ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಬಾ ಮಗು ಬಾ

Last Updated 16 ಸೆಪ್ಟೆಂಬರ್ 2013, 4:00 IST
ಅಕ್ಷರ ಗಾತ್ರ

ರಾಯಚೂರಿನ ಶಾಲೆಯೊಂದರಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸುತ್ತಿದ್ದೆ. ಶಾಲೆಗೆ ಸರಿಯಾಗಿ ಬಾರದಿರುವ ಮಕ್ಕಳ ಬಗ್ಗೆ ವಿಚಾರಿಸುತ್ತಿದ್ದೆ. ಹಚ್ಚಾಕಾ ಹೋಗ್ಯಾಳ್ರಿ  (ಭತ್ತ ನಾಟಿ ಮಾಡಲು), ಹೊಲಕ್ಕೋಗ್ಯಾನ, ಆರಾಮಿಲ್ಲ, ತಂಗೀನ ಆಡಸ್ತಿರ್ತಾಳಾ... ಹೀಗೆ ತಮ್ಮ ಸ್ನೇಹಿತರ ಬಗ್ಗೆ ಮಕ್ಕಳು ತಿಳಿಸುತ್ತಿದ್ದರು. ಅದರಲ್ಲಿ ಎರಡು ಪ್ರಕರಣಗಳು ನನಗೆ ಬಹಳ ಆಸಕ್ತಿಕರ ಎನಿಸಿದವು.

ಶಾಲೆಗೆ ಬಾರದೇ ಇದ್ದ ನವೀನನ ಬಗ್ಗೆ ವಿಚಾರಿಸಿದಾಗ, ಪಕ್ಕದಲ್ಲೇ ಇದ್ದ ತನ್ನ ಮನೆಯ ಮುಂದೆ ಅವನು ಕುಳಿತಿದ್ದುದನ್ನು ಅವನ ಸಹಪಾಠಿಗಳು ತೋರಿಸಿದರು.  ಅವನನ್ನು ಬರಹೇಳಿ, ಶಾಲೆಗೆ ಬಾರದಿರಲು ಕಾರಣ ಕೇಳಿದಾಗ, ಅವನು ನೀಡಿದ ಉತ್ತರ ನನ್ನನ್ನು ಚಿಂತನೆಗೆ ಹಚ್ಚಿತು.

ವೇಷ ಹಾಕುವವರ ಮನೆತನದ ಹುಡುಗನಾ­ಗಿರುವ ನವೀನ, ವೇಷ ಹಾಕಲು ಅನಿವಾರ್ಯವಾಗಿ ಉದ್ದನೆಯ ತಲೆ ಕೂದಲನ್ನು ಬಿಟ್ಟಿದ್ದ. ಅವನ ಶಿಕ್ಷಕರು ಉದ್ದನೆಯ ತಲೆ ಕೂದಲು ಕತ್ತರಿಸಲು ಒತ್ತಾಯಪಡಿ­ಸಿದ್ದರು. ಆದರೆ ಅದು ವೇಷ ಹಾಕಲು ಅವನಿಗೆ ಅಗತ್ಯವಾಗಿತ್ತು. ಹೀಗಾಗಿ ಶಾಲೆಗೆ ಬರುವುದನ್ನೇ ಅವನು ಬಿಟ್ಟಿದ್ದ.

ಇನ್ನೊಬ್ಬ ವಿದ್ಯಾರ್ಥಿ ವೆಂಕಟೇಶನ ಬಗ್ಗೆ ಅವನ ಸ್ನೇಹಿತರು, ಅವ ಯಾವಾಗ್ಲೂ ಗಿಳಿ ಜೊತೆ ಆಟ ಆಡ್ತಿರ್ತಾನಾ ಸಾಲಿಗೆ ಬರುವಲ್ಲಾ ಎಂದು ತಿಳಿಸಿದರು.

ಶಾಲೆಗಿಂತ ಗಿಳಿಯೊಂದಿಗಿನ ಆಟ, ಸಾಂಗತ್ಯ ಅವನಿಗೆ ಖುಷಿ ನೀಡುತ್ತಿರುವ ವಿಚಾರ ನನಗೆ ಕುತೂಹಲ ಎನಿಸಿತು.
ರಾಯಚೂರಿನ ಇನ್ನೊಂದು ಶಾಲೆಯಲ್ಲಿ ಆದ ಅನುಭವವೂ ಆಸಕ್ತಿಕರವಾಗಿದೆ. ನಾನು ಭೇಟಿ ನೀಡಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಎರಡೂ ಕಡೆ ಶೇ 40ಕ್ಕಿಂತ ಹೆಚ್ಚು ಮಕ್ಕಳು ಆ ದಿನ ಗೈರುಹಾಜರಾಗಿದ್ದರು. ಈ ಬಗ್ಗೆ ವಿಚಾರಿಸಿದಾಗ, ಹನುಮಪ್ಪನ ದೇವಸ್ಥಾನಕ್ಕ ಹೋಗ್ಯಾನ್ರಿ/ ಹೋಗ್ಯಾಳ್ರಿ, ಅಮಾಸೆಲ್ರಿ ಅದಕ್ಕ! ಎಂಬ ಉತ್ತರವೇ ಎಲ್ಲರಿಂದಲೂ ಬಂತು. ಆಗಲೇ ನನಗೆ ಆ ದಿನ ಅಮಾವಾಸ್ಯೆ ಎಂದು ತಿಳಿದಿದ್ದು. ಈ ಬಗ್ಗೆ ಶಿಕ್ಷಕರನ್ನು ವಿಚಾರಿಸಿದಾಗ, ಹೌದ್ರೀ ಸರ. ಈ ಕಡೆ ಅಮಾಸೆಂದ್ರ ಹೀಂಗ ರೀ. ಹನುಮಪ್ಪ ದ್ವಾವ್ರಿಗೆ ಹೆಚ್ಚು ಹೋಗ್ತಾರ. ಹೋದವ್ರು ಕೆಲವೊಮ್ಮಿ ಎಲ್ಡು ಮೂರು ದಿನ ಬರಂಗಿಲ್ಲ ಎಂದು ವಸ್ತುಸ್ಥಿತಿ ತೆರೆದಿಟ್ಟರು.

ಏಕೆ ಹೊರಗುಳಿಯುತ್ತಾರೆ?
ಹೌದು, ಶಾಲೆಯಿಂದ ಮಕ್ಕಳು ಏಕೆ ಹೊರಗುಳಿಯುತ್ತಾರೆ ಎನ್ನುವುದು ಶಿಕ್ಷಣ ಕ್ಷೇತ್ರದ ಎಲ್ಲರನ್ನೂ ಕಾಡುವ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಸರಳವೇ? ಸರಳ ಎಂದು  ಭಾವಿಸಿದರೆ ಅತಿ ಸರಳ; ಕ್ಲಿಷ್ಟ ಎಂದುಕೊಂಡರೆ ಅತಿ ಕ್ಲಿಷ್ಟ. ಶಾಲೆ ಬಿಡಲು ಕುಟುಂಬದ ಬಡತನ, ತಮ್ಮ, ತಂಗಿಯರನ್ನು ನೋಡಿಕೊಳ್ಳುವುದು, ಹೊಲದಲ್ಲಿ ದುಡಿಮೆ... ಹೀಗೆ ತಕ್ಷಣಕ್ಕೆ ಹೊಳೆಯಬಹುದಾದ ಕಾರಣಗಳನ್ನು ಹೇಳಿ ವಿಷಯವನ್ನು ಸರಳವಾಗಿ ಮುಕ್ತಾಯ ಮಾಡಬಹುದು. ಆದರೆ ಸರ್ಕಾರ ಮಕ್ಕಳಿಗೆ ಉಚಿತ ಪುಸ್ತಕ, ಬಟ್ಟೆ, ಸೈಕಲ್, ಊಟ... ಹೀಗೆ ಎಲ್ಲವನ್ನೂ ಕೊಟ್ಟ ಮೇಲೂ ಯಾಕೆ ಹೆಚ್ಚಿನ ಸಂಖ್ಯೆಯ ಮಕ್ಕಳು ಶಾಲೆಯತ್ತ ಮುಖ ಮಾಡುತ್ತಿಲ್ಲ ಎಂಬುದು ನಿಜಕ್ಕೂ ಕಠಿಣವಾದ ಹಾಗೂ ಸುಲಭವಾಗಿ ಉತ್ತರಿಸಲು ಸಾಧ್ಯವಿಲ್ಲದ  ವಿಷಯ.

ಯುನಿಸೆಫ್‌ನ ಇತ್ತೀಚಿನ ವರದಿಯ ಪ್ರಕಾರ, ನಮ್ಮ ದೇಶದಲ್ಲಿ ಸುಮಾರು 80 ಲಕ್ಷದಷ್ಟು ಮಕ್ಕಳು ಶಾಲೆಯ ಮುಖವನ್ನು ಒಮ್ಮೆಯೂ ನೋಡಿಲ್ಲ ಹಾಗೂ ಸುಮಾರು 8 ಕೋಟಿಯಷ್ಟು ಮಕ್ಕಳು ಶಾಲೆ ಸೇರಿದರೂ ಮಧ್ಯದಲ್ಲೇ ಬಿಡುತ್ತಾರೆ. ಯುನಿಸೆಫ್ ಈ ಸನ್ನಿವೇಶವನ್ನು ರಾಷ್ಟ್ರೀಯ ತುರ್ತು ಪರಿಸ್ಥಿತಿ ಎಂದು ಪರಿಗಣಿಸಿ, ಸರ್ಕಾರೇತರ ಸಂಸ್ಥೆಗಳು ಹಾಗೂ ಸರ್ಕಾರಗಳು ಅಗತ್ಯ ಕಾರ್ಯತಂತ್ರಗಳನ್ನು ರೂಪಿಸಬೇಕು ಎಂದು ಕರೆ ನೀಡಿರುವುದು  ಸಮಸ್ಯೆ ಎಷ್ಟು ಗಂಭೀರ ಎಂಬುದನ್ನು  ತೋರಿಸುತ್ತದೆ.

ಪ್ರಸ್ತುತ ಕರ್ನಾಟಕದಲ್ಲೂ ಈ ವಿಷಯ ಹೆಚ್ಚಿನ ಚರ್ಚೆಗೆ ಒಳಪಟ್ಟಿದೆ. ಈ ಬಗ್ಗೆ  ಪತ್ರಿಕೆಯಲ್ಲಿ ಬಂದ ಸುದ್ದಿಯ ಆಧಾರದ ಮೇಲೆ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಸರ್ಕಾರದ ಅಧಿಕೃತ ಮಾಹಿತಿಯಂತೆ 2012– -13ನೇ ಸಾಲಿನಲ್ಲಿ 51,994 ಮಕ್ಕಳು ಶಾಲೆಯಿಂದ ಹೊರಗೆ ಇದ್ದಾರೆ. ಆದರೆ ಶಾಲಾ ಶೈಕ್ಷಣಿಕ ಮಾಹಿತಿಯ (ಡೈಸ್) ವಿಶ್ಲೇಷಣೆಯಂತೆ 2011– -12ರಲ್ಲಿ ಒಂದನೇ ತರಗತಿಗೆ ದಾಖಲಾದ ಮಕ್ಕಳ ಸಂಖ್ಯೆ ಹಾಗೂ 2012– -13ರಲ್ಲಿ ಎರಡನೇ ತರಗತಿಗೆ ದಾಖಲಾದ ಮಕ್ಕಳ ಸಂಖ್ಯೆಗೆ ಹೋಲಿಸಿದಾಗ 2.42 ಲಕ್ಷ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ. ಅದೇ ರೀತಿ 2005– -06ರಲ್ಲಿ ಒಂದನೇ ತರಗತಿಗೆ ದಾಖಲಾದ ಮಕ್ಕಳ ಸಂಖ್ಯೆಗೂ 2012– -13ರಲ್ಲಿ 8ನೇ ತರಗತಿಗೆ ದಾಖಲಾದ ಮಕ್ಕಳ ಸಂಖ್ಯೆಗೂ ಇರುವ ವ್ಯತ್ಯಾಸದ ಆಧಾರದ ಮೇಲೆ 6.28 ಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗಿದೆ. ಇದು ಸಮಸ್ಯೆಯ ತೀವ್ರತೆಯನ್ನು ತೋರಿಸುತ್ತದೆ.

ಈ ಹಿಂದೆ ಚರ್ಚಿಸಿದ ರಾಯಚೂರು ಜಿಲ್ಲೆಯ ವಿದ್ಯಾರ್ಥಿ ನವೀನನ ಬಗ್ಗೆ ಚಿಂತಿಸಿದರೆ, ವೇಷ ಹಾಕಲಿಕ್ಕೆ ಅವನಿಗೆ ಉದ್ದನೆಯ ತಲೆ ಕೂದಲು ಅವಶ್ಯ. ಆದರೆ ತಲೆಕೂದಲು ಕತ್ತರಿಸದಿದ್ದರೆ ಶಿಕ್ಷಕರು ಬೈಯುತ್ತಾರೆ. ಈ ತಾಕಲಾಟದ ನಡುವೆ ಅವನು ಶಾಲೆಯಿಂದ ಹೊರಗುಳಿಯುತ್ತಾನೆ. ಇದೇ ರೀತಿ ಶಾಲೆಗಿಂತಲೂ ಗಿಳಿಯಾಡಿಸುವು­ದನ್ನೇ ಹೆಚ್ಚು ಇಷ್ಟಪಡುವ ವೆಂಕಟೇಶ ಅಥವಾ ಅಮಾವಾಸ್ಯೆಯ ಕಾರಣದಿಂದ ಶಾಲೆಗೆ ಗೈರಾಗುವ ಮಕ್ಕಳು... ಹೀಗೆ ಪ್ರತಿ ಮಗುವೂ ಶಾಲೆಯಿಂದ ಹೊರಗುಳಿಯುವುದಕ್ಕೆ ಪ್ರತ್ಯೇಕ ಕಾರಣ ಇರುತ್ತದೆ. ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ.ಗಳು ಮಕ್ಕಳು ಶಾಲೆ ಬಿಡುವ ಅಥವಾ ಗೈರಾಗುವ  ಕಾರಣಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅವರ ಸಮಸ್ಯೆಗಳನ್ನು ಶಿಶು ಕೇಂದ್ರಿತ ಹಿನ್ನೆಲೆಯಲ್ಲಿ ಪರಿಭಾವಿಸಬೇಕು. ಸಮಸ್ಯೆಗಳ ನಿವಾರಣೆಗೆ ನಿರಂತರ ಆಸಕ್ತಿ ಮತ್ತು ಇಚ್ಛಾಶಕ್ತಿಯನ್ನು ತೋರ್ಪಡಿಸಬೇಕು.

ಎಷ್ಟೋ ಬಾರಿ ವಿಭಿನ್ನ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಿನ್ನೆಲೆಯಿಂದ ಬರುವ ಮಕ್ಕಳನ್ನು ಶಾಲೆಯೊಳಗೆ ಉಳಿಸಿಕೊಂಡು, ಯಶಸ್ವಿಯಾಗಿ ಶಿಕ್ಷಣ ನೀಡಿ, ಅವರನ್ನು ಮುಂದೆ ದಾಟಿಸುವಲ್ಲಿ ನಮ್ಮ ಶಿಕ್ಷಣ  ವ್ಯವಸ್ಥೆ ವಿಫಲವಾಗುವ ಸಾಧ್ಯತೆಗಳೂ ಇರುತ್ತವೆ. ಇಂತಹ ಸಂದರ್ಭಗಳಲ್ಲಿ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಮಸ್ಯೆಗೆ ನಮ್ಮ ಶೈಕ್ಷಣಿಕ ವ್ಯವಸ್ಥೆಯೇ ಹೊಣೆ ಆಗುತ್ತದೆ. ಶಿಕ್ಷಕರು ಮತ್ತು ಶಾಲಾ ವ್ಯವಸ್ಥೆಯು ಮಕ್ಕಳ ಬಗ್ಗೆ ಕಾಳಜಿ, ಸೂಕ್ಷ್ಮ ಸಂವೇ­ದನೆ ಹೊಂದುವಂತೆ ಮಾಡಲು ದೊಡ್ಡ ಮಟ್ಟದ ಜಾಗೃತಿಯ ಅವಶ್ಯಕತೆ ಇದೆ. ಅನೇಕ ಶಿಕ್ಷಕರು ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯ­ಪ್ರವೃತ್ತರಾಗಿರುವ ಉದಾಹರಣೆಗಳಿವೆ. ಆದಾಗ್ಯೂ ಎಲ್ಲ ಶಿಕ್ಷಕರೂ, ಶಾಲೆ ಬಿಡುವ ಪ್ರತಿ ಮಗುವಿನ ಪ್ರಕರಣವನ್ನೂ ಪ್ರತ್ಯೇಕವಾಗಿ ಗಮನಿಸಿ ಸ್ಥಳೀಯ ನೆಲೆಗಟ್ಟಿನಲ್ಲಿ ಅಧ್ಯಯನ ಮಾಡಬೇಕು. ಅದನ್ನು ಪರಿಹರಿಸುವತ್ತ ಕಾಳಜಿ ಮತ್ತು ಜವಾಬ್ದಾರಿ ತೋರಬೇಕು.

ಶಾಲೆ ಬಿಡುವ ಮಕ್ಕಳ ಸಮಸ್ಯೆಯ ನಿವಾರಣೆಗೆ ಸಿದ್ಧ ಸರಳ ಸೂತ್ರಗಳಿಲ್ಲ. ಪ್ರತಿ ಶಾಲೆಯ ಪ್ರತಿ ಮಗುವಿನ ಹಿನ್ನೆಲೆಯು ಆ ಹಳ್ಳಿಯ, ಆ ಪ್ರದೇಶದ, ಮಗುವಿನ ಕುಟುಂಬದ ಪರಿಸ್ಥಿತಿಯನ್ನು ಆಧರಿಸಿರುತ್ತದೆ.  ಶಿಕ್ಷಕರು, ಅಧಿಕಾರಿಗಳು, ಎಸ್.ಡಿ.ಎಂ.ಸಿ. ಹಾಗೂ ಗ್ರಾಮ ಪಂಚಾಯಿತಿಗಳು ಮಕ್ಕಳೆಡೆಗೆ ತೋರಿಸುವ ಪ್ರೀತಿ, ಆತ್ಮೀಯತೆ, ಕಾಳಜಿ, ಸಂವೇದನೆ ಹಾಗೂ ಬೆಂಬಲಕ್ಕೆ ಪೂರಕವಾಗಿ  ಸರ್ಕಾರೇತರ ಸಂಸ್ಥೆಗಳು ಹಾಗೂ ಶಿಕ್ಷಣಾಸಕ್ತ ಸಾರ್ವಜನಿಕರು ಸಹ ಸ್ಪಂದಿಸಬೇಕು. ಮಕ್ಕಳನ್ನು ಶಾಲೆಯಲ್ಲೇ ಉಳಿಸಿಕೊಳ್ಳಲು ಅಗತ್ಯವಾದ ಬೆಂಬಲ ನೀಡಬೇಕು.

ಕಟ್ಟಡ ಕಾರ್ಮಿಕರು, ಗುಳೆ ಹೋಗುವ ಕುಟುಂಬಗಳು, ಕೂಲಿ ಕಾರ್ಮಿಕರು, ಕೃಷಿ ಚಟುವಟಿಕೆ ನಿರತ ಕುಟುಂಬಗಳ ಮಕ್ಕಳು ಶಾಲೆ ಬಿಡುವ ಸಂಭವ ಹೆಚ್ಚಾಗಿರುತ್ತದೆ. ಇಂತಹ ಮಕ್ಕಳ ಶೈಕ್ಷಣಿಕ ಹಿಂದು­ಳಿಯುವಿಕೆ ಹಾಗೂ ಈ ಕಾರಣದಿಂದ ಶಿಕ್ಷಕ ಮತ್ತು ಪೋಷಕರ ಶಿಕ್ಷೆಯ ಭಯ, ಮಕ್ಕಳಿಗೆ ಶಾಲೆಯ ಪರಿಸರ ರುಚಿಸದೇ ಇರುವುದು ಇತ್ಯಾದಿ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡು ಪ್ರತಿ ಮಗು­ವಿನ  ಜೊತೆ ಚರ್ಚೆ, ಸಂವಾದ ಶಾಲೆ ಅಥವಾ ಗ್ರಾಮ ಮಟ್ಟದಲ್ಲಿ ಜರುಗಬೇಕು.

ಮುಕ್ತ, ಸುರಕ್ಷಿತ, ಆಹ್ಲಾದಕರ ಶಾಲಾ ವಾತಾವರಣ ಹಾಗೂ ಪರಿಣಾಮಕಾರಿ ಬೋಧನೆ ಮಕ್ಕಳನ್ನು ಶಾಲೆಯಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪ್ರತಿ ಮಗುವೂ ವಿಭಿನ್ನ, ವಿಶಿಷ್ಟ ಹಾಗೂ ಅಮೂಲ್ಯ ಎಂದು ಪರಿಗಣಿಸಿ, ಅದಕ್ಕೆ ಪೂರಕವಾದ ವಾತಾವರಣ ಸೃಷ್ಟಿಸುವುದು ಎಲ್ಲ ಶಾಲೆಗಳ ಕರ್ತವ್ಯ. ಅದೇ ರೀತಿ, ಸಮಾಜದ ಪ್ರತಿ ಮಗುವೂ ಶಿಕ್ಷಣ ಪಡೆಯುವಂತೆ ಆಸ್ಥೆ ವಹಿಸುವುದು ನಾಗರಿಕ ಸಮಾಜದ ಜವಾಬ್ದಾರಿ ಸಹ.

ದೊಡ್ಡಣ್ಣನೂ ಹೊರತಲ್ಲ!
ಶಾಲೆ ಬಿಡುವ ಮಕ್ಕಳ ಸಮಸ್ಯೆ ಬರೀ ನಮ್ಮ ದೇಶಕ್ಕಷ್ಟೇ ಸೀಮಿತವಾಗಿಲ್ಲ. ವಿಶ್ವದ ದೊಡ್ಡಣ್ಣ ಅಮೆರಿಕ ಸಹ ಈ ಸಮಸ್ಯೆಯಿಂದ ಹೊರತಾಗಿಲ್ಲ. ಅಲ್ಲಿಯ ಪ್ರೌಢಶಾಲಾ ಹಂತದಲ್ಲಿ ಪ್ರತಿ ದಿನ ಸುಮಾರು ಎಂಟು ಸಾವಿರ ಮಕ್ಕಳು ಶಾಲೆ ಬಿಡುತ್ತಿದ್ದಾರೆ. ಅಲ್ಲದೆ, ಸುಮಾರು 30 ಲಕ್ಷದಷ್ಟು ಮಕ್ಕಳು ವರ್ಷಂಪ್ರತಿ ಮಧ್ಯದಲ್ಲೇ ಶಾಲೆಯನ್ನು ತೊರೆಯುತ್ತಿದ್ದಾರೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT