ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಶಿಕ್ಷಣದ ಕರುಣ ಕತೆ

Last Updated 16 ಜನವರಿ 2011, 20:30 IST
ಅಕ್ಷರ ಗಾತ್ರ

ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ‘ಸರ್ವ ಶಿಕ್ಷಾ ಅಭಿಯಾನ’ ಹೆಚ್ಚು ಕಡಿಮೆ ಮುಗಿದು ಹೋದ ಅಧ್ಯಾಯ. ಹದಿನೈದು ವರ್ಷಗಳ ದೀರ್ಘಾವಧಿಯ ಈ ಯೋಜನೆಯಲ್ಲಿ ಮಿಲಿಯಗಟ್ಟಲೆ ರೂಪಾಯಿಗಳ ವ್ಯಯ - ಅಪವ್ಯಯ ಆಗಿದೆ. ಶಾಲಾ ಶಿಕ್ಷಣದಲ್ಲಿ ಹಲವಾರು ಪ್ರಯೋಗಗಳಾಗಿವೆ. ಶಾಲಾ ಶಿಕ್ಷಣಕ್ಕೆ ನಾವು ಹೊಸ ಮೆರುಗು ನೀಡಿದ್ದೇವೆ ಎಂದು ಸರ್ಕಾರಗಳು ಗಂಟಲು ಹರಿದುಕೊಳ್ಳುತ್ತಿವೆ.ಆದರೆ? ಶೈಕ್ಷಣಿಕ ವಲಯದಲ್ಲಿ ಸಮಾಧಾನ ಸಂತೃಪ್ತಿಗಳು ಕಣ್ಮರೆಯಾಗಿವೆ!

ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೀವೊಮ್ಮೆ ಮಾತನಾಡಿಸಿ ನೋಡಿ. ವಿವಿಧ ಪ್ರಯೋಗಗಳು, ನಾನಾ ಬಗೆಯ ತರಬೇತಿಗಳು ಕ್ಲಸ್ಟರ್, ವಲಯ, ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ನಡೆಯುವ ‘ಪ್ರತಿಭಾ ಕಾರಂಜಿ’- ಅದರ ಸಲುವಾಗಿ ಮಾಡುವ ಕೆಲಸಗಳು, ಗ್ರಾಮ ಪಂಚಾಯತ್‌ನಿಂದ ಹಿಡಿದು ಲೋಕಸಭೆವರೆಗೆ ನಡೆಯುವ ಚುನಾವಣೆಗೆ ಸಂಬಂಧಿಸಿದ ವಿವಿಧ ಜವಾಬ್ದಾರಿಗಳು- ತರಬೇತಿಗಳು, ಜನಗಣತಿಯ ಕಾರ್ಯಗಳು, ಪದೇ ಪದೇ ಶಿಕ್ಷಣ ಇಲಾಖೆಗೆ ಒದಗಿಸಬೇಕಾದ ಮಾಹಿತಿಗಳು, ಅಕ್ಷರ ದಾಸೋಹ - ಹೀಗೆ ಬಗೆಬಗೆಯ ಕಾರ್ಯಗಳ ಜಂಜಡದಿಂದ ಶಿಕ್ಷಕರು ಹೈರಾಣಾಗಿದ್ದಾರೆ. ‘ನಾವು ಯಾಕಾದರೂ ಎಲಿಮೆಂಟರಿ ಶಾಲಾ ಶಿಕ್ಷಕರಾದೆವೋ’ ಎಂದು ಅವರು ತಮ್ಮನ್ನು ತಾವು ಶಪಿಸಿಕೊಳ್ಳುತ್ತಿದ್ದಾರೆ. ‘ಈ ಎಲ್ಲ ಜಂಜಡಗಳಿಂದ ನಮ್ಮನ್ನು ಮುಕ್ತಿಗೊಳಿಸಿ; ತರಗತಿಗಳಲ್ಲಿ ಪಾಠ ಮಾಡಲು ಬಿಡಿ; ಮಕ್ಕಳ ಜೊತೆ ಇರಲು ಬಿಡಿ’ ಎಂದು ಅವರು ಗೋಗರೆಯುತ್ತಿದ್ದಾರೆ. ‘ಗಜೇಂದ್ರ ಮೋಕ್ಷ’ ಆಗುವುದೆಂದಿಗೆ? ಎಂದು ಪ್ರಜ್ಞಾವಂತ ಪಾಲಕರು ಕೇಳುತ್ತಿದ್ದಾರೆ.

ಚುನಾವಣಾ ಕಾರ್ಯ, ಜನಗಣತಿ, ತರಬೇತಿ ಇತ್ಯಾದಿಗಳೆಂದು ಶಿಕ್ಷಕರು ಶಾಲೆಗಳಿಂದ ಹೊರಗೆ ಇರುವುದು ಸರಾಸರಿ 20-25 ದಿನಗಳು ಮಾತ್ರ ಎಂದು ಸರ್ಕಾರದ ವರದಿಗಳು ನಮೂದಿಸುತ್ತವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ‘ತರಬೇತಿಗಳ ಭೂ ಮಂಡಲ’ವೇ ಶಿಕ್ಷಕರ ತಲೆಯ ಮೇಲಿದೆ. ಕೋಟಿಗಟ್ಟಲೆ ಹಣ ವೆಚ್ಚ ಮಾಡಿ ತರಬೇತಿ ಕಾರ್ಯಗಳನ್ನು ನಡೆಸಿ ತರಗತಿ ಕಲಿಕೆಯನ್ನು ಎಷ್ಟರ ಮಟ್ಟಿಗೆ ಸುಧಾರಿಸಲಾಗಿದೆ? ಶಿಕ್ಷಕರ ಸಾಮರ್ಥ್ಯವರ್ಧನೆ ಎಷ್ಟರಮಟ್ಟಿಗೆ ಆಗಿದೆ? ಶಿಕ್ಷಣ ಇಲಾಖೆ ಮೊದಲು ಈ ಪ್ರಶ್ನೆಗಳಿಗೆ ಸಂಶೋಧನಾಧಾರಿತ ಅನುಭವಾಧಾರಿತ ಉತ್ತರಗಳನ್ನು ಕಂಡುಕೊಳ್ಳಬೇಕು. ಹಲವಾರು ಕಡೆಗಳಲ್ಲಿ ಕಾಟಾಚಾರಕ್ಕೆ ಸೇವಾನಿರತ ಶಿಕ್ಷಣ ಕಾರ್ಯಗಳು ನಡೆಯುತ್ತವೆ. ಆರ್ಥಿಕ ಸಂಪನ್ಮೂಲ ವ್ಯಕ್ತಿಗಳಿಂದ ಭಾಷಣಗಳು ನಡೆಯುತ್ತವೆ. ತರಬೇತಿಗಾಗಿ ಬಂದ ಹಣ ಒಂದಿಷ್ಟು ‘ಗುಳುಂ’ ಆಗುತ್ತದೆ; ಒಂದಿಷ್ಟು ಬಟವಾಡೆಯಾಗುತ್ತದೆ. ತರಬೇತಿ ಮುಗಿಸಿದ ಶಿಕ್ಷಕರು ಮತ್ತೆ ಹಳೆಯ ಜಾಡನ್ನೇ ಅನುಸರಿಸುತ್ತಾರೆ. ಬಹಳ ಮುಖ್ಯವಾಗಿ ಅಪಾರ ಶ್ರಮ, ಹಣ ವ್ಯಯಿಸಿ ಕೈಗೊಂಡ ತರಬೇತಿಗಳ ಪರಿಣಾಮವೇನು? ತರಗತಿ ಬೋಧನೆ - ಕಲಿಕೆಯ ಮೇಲೆ ಯಾವ ಪರಿಣಾಮ ಆಗಿದೆ? ಎಂಬುದನ್ನು ಶೋಧಿಸಬೇಕು. ಉತ್ತರ ನಕಾರಾತ್ಮಕವಾಗಿದ್ದರೆ ಒಂದೆರಡು ವರ್ಷ ಸೇವಾನಿರತ ತರಬೇತಿ ಕಾರ್ಯಗಳನ್ನು ರದ್ದುಗೊಳಿಸಿದರೆ ಆಕಾಶವೇನೂ ಕಳಚಿ ಬೀಳುವುದಿಲ್ಲ; ಶಿಕ್ಷಣದ ಗುಣಮಟ್ಟ ಕುಸಿಯುವುದಿಲ್ಲ. ದುಡ್ಡು ಹೊಡೆಯುವವರಿಗೆ, ವ್ಯರ್ಥ ಕಾಲಹರಣ ಮಾಡುವವರಿಗೆ ಮತ್ತು ತರಗತಿಗೆ ಪ್ರಯೋಜನಕಾರಿ ಆಗದಿರುವುದಕ್ಕೆ ಯಾಕೆ ಮಣೆ ಹಾಕಬೇಕು? ಶಿಕ್ಷಕರು ಹೆಚ್ಚು ಹೆಚ್ಚು ತರಗತಿಗಳಿಂದ ಹೊರಗೆ ಹೋದಷ್ಟೂ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತದೆ.  ಮಕ್ಕಳು ಶಿಕ್ಷಣ ಪಡೆಯುವ ತಮ್ಮ ಮೂಲಭೂತ ಹಕ್ಕಿನಿಂದ ವಂಚಿತರಾಗುತ್ತಾರೆ ಎಂಬುದನ್ನು ಅಧಿಕಾರಿಗಳು ಮನಗಾಣಬೇಕು.

ಸರ್ಕಾರಿ ಹಾಗೂ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸಬೇಕೆಂಬ ಉದ್ದೇಶದಿಂದ ‘ಸರ್ವ ಶಿಕ್ಷ ಅಭಿಯಾನ’ದಡಿಯಲ್ಲಿ ಸರ್ಕಾರ ಕೋಟಿಗಟ್ಟಲೆ ಹಣವ್ಯಯಿಸಿ ಬೇಕುಬೇಕಾದ ಸೌಲಭ್ಯಗಳನ್ನು ಒದಗಿಸುತ್ತಿದೆ. ಮಕ್ಕಳಿಗೆ ಉಚಿತ ಸಮವಸ್ತ್ರ, ಉಚಿತ ಪಠ್ಯಪುಸ್ತಕ, ಬರೆಯುವ ಪುಸ್ತಕ, ಚೀಲ, ಸೈಕಲ್, ಮಧ್ಯಾಹ್ನದ ಬಿಸಿಯೂಟ ನೀಡುತ್ತಿದೆ. ಇಷ್ಟಿದ್ದರೂ ಇತ್ತೀಚಿನ ದಿನಗಳಲ್ಲಿ ಅನೇಕ ‘ಪ್ರಚಾರಪ್ರಿಯ’ ದಾನಿಗಳು ಶಾಲೆಗಳಿಗೆ ನುಗ್ಗಿ ಸ್ಲೇಟ್, ಬಳಪ ಇತ್ಯಾದಿಗಳನ್ನು ಕೊಟ್ಟು ಪತ್ರಿಕೆಗಳಲ್ಲಿ ಚಿತ್ರಸಹಿತ ಪ್ರಚಾರ ಪಡೆಯುತ್ತಿರುವುದು ಕೆಟ್ಟ ಬೆಳವಣಿಗೆಯಾಗಿದೆ. ಕೊಟ್ಟ ದಾನ ಯಾರಿಗೂ ತಿಳಿಯಬಾರದು ಎಂಬ ಮೌಲ್ಯ ಹಿಂದೆ ಸರಿದು ಪ್ರಚಾರದ ಸಲುವಾಗಿ ರಾಜಕೀಯ ಲಾಭಕ್ಕಾಗಿ ತಮ್ಮ ವ್ಯವಹಾರದ ವರ್ಧನೆಗಾಗಿ ಶಾಲಾ ಮಕ್ಕಳಿಗೆ ‘ಧರ್ಮ ನೀಡುವ’ ಪರಿಪಾಠ ಪ್ರಾರಂಭವಾಗಿದೆ. ಇಂಥ ದಾನಿಗಳಿಗೆ ನಿಜಕ್ಕೂ ಶಿಕ್ಷಣದ ಬಗ್ಗೆ ಕಳಕಳಿಯಿದ್ದರೆ ತಮ್ಮ ಕೊಡುಗೆಯನ್ನು ಶಾಲಾಭಿವೃದ್ಧಿ ಸಮಿತಿಗೆ ಕೊಡಲಿ; ಅಥವಾ ಸರ್ಕಾರ ‘ವಿದ್ಯಾನಿಧಿ’ ಯನ್ನು ಆರಂಭಿಸಿ ದಾನಿಗಳಿಂದ ‘ಕೊಡುಗೈ ದಾನ’  ನಿರೀಕ್ಷಿಸಲಿ. ಇಂಥ ದಾನಿಗಳಿಗೆ ಆದಾಯಕರ ವಿನಾಯಿತಿ ಘೋಷಿಸಲಿ. ಪ್ರತಿವರ್ಷ ಸಂಗ್ರಹವಾಗುವ ಒಟ್ಟು ಮೊಬಲಗನ್ನು ಸರ್ಕಾರ ಎಲ್ಲ ಶಾಲೆಗಳಿಗೂ ವಿತರಿಸಲಿ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಮರ್ಯಾದಸ್ಥ ಮಾರ್ಗ. ಮೇಲಾಗಿ ವಿವಿಧ ಶಾಲೆಗಳ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ಯಾವುದೇ ಕಾರಣಕ್ಕೂ ಸಾರ್ವಜನಿಕರಿಂದ ಚಂದಾ ಎತ್ತುವ ವ್ಯವಸ್ಥೆಗೆ ಸರ್ಕಾರ ಕಡಿವಾಣ ಹಾಕಲಿ. ಶಿಕ್ಷಣ ವ್ಯವಸ್ಥೆಯಲ್ಲಿ ಸರ್ಕಾರ ತನ್ನ ಜವಾಬ್ದಾರಿಗಳಿಂದ ಜಾಣತನದ ಮಾರ್ಗದಲ್ಲಿ ನುಣುಚಿಕೊಳ್ಳುವಾಗ ಇಂಥ ದುಷ್ಟ ಪ್ರವೃತ್ತಿಗಳು ತಲೆ ಎತ್ತುತ್ತಿವೆ.

ಪ್ರತಿಭಾ ಕಾರಂಜಿ- ಸ್ಪರ್ಧೆಯ ‘ಬುಲ್‌ಡೋಜರ್’
ಇತ್ತೀಚಿನ ವರ್ಷಗಳಲ್ಲಿ ಶಾಲೆಗಳನ್ನು ವಿಪರೀತವಾಗಿ ಕಾಡುತ್ತಿರುವುದು ‘ಪ್ರತಿಭಾ ಕಾರಂಜಿ’ ಎಂಬ ಸರ್ಕಾರಿ ಪೋಷಿತ ರಾಜಕಾರಣಿ ಪ್ರೇರಿತ ಕಾರ್ಯಕ್ರಮ. ಮುಗ್ಧ ಮಕ್ಕಳ ನಡುವೆ, ಶಾಲೆಗಳ ನಡುವೆ ಶಿಕ್ಷಕರು ಹಾಗೂ ರಕ್ಷಕರ ನಡುವೆ ಸ್ಪರ್ಧೆಯನ್ನು ದ್ವೇಷವೈಷಮ್ಯವನ್ನು ಬಿತ್ತಿಬೆಳೆಸುವ ಈ ಕಾರ್ಯಕ್ರಮದ ವಿರುದ್ಧ  ಈ ಎಲ್ಲ ವರ್ಷಗಳಲ್ಲಿ ಅಸಮಾಧಾನ ಅಸಂತೃಪ್ತಿ ಹೆಚ್ಚುತ್ತಲೇ ಇದೆ ಎಂಬುದನ್ನು ಸರ್ಕಾರ ಗಮನಿಸಬೇಕು. ಸರ್ಕಾರ ಈ ಕಾರ್ಯಕ್ರಮಕ್ಕೆ ಒದಗಿಸುವ ಅನುದಾನ ಕಡಿಮೆ ಎಂಬ ಕಾರಣಕ್ಕೆ ಶಾಲಾ ಶಿಕ್ಷಕರು ರಾಜಕಾರಣಿಗಳು, ಕ್ರಿಮಿನಲ್‌ಗಳ ಬಾಲಬುಡುಕರಾಗುತ್ತಿದ್ದಾರೆ. ಸ್ಪರ್ಧೆಯ ಮೂಲಕ ಶಿಕ್ಷಕರ - ಶಾಲೆಯ ಪ್ರತಿಷ್ಠೆ ನಿರ್ಧಾರವಾಗುವುದರಿಂದ ಪಾಠ ಪ್ರವಚನಗಳಿಗೆ ತಿಲಾಂಜಲಿ ನೀಡುವ ಕೆಲಸ ನಡೆಯುತ್ತಿದೆ. ಅಸಂಬದ್ಧ ಸ್ಪರ್ಧೆಗಳನ್ನು ಏರ್ಪಡಿಸಿ ಮಕ್ಕಳ ಪ್ರಾಣ ಹಿಂಡಲಾಗುತ್ತಿದೆ. ಅಜ್ಞಾನಿ ತೀರ್ಪುಗಾರರ ದೆಸೆಯಿಂದಾಗಿ ಮಕ್ಕಳ ಮನಸ್ಸು ಮುದುಡುವಂತಾಗಿದೆ. ಒಂದು ನೆಲೆಯಲ್ಲಿ ‘ಸಹಕಾರಿ ಸಹಯೋಗದ ಕಲಿಕೆ’ ಎಂದು ಬೊಗಳೆ ಬಿಡುವ ಸರ್ಕಾರ ಮಕ್ಕಳ ಮನಸ್ಸುಗಳ ಮೇಲೆ ಸ್ಪರ್ಧೆ ಎಂಬ ಬುಲ್‌ಡೋಜರ್ ಹೊಡೆಸುತ್ತಿರುವುದಕ್ಕೆ ಏನೆನ್ನಬೇಕು?

ನಿಜಕ್ಕೂ ‘ಪ್ರತಿಭಾ ಕಾರಂಜಿ’ಯಿಂದ ಶಿಕ್ಷಣರಂಗದಲ್ಲಿ ಆದ ಗುಣಾತ್ಮಕ ಸಾಧನೆ ಏನು? ಎಷ್ಟು ಮಂದಿ ‘ಬಾಲಕಲಾವಿದರು’ ಮೂಡಿಬಂದರು? ಅವರನ್ನು ನೀವೇನು ಮಾಡಿದ್ದೀರಿ? ಅವರ ಪ್ರತಿಭೆಯ ಪೋಷಣೆಗೆ ಸರ್ಕಾರ ಯಾವ ಯೋಜನೆಗಳನ್ನು ಹಾಕಿಕೊಂಡಿದೆ? ಉತ್ತರ ಕೊಡುವವರಾರು?

ನಮಗಿಂದು ನಿಜಕ್ಕೂ ‘ಪ್ರತಿಭಾ ಪ್ರದರ್ಶನ’ ಬೇಕಾಗಿಲ್ಲ. ಅದನ್ನು ಆಯಾ ಶಾಲಾ ಹಂತದಲ್ಲೇ ಮಾಡಬಹುದು. ಶೈಕ್ಷಣಿಕ ವರ್ಷದಲ್ಲಿ ಮಕ್ಕಳಿಗೆ ವಿಪುಲ ಅವಕಾಶಗಳು ದೊರೆಯುತ್ತವೆ. ಅದಕ್ಕೋಸ್ಕರ ವಿವಿಧ ನೆಲೆಗಳಲ್ಲಿ ಅವರಿವರನ್ನು ಕಾಡಿ ಬೇಡಿ ಮಂತ್ರಿಮಾಗಧ ಶಾಸಕರನ್ನು ವೇದಿಕೆಗೇರಿಸಿ ಹಣವನ್ನು ಪೋಲು ಮಾಡಬೇಕಾಗಿಲ್ಲ. ಶಾಲಾ ಶಿಕ್ಷಣದಲ್ಲಿ ಇಂದು ನಿಜಕ್ಕೂ ‘ಪ್ರತಿಭಾ ವಿಕಸನ’ದ ಕೆಲಸ ಆಗಬೇಕಾಗಿದೆ. ಪ್ರತಿಯೊಂದು ಶಾಲೆಯಲ್ಲೂ ಸಂಗೀತ, ನೃತ್ಯ, ಚಿತ್ರಕಲೆ, ಭಾಷಣ, ಸೃಜನಶೀಲ ಬರವಣಿಗೆ, ನಾಟಕ, ಯಕ್ಷಗಾನ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಕಲಾವಿದರ ಮೂಲಕ ಮಕ್ಕಳಿಗೆ ವ್ಯಾಪಕ ತರಬೇತಿ ಕೊಡಿಸುವ ಕೆಲಸ ಆಗಬೇಕು.ಇದರಿಂದ ‘ಹೃದಯವಂತ’ ಪ್ರಜೆಗಳ ನಿರ್ಮಾಣ ಸಾಧ್ಯ - ಸದಭಿರುಚಿಯ ನಿರ್ಮಾಣ ಸಾಧ್ಯ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಗಂಭೀರವಾದ ಕಲಾ ಪ್ರಕಾರಗಳನ್ನು, ಸಾಹಿತ್ಯ ಪ್ರಕಾರಗಳನ್ನು ಆಸ್ವಾದಿಸುವ ಸಹೃದಯರ ನಿರ್ಮಾಣ ಸಾಧ್ಯವಾಗಲಿದೆ.
ಸಂಸ್ಕೃತಿ ಅಪಮೌಲ್ಯೀಕರಣ

ಕಳೆದ ಅನೇಕ ವರ್ಷಗಳಿಂದ ವಿವಿಧ ಶಾಲೆಗಳ ವಾರ್ಷಿಕೋತ್ಸವ ಸಮಾರಂಭಗಳಲ್ಲಿ ಕಂಡುಬರುವ ‘ಸಾಂಸ್ಕೃತಿಕ ಕಾರ್ಯಕ್ರಮ’ಗಳನ್ನು ಹತ್ತಿರದಿಂದ ಕಂಡು ನೊಂದು ಮೇಲಿನ ಮಾತುಗಳನ್ನು ಬರೆದಿದ್ದೇನೆ. ಯಾವುದೇ ಶಿಕ್ಷಣ ಸಂಸ್ಥೆಗೆ ಒಂದು ‘ಸಾಂಸ್ಕೃತಿಕ ನೀತಿ’ ಬೇಕು. ಮಕ್ಕಳ ಮುಂದೆ ಏನನ್ನು, ಹೇಗೆ ಏಕೆ ಪ್ರದರ್ಶಿಸಬೇಕು ಎಂಬ ಎಚ್ಚರ ಪಾಲಕರಿಗೆ ಹಾಗೂ ಶಿಕ್ಷಕರಿಗೆ ಇರಬೇಕು. ಶಿಕ್ಷಕರು ಮುತುವರ್ಜಿವಹಿಸಿ ಮಕ್ಕಳಿಗೆ ಹಾಡು, ನರ್ತನ, ನಾಟ್ಯ ಸಂಗೀತ ನಾಟಕ ಹೇಳಿಕೊಡಬೇಕು. ಇದಕ್ಕಾಗಿ ಒಂದಿಷ್ಟು ಶ್ರಮಿಸಬೇಕು. ಮೂವತ್ತು ನಲವತ್ತು ವರ್ಷಗಳ ಹಿಂದೆ ನಡೆಯುತ್ತಿದ್ದ ರೀತಿಯಲ್ಲಿ ಈಗ ಶಾಲಾ ವಾರ್ಷಿಕೋತ್ಸವಗಳು ನಡೆಯುತ್ತಿಲ್ಲ.

ಕೆಸೆಟ್, ಸಿಡಿಗಳನ್ನು ಹಾಕಿ ಸಿನೆಮಾ ಹಾಡಿಗೆ ಮನಸೋ ಇಚ್ಛೆ ಕುಣಿಯುವುದೇ ಸಾಂಸ್ಕೃತಿಕ ಕಾರ್ಯಕ್ರಮವೆಂಬಂತಾಗಿದೆ.ಹೆತ್ತವರಿಗೆ ತಮ್ಮ ಮಕ್ಕಳು ಮೈ ಕೈ ಕುಣಿಸುವುದನ್ನು ಕಂಡು ಹಿಗ್ಗೋ ಹಿಗ್ಗು. ಶಿಕ್ಷಕರಿಗೆ ಹೆಚ್ಚಿನ ಕೆಲಸದ ಹೊರೆ ಇಲ್ಲ. ಸಂಸ್ಕೃತಿ ಎಂದರೆ ಸಿನೆಮಾ ಹಾಡು - ನರ್ತನ ಎಂಬ ಅಪಮೌಲ್ಯೀಕರಣ ವ್ಯಾಪಕವಾಗಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಸದಭಿರುಚಿ ಮೂಡಿಸಲು ವಿದ್ಯಾಲಯಗಳು ಒಂದು ಸಂಹಿತೆಯನ್ನು ಅಳವಡಿಸಿಕೊಳ್ಳಬೇಕು. ಇಲ್ಲೂ ಕೂಡ ಹೆತ್ತವರ, ಪ್ರಭಾವಿ ವ್ಯಕ್ತಿಗಳ, ಅವಿವೇಕದ ಕೆಲವು ಶಿಕ್ಷಕರ ಬಾಯಿ ಬಲದ ಮುಂದೆ ಪ್ರಜ್ಞಾವಂತರು ಮೂಕರಾಗುತ್ತಿದ್ದಾರೆ. ಆದುದರಿಂದ ಸರ್ಕಾರ ಈ ನಿಟ್ಟಿನಲ್ಲೂ ಗಂಭೀರವಾಗಿ ಆಲೋಚಿಸಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಸರಿಯಾದ ಕಾನೂನುಗಳನ್ನು ಮಾಡಬೇಕು; ಶಿಷ್ಟಾಚಾರ ಭಂಗವಾದರೆ ಶಿಕ್ಷಕರ ಮೇಲೆ ಮುನಿಸಿಕೊಳ್ಳುವ ಸ್ಥಳೀಯ ಪುಡಾರಿಗಳೂ ಈ ಬಗ್ಗೆ ಚಿಂತನೆ ನಡೆಸಬೇಕು. ಸಾಂಸೃತಿಕ ನೀತಿ ಸಂಹಿತೆ ಬೇಕು ಎಂದೊಡನೆ ‘ಮತಾಂಧತೆ’, ‘ಮುಚ್ಚಿದ ಮನಸ್ಸಿನ ತರ್ಕ’ ಎಂಬ ಅವಸರದ ತೀರ್ಮಾನ ಸಲ್ಲದು. ಸಾವಿರಾರು ಜನರ ಎದುರು ನಮ್ಮ ಶಾಲೆ, ನಮ್ಮ ಮಕ್ಕಳು ಹಾಗೂ ನಮ್ಮ ಶಿಕ್ಷಕರು ಹೇಗೆ ಕಾಣಿಸಿಕೊಳ್ಳಬೇಕು ಎಂಬ ಪರಿವೆಯಿಲ್ಲದಿದ್ದರೆ ಅದೆಂಥ ಸಮಾಜ? ಎಂಥ ಸಮಾಜವನ್ನು ಶಿಕ್ಷಣದ ಮೂಲಕ ನಾವು ರೂಪಿಸಲು ಹೊರಟಿದ್ದೇವೆ? ಶಿಕ್ಷಣ ಇಲಾಖೆಗೆ ನಿಜಕ್ಕೂ ಶಿಕ್ಷಣದ ಬಗ್ಗೆ ಕಳಕಳಿಯಿದ್ದಲ್ಲಿ ಇಂಥ ಗಂಭೀರ ವಿಚಾರಗಳ ಬಗ್ಗೆ ಸಾರ್ವಜನಿಕ ಚರ್ಚೆಗಳನ್ನು ಏರ್ಪಡಿಸಿ ಸೂಕ್ತ ಪರಿಹಾರೋಪಾಯಗಳನ್ನು ಕಂಡುಕೊಳ್ಳುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT