ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾರದಹಳ್ಳಿಗೆ ಶಾಪವಾದ ಕಾಲುವೆ ನೀರು

Last Updated 17 ಡಿಸೆಂಬರ್ 2013, 6:00 IST
ಅಕ್ಷರ ಗಾತ್ರ

ಶಹಾಪುರ: ಹನಿ ನೀರಿಗಾಗಿ ಪರದಾಡುವುದು ಒಂದೆಡೆಯಾದರೆ, ಹಿಡಿ ಅಗಲ ಜಾಗ ತೊಡಿದರೆ ಝರಿ ಝರಿಯಾಗಿ ಹೊರ ಚಿಮ್ಮುವ ನೀರು ಶಾರದಹಳ್ಳಿಯ ಗ್ರಾಮಸ್ಥರಿಗೆ ಶಾಪ­ವಾಗಿದೆ. ಇಡೀ ಹಳ್ಳಿಯನ್ನು ಸ್ಥಳಾಂತರಿಸುವ ಅಧಿಕಾರಿಗಳ ಸಲಹೆ ಇಲ್ಲಿನ ಸಾರ್ವಜನಿಕರ ನಿದ್ದೆಗೆಡಿಸಿದೆ.

ತಾಲ್ಲೂಕಿನಿಂದ 25 ಕಿ.ಮೀ ದೂರದಲ್ಲಿರುವ ಶಾರದಹಳ್ಳಿಯು ರಸ್ತಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುತ್ತದೆ. ಐದು ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. 1ರಿಂದ 8ನೇ ತರಗತಿಯವರೆಗೆ ಶಾಲೆಯಿದೆ. 300 ಕುಟುಂಬಗಳಿದ್ದು, ಹೆಚ್ಚಾಗಿ ವಾಲ್ಮೀಕಿ ಹಾಗೂ ಕುರುಬ ಸಮುದಾಯ ಜನತೆ ವಾಸವಾಗಿದ್ದಾರೆ.

ಗ್ರಾಮದ ಮೇಲ್ಭಾಗದಲ್ಲಿ ಕೆರೆ ನಾಶಮಾಡಿ ಭತ್ತದ ಗದ್ದೆ ನಿರ್ಮಿಸಲಾಗಿದೆ. ಅದರ ಪಕ್ಕದಲ್ಲಿ ಹರಿಯುವ ವಿತರಣಾ ಕಾಲುವೆ 7ರ ಹೆಚ್ಚುವರಿ ನೀರು ಗ್ರಾಮದ ಒಳಗೆ ಬರುತ್ತದೆ. ಇಷ್ಟು ಸಾಲದು ಎನ್ನುವಂತೆ ಗ್ರಾಮದ ಸುತ್ತಮುತ್ತ ಭತ್ತದ ಗದ್ದೆಗಳಿವೆ.

ಗ್ರಾಮದಲ್ಲಿ ಸಮರ್ಪಕವಾದ ಒಳಚರಂಡಿ ವ್ಯವಸ್ಥೆಯಿಲ್ಲ. ನೀರು ಒಂದೆಡೆ ಸಂಗ್ರಹವಾಗಿ ರೋಗಗಳ ಉತ್ಪಾದನೆಯ ತಾಣವಾಗುತ್ತಿದೆ. ಹೆಚ್ಚಿನ ಸೊಳ್ಳೆ ಕಾಟವಿರುವುದರಿಂದ ಗ್ರಾಮಸ್ಥರಿಗೆ ಮಲೇರಿಯಾ ಬರುವುದು ಸಾಮಾನ್ಯವಾಗಿದೆ.

ಭತ್ತದ ಗದ್ದೆಯಲ್ಲಿ ಸಿಂಪರಣೆ ಮಾಡಿದ ಕ್ರಿಮಿನಾಶಕ ನೀರಿನಲ್ಲಿ ಸೇರ್ಪಡೆಯಾಗುತ್ತದೆ. ಕಲುಷಿತ ಬಾವಿಯ ನೀರು ಕುಡಿಯುತ್ತೇವೆ. ಸದಾ ರೋಗದ ಭೀತಿಯಲ್ಲಿ ಬದುಕು ಸಾಗಿಸು­ವಂತಾಗಿದೆ ಎನ್ನುವುದು ಗ್ರಾಮಸ್ಥರ ಅಳಲು.

ಸುವರ್ಣ ಗ್ರಾಮ ಯೋಜನೆ ಅಡಿಯಲ್ಲಿ ಗ್ರಾಮದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಕಾಟಾಚಾರಕ್ಕೆ ಸಿ.ಸಿ. ರಸ್ತೆ ನಿರ್ಮಾಣ ಹಾಗೂ ರಾಜಕೀಯ ಮುಖಂಡರ ಮನೆ ಮುಂದೆ ಕೆಲಸವನ್ನು ನಿರ್ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಲಿದೆ.

‘ಗ್ರಾಮದ ಹೊರವಲಯದಲ್ಲಿ ಸ್ಮಶಾನ ಭೂಮಿ ಇದೆ. ಹೆಣ ಹೂಳಲು ಗುಂಡಿ ತೋಡುವಷ್ಟರಲ್ಲಿ ನೀರು ಬರುತ್ತದೆ. ನಿಲ್ಲುವ ನೀರಿನಲ್ಲಿ ಮಣ್ಣು ಮಾಡುತ್ತೇವೆ. ಸ್ಮಶಾನಕ್ಕೆ ಹೋಗುವ ದಾರಿ ಕೆಟ್ಟು ಹೋಗಿದೆ. ರಾಡಿ ಹಾಗೂ ಟೊಂಕಮಟ್ಟದ ನೀರು ದಾಟಿ ಸಾಗಬೇಕು. ತುರ್ತಾಗಿ ದಾರಿ ನಿರ್ಮಿಸಿ’ ಎನ್ನುತ್ತಾರೆ ಗ್ರಾಮದ ಭೀಮಣ್ಣ.

‘ನಮ್ಮೂರು ತೆಗ್ಗಿನ್ಯಾಗ್ ಆಗ್ಯಾದ್. ಗದ್ದೆ ಹಾಗೂ ಕೆರೆ ಎತ್ತರದಲ್ಲಿದಾವ. ಕೆನಾಲ ನೀರೆಲ್ಲ ಬಂದು ಮನೆವೊಳಗ ಹೊಕ್ಕಂತಾವ್. ನೀರಿನ ತಂಪಿಗೆ ಮನೆ ಬಿರುಕು ಬಿಟ್ಟಾವ್‌. ಹಿಡಿ ಅಗಲ ಜಾಗದಾಗ ಮಣ್ಣು ತೋಡಿದರ ನೀರು ಹೊರಗ ಬರ್ತಾವ’ ಎನ್ನುತ್ತಾರೆ ಗ್ರಾಮದ ಮುಖಂಡ ನಿಂಗಣ್ಣ ಗೋಷಿ.

ಗ್ರಾಮಕ್ಕೆ ಕೃಷ್ಣಾಭಾಗ್ಯ ಜಲ ನಿಗಮದ ಅಧಿಕಾರಿಗಳು ಹಾಗೂ ಭೀಮರಾಯನಗುಡಿ ಕೃಷಿ ಮಹಾ ವಿದ್ಯಾಲಯದ ವಿಜ್ಞಾನಿಗಳು ಭೇಟಿ ನೀಡಿದ್ದಾರೆ.

ಗ್ರಾಮದಲ್ಲಿ ನೀರು ಜೌಗು ಹಿಡಿಯದಂತೆ ಮಾಡಬೇಕಾದರೆ ಗ್ರಾಮದ ಸುತ್ತಲು ಆಳವಾಗಿ ಗುಂಡಿ ತೊಡಿ ಬಸಿಗಾಲುವೆಯನ್ನು ಉತ್ತಮ­ವಾಗಿ ನಿರ್ಮಿಸಿ ಪೋಲಾಗುವ ನೀರನ್ನು ಸದ್ಭಳಕೆ ಮಾಡಿಕೊಳ್ಳಬೇಕಾದರೆ ಮೀನು ಸಾಕಾಣಿಕೆಯ ಹೊಂಡ ನಿರ್ಮಿಸಿದರೆ ಉತ್ತಮವಾಗುತ್ತದೆ ಎಂಬ ಸಲಹೆಯನ್ನು ಅಂದಿನ ಕೃಷಿ ವಿಜ್ಞಾನಿ ಡಾ.ಎಸ್.ಎ.ಉಪ್ಪೇರಿ ಸಲಹೆ ನೀಡಿದ್ದರು.
ಆದರೆ, ಅದು ಇಂದಿಗೂ ಅನುಷ್ಠಾನಗೊಂಡಿಲ್ಲ. ಇದರಿಂದ ಗ್ರಾಮದ ಸಮಸ್ಯೆ ಮುಂದುವರಿದ ಭಾಗದಂತೆ ಸಾಗಿದೆ.


ಒಳ ಚರಂಡಿ ನಿರ್ಮಿಸಿ’
‘ಮಳೆಗಾಲದಲ್ಲಿ ಓಣಿಯಲ್ಲಿ ತಿರುಗಾಡಲು ಸಾಧ್ಯವಿಲ್ಲ. ಗ್ರಾಮದ ಸುತ್ತಲು ಆಳವಾಗಿ ಒಳ ಚರಂಡಿ ನಿರ್ಮಿಸಿದರೆ ನೀರು ಬಸಿಯುವದಿಲ್ಲ. ಸೂಕ್ತ ಕ್ರಮ ಕೈಗೊಂಡು ಸಮರ್ಪಕ ಒಳಚರಂಡಿ ನಿರ್ಮಾಣ ಮಾಡಬೇಕು.’
 – ಶರಣಗೌಡ, ಗ್ರಾಮಸ್ಥ

‘ನೀರಿನಲ್ಲಿಯೇ ಮಲ ವಿಸರ್ಜನೆ’
‘ಏನು ಮಾಡೋದು ಯಪ್ಪ, ನಮ್ಮ ಹೆಣ್ಣಮಕ್ಕಳ ಗೋಳು ಹೇಳುವಂಗಿಲ್ಲ. ಸರ್‍ಯಾಗಿ ಶೌಚಾಲಯ ಕಟ್ಟಿಸಿಲ್ಲ. ಅಲ್ಲಿಗೆ ಯಾರು ಹೋಗಲಾರದಂಗ ಮಾಡ್ಯಾರ್‌. ರಸ್ತೆ ಪಕ್ಕದಾಗ ನೀರು ಹರಿತಾವ್. ಜಾಲಿ ಗಿಡದ ಕೆಳಗ ಹರಿಯುವ ನೀರಿನಲ್ಲಿ ಮಲ ವಿಸರ್ಜನೆ ಮಾಡುತ್ತೇವೆ.
– ಯಲ್ಲಮ್ಮ, ಗ್ರಾಮದ ಮಹಿಳೆ

‘ಊರು ಬಿಟ್ಟು ಹ್ಯಾಂಗ ಹೋಗಬೇಕು’
‘ನಿಮ್ಮೂರಿನ್ಯಾಗ ನೀರು ಜಾಸ್ತಿ ಬರತ್ತಾವ್. ಎತ್ತರ ಜಾಗದಾಗ ಹೋಗಿ ಮನೆ ಕಟ್ಟಿಕೊಳ್ಳಿರಿ ಅಂತ ಎಂಜಿನಿಯರ್ ಹೇಳ್ತಾರ. ಮನೆ– ಮಠ ಬಿಟ್ಟು ಹೋಗ ಅಂದ್ರ ಹ್ಯಾಂಗ್‌. ಸಾಕಷ್ಟು ಸರ್ಕಾರದಿಂದ ಕೆಲಸ ಮಾಡಲಕ್ಕ ರೊಕ್ಕ ಬಂದಾದ. ಎಲ್ಲವು ನುಂಗಿ ಕುಂತಾರ.’
–ಲಕ್ಷ್ಮಣ ಕುರಿಯರ್‌, ಗ್ರಾಮದ  ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT