ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಆವರಣದಲ್ಲಿ ಸಂಸತ್ ಅಧಿವೇಶನ!

Last Updated 21 ಜನವರಿ 2011, 9:20 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ‘ಅಭಿವೃದ್ಧಿ ಪರವಾಗಿರುವ ನಮ್ಮ ಸರ್ಕಾರ ಶಿಕ್ಷಣದ ಪ್ರಗತಿಗೆ ಹಲವು ಯೋಜನೆ ರೂಪಿಸಿದೆ. ಅವುಗಳನ್ನು ಹಂತಹಂತವಾಗಿ ಜಾರಿಗೆ ತಂದಿದೆ’ ಎಂದು ಸಚಿವರು ಅತ್ತ ಹೇಳಿದ್ದೇ ತಡ, ಇತ್ತ ವಿರೋಧ ಪಕ್ಷದವರು ಆಕ್ಷೇಪವೆತ್ತಿ ವಿರೋಧ ವ್ಯಕ್ತಪಡಿಸ ತೊಡಗಿದರು.

‘ರೀ.. ಏನ್ರೀ ನಿಮ್ಮ ಸರ್ಕಾರ ಸಾಧಿಸಿರೋದು. ಯಾವ್ಯಾವ ಯೋಜನೆಗಳು ಅನುಷ್ಠಾನಗೊಂಡಿವೆ, ಯಾವುದು ಅನುಷ್ಠಾನಗೊಂಡಿಲ್ಲ ಎಂಬುದು ನಮಗೆ ಗೊತ್ತಿದೆ. ಸುಳ್ಳು ಭರವಸೆ ನೀಡದೇ ನಿಮ್ಮ ಹುದ್ದೆಗೆ ರಾಜೀನಾಮೆ ನೀಡಿ’ ಎಂದು ಪಟ್ಟು ಹಿಡಿದರು. ವಿರೋಧ ಪಕ್ಷದ ಸದಸ್ಯರು ಮೇಜುಗಳನ್ನು ಕುಟ್ಟತೊಡಗಿದರೆ, ಆಡಳಿತ ಪಕ್ಷದವರು ವಿರೋಧ ಪಕ್ಷದವರ ವರ್ತನೆ ಬಗ್ಗೆ ಸಭಾಪತಿಗಳಿಗೆ ದೂರತೊಡಗಿದರು.

ಈ ಎಲ್ಲ ಘಟನೆಗಳು ನಡೆದದ್ದು, ನವದೆಹಲಿಯ ಸಂಸತ್ ಭವನದಲ್ಲಿ ಅಲ್ಲ. ರಾಜ್ಯದ ವಿಧಾನಮಂಡಲದಲ್ಲೂ ಅಲ್ಲ. ಇದು ಯಥಾವತ್ತಾಗಿ ನಡೆದದ್ದು ಶಿಡ್ಲಘಟ್ಟ ತಾಲ್ಲೂಕಿನ ಯಣ್ಣಂಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ. ಜಂಗಮಕೋಟೆ ಕ್ಲಸ್ಟರ್‌ನ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಬುಧವಾರ ಆಯೋಜಿಸಲಾಗಿದ್ದ ಅಣುಕು ಸಂಸತ್ ಅಧಿವೇಶನದಲ್ಲಿ. ಸರ್ಕಾರದ ಶೈಕ್ಷಣಿಕ ಯೋಜನೆಗಳ ಅನುಷ್ಠಾನ, ಸರ್ಕಾರದ ಸವಲತ್ತು, ಬೆಲೆ ಏರಿಕೆ, ಅಕ್ರಮ ಮುಂತಾದ ವಿಷಯಗಳನ್ನು ಜನಪ್ರತಿನಿಧಿಗಳಾಗಿ ವಿದ್ಯಾರ್ಥಿಗಳು ಚರ್ಚಿಸಿದರು.

ಇದಕ್ಕೂ ಮುನ್ನ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ‘ಅಣುಕು ಸಂಸತ್ ಮೂಲಕ ಮಕ್ಕಳಲ್ಲಿ ರಾಜಕೀಯ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಮೌಲ್ಯ ಬೆಳೆಸಲು ಅನುಕೂಲವಾಗುತ್ತದೆ. ಸಹಪಠ್ಯ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕ’ ಎಂದರು.ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಎಚ್.ಎಂ.ವೆಂಕಟೇಶಪ್ಪ ಮಾತನಾಡಿ, ‘ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು ನಿರಂತರ ನಡೆಯುವ ಸಹಪಠ್ಯ ಚಟುವಟಿಕೆಗಳು ಪೂರಕ. ಮಕ್ಕಳಲ್ಲಿರುವ ಪ್ರತಿಭೆಯನ್ನು ಬೆಳಕಿಗೆ ತರಲು ಪೋಷಕರು ಜೊತೆಗೆ ಶಿಕ್ಷಕರು ಸಹ ಪ್ರೋತ್ಸಾಹಿಸಬೇಕು’ ಎಂದರು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಪಿ.ನಾರಾಯಣಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಆಂಜನೇಯರೆಡ್ಡಿ, ಎಂ.ಪಿ.ಸಿ.ಎಸ್ ಕಾರ್ಯದರ್ಶಿ ರಾಮಕೃಷ್ಣಪ್ಪ, ಮುಖ್ಯಶಿಕ್ಷಕಿ ಎನ್.ಶಕುಂತಲಮ್ಮ, ಶಿಕ್ಷಕ ರಮೇಶ್, ಗ್ರಾಮಸ್ಥರು, ಎಸ್‌ಡಿಎಂಸಿ ಪದಾಧಿಕಾರಿಗಳು, ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT