ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಆವರಣದಲ್ಲಿಯೇ ಮಕ್ಕಳಿಗೆ ಪಾಠ

Last Updated 20 ಅಕ್ಟೋಬರ್ 2012, 4:35 IST
ಅಕ್ಷರ ಗಾತ್ರ

ಆಲಮಟ್ಟಿ: ಚಿತ್ರದಲ್ಲಿ ಕಾಣುವ ಪ್ರೌಢಾವಸ್ಥೆಯ ಈ ಮಕ್ಕಳು, ಹೊರಗಡೆ ಕುಳಿತು ಯಾವುದೇ ಪರೀಕ್ಷೆ ಬರೆಯುತ್ತಿಲ್ಲ, ದಿನಂಪ್ರತಿ ಇವರ ವಿದ್ಯಾರ್ಜನೆ ಶಾಲೆಯ ಈ ವರಾಂಡದಲ್ಲಿಯೇ....! ಇದು ಯಾವುದೋ ಖಾಸಗಿ ಇಲ್ಲವೇ ಸರಕಾರಿ ಪ್ರಾಥಮಿಕ ಶಾಲೆಯ ದೃಶ್ಯವಲ್ಲ. ಬದಲಾಗಿ 14 ವರ್ಷದಿಂದ 17 ವರ್ಷಗಳ ಒಳಗಿನ ಪ್ರೌಢಶಾಲಾ ಮಕ್ಕಳ ವಿದ್ಯಾರ್ಜನೆಯ ನೋಟ.

ಇದು ಕಂಡು ಬರುವುದು ಸಮೀಪದ ಸುಕ್ಷೇತ್ರ ಯಲಗೂರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ.
ಬೆಳಗಾದರೇ ಸಾಕು ವಿದ್ಯಾರ್ಥಿಗಳ ಪಾಲಿಗೆ ಬಯಲೇ ಆಲಯ, ಪ್ರಾಥಮಿಕ ಶಾಲೆಯ ಹೊರ ಆವರಣವೇ ಪಾಠದ ಕೋಣೆಯಾಗಿ ಮಾರ್ಪಟ್ಟಿದೆ. ಹಾಗಂತ ಯಾವುದೇ ಅನುದಾನವಿಲ್ಲದ, ಸಾಕಷ್ಟು ಕೋಣೆಗಳಿಲ್ಲದ ಶಾಲೆ ಅಲ್ಲ. ಅನುದಾನವಿದೆ, ಕಟ್ಟಡಕ್ಕಾಗಿ ಸಾಕಷ್ಟು ಹಣವೂ ಬಿಡುಗಡೆಯಾಗಿದೆ. ಕಟ್ಟಡವೂ ಮುಗಿಯುತ್ತಾ ಬಂದಿದೆ. ಆದರೂ ಬಯಲಲ್ಲಿ ಕುಳಿತು ಪಾಠ ಕೇಳುವುದು ತಪ್ಪಿಲ್ಲ.

ಸಮಸ್ಯೆ ಏನು?:
ಯಲಗೂರ ಗ್ರಾಮದಲ್ಲಿ 2007ರಲ್ಲಿಯೇ ಸರಕಾರಿ ಪ್ರೌಢ ಶಾಲೆ ಆರಂಭವಾಯಿತು. ಈಗಲೂ ಸ್ವಂತ ಸೂರಿಲ್ಲದೇ ಅಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೇ ಲಭ್ಯವಿದ್ದ ಎರಡು ಕೋಣೆಯಲ್ಲಿಯೇ ಪಾಠ ಮಾಡಲಾಗುತ್ತಿದೆ. 2009ರಲ್ಲಿಯೇ ಸರಕಾರಿ ಪ್ರೌಢಶಾಲೆಯ ನೂತನ ಕಟ್ಟಡ ಕಾಮಗಾರಿಯನ್ನು ಭೂಸೇನಾ ನಿಗಮದ ವತಿಯಿಂದ ಕೈಗೊಳ್ಳಲಾಯಿತು.

ಅಲ್ಲಿಯ ಗುತ್ತಿಗೆದಾರನೊಬ್ಬರು ಈ ಕಟ್ಟಡದ ಕಾಮಗಾರಿಯನ್ನು ಭೂಸೇನಾ ನಿಗಮದಿಂದ ಪಡೆದು, ಆಮೆ ಗತಿಯಲ್ಲಿ ಮಾಡುತ್ತಿದ್ದರು. ಆದರೆ ಗುತ್ತಿಗೆದಾರ , ಭೂಸೇನಾ ಮತ್ತು ಶಿಕ್ಷಣ ಇಲಾಖೆಯ ನಡುವೆ  ಗೊಂದಲ ಏರ್ಪಟ್ಟ ಪರಿಣಾಮ ಸದ್ಯಕ್ಕೆ ಕಟ್ಟಡ ಅಂತಿಮ ಹಂತಕ್ಕೆ ಬಂದು ತಲುಪಿ ವರ್ಷ ಗತಿಸಿದೆ. ಕೆಲವೊಂದು ಚಿಕ್ಕ ಪುಟ್ಟ ಕೆಲಸಗಳು ಉಳಿದಿವೆ. ಆದ್ದರಿಂದ ಆ ಕಟ್ಟಡ ಶಿಕ್ಷಣ ಇಲಾಖೆಗೆ ಹಸ್ತಾಂತರಗೊಂಡಿಲ್ಲ. 

 ಊರ ಉಡಾಳರ, ಅವಿವೇಕಿಗಳ ಅನೈತಿಕ ಚಟುವಟಿಕೆಗಳ ತಾಣವಾಗಿ ಅಮೂಲ್ಯ ಕಟ್ಟಡ ಹಾಳಾಗಿ ಹೊರಟಿದ್ದು, ಅಲ್ಲದೇ ಈಗ ನಿರ್ಮಾಣಗೊಂಡಿರವ ನೂತನ ಕಟ್ಟಡವೂ ಕಾಮಗಾರಿಯೂ ಕಳಪೆ ಮಟ್ಟದ್ದಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಗುತ್ತಿಗೆದಾರ ಹಾಳಾಗಿ ಹೊರಟಿರುವ, ಅಲ್ಪಸ್ವಲ್ಪ ಕೆಲಸ ಪೂರ್ಣಗೊಳಿಸುವ ಕಡೆಗೆ ಗಮನ ಹರಿಸಿಲ್ಲ.
ಈ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷೆ ಶಿಕ್ಷಕರನ್ನು ಹೊರತು ಪಡಿಸಿ, 10 ಜನ ಶಿಕ್ಷಕರಿದ್ದು, 93 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಕರು ಇದ್ದಾರೆ, ವಿದ್ಯಾರ್ಥಿಗಳು ಇದ್ದಾರೆ, ಆದರೆ ಕಟ್ಟಡವೇ ಸರಿಯಾಗಿಲ್ಲದ ಕಾರಣ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳು ಕಲಿಯಬೇಕಾಗಿರುವುದು ಪರಿಸ್ಥಿತಿಯ ವ್ಯಂಗ್ಯ ಎನ್ನದೇ ವಿಧಿಯಿಲ್ಲ.

ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಜಿಪಂ ಸದಸ್ಯರು, ಜನಪ್ರತಿನಿಧಿಗಳು, ಭೂಸೇನಾ ನಿಗಮದ ಅಧಿಕಾರಿಗಳು ಮುತುವರ್ಜಿ ವಹಿಸಿ ಹೊಸ ಕಟ್ಟಡ ಪೂರ್ಣಗೊಳಿಸಿ ವಿದ್ಯಾರ್ಜನೆಗೆ ಅನುವು ಮಾಡಿಕೊಡಬೇಕು ಎಂದು ಶಿಕ್ಷಣ ಪ್ರೇಮಿಗಳು ಆಗ್ರಹಿಸಿದ್ದಾರೆ.

ನವೆಂಬರ್‌ನಲ್ಲಿ ಪ್ರಾರಂಭ: ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಬರುವ ನವೆಂಬರ್ ಮೊದಲ ವಾರದಲ್ಲಿ ಹೊಸ ಕಟ್ಟಡದಲ್ಲಿಯೇ ಶಾಲೆ ಆರಂಭಗೊಳಿಸುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವಿ. ಹೊಸೂರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT