್ತ ಮಾಲವಿಯ ಒಡಲು ತುಂಬಿಸುವ ಭಗೀರಥ ಎಲ್ಲಿದ್ದಾನೆ ಎಂಬುದು ತಾಲ್ಲೂಕಿನ ರೈತರ ಪ್ರಶ್ನೆ. ರಾಜ್ಯ ಸಂಪುಟದಲ್ಲಿ ಬಳ್ಳಾರಿ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದ ಎನ್. ಎಂ. ನಬಿ ಅವರು ಮಾಲವಿ ಜಲಾಶಯದ ಪುನಶ್ಚೇತನಕ್ಕೆ ಪ್ರಯತ್ನ ಮಾಡಿದ್ದರು. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ.

ವಿಪರ್ಯಾಸ
 ಮಾಲವಿ ಜಲಾಶಯದ ನಿರ್ಮಾಣ ಕಾಮಗಾರಿ ಆರಂಭವಾದದ್ದು 1959ರಲ್ಲಿ. ಜಲಾಶಯ ಪೂರ್ಣಗೊಂಡಿದ್ದು 1972ರಲ್ಲಿ. ಪ್ರಾರಂಭಿಕ ಹಂತದಲ್ಲಿ ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ಜಲಾಶಯ ನಿರ್ಮಾಣ ಮಾಡಬಹುದು ಎಂಬ ಅಂದಾಜಿತ್ತು. ಆದರೆ ಕಾಮಗಾರಿ ಮುಗಿಯುವ ಹೊತ್ತಿಗೆ ಹದಿನಾರು ಕೋಟಿ ರೂಪಾಯಿಗಳು ಖರ್ಚಾಗಿದ್ದವು.  ಮಾಲವಿ ಜಲಾಶಯದ ವಿಸ್ತಾರ 7326 ಎಕರೆ. ಈ ಜಲಾಶಯದಿಂದ 1972 ರಿಂದ 1980ವರೆಗೆ ಸತತವಾಗಿ ಎರಡು ಬೆಳೆಗಳಿಗೆ ನೀರು ಒದಗಿಸಲಾಯಿತು. 1981ರ ನಂತರ ಕೆಲವು ವರ್ಷಗಳ ಕಾಲ ಒಂದು ಬೆಳೆಗೂ ನೀರು ಒದಗಿಸಲು ಸಾಧ್ಯವಾಗದೆ ಹೋಯಿತು.

ಸುಮಾರು 302 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಕಾಲುವೆ, ಉಪಕಾಲುವೆಗಳು ಸರಿಯಾದ ನಿಗಾವಣೆ ಇಲ್ಲದೆ ಹಾಳಾದವು. ಮಾಲವಿ ಜಲಾಶಯದಿಂದ ನೀರಾವರಿ ಸೌಲಭ್ಯ ಪಡೆದು ಬದುಕು ರೂಪಿಸಿಕೊಂಡಿದ್ದ ಮಾಲವಿ, ಹರೇಗೊಂಡನಹಳ್ಳಿ, ಚಿಂತ್ರಪಳ್ಳಿ, ಕಡ್ಲೆಬಾಳು, ಬ್ಯಾಸ್ತೆರ, ಹಿರೇಸೊಬಟಿ, ಬಾಚಿಗೊಂಡನಹಳ್ಳಿ ಮುಂತಾದ ಹಳ್ಳಿಗಳ ರೈತರ ಮಕ್ಕಳು ಬದುಕುವ ಮಾರ್ಗ ಹುಡುಕಿಕೊಂಡು ನಗರಗಳತ್ತ ಹೋಗಿದ್ದಾರೆ.

ಜಲಾಶಯ ಬರಿದಾಗುತ್ತಿದ್ದಂತೆ ಅಂತರ್ಜಲ ಕುಸಿಯಿತು. ಪರಿಣಾಮವಾಗಿ ಸುತ್ತಲಿನ ನೂರಾರು ಕೊಳವೆ ಬಾವಿಗಳೂ ಬರಿದಾದವು.  ಹಗರಿಬೊಮ್ಮನಹಳ್ಳಿ ತಾಲೂಕಿನ ಅನೇಕ ಹಳ್ಳಿಗಳಲ್ಲಿ ಈಗ ಕುಡಿಯುವ ನೀರಿಗೆ ಜನರು ಪರದಾಡುತ್ತಿದ್ದಾರೆ.

ಕೃಷ್ಣಾ ಕೊಳ್ಳದ ನದಿಗಳ ಹೆಚ್ಚುವರಿ ನೀರು ಮರುಹಂಚಿಕೆಯಾಗಿದೆ.  ಭದ್ರಾ ಜಲಾಶಯದಿಂದ ಮಾಲವಿಗೆ ಎರಡು ಟಿಎಂಸಿ ನೀರು ಪೂರೈಕೆಯಾದರೆ ಮಾಲವಿ ಜಲಾಶಯದ ಒಡಲು ತುಂಬುತ್ತದೆ.  ಜಲಾಶಯದಲ್ಲಿ ನೀರು ನಿಂತರೆ ಸುತ್ತಮುತ್ತಲಿನ ಪ್ರದೇಶದ ಅಂಜರ್ತಲದ ಚೇತರಿಕೆಗೆ ಕಾರಣವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT