ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಪುನರಾರಂಭ: ಮಕ್ಕಳ ಸಂಭ್ರಮ

Last Updated 1 ಜೂನ್ 2013, 12:25 IST
ಅಕ್ಷರ ಗಾತ್ರ

ಹಾಸನ: `ಸರ್ವರಿಗೂ ಶಿಕ್ಷಣ ದೊರೆಯಬೇಕೆಂಬ ಉದ್ದೆೀಶದಿಂದ ಕೇಂದ್ರ ಸರ್ಕಾರ ಸರ್ವಶಿಕ್ಷಣ ಅಭಿಯಾನ ಜಾರಿಗೊಳಿಸಿದ್ದು, ಗ್ರಾಮೀಣ ಭಾಗದ ಜನರು ಈ ಯೋಜನೆಯ ಸದುಪಯೋಗ ಪಡೆಯಬೇಕು' ಎಂದು ಶಿಕ್ಷಣ ಸಂಯೋಜಕ ನಂಜುಂಡೇಗೌಡ ನುಡಿದರು.

ಕೇಂದ್ರ ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲಾಭಿವೃದ್ಧಿ ಸಮಿತಿ, ರಾಮದೇವರಪುರದ ವಿವೇಕಾನಂದ ಯುವಕ ಸಂಘ ಹಾಗೂ ಸೊಪ್ಪಿನಹಳ್ಳಿಯ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ತಾಲ್ಲೂಕಿನ ಸೊಪ್ಪಿನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಸರ್ವಶಿಕ್ಷಣ ಅಭಿಯಾನ ಕುರಿತ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರಿದ್ದು, ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ದೊರೆಯುತ್ತಿದೆ. ಪೋಷಕರು ಸರ್ಕಾರಿ ಶಾಲೆಗಳಿಗೇ ಮಕ್ಕಳನ್ನು ದಾಖಲಿಸಬೇಕು. ಇದರಿಂದ ಸರ್ಕಾರಿ ಶಾಲೆಗಳನ್ನು ಉಳಿಸಲು ಸಾಧ್ಯ' ಎಂದರು.

ಶಿಕ್ಷಕ ಸಂಯೋಜಕ ಶ್ರೀರಂಗಯ್ಯ, ಸರ್ವ ಶಿಕ್ಷಣ ಯೋಜನೆಯಡಿ ಶಾಲಾ ಕಟ್ಟಡಗಳ ನಿರ್ಮಾಣ, ಹೆಚ್ಚುವರಿ ಶಾಲಾ ಕೊಠಡಿಗಳ ನಿರ್ಮಾಣ ಕುಡಿಯುವ ನೀರಿನ ಸೌಲಭ್ಯ ಶೌಚಾಲಯ ನಿರ್ಮಾಣ, ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳ ಪೂರೈಕೆ, ಮಧ್ಯಾಹ್ನದ ಬಿಸಿಯೂಟದ ಯೋಜನೆ ಮುಂತಾದ ವಿಷಯಗಳ ಬಗ್ಗೆ ವಿವರಿಸಿದರು.

ಗ್ರಾಮದ ಹಿರಿಯ ಹೀರೇಗೌಡ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಪ್ರಚಾರ ಸಹಾಯಕ ಪ್ರಕಾಶ್ ಪ್ರಾಸ್ತಾವಿಕ ಭಾಷಣ ಮಾಡಿದರು. ಕೆಲವತ್ತಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ತಾಜುನ್ನೀಸ ಮತ್ತಿತರರು ಹಾಜರಿದ್ದರು.

ಶಿಕ್ಷಕಿ ಜೆ. ರೋಸಿಲ್ಲಿನ್ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ಪುಟ್ಟಗೌರಮ್ಮ ನಿರೂಪಿಸಿದರು. ಗಂಗಾಧರ್ ವಂದಿಸಿದರು.

`ವಿದ್ಯಾರ್ಥಿಗಳ ಮನಸು ಅರಿತುಕೊಳ್ಳಿ'
ಆಲೂರು: ವಿದ್ಯಾರ್ಥಿಗಳ ಮನಸು ಅರಿತು ಬೋಧಿಸುವವನೇ ನಿಜವಾದ ಶಿಕ್ಷಕ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ. ಪುಷ್ಪಲತಾ ಹೇಳಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಶಾಲಾ ಪ್ರಾರಂಭೋತ್ಸವ ಮತ್ತು ಉಚಿತ ಪಠ್ಯಪುಸ್ತಕ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಸರ್ಕಾರ ಉಚಿತವಾಗಿ ಸಮವಸ್ತ್ರ, ಪುಸ್ತಕ, ಬಿಸಿ ಊಟ ಮುಂತಾದ ಸೌಲಭ್ಯವನ್ನು ಮಕ್ಕಳಿಗೆ ನೀಡುತ್ತಿದೆ. ಇದರ ಸದ್ಬಳಕೆ ಅಗತ್ಯ ಎಂದರು.

ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ನಾಗರಾಜ್ ಮಾತನಾಡಿ, ರಾಜ್ಯದಲ್ಲಿ ಇದುವರೆಗೆ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರಿರುವ ಬಹುತೇಕ ಮಂದಿ ವಿದ್ಯಾರ್ಥಿಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಲಿತವರೇ ಹೆಚ್ಚು. ಆದುದರಿಂದ ಪೋಷಕರು ಕಾನ್ವೆಂಟ್‌ಗಳ ಮೇಲಿನ ಮೋಹ ಬಿಟ್ಟು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಬೇಕು ಎಂದರು.

ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಧರ್ಮಶೆಟ್ಟರು ಮಾತನಾಡಿದರು.

ಶಾಲಾಭಿವೃದ್ಧಿ ಅಧ್ಯಕ್ಷೆ ಮೀನಾಕ್ಷಮ್ಮ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಯೋಜಕ ವಿರೂಪಾಕ್ಷಪ್ಪ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಎ.ಟಿ. ಮಲ್ಲೇಶ್ ಇದ್ದರು.

ಮುಖ್ಯ ಶಿಕ್ಷಕ ಎಂ.ಪಿ. ನಾಗರಾಜೇಗೌಡ ಸ್ವಾಗತಿಸಿ, ಸಹಶಿಕ್ಷಕ ಕೆ.ಎಲ್. ವೆಂಕಟರಂಗಯ್ಯ ವಂದಿಸಿದರು.

`ಸರ್ಕಾರಿ ಶಾಲೆ ನಿರ್ಲಕ್ಷ್ಯ ಸಲ್ಲ'
ಜಾವಗಲ್: ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಕೊರತೆಯಿಲ್ಲ. ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದರೆ ಉನ್ನತ ವ್ಯಾಸಂಗ ಮಾಡಲು ಅಡ್ಡಿಯಾಗುವುದಿಲ್ಲ. ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾ ಮಂಜುನಾಥ್ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶುಕ್ರವಾರ ಶಾಲಾ ಪ್ರಾರಂಭೋತ್ಸವ ಮತ್ತು  ಉಚಿತ ಪಠ್ಯ ಪುಸ್ತಕವನ್ನು ವಿದ್ಯಾರ್ಥಿಗಳಿಗೆ  ವಿತರಿಸಿ ಮಾತನಾಡಿದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀನಿವಾಸ್‌ಗೌಡ  ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯಶಿಕ್ಷಕರಾದ ಶಿವಲಿಂಗಮೂರ್ತಿ ಮಾತನಾಡಿದರು. ಮುಖ್ಯ ಶಿಕ್ಷಕರಾದ ಶಿವಣ್ಣ , ಶಿಕ್ಷಕರುಗಳಾದ ಕೆ.ಎಸ್.ಸುರೇಶ್, ಹಾಲಪ್ಪ, ನಾಗರತ್ನ, ರೇಖಾ, ಛಾಯಾ, ಸರ್ವಮಂಗಳಾ  ಇದ್ದರು.

`ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದರೆ ಮುಚ್ಚಿದ ಶಾಲೆಗಳ ಪುನರಾರಂಭ'
ಹಿರೀಸಾವೆ: ಮಕ್ಕಳ ಕೊರತೆಯಿಂದ ಕೆಲವು ಶಾಲೆಗಳನ್ನು ಮುಚ್ಚಲಾಗಿತ್ತು. ಆ ಶಾಲೆ ವ್ಯಾಪ್ತಿಯಲ್ಲಿ ಹತ್ತು ವಿದ್ಯಾರ್ಥಿಗಳು ಕಂಡು ಬಂದರೆ ಈ ಶೈಕ್ಷಣಿಕ ವರ್ಷದಲ್ಲಿ ಪುನರ್ ಆರಂಭ ಮಾಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ.ಪಾಂಡು ಭರವಸೆ ನೀಡಿದರು.

ಹೋಬಳಿಯ ನರೀಹಳ್ಳಿ ಮತ್ತು ಬೇಳಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾವಲ ಹೊಸೂರು ಗ್ರಾಮಗಳ ಸರ್ಕಾರಿ ಶಾಲೆಗಳ ಪುನರ್ ಪ್ರಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಮಕ್ಕಳಿಗೆ ಸಿಗುವ ಸವಲತ್ತುಗಳು ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ ಎಂಬುದನ್ನು ಅರಿತ ಗ್ರಾಮಸ್ಥರು ಮತ್ತೆ ಶಾಲೆ ಪ್ರಾರಂಭಿಸಲು ಆಸಕ್ತಿ ತೋರಿಸಿದ್ದಾರೆ. ತಾಲ್ಲೂಕಿನಲ್ಲಿ 20 ಸರ್ಕಾರಿ ಶಾಲೆಗಳು ಮುಚ್ಚಿದ್ದು, ಅವುಗಳನ್ನು ಮತ್ತೆ ತೆರೆಯಲು ಎಲ್ಲ ರೀತಿಯ ಪ್ರಯತ್ನವನ್ನು ಶಿಕ್ಷಣ ಇಲಾಖೆ ಮಾಡಲಿದೆ ಎಂದು ಹೇಳಿದರು.

ಹಿರೀಸಾವೆ ಹೋಬಳಿ ಶಿಕ್ಷಣ ಸಂಯೋಜಕ             ಎಚ್.ಸಿ. ತಮ್ಮಣ್ಣಗೌಡ ಮಾತನಾಡಿದರು. ದಿಡಗ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನರಿಹಳ್ಳಿ ಗ್ರಾಮದ ಎನ್.ಎನ್. ನಾಗರಾಜು, ಸಿಆರ್‌ಸಿ ನಾಗೇಂದ್ರಕುಮಾರ್, ಗ್ರಾಮದ ಮುಖಂಡರಾದ ರವಿಪ್ರಕಾಶ್, ಸುಬ್ಬೇಗೌಡ, ಬೋರೇಗೌಡ, ಪುಟ್ಟಸ್ವಾಮಿಗೌಡ ಇದ್ದರು.

ಹಿರೀಸಾವೆ ಹೋಬಳಿಯ ಬೆಳಗೀಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾವಲ ಹೊಸೂರು ಗ್ರಾಮದಲ್ಲಿ ನಡೆದ ಶಾಲೆ ಪುನರ್ ಪ್ರಾರಂಭದ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಪುಟ್ಟಸ್ವಾಮಿಗೌಡ, ಮಾಜಿ ಉಪ ಪ್ರಧಾನ ನಂಜಪ್ಪ, ರಮೇಶ್, ಶಿಕ್ಷಣ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT